ರಾವಣನನ್ನು ಸುಡುತ್ತಲೇ ಅವೆಷ್ಟೋ ಸೀತೆಯರನ್ನು ಭ್ರೂಣದಲ್ಲಿ ಕೊಲ್ಲುತ್ತಿದ್ದೇವಲ್ಲ?- ಆತ್ಮಸಾಕ್ಷಿಗೆ ನಾಟುವಂತೆ ಪ್ರಧಾನಿ ಮೋದಿ ಮಾತಿನ ಬಾಣ, ರಾಜಕೀಯ ವಾಕ್ಸಮರಕ್ಕಾಗಿ ಕಾದಿದ್ದ ಎದುರಾಳಿಗಳಿಗೆ ಸಿಕ್ಕಿದ್ದು ‘ಯುದ್ಧವಲ್ಲ, ಬುದ್ಧ’ ಎಂಬ ಘೋಷಣೆ!

ಡಿಜಿಟಲ್ ಕನ್ನಡ ಟೀಮ್:

ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಪ್ರದೇಶದ ಲಖ್ನೊ ಸಮೀಪದ  ಐಶ್ಭಾಗ್ ನಲ್ಲಿ ವಿಜಯದಶಮಿ ಪ್ರಯುಕ್ತ ರಾಮಲೀಲಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬೆಳಗಿನಿಂದಲೂ ರಾಷ್ಟ್ರೀಯ ವಾಹಿನಿಗಳು ವಿಶ್ಲೇಷಣೆಗಳ ಮೇಲೆ ವಿಶ್ಲೇಷಣೆಗಳನ್ನು ಉದುರಿಸುತ್ತ, ಇದನ್ನು ಪ್ರಧಾನಿ ಹೇಗೆಲ್ಲ ರಾಜಕೀಯಕ್ಕೆ ಬಳಸಿಕೊಳ್ಳಲಿದ್ದಾರೆ ಎಂದು ಬಣ್ಣಿಸುತ್ತಿದ್ದವು. ಪ್ರತಿಪಕ್ಷಗಳಂತೂ ಗೃಹ ಸಚಿವ ರಾಜನಾಥ ಸಿಂಗ್ ಸಹಿತವಾಗಿ (ಲಖ್ನೊ ಸಂಸದರೂ ಹೌದು) ಪ್ರಧಾನಿ ಮೋದಿ ರಾಮಲೀಲಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವುದೇ ಉತ್ತರ ಪ್ರದೇಶದಲ್ಲಿ ಮುಂಬರಲಿರುವ ಚುನಾವಣೆ ಲೆಕ್ಕಾಚಾರದಲ್ಲಿ ಅಂತ ಕಟಕಿಯಾಡಿದ್ದವು.

ಸೇನೆಯ ಗುರಿ ನಿರ್ದಿಷ್ಟ ದಾಳಿಗೆ ಪ್ರಧಾನಿ ಮೋದಿ ಹೇಗೆ ಶ್ರೇಯಸ್ಸು ತೆಗೆದುಕೊಳ್ಳಲಿದ್ದಾರೆ ಎಂಬ ಒಂದು ಅಂಶದ ಸುತ್ತಲೇ ಬೆಳಗಿನಿಂದ ವಿಶ್ಲೇಷಣೆಗಳಾದವು. ಸ್ಥಳೀಯ ಕಾರ್ಯಕರ್ತರ ಹುಚ್ಚು ಉತ್ಸಾಹದಿಂದ ಸ್ವಾಗತ ಪೋಸ್ಟರ್ ಒಂದರಲ್ಲಿ ‘ಉರಿಯ ಸೇಡು ತೀರಿಸಿಕೊಂಡವರಿಗೆ ಸ್ವಾಗತ’ ಎಂದಿದ್ದನ್ನೇ ಬಿಂಬಿಸಿ, ರಾಜಕೀಯ ಭಾಷಣವೊಂದಕ್ಕೆ ಎಲ್ಲರೂ ಎದುರುನೋಡಿದ್ದರು. ಅತ್ತ ಕಾಂಗ್ರೆಸ್ ಕಾರ್ಯಕರ್ತರು ಸಹ ಸಮರಾಭ್ಯಾಸ ಎಂಬಂತೆ ರಾಹುಲ್ ಗಾಂಧಿಯನ್ನು ರಾಮನಾಗಿ ಹಾಗೂ ಅಮಿತ್ ಶಾ ಅವರನ್ನು ರಾವಣನಾಗಿ ಚಿತ್ರಿಸಿರುವ ಪೋಸ್ಟರ್ ಅಂಟಿಸಿದ್ದರು. ಗುರಿ ನಿರ್ದಿಷ್ಟ ದಾಳಿಯ ರಾಜಕೀಯ ಎಂಬ ಬೊಬ್ಬೆಯಲ್ಲಿ ಸರಣಿ ಸುದ್ದಿಗೋಷ್ಟಿಗಳು ನಡೆಯುವ ಎಲ್ಲ ಸಿದ್ಧತೆ ಪ್ರತಿಪಕ್ಷಗಳ ಕಡೆಯಿಂದ ಇದ್ದಂತಿತ್ತು.

