ಇಂದೋರಿನಲ್ಲಿ ಭಾರತ ಕ್ರಿಕೆಟ್ ತಂಡದ ವಿಜಯದಶಮಿ: ಅಶ್ವಿನ್ ಆರ್ಭಟ, ಕಿವೀಸ್ ಕ್ಲೀನ್ ಸ್ವೀಪ್, ಟೀಂ ಇಂಡಿಯಾ ನಂಬರ್ ಒನ್

ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಭಾರತ ಕ್ರಿಕೆಟ್ ತಂಡ ಅಗ್ರಸ್ಥಾನ ಪಡೆದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ‘ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ದಂಡ (ಪ್ರಶಸ್ತಿ)’ ನೀಡಿದ ಮಾಜಿ ನಾಯಕ ಸುನೀಲ್ ಗವಾಸ್ಕರ್… (ಚಿತ್ರ ಕೃಪೆ: ಟ್ವಿಟರ್)

ಡಿಜಿಟಲ್ ಕನ್ನಡ ಟೀಮ್:

ನಾಯಕ ವಿರಾಟ್ ಕೊಹ್ಲಿ ದ್ವಿಶತಕ… ರಹಾನೆ ಹಾಗೂ ಚೇತೇಶ್ವರ ಪೂಜಾರರ ಅಮೋಘ ಶತಕ… ರವಿಚಂದ್ರನ್ ಅಶ್ವಿನ್ ಸ್ಪಿನ್ ಮೋಡಿ ನೆರವಿನೊಂದಿಗೆ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ 321 ರನ್ ಗಳ ಅಂತರದ ಭರ್ಜರಿ ಜಯ ಸಂಪಾದಿಸಿದೆ.

ತವರಿನ ಅಂಗಳದಲ್ಲಿ ನಡೆದ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಗೆಲ್ಲುವುದರೊಂದಿಗೆ ಭಾರತ ತಂಡ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್ ಒನ್ ಪಟ್ಟವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ. ಈ ಪಂದ್ಯ ಮುಕ್ತಾಯದ ನಂತರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ‘ಐಸಿಸಿ ಟೆಸ್ಟ್ ಚಾಂಪಿಯನ್’ ಟ್ರೋಫಿಯನ್ನು ನೀಡುವುದರ ಮೂಲಕ ಅಗ್ರಸ್ಥಾನವನ್ನು ಅಧಿಕೃತವಾಗಿ ನೀಡಲಾಯಿತು. ಮುಂದಿನ ದಿನಗಳಲ್ಲಿ ಭಾರತ ತವರಿನಲ್ಲೇ ಮತ್ತಷ್ಟು ಟೆಸ್ಟ್ ಸರಣಿಗಳನ್ನಾಡಲಿದ್ದು, ಭಾರತ ಹೀಗೆ ಅಗ್ರ ಸ್ಥಾನದಲ್ಲಿ ಮುಂದುವರಿಯಲು ದೊಡ್ಡ ಅವಕಾಶವಿದೆ.

ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಹೆಚ್ಚು ಅಬ್ಬರಿಸದ ಭಾರತೀಯ ಬ್ಯಾಟ್ಸ್ ಮನ್ ಗಳು ಈ ಪಂದ್ಯದಲ್ಲಿ ಸರಾಗವಾಗಿ ರನ್ ಗಳಿಸಿದರು. ಮೊದಲ ಇನಿಂಗ್ಸ್ ನಲ್ಲಿ ಒತ್ತಡದ ಪರಿಸ್ಥಿತಿಯಲ್ಲೂ ಕ್ರೀಸ್ ಗೆ ಬಂದರೂ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ನಾಯಕ ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನದ ಎರಡನೇ ದ್ವಿಶತಕ ಹಾಗೂ ಟೆಸ್ಟ್ ಕ್ರಿಕೆಟ್ ನ ಶ್ರೇಷ್ಠ ರನ್ (211) ಗಳಿಸಿದರು. ಕೊಹ್ಲಿಗೆ ಉತ್ತಮ ಸಾಥ್ ನೀಡಿದ ಅಜಿಂಕ್ಯ ರಹಾನೆ(188) ಸಹ ಅತ್ಯದ್ಭುತ ಬ್ಯಾಟಿಂಗ್ ಮಾಡಿದರು. ಇನ್ನು ಎರಡನೇ ಇನಿಂಗ್ಸ್ ನಲ್ಲಿ ಚೇತೇಶ್ವರ ಪೂಜಾರ (ಅಜೇಯ 101) ಶತಕ ಗಳಿಸಿ ಮಿಂಚಿದರು. ಆದರೆ ಭಾರತದ ಪರ ಎರಡೂ ಇನಿಂಗ್ಸ್ ನಲ್ಲೂ ಮಿಂಚಿನ ಪ್ರದರ್ಶನ ನೀಡಿದ್ದು, ಸ್ಪಿನ್ನರ್ ಆರ್.ಅಶ್ವಿನ್.

ಮೊದಲ ಇನಿಂಗ್ಸ್ ನಲ್ಲಿ ನ್ಯೂಜಿಲೆಂಡ್ ತಂಡದ ಆರಂಭಿಕರು ಶತಕದ ಜತೆಯಾಟ ನೀಡಿ ಉತ್ತಮ ಆರಂಭ ಪಡೆದರೂ ನಂತರ ಸ್ಪಿನ್ ಬಲೆಯಲ್ಲಿ ಕಿವಿಸ್ ಬ್ಯಾಟಿಂಗ್ ಪಡೆಯನ್ನೇ ಉಡಾಯಿಸಿ 6 ವಿಕೆಟ್ ಕಬಳಿಸಿದರು. ಇನ್ನು ಎರಡನೇ ಇನಿಂಗ್ಸ್ ನಲ್ಲೂ ಕಿವಿಸ್ ದಾಂಡಿಗರಿಗೆ ಮಾರಕವಾಗಿ ಪರಿಣಮಿಸಿ 6 ವಿಕೆಟ್ ಪಡೆದರು. ಭಾರತ ನೀಡಿದ 475 ರನ್ ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಪಡೆ ನಿರೀಕ್ಷಿತ ಬ್ಯಾಟಿಂಗ್ ಮಾಡಲಿಲ್ಲ. ನಾಲ್ಕನೇ ದಿನದ ಚಹಾ ವಿರಾಮದ ವೇಳೆಗೆ 38 ರನ್ ಗಳಿಗೆ 1 ವಿಕೆಟ್ ಕಳೆದುಕೊಂಡಿದ್ದ ಪ್ರವಾಸಿಗರು, ದಿನದ ಅಂತಿಮ ಅವಧಿಯಲ್ಲಿ 115 ರನ್ ಗಳಿಗೆ 9 ವಿಕೆಟ್ ಕಳೆದುಕೊಂಡು ಭಾರತಕ್ಕೆ ಸುಲಭವಾಗಿ ತಲೆಬಾಗಿತು.

