ತತ್ತ್ವಜ್ಞಾನಿ ಅಭಿನವ ಗುಪ್ತ, ಸುಲ್ತಾನರ ಆಳ್ವಿಕೆಯಲ್ಲೂ ಪೂಜೆ ಕಾಪಾಡಿದ ರಾಮಾನುಜಾಚಾರ್ಯ, ಸಮಾಜ-ಧರ್ಮ ರಕ್ಷಣೆಯ ಗುರು ಗೋವಿಂದ ಸಿಂಗ್… ವಿಜಯದಶಮಿ ಭಾಷಣದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಭಾಗವತರ ನೆನಕೆಗಳು

(ಚಿತ್ರಕೃಪೆ- ಸಂವಾದ)

ಡಿಜಿಟಲ್ ಕನ್ನಡ ಟೀಮ್:

ಗೋರಕ್ಷಕರು ಕಾನೂನಿನ ವ್ಯಾಪ್ತಿಯಲ್ಲೇ ಕೆಲಸ ಮಾಡಬೇಕು ಎಂದಿರುವುದು, ಭಾರತದ ಗುರಿ ನಿರ್ದಿಷ್ಟ ದಾಳಿಗೆ ಪ್ರಶಂಸೆ, ಪಾಕ್ ಆಕ್ರಮಿತ ಕಾಶ್ಮೀರವೂ ಭಾರತದ್ದೇ ಎಂಬ ಪುನರುಚ್ಚಾರ… ಇವೆಲ್ಲ ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ಅವರ ವಿಜಯದಶಮಿ ಭಾಷಣದ ಮುಖ್ಯಾಂಶಗಳು.

ಆದರೆ ಇದರಾಚೆಗೆ ಭಾರತವು ಈ ಹೊತ್ತಿಗೆ ಸ್ಮರಿಸಿಕೊಳ್ಳಬೇಕಾದ ಹಲವು ಮಹನೀಯರನ್ನು ಭಾಗವತರು ಅವರ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಅದನ್ನು ಗಮನಿಸಲೇಬೇಕು.

ಭಾರತದ ಇತಿಹಾಸ ಪುಟಗಳಲ್ಲಿ ಅಜರಾಮರರಾಗುಳಿದಿರುವ ಅಚಾರ್ಯ ಅಭಿನವಗುಪ್ತ, ರಾಮಾನುಜಾಚಾರ್ಯ, ಶ್ರೀ ಗುರು ಗೋವಿಂದ ಸಿಂಗ್, ಪ್ರಜ್ಞಾಚಕ್ಷು ಶ್ರೀ ಗುಲಾಬ್ರಾವ್ ಮಹಾರಾಜರು ಸಮಾಜಕ್ಕೆ ನೀಡಿರುವ ಕಾಣಿಕೆಯನ್ನು ವಿಜಯದಶಮಿ ಪ್ರಯುಕ್ತವಾಗಿ ಸ್ಮರಿಸಿದ್ದಾರೆ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತರು.

ನಾಗ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ಮೋಹನ್ ಭಾಗವತರು, ಈ ಮೂವರು ಮಹಾನ್ ವ್ಯಕ್ತಿಗಳನ್ನು ನೆನೆದ ಪರಿ ಹೀಗಿತ್ತು… ‘ಕಳೆದ ಬಾರಿ ನಾನು ಪಂಡಿತ್ ದೀನದಯಾಳ್ ಜೀ ಉಪಾಧ್ಯಾಯ್ ಅವರ ಶತಮಾನ ಜನ್ಮದಿನೋತ್ಸವದ ಬಗ್ಗೆ ಮಾತನಾಡಿದ್ದೆ. ಈ ವರ್ಷವು ನಾವು ಹಲವು ಮಹಾನ್ ವ್ಯಕ್ತಿಗಳ ಶತಮಾನೋತ್ಸವಗಳನ್ನು ಆಚರಿಸುತ್ತಿದ್ದೇವೆ. ಈ ಐತಿಹಾಸಿಕ ವ್ಯಕ್ತಿಗಳ ಜೀವನದ ಹಾದಿಯು ಪ್ರಸ್ತುತ ಸಮಾಜದಲ್ಲಿ ನಾವು ಅನುಸರಿಸಬೇಕಾದ ಹಾದಿಯನ್ನು ತೋರುತ್ತದೆ…