ಆದರೆ…

ಅವೆಲ್ಲವನ್ನೂ ಢಮ್ಮೆನಿಸಿ ಆಕರ್ಷಕ ಹಾಗೂ ಸಿದ್ಧಾಂತಬದ್ಧ ಭಾಷಣವೊಂದನ್ನು ಹೊಸೆದುಬಿಟ್ಟರು ಪ್ರಧಾನಿ ಮೋದಿ. ಅಲ್ಲಿ ಉರಿ, ಸರ್ಜಿಕಲ್ ಸ್ಟ್ರೈಕ್ ಯಾವ ವಿಷಯಗಳೂ ಬರಲಿಲ್ಲ. ಅವನ್ನೆಲ್ಲ ನೋಡಿಕೊಳ್ಳುವುದಕ್ಕೆ ಯೋಧರಿದ್ದಾರೆ ಎಂಬಂತೆ, ವಿಷಯಬದ್ಧವಾಗಿ ಮಾತನಾಡಿದರು. ಎಷ್ಟರಮಟ್ಟಿಗೆ ಎಂದರೆ, ನಮಗೆ ಬೇಕಿರುವುದು ಯುದ್ಧವಲ್ಲ ಬುದ್ಧಮಾರ್ಗ ಎನ್ನುತ್ತ ಸಮರದಾಹಿಗಳನ್ನೆಲ್ಲ ತಣ್ಣಗಾಗಿಸಿಬಿಟ್ಟರು.

ಪ್ರಧಾನಿ ನರೇಂದ್ರ ಮೋದಿಯವರು ಜೈ ಶ್ರೀರಾಂ ಎಂಬ ಘೋಷದೊಂದಿಗೆ ಮಾತು ಆರಂಭಿಸಿದಾಗ ಈ ಮೂಲಕ ಉತ್ತರ ಪ್ರದೇಶದಲ್ಲಿ ರಾಮನ ಹೆಸರಿನ ರಾಜಕೀಯದ ಸೂಚನೆಗಳನ್ನು ಹೊರಡಿಸುತ್ತಾರೇನೋ ಎಂಬ ಭಾವನೆ ಒಸರಿತ್ತು. ಮೋದಿ ಅಲ್ಲೂ ನಿರೀಕ್ಷೆಗಳನ್ನು ಪುಡಿ ಮಾಡಿದರು.

‘ಹೇಗೆ ಪ್ರತಿವರ್ಷ ರಾವಣನ ಮಾದರಿಯನ್ನು ನಾವು ಸುಡುತ್ತ ಬರುತ್ತೇವೋ ಹಾಗೆಯೇ ನಮ್ಮ ರಾಷ್ಟ್ರೀಯ ಬದುಕಿನಲ್ಲಿ ನಮ್ಮೆದುರಿನ ಕೆಟ್ಟದ್ದನ್ನು ಕೊಲ್ಲುತ್ತ ಹೋಗಬೇಕು. ವಿಜಯದಶಮಿ ದಿನ ಈ ವರ್ಷ ಎಷ್ಟು ಕೆಟ್ಟದ್ದನ್ನು ಕೊಂದೆವು ಎಂಬ ಲೆಕ್ಕಾಚಾರ ಮಾಡಿಕೊಳ್ಳಬೇಕು.’