ಈ ಪ್ರದರ್ಶನದೊಂದಿಗೆ ಅಶ್ವಿನ್ ಪಂದ್ಯದಲ್ಲಿ 10 ವಿಕೆಟ್ ಪಡೆದಿದ್ದು, ಟೆಸ್ಟ್ ಸರಣಿಯೊದರಲ್ಲಿ ಎರಡು ಬಾರಿ 10ಕ್ಕೂ ಹೆಚ್ಚು ವಿಕೆಟ್ ಪಡೆದ ಭಾರತದ ಎರಡನೇ ಬೌಲರ್ ಆದರು. ಈ ಹಿಂದೆ 2000-01 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಹರ್ಭಜನ್ ಸಿಂಗ್ ಈ ಸಾಧನೆ ಮಾಡಿದ್ದರು. ಇನ್ನು 40 ಇನಿಂಗ್ಸ್ ಗಳಲ್ಲೇ 21 ಬಾರಿ 5 ವಿಕೆಟ್ ಬಾಚಿದ ಸಾಧನೆಯನ್ನೂ ಮಾಡಿದ್ದಾರೆ. ಇನ್ನು ಸರಣಿಯಲ್ಲಿ 27 ವಿಕೆಟ್ ಬಾಚಿರುವ ಅಶ್ವಿನ್ ಪಾಲಿಗೆ ಇದು ಈವರೆಗಿನ ಸರ್ವಶ್ರೇಷ್ಠ ಇನಿಂಗ್ಸ್ ಆಗಿದೆ. ಇನ್ನು ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ಅಶ್ವಿನ್ ಮಡಿಲಿಗೆ ಸೇರಿದೆ. ಕಳೆದ 14 ಟೆಸ್ಟ್ ಸರಣಿಯಲ್ಲಿ ಅಶ್ವಿನ್ 7ನೇ ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿರುವುದು ಅವರ ಪ್ರಾಬಲ್ಯಕ್ಕೆ ಸಾಕ್ಷಿ.

ಟೆಸ್ಟ್ ಕ್ರಿಕೆಟ್ ಗೆ ಭರವಸೆ ಮೂಡಿಸಿದ ಪ್ರೇಕ್ಷಕರ ಬೆಂಬಲ…

ಈ ಪಂದ್ಯದಲ್ಲಿ ಆಟಗಾರರ ಪ್ರದರ್ಶನಕ್ಕಿಂತ ಮತ್ತಷ್ಟು ಗಮನ ಹೆಚ್ಚಿಸಿದ್ದು, ಇಲ್ಲಿನ ಪ್ರೇಕ್ಷಕರ ಹಾಜರಾತಿ. ಟೆಸ್ಟ್ ಪಂದ್ಯ ಜನಪ್ರಿಯತೆ ಕಳೆದುಕೊಳ್ಳುತ್ತಿದೆ. ಮಂದಗತಿಯ ಆಟದಿಂದಾಗಿ ಜನ ಈ ಮಾದರಿಯತ್ತ ಹೆಚ್ಚು ಉತ್ಸುಕರಾಗಿಲ್ಲ ಎಂಬ ಕೊರಗು ಐಸಿಸಿಯನ್ನು ಚಿಂತೆಗೀಡು ಮಾಡಿಸಿರೋದು ಗೊತ್ತಿರುವ ವಿಚಾರವೇ. ಕ್ರಿಕೆಟನ್ನೇ ಧರ್ಮವೆಂಬಂತೇ ಪರಿಗಣಿಸಿರುವ ಭಾರತದಲ್ಲೂ ಟೆಸ್ಟ್ ಕ್ರಿಕೆಟ್ ನತ್ತ ಹೆಚ್ಚು ಜನ ಆಸಕ್ತಿ ಹೊಂದುತ್ತಿಲ್ಲ ಎಂಬುದು ಐಸಿಸಿ ಮತ್ತು ಬಿಸಿಸಿಐಗೆ ದೊಡ್ಡ ಸಾವಾಲಾಗಿದೆ. ಇಂತಹ ಸಂದರ್ಭದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಮೂರನೇ ಹಾಗೂ ಅಂತಿಮ ಪಂದ್ಯಕ್ಕೆ ಇಂದೋರಿನ ಹೋಲ್ಕರ್ ಕ್ರೀಡಾಂಗಣಕ್ಕೆ ಸಾವಿರಾರು ಮಂದಿ ಪ್ರೇಕ್ಷಕರು ಆಗಮಿಸಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಪಂದ್ಯದ ಆರಂಭಿಕ ದಿನ ಕ್ರೀಡಾಂಗಣಕ್ಕೆ ಆಗಮಿಸಿದ್ದ ಪ್ರೇಕ್ಷಕರ ಸಂಖ್ಯೆ 20 ಸಾವಿರ ಗಡಿ ದಾಟಿತ್ತು. ಇನ್ನು ಎರಡನೇ ದಿನವೂ ಸುಮಾರು 23 ಸಾವಿರ ಜನರು ಮೈದಾನಕ್ಕೆ ಆಗಮಿಸಿದ್ರು.