ಈ ವರ್ಷ ಕಾಶ್ಮೀರದ ತತ್ವಜ್ಞಾನಿ ಆಚಾರ್ಯ ಅಭಿನವಗುಪ್ತಾ ಅವರ ಸಾವಿರ ವರ್ಷಗಳ ಜನ್ಮದಿನೋತ್ಸವವಾಗಿರುವುದು ವಿಶೇಷ. ಅವರು ಶೈವ ದರ್ಶನದ ಅತ್ಯಂತ ಮಹಾ ವ್ಯಕ್ತಿಗಳಲ್ಲಿ ಒಬ್ಬರು. ಅಲ್ಲದೆ ಪ್ರತ್ಯಭಿಜ್ಞ ಪರಿಕಲ್ಪನೆಯ ಹರಿಕಾರರು. ಬಹು ವ್ಯಕ್ತಿತ್ವ ಹೊಂದಿದ್ದ ಆಚಾರ್ಯರು ಐತಿಹಾಸಿಕ ಕಲೆಗಳಾದ ಪದ್ಯ, ನಾಟಕ, ಸಂಗೀತದ ಮೇಲೆ ಸಾಕಷ್ಟು ನಿಯಂತ್ರಣ ಹೊಂದಿದ್ದರು. ಇನ್ನು ಶಬ್ಧ ಕೇವಲ ಮಾತಿಗಷ್ಟೇ ಅಲ್ಲ, ಶಬ್ಧದಿಂದ ದೇವರನ್ನು ತಲುಪಲು ಸಾಧ್ಯ ಎಂಬ ಸೈದ್ಧಾಂತಿಕ ವಿಶ್ಲೇಷಣೆಯನ್ನು ನೀಡಿದವರು ಆಚಾರ್ಯರು. ಈ ಎಲ್ಲದಕ್ಕಿಂತ ಮುಖ್ಯವಾಗಿ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಸನಾತನ ಸಂಸ್ಕೃತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಪರಿಗಣಿಸಿದವರು. ಇನ್ನು ಶೈವ ಪರಿಕಲ್ಪನೆಯ ಪರಿಪಾಲಕರು. ತಮ್ಮ ಜೀವನದ ಹಾದಿಯಿಂದಲೇ ಬೇರೆಯವರಿಗೆ ಪ್ರೀತಿ ಹಾಗೂ ಭಕ್ತಿಯ ಮೂಲಕ ಸಹಬಾಳ್ವೆಯನ್ನು ಕಾಶ್ಮೀರದ ಭೈರವ ಗುಪ್ತಾದಲ್ಲಿ ಶಿವತತ್ವದ ಮೂಲಕ ಬೋಧಿಸಿದ್ದಾರೆ.