‘ಐಶ್ಭಾಗ್ ನ ಈ ಪಾರಂಪರಿಕ ರಾಮಲೀಲಾ ಉತ್ಸವ ಇದನ್ನೇ ಮಾಡುತ್ತ ಬಂದಿದೆ. ನೀವು ಪ್ರತಿವರ್ಷ ಒಂದು ವಿಷಯವನ್ನಿಟ್ಟುಕೊಂಡು ರಾವಣ ದಹನ ಮಾಡುತ್ತಿದ್ದೀರಿ. ಈ ಬಾರಿ ಆತಂಕವಾದದ ವಿರುದ್ಧ ಸಮರವೆಂಬ ಥೀಮ್ ಇರಿಸಿಕೊಂಡಿದ್ದೀರಿ. ರಾಮಾಯಣದಲ್ಲಿ ಆತಂಕವಾದದ ವಿರುದ್ಧ ಮೊದಲಿಗೆ ಯುದ್ಧ ಮಾಡಿದವರು ಯಾರು? ಜಟಾಯು! ಮಹಿಳೆಯ ಸಮ್ಮಾನ ಕಾಪಾಡುವುದಕ್ಕೆ ಆತ ರಾವಣನಂಥ ಮಹಾಬಲಶಾಲಿಯನ್ನು ಎದುರಿಸಿದ. ರಾಮನಾಗದಿದ್ದರೇನಂತೆ, ದೇಶವಾಸಿಗಳಾದ ನಾವೆಲ್ಲ ಜಟಾಯುಗಳಾಗೋಣ. ಜಟಾಯುವಿನಂತೆ ಎಲ್ಲರೂ ಆತಂಕವಾದಿಗಳ ನಡೆ ಬಗ್ಗೆ ಗಮನವಿರಿಸಿದ್ದೇ ಆದರೆ, ಅವರೆಂದಿಗೂ ಯಶಸ್ವಿಯಾಗರು.’

ಹೀಗೆನ್ನುತ್ತ, ಜಗತ್ತಿನ ಮಾನವತೆಯೇ ಆತಂಕವಾದದ ವಿರುದ್ಧ ಒಂದಾಗಬೇಕಾದ ತುರ್ತನ್ನು ವಿವರಿಸಿದ ಪ್ರಧಾನಿ ಮೋದಿ, ನಂತರದ ಹಂತದಲ್ಲಿ ರಾವಣ ಎಂಬ ಪರಿಕಲ್ಪನೆಯನ್ನು ಎಲ್ಲ ಅನಿಷ್ಟಗಳಿಗೆ ಹಿಗ್ಗಿಸಿದರು. ಬಡವರ ಜೀವವನ್ನು ಕೀಳುವ ಹೊಲಸು- ಗಲೀಜಿನ ಪರಿಸರವೂ ರಾವಣರೂಪವೇ ಎನ್ನುತ್ತ ಸ್ವಚ್ಛತೆಗೆ ಕರೆ ಕೊಟ್ಟರು.