ಪಂದ್ಯದ ನಾಲ್ಕನೇ ದಿನವೂ ಸಹ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಒಟ್ಟಾರೆ ಸರಾಸರಿ ದಿನಕ್ಕೆ 18 ಸಾವಿರ ಪ್ರೇಕ್ಷಕರು ಆಗಮಿಸಿದ್ದರು. ಈ ರೀತಿಯಾಗಿ ಭಾರತೀಯ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿರೋದು ಟೆಸ್ಟ್ ಕ್ರಿಕೆಟ್ ಪಾಲಿಗೆ ಮಹತ್ವದ ಬೆಳವಣಿಗೆ. ಆರಂಭಿಕ ಎರಡು ದಿನ ದೊಡ್ಡ ಪ್ರಮಾಮದಲ್ಲಿ ಬಂದ ಪ್ರೇಕ್ಷಕರು ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಅವರ ಅಮೋಘ ಬ್ಯಾಟಿಂಗ್ ಕಣ್ತುಂಬಿಕೊಂಡರೆ, ನಂತರದ ಎರಡು ದಿನ ಅಶ್ವಿನ್ ಸ್ಪಿನ್ ಮೋಡಿಗೆ ಕಿವೀಸ್ ಬ್ಯಾಟ್ಸ್ ಮನ್ ಗಳು ಪರದಾಡಿದ್ದನ್ನು ಆನಂದಿಸಿದರು. ಒಟ್ಟಿನಲ್ಲಿ ಭಾರತ ಪಂದ್ಯ ಗೆದ್ದು ಸರಣಿಯನ್ನು ವಶಪಡಿಸಿಕೊಳ್ಳುವುದರ ಜತೆಗೆ ಪ್ರೇಕ್ಷಕರಿಂದ ಸಿಕ್ಕಿರುವ ಪ್ರತಿಕ್ರಿಯೆ ಆಟಗಾರರು ಮತ್ತು ಬಿಸಿಸಿಐ ಮೊಗದಲ್ಲಿ ಮಂದಹಾಸವನ್ನು ಹೆಚ್ಚಿಸಿದೆ.

ಸಂಕ್ಷಿಪ್ತ ಸ್ಕೋರ್

ಭಾರತ ಮೊದಲ ಇನಿಂಗ್ಸ್ 557/5 ಡಿಕ್ಲೇರ್: ಕೊಹ್ಲಿ 211, ರಹಾನೆ 188, ರೋಹಿತ್ 51, ಬೌಲ್ಟ್ 113ಕ್ಕೆ2, ಪಟೇಲ್ 120ಕ್ಕೆ 2

ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 299: ಗುಪ್ಟಿಲ್ 72, ನಿಶಾಮ್ 71, ಲಾತಮ್ 53, ಅಶ್ವಿನ್ 81ಕ್ಕೆ6, ಜಡೇಜಾ 80ಕ್ಕೆ 2

ಭಾರತ ಎರಡನೇ ಇನಿಂಗ್ಸ್ 216ಕ್ಕೆ3 ಡಿಕ್ಲೇರ್: ಪೂಜಾರ ಅಜೇಯ 101, ಗಂಭೀರ್ 50, ರಹಾನೆ ಅಜೇಯ 32, ಪಟೇಲ್ 56ಕ್ಕೆ2

ನ್ಯೂಜಿಲೆಂಡ್ ಎರಡನೇ ಇನಿಂಗ್ಸ್ 153: ಟೇಲರ್ 32, ಗುಪ್ಟಿಲ್ 29, ವಿಲಿಯಮ್ಸನ್ 27, ಅಶ್ವಿನ್ 59ಕ್ಕೆ 7, ಜಡೇಜಾ 45ಕ್ಕೆ 2

1 COMMENT

Leave a Reply