ಮಸೂದ್ ಅಜರ್, ಎನ್ಎಸ್ಜಿ, ಗಡಿ ಭದ್ರತೆ… ಎಲ್ಲದರಲ್ಲೂ ಭಾರತಕ್ಕೆ ಚೀನಾ ತೊಡರುಗಾಲು

ಉಗ್ರ ಮಸೂದ್ ಅಜರ್

ಡಿಜಿಟಲ್ ಕನ್ನಡ ಟೀಮ್:

ಜೈಷೆ ಉಗ್ರ ಮಸೂದ್ ಅಜರ್ ನನ್ನು ಅಂತಾರಾಷ್ಟ್ರೀಯ ಉಗ್ರನನ್ನಾಗಿ ಘೋಷಿಸುವ ಭಾರತದ ಪ್ರಯತ್ನಕ್ಕೆ ವಿಶ್ವಸಂಸ್ಥೆಯಲ್ಲಿ ಅಡ್ಡಗಾಲಾಗಿದೆ ಚೀನಾ. ಇದೇನೂ ಹೊಸ ವಿದ್ಯಮಾನವಲ್ಲ. ಮೊದಲಿನಿಂದಲೂ ತಾಂತ್ರಿಕ ಕಾರಣಗಳನ್ನು ಹೇಳಿ ಮಸೂದ್ ಮೇಲಿನ ನಿಷೇಧಕ್ಕೆ ತಾಂತ್ರಿಕ ಕಾರಣಗಳ ಅಡ್ಡಿ ಒಡ್ಡುತ್ತಿತ್ತು.

ಆದರೆ ಈ ಬಾರಿ ಅದರ ಅಧಿಕ ಪ್ರಸಂಗಿತನ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ‘ಉಗ್ರ ವಿರೋಧಿ ಹೋರಾಟವನ್ನು ಭಾರತವು ರಾಜಕೀಯಕ್ಕೆ ಬಳಸಿಕೊಳ್ಳಬಾರದು’ ಎಂಬ ಘನ ಉಪದೇಶವೊಂದು ಚೀನಾದ ಕಡೆಯಿಂದ ಬಂದಿದೆ!

ಯಾವುದು ಸ್ವಾಮಿ ರಾಜಕೀಯ? ಕಂದಹಾರಿಗೆ ವಿಮಾನ ಅಪಹರಣ ಮಾಡಿ ಭಾರತೀಯರನ್ನು ಒತ್ತೆಯಾಳಾಗಿಟ್ಟುಕೊಳ್ಳುವ ಮೂಲಕ ಬಿಡಿಸಿಕೊಂಡು ಹೋದ ಮಸೂದ್ ಅಜರ್ ಉಗ್ರನಲ್ಲವೇ? ಈತ ಕಾಶ್ಮೀರದಲ್ಲಿ ಮಾಡಿದ್ದ ವಿಧ್ವಂಸ- ಹತ್ಯೆಗಳೇನು ಕಡಿಮೆಯೇ? ಇದೀಗ ಪಾಕಿಸ್ತಾನದಲ್ಲಿರುವ ಈತನ ಮೇಲೆ ಅಂತಾರಾಷ್ಟ್ರೀಯ ನಿಷೇಧ ಹೇರುವ ಕ್ರಮ ಚೀನಾದ ಕಣ್ಣಿಗೆ ಅದು ಹೇಗೆ ತಾನೇ ರಾಜಕೀಯವಾಗಿ ಕಾಣುತ್ತದೆ? ಅಷ್ಟೆಲ್ಲ ಅಪ್ಪಿಕೊಳ್ಳುತ್ತಿರುವ ಪಾಕಿಸ್ತಾನದ ನೆಲದಿಂದ ಉಗ್ರವಾದಿಯೊಬ್ಬ ಎದ್ದುಬಂದು ಚೀನಾದ ಬುಡಕ್ಕೊಂದು ಬಾಂಬ್ ಇಟ್ಟಾಗ ಮಾತ್ರವೇ ಈ ದೇಶದ ಧೋರಣೆ ಬದಲಾದೀತೇನೋ.

