ಜಮ್ಮು-ಕಾಶ್ಮೀರ, ಗೋರಕ್ಷಣೆ, ಅಸಮಾನತೆ ನಿವಾರಣೆಗೆ ಸಂಘದ ಹೆಜ್ಜೆಗಳು…. ಮೋಹನ್ ಭಾಗ್ವತ್ ಭಾಷಣದ ಮುಖ್ಯಾಂಶಗಳು

ಡಿಜಿಟಲ್ ಕನ್ನಡ ಟೀಮ್:

ದೇಶದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿರುವ ಗೋಸಂರಕ್ಷಕರು, ಜಮ್ಮು-ಕಾಶ್ಮೀರ ಹಾಗೂ ಸ್ವಯಂ ಸೇವಕರ ಕುರಿತಂತೆ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ವಿಜಯದಶಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಈ ಮೂರೂ ವಿಷಯವಾಗಿ ಮಾತನಾಡಿದಿಷ್ಟು…

  • ಜಮ್ಮು ಕಾಶ್ಮೀರದಲ್ಲಿ ಸದಸ್ಯದ ಪರಿಸ್ಥಿತಿ ನಮ್ಮೆಲ್ಲರನ್ನು ಕಳವಳಗೊಳಿಸಿದೆ. ಈ ವಿಚಾರವಾಗಿ ವಿಶ್ವಮಟ್ಟದಲ್ಲಿ ಮಾಡಲಾಗಿರುವ ರಾಜತಾಂತ್ರಿಕತೆ, ಸರ್ಕಾರ ಹಾಗೂ ಸಂಸತ್ತಿನಲ್ಲಿ ಮಾಡಲಾಗಿರುವ ದೃಢ ತೀರ್ಮಾನಗಳು ಪ್ರಮುಖವಾಗಿವೆ. ಜಮ್ಮು ಮತ್ತು ಲಡಾಕಿನ ಪ್ರದೇಶಗಳು ನಿಯಂತ್ರಣದಲ್ಲಿದ್ದು, ಹೆಚ್ಚು ಸಮಸ್ಯೆ ಎದುರಾಗಿಲ್ಲ. ಈ ಪ್ರದೇಶಗಳಲ್ಲಿ ರಾಷ್ಟ್ರೀಯತೆಯ ಚಟುವಟಿಕೆಗಳನ್ನು ನಡೆಸಬೇಕಾದ ಅಗತ್ಯತೆ ಇದೆ. ಇನ್ನು ಹಿಂಸಾಚಾರದಿಂದ ತತ್ತರಿಸುವ ಪ್ರದೇಶಗಳಲ್ಲಿ ಮತ್ತೆ ಪರಿಸ್ಥಿತಿ ನಿಯಂತ್ರಣಕ್ಕೆ ತರಲು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜತೆಗೆ ಆಡಳಿತ ವರ್ಗವೂ ಸೇರಿ ಒಟ್ಟಾಗಿ ಕೆಲಸ ಮಾಡಬೇಕು. ಮೀರ್ಪುರ, ಮುಜಾಫರಾಬಾದ್, ಗಿಲ್ ಗಿಟ್ ಮತ್ತು ಬಲ್ಟಿಸ್ತಾನ್ ಪ್ರದೇಶಗಳೂ ಸೇರಿದಂತೆ ಪೂರ್ಣ ಕಾಶ್ಮೀರ ಭಾರತದ ಭಾಗ ಎಂಬ ನಿಲುವಿನಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲರೀತಿಯ ಅಭಿವೃದ್ಧಿಗಳ ಜತೆಗೆ ಭದ್ರತೆ ಹಾಗೂ ಸಹಕಾರದಂತಹ ಪುನಃಶ್ಚೇತನ ಕಾರ್ಯಗಳು ಶೀಘ್ರವೇ ನಡೆಯಬೇಕಿದೆ. ದೇಶದ ವಿಭಜನೆ ಸಂದರ್ಭದಲ್ಲಿ ಪಾಕಿಸ್ತಾನ ಪ್ರದೇಶದಿಂದ ವಲಸೆ ಬಂದಿದ್ದ ಹಿಂದೂಗಳಿಗೆ ಆಗಿನ ಜಮ್ಮು ಮತ್ತು ಕಾಶ್ಮೀರ ಸರ್ಕಾರ ರಾಜ್ಯದಲ್ಲಿ ನೆಲೆಸಲು ಅವಕಾಶ ಮಾಡಿಕೊಟ್ಟಿತ್ತು. ಅವರಿಗೆ ಪೌರತ್ವ ನೀಡಿ ಎಲ್ಲ ರೀತಿಯ ಸೌಲಭ್ಯಗಳು ಸಿಗುವಂತಾಗಬೇಕು. ಇನ್ನು ಆಡಳಿತ ವರ್ಗದಿಂದ ಈ ರಾಜ್ಯಕ್ಕೆ ಆಗುತ್ತಿರುವ ಅಸಮಾನತೆ ತಕ್ಷಣವೇ ಕೊನೆಗಾಣಬೇಕು. ಹೀಗಾಗಿ ಅಲ್ಲಿನ ಆಡಳಿತ ವರ್ಗ ಹಾಗೂ ರಾಜ್ಯ ಸರ್ಕಾರ ರಾಷ್ಟ್ರೀಯತೆ ಮನೋಭಾವದಿಂದ, ಸ್ವಚ್ಛ ಹಾಗೂ ಪರಿಣಾಮಕಾರಿಯಾಗಿ, ಪಾರದರ್ಶಕ ಆಡಳಿತ ನಡೆಸಬೇಕು. ಆಗ ರಾಜ್ಯದ ಜನರಲ್ಲಿ ಹೊಸ ವಿಶ್ವಾಸ ಮೂಡುತ್ತದೆ.
  • ಸಂಘ ಪರಿವಾರದ ಸ್ವಯಂ ಸೇವಕರ ಜತೆಗೆ ಕೆಲವರು ವೈಯಕ್ತಿಕವಾಗಿ ಹಾಗೂ ಸಂಘ ಸಂಸ್ಥೆಗಳ ಮೂಲಕ ಸಮಾಜದಲ್ಲಿ ಉತ್ತಮ ಕೆಲಸಗಳನ್ನು ಮಾಡುವತ್ತ ಮುಂದಾಗಿದ್ದಾರೆ. ಜತೆಗೆ ಗೋವುಗಳ ಸಂರಕ್ಷಣೆ, ಅವುಗಳ ಬೆಳವಣಿಗೆಗೆ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಭಾರತೀಯ ಸಮಾಜದ ಆಚರಣೆಯ ಮತ್ತು ನಂಬಿಕೆ ಪ್ರಕಾರ ಗೋರಕ್ಷಣೆ ಒಂದು ಪವಿತ್ರ ಕಾರ್ಯ. ಕೇವಲ ಸಂಘ ಸ್ವಯಂ ಸೇವಕರಷ್ಟೇ ಅಲ್ಲ ಹಲವು ಸಂತರು ಹಾಗೂ ಇತರೆ ಮಂದಿ ಈ ಕಾರ್ಯವನ್ನು ಕಾನೂನಿನ ಚೌಕಟ್ಟಿನಲ್ಲಿ ಮುಂದುವರಿಸಿಕೊಂಡು ಬಂದಿದ್ದಾರೆ. ಆಧುನಿಕ ವಿಜ್ಞಾನ ದೇಶದ ಗೋವುಗಳ ಉಪಯೋಗ ಹಾಗೂ ಶ್ರೇಷ್ಠತೆಯನ್ನು ಖಚಿತಪಡಿಸಿದೆ. ದೇಶದ ಹಲವು ರಾಜ್ಯಗಳಲ್ಲಿ ಗೋಹತ್ಯೆ ಹಾಗೂ ಪ್ರಾಣಿ ಹಿಂಸೆಯನ್ನು ನಿಷೇಧಿಸಲಾಗಿದೆ. ಈ ರಾಜ್ಯಗಳಲ್ಲಿ ಗೋಸೇವಕರು ಈ ಕಾನೂನು ಸೂಕ್ತರೀತಿಯಲ್ಲಿ ಜಾರಿಯಾಗುವಂತೆ ನೋಡಿಕೊಳ್ಳಬೇಕು. ಈ ಹಂತದಲ್ಲಿ ಗೋರಕ್ಷಕರನ್ನು ಸಮಾಜ ವಿರೋಧಿಗಳೆಂದು ಪರಿಗಣಿಸಬಾರದು. ಈಗಿನ ಪರಿಸ್ಥಿತಿಯಲ್ಲಿ ಈ ವಿಚಾರವಾಗಿ ರಾಜಕೀಯ ಹಾಗೂ ವಯಕ್ತಿಕ ಹಿತಾಸಕ್ತಿಗಾಗಿ ಹಲವು ತಪ್ಪು ಪರಿಕಲ್ಪನೆಯನ್ನು ಹರಡಲಾಗುತ್ತಿದೆ. ಏನೇ ಆದರೂ ಗೋಸಂರಕ್ಷಣೆಯ ಪವಿತ್ರಕಾಯ್ರ ಮಾತ್ರ ಮುಂದುವರಿಯುತ್ತಲೇ ಇರಬೇಕು.  ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯವನ್ನು ಗಮನದಲ್ಲಿಟ್ಟುಕೊಂಡು ಯಾರನ್ನು ಉದ್ರೇಕಿಸದೇ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು.
  • ದೇಶದ ಹಲವು ರಾಜ್ಯಗಳಲ್ಲಿ ಸಾಮಾಜಿಕ ಸಮಾನತೆ ತರುವಲ್ಲಿ ಸಂಘ ಪರಿವಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಹಲವು ಹಳ್ಳಿಗಳಲ್ಲಿ ಸಂಘ ಶಾಖಾಗಳ ಮೂಲಕ ಜನರು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಮನಸ್ಥಿತಿಯನ್ನು ನಿರ್ಮಿಸುವ ಪ್ರಯತ್ನಗಳಾಗುತ್ತಿವೆ. ಮಧ್ಯ ಭಾರತದ 9 ಸಾವಿರ ಹಳ್ಳಿಗಳಲ್ಲಿ ಈ ನಿಟ್ಟಿನಲ್ಲಿ ಸಮೀಕ್ಷೆಗಳನ್ನು ನಡೆಸಲಾಗಿದೆ. ಶೇ.40 ರಷ್ಟು ಹಳ್ಳಿಗಳಲ್ಲಿ ದೇವಸ್ಥಾನಕ್ಕೆ ಪ್ರವೇಶಿಸುವ ವಿಚಾರದಲ್ಲಿ ಅಸಮಾನತೆ ಇದೆ. ಶೇ.30ರಷ್ಟು ಹಳ್ಳಿಗಳಲ್ಲಿ ನೀರಿನ ಬಳಕೆಯ ವಿಚಾರದಲ್ಲಿ ಅಸಮಾನತೆ ಇದೆ. ಶೇ.35 ರಷ್ಟು ಹಳ್ಳಿಗಳಲ್ಲಿ ರುದ್ರಭೂಮಿ ಬಳಕೆ ವಿಚಾರವಾಗಿ ಅಸಮಾನತೆ ಇದೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಸಂಘದಿಂದ ಪ್ರಯತ್ನಗಳಾಗುತ್ತಿವೆ.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಸಂವಿಧಾನಾತ್ಮಕವಾಗಿ ತಮ್ಮ ಸಿಗುವ ಸೌಲಭ್ಯಗಳನ್ನು ಪಡೆಯಲು ಸ್ವಯಂಸೇವಕರು ನೆರವು ನೀಡುತ್ತಿದ್ದಾರೆ. ಅಲ್ಲದೆ ಅವರ ಕಲ್ಯಾಣಕ್ಕಾಗಿ ಸರ್ಕಾರ ಮತ್ತು ಆಡಳಿತ ಮಂಡಳಿಗಳು ಹಣ ಬಿಡುಗಡೆ ಮಾಡುವಂತೆಯೂ ಕಾರ್ಯನಿರ್ವಹಿಸುತ್ತಿದ್ದಾರೆ.

Leave a Reply