ಪ್ರಧಾನಿ ನರೇಂದ್ರ ಮೋದಿ ತಮ್ಮ ನಿರ್ಣಾಯಕ ಬಾಣವನ್ನು ಹೂಡಿದ್ದು ಮಾತ್ರ ಸಾಮಾನ್ಯ ಜನರ ಆತ್ಮಸಾಕ್ಷಿಗೆ. ಅವರು ಹೇಳಿದರು, ‘ಇವತ್ತು ನಾವೆಲ್ಲ ವಿಜಯದಶಮಿ ಆಚರಿಸುತ್ತಿರುವ ದಿನದಂದೇ ಜಗತ್ತು ಹೆಣ್ಣುಮಗುವಿನ ದಿನವನ್ನಾಚರಿಸುತ್ತಿದೆ. ಒಬ್ಬ ಸೀತೆಗೆ ಅವಮಾನಿಸಿದ ರಾವಣನನ್ನು ಪ್ರತಿವರ್ಷ ಸುಡುವ ಆಚರಣೆ ನಮ್ಮದು. ಆದರೆ ನಾವೇಕೆ ಇನ್ನೂ ಹುಟ್ಟಬೇಕಾದ ಅವೆಷ್ಟೋ ಸೀತೆಯರನ್ನು ಭ್ರೂಣದಲ್ಲೇ ಕೊಲ್ಲುತ್ತಿದ್ದೇವೆ’ ಎಂದು ಆತ್ಮವಿಮರ್ಶೆಗೆ ಪ್ರೇರೇಪಿಸಿದರು ಮೋದಿ. ‘ಗಂಡುಮಗು ಹುಟ್ಟಿದಾಗ ಇರುವ ಸಂಭ್ರಮಕ್ಕಿಂತ ಹೆಣ್ಣುಮಗು ಜನಿಸಿದಾಗಿನ ಸಂತಸ ದೊಡ್ಡದಿರಲಿ. ಒಲಿಂಪಿಕ್ಸ್ ನಲ್ಲಿ ನಮ್ಮ ಹೆಣ್ಣುಮಕ್ಕಳು ಎಂಥ ಶ್ರೇಯಸ್ಸು ತಂದಿದ್ದಾರೆ ನೋಡಿ! ಸೀತೆಯನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮೆಲ್ಲರಲ್ಲಿದೆ. ನಮ್ಮೊಳಗಿನ ರಾವಣ ಸಾಯಲಿ.’ ಅಂತ ಭಾವನಾತ್ಮಕ ಕರೆ ನೀಡಿದರು ಪ್ರಧಾನಿ.

ಭಾರತೀಯ ಸೇನೆಯ ಗುರಿ ನಿರ್ದಿಷ್ಟ ದಾಳಿಗೆ ಪ್ರಧಾನಿ ಮೋದಿ ತಮ್ಮ ರಾಜಕೀಯ ನೇತೃತ್ವವನ್ನು ಹೊಗಳಿಕೊಳ್ಳುತ್ತಾರೆ ಎಂಬುದೇ ಎಲ್ಲರ ನಿರೀಕ್ಷೆಯಿತ್ತು. ಆದರೆ ಆ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಬೇರೆಯದೇ ಬಗೆಯಲ್ಲಿ ಮಾತಿನ ಕೌತುಕ ಬಿಚ್ಚಿಟ್ಟರು. ‘ಕೆಲವೊಮ್ಮೆ ಯುದ್ಧ ಅನಿವಾರ್ಯವಾಗುತ್ತದೆ. ಆದರೆ ಯುದ್ಧ ಬಯಸುವವರ ನಾಡಲ್ಲ ಇದು. ಬುದ್ಧನನ್ನು ಬಯಸುತ್ತೇವೆ ನಾವು. ಈ ನೆಲವು ರಣರಂಗದಲ್ಲಿ ನಿಂತು ಗೀತೆಯನ್ನು ಭೋದಿಸಿದ ಮೋಹನನಾದ ಕೃಷ್ಣನನ್ನೂ, ಅಹಿಂಸೆಯನ್ನೇ ಭೋದಿಸಿದ ಮೋಹನದಾಸ ಕರಮಚಂದನನ್ನೂ ಯುಗಪುರುಷನನ್ನಾಗಿ ಕಾಣುತ್ತದೆ.’ ಎಂದು ಭಾರತೀಯ ದೃಷ್ಟಿಕೋನವನ್ನು ಹೊಗಳಿ, ಆತಂಕಮುಕ್ತ ಏಕಾತ್ಮ ಹಿಂದುಸ್ಥಾನ ಸಾಕಾರವಾಗಲೆಂಬ ಆಶಯದೊಂದಿಗೆ ಇನ್ನೊಮ್ಮೆ ರಾಮಗೋಷ ಮೊಳಗಿಸಿ ಪ್ರಧಾನಿ ಮಾತು ಮುಗಿಸಿದರು.

1 COMMENT

Leave a Reply