ಇನ್ನು ದಕ್ಷಿಣ ಭಾರತ ಮೂಲದ ಖ್ಯಾತ ಸಂತ ರಾಮಾನುಜಾಚಾರ್ಯ ಅವರ ಸಾವಿರ ವರ್ಷದ ಜನ್ಮೋತ್ಸವ ಈ ವರ್ಷವೇ ಆಗಿದೆ. ದಕ್ಷಿಣ ಭಾಗದಿಂದ ದೆಹಲಿಯವರೆಗೂ ಕಾಲ್ನಡಿಗೆಯಲ್ಲೇ ಸಂಚರಿಸಿ ಸುಲ್ತಾನರ ಆಳ್ವಿಕೆಯಲ್ಲೂ ದೇವರ ಪೂಜೆ ಹಾಗೂ ಹಬ್ಬಗಳ ಆಚರಣೆಯನ್ನು ಮತ್ತೆ ಸ್ಥಾಪಿಸಿದರು ರಾಮಾನುಜಾಚಾರ್ಯರು. ಇನ್ನು ಸುಲ್ತಾನನ ಮಗಳಿಗೂ ಅವರು ಆಶೀರ್ವದಿಸಿದ್ದು, ನಂತರ ಆಕೆ ದೇವಾಲಯದಲ್ಲಿ ದೇವರ ಭಕ್ತೆಯಾದಳು. ಸಮಾಜದಲ್ಲಿ ಜಾತಿ ಮತ್ತು ಧರ್ಮಗಳ ನಡುವಣ ತಾರತಮ್ಯಗಳನ್ನು ನಿರ್ಮೂಲನೆ ಮಾಡುವ ಪ್ರಯತ್ನ ನಡೆಸಿದರು. ಎಲ್ಲರಿಗೂ ಭಕ್ತಿ ಮತ್ತು ಜ್ಞಾನ ಸಿಗುವಂತೆ ಮಾಡಿದ ಮಹಾನ್ ವ್ಯಕ್ತಿ ರಾಮಾನುಜಾಚಾರ್ಯರು.

ಅಲ್ಲದೆ ಈ ವರ್ಷ ಸಿಖ್ ಪಂಥದ 10ನೇ ಗುರುವಾದ ಶ್ರೀ ಗುರು ಗೋವಿಂದ ಸಿಂಗ್ ಅವರ 350ನೇ ಜನ್ಮ ವರ್ಷವಾಗಿದೆ. ದೇಶದ ರಕ್ಷಣೆಗಾಗಿ ಮುತ್ಸದ್ದಿ ಹಾಗೂ ಬೋಧಕನಾಗಿ ಜವಾಬ್ದಾರಿ ನಿರ್ವಹಿಸಿರುವ ಗೋವಿಂದ ಸಿಂಗರು, ಸಮಾಜ ಹಾಗೂ ಧರ್ಮವನ್ನು ರಕ್ಷಿಸಿದ್ದಾರೆ. ಪ್ರತಿಯೊಬ್ಬರಲ್ಲೂ ಕೆಟ್ಟತನವನ್ನು ಹೊಗಲಾಡಿಸಿ ಆತ್ಮಗೌರವವನ್ನು ಹೆಚ್ಚಿಸುವ ಪ್ರಯತ್ನ ಮಾಡಿದರು. ದೇಶ ಹಾಗೂ ಧರ್ಮಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡ ರೀತಿಯಿಂದ ಪ್ರೇರೇಪಿತರಾದ ಸ್ವಾಮಿ ವಿವೇಕಾನಂದರು ಅವರನ್ನು ಉದಾಹರಣೆ ನೀಡುತ್ತಾ ಹಿಂದು ಯುವಕರನ್ನು ಪ್ರೇರೇಪಿಸಿದ್ದರು. ಈ ವರ್ಷ ಪ್ರಜ್ಞಾಚಕ್ಷು ಶ್ರೀ ಗುಲಬ್ರಾವ್ ಮಹರಾಜ್ ಅವರ ಜನ್ಮ ಶತಮಾನೋತ್ಸವವಾಗಿದೆ.

ಈ ಎಲ್ಲರ ಆದರ್ಶ, ಜೀವನದ ಪಾಠಗಳು ಈಗಿನ ದಿನಗಳಲ್ಲು ಪ್ರಸ್ತುತವಾಗಿವೆ. ಅವರ ಜೀವನ ನಮಗೆ ಸಾಕಷ್ಟು ಪಾಠಗಳನ್ನು ಕಲಿಸುತ್ತವೆ.’

Leave a Reply