ಮಸೂದ್ ಬಗ್ಗೆ ತನ್ನ ನಿಲುವನ್ನು ಬ್ಯಾಲೆನ್ಸ್ ಮಾಡಿಕೊಳ್ಳುವುದಕ್ಕೋ ಎಂಬಂತೆ, ಎನ್ಎಸ್ಜಿಗೆ ಭಾರತದ ಸೇರ್ಪಡೆ ಬಗ್ಗೆ ಮಾತಾಡೋಣ ಎಂದಿದೆ. ಸೂಕ್ಷ್ಮವಾಗಿ ನೋಡಿದರೆ ಈ ನಿಲುವೂ ಹೊಸದೇನಲ್ಲ. ‘ಇದು ಕೇವಲ ಚೀನಾ ಒಪ್ಪುವ-ಬಿಡುವ ಮಾತಲ್ಲ. 48 ರಾಷ್ಟ್ರಗಳ ಈ ಗುಂಪಿಗೆ ಸೇರಿಕೊಳ್ಳಲು ಅದರದ್ದೇ ಆದ ನಿಯಮಗಳಿವೆ. ಆ ಬಗ್ಗೆ ಸಮ್ಮತಿ ಮೂಡಬೇಕಲ್ಲವೇ’ ಎಂದಿದೆ ಚೀನಾ.

ವಿಶ್ವಸಂಸ್ಥೆ ಭದ್ರತಾ ಸಮಿತಿ ಕಾಯಂ ಸದಸ್ಯನಾಗಿರುವ ಚೀನಾ, ಮಸೂದ್ ನಿಷೇಧಕ್ಕೆ ಒಪ್ಪಿಗೆ ಸೂಚಿಸಿದ್ದೇ ಆದರೆ ಉಗ್ರ ನಿಗ್ರಹದಲ್ಲಿ ಎಲ್ಲವೂ ಸುಸೂತ್ರವಾಗುತ್ತದೆ. ತನ್ನ ಕೈಲಿರುವ ಈ ಕ್ರಮಕ್ಕೆ ಮುಂದಾಗದ ಚೀನಾ, ಎನ್ಎಸ್ಜಿ ವಿಚಾರದಲ್ಲಿ ಬೇರೆಯವರ ಸಮ್ಮತಿಯೂ ಮೂಡಬೇಕು ಎಂದು ರಾಗ ತೆಗೆದಿರುವುದು ಮಾತ್ರ ಅದರ ದುರುದ್ದೇಶದ ಸ್ಪಷ್ಟ ಮುಖವನ್ನು ತೋರಿಸಿದೆ.

ಇವೆಲ್ಲ ಒಂದುಕಡೆಯಾದರೆ, ಪಾಕಿಸ್ತಾನದ ಜತೆಗಿನ ಗಡಿಯನ್ನೆಲ್ಲ ಬೇಲಿಯಲ್ಲಿ ಬಂದ್ ಮಾಡುವ ಕೇಂದ್ರದ ನಿರ್ಧಾರವನ್ನು ಚೀನಾ ಸರ್ಕಾರದ ಅಡಿಯಲ್ಲಿ ನಡೆಯುತ್ತಿರುವ ಚಿಂತನಕೂಟಗಳು ‘ವಿವೇಚನೆ ಇಲ್ಲದ ನಡೆ’ ಎಂದು ಟೀಕಿಸಿವೆ. ಉಗ್ರರ ನುಸುಳುವಿಕೆಯನ್ನೇ ಕಸುಬಾಗಿಸಿಕೊಂಡಿರುವ ಪಾಕಿಸ್ತಾನಕ್ಕೆ ಉತ್ತರ ನೀಡಲು, ಪಾಕಿಸ್ತಾನದೊಂದಿಗಿನ 3323 ಕಿ.ಮೀ. ಗಡಿಗೆ ಡಿಸೆಂಬರ್ 2018ರ ಒಳಗೆ ಸಂಪೂರ್ಣ ಬೇಲಿ ಹಾಕಲಾಗುವುದು ಎಂದು ಗೃಹ ಸಚಿವ ರಾಜನಾಥ ಸಿಂಗ್ ಶುಕ್ರವಾರ ಘೋಷಿಸಿದ್ದಾರೆ.

ಹಿಂಗೆಲ್ಲ ಮಾಡಿದರೆ ಈಗಾಗಲೇ ಕನಿಷ್ಟಮಟ್ಟ ತಲುಪಿರುವ ಭಾರತ-ಪಾಕಿಸ್ತಾನ ವ್ಯವಹಾರಗಳು ಮತ್ತಷ್ಟು ಕುಂದುತ್ತ ಹೋಗುತ್ತವೆ, ಚೀನಾ-ಪಾಕಿಸ್ತಾನ-ಭಾರತ ವಹಿವಾಟಿಗೂ ಇದು ಧಕ್ಕೆ ಉಂಟುಮಾಡುತ್ತದೆ ಅಂತೆಲ್ಲ ಶಾಂಘೈ ಮೂಲದ ಚಿಂತನಕೂಟವು ಅಲವತ್ತುಕೊಂಡಿದೆ. ಅಷ್ಟೇ ಅಲ್ಲ, ಉರಿ ಘಟನೆ ಆಗಿದ್ದು ಹೇಗೆ ಎಂದು ಸಂಪೂರ್ಣ ತನಿಖೆಯಾಗುವುದಕ್ಕೆ ಮುಂಚೆಯೇ ಭಾರತ ಇಂಥ ನಡೆ ಇಟ್ಟಿರುವುದು ಸರಿ ಅಲ್ಲ ಎಂದೂ ಅದರ ಉವಾಚ.

ಮುಂಬೈ ದಾಳಿ ಬೆನ್ನಲ್ಲಾದಂತೆ ಭಾರತವು ಕೇವಲ ಪಾಕಿಸ್ತಾನಕ್ಕೆ ಸಾಕ್ಷ್ಯಗಳನ್ನು ಕೊಡುತ್ತ ಕೈ ಹಿಸುಕಿಕೊಂಡಿರಬೇಕು ಎಂದು ಚೀನಾ ಆಶಿಸುತ್ತಿರುವುದು ಸ್ಪಷ್ಟವಾಗಿದೆ.

ಇದೇ 15ರಿಂದ ಗೋವಾದಲ್ಲಿ ನಡೆಯುವ ಬ್ರಿಕ್ಸ್ ಸಮ್ಮೇಳನದಲ್ಲಿ ಚೀನಾ ಭಾಗವಹಿಸುತ್ತಿದೆ. ಆಗ ಚೀನಾದ ಈ ಎಲ್ಲ ನಡೆಗಳಿಗೆ ಭಾರತ ಪ್ರಖರ ವಿರೋಧ ವ್ಯಕ್ತಪಡಿಸಬೇಕಿದೆ.

ಇನ್ನೊಂದೆಡೆ, ಚೀನಾ ವಸ್ತುಗಳನ್ನು ಕೊಳ್ಳುವುದಿಲ್ಲ ಎಂಬ ಪ್ರತಿರೋಧ ಮನಸ್ಥಿತಿ ಭಾರತೀಯರಲ್ಲಿ ವ್ಯಕ್ತವಾಗುತ್ತಿದ್ದು, ಅದು ಇನ್ನೂ ದೊಡ್ಡಮಟ್ಟದ ಅಭಿಯಾನದಂತೆ ವ್ಯಾಪಿಸಿ ಚೀನಾಕ್ಕೆ ಬಿಸಿ ಮುಟ್ಟಿಸಬೇಕಾದ ಅಗತ್ಯವಿದೆ.

Leave a Reply