14 ಬಲಿ ಪಡೆದ ಕಾಬುಲ್ ಶಿಯಾ ಪ್ರಾರ್ಥನಾ ಮಂದಿರದ ಮೇಲಿನ ದಾಳಿ, ಇಸ್ಲಾಂ ಉಗ್ರರ ಕೈಮೇಲಾದರೆ ಮುಸ್ಲಿಂ ರಾಷ್ಟ್ರಗಳಿಗೂ ಉಳಿಗಾಲವಿಲ್ಲ

ಡಿಜಿಟಲ್ ಕನ್ನಡ ಟೀಮ್:

ಶಿಯಾ ಪಂಥದ ಮುಸ್ಲಿಂರನ್ನು ಗುರಿಯಾಗಿಸಿಕೊಂಡು ಕಾಬುಲ್ ನಲ್ಲಿ ಮತ್ತೊಂದು ಉಗ್ರರ ದಾಳಿ ನಡೆದಿದೆ. ಮೊಹರಂನ 10ನೇ ದಿನ ನಡೆಸುವ ಪ್ರಾರ್ಥನೆಗಾಗಿ ಶಿಯಾ ಪ್ರವಾಸಿಗರು ಮಂದಿರಕ್ಕೆ ತೆರಳಿದ್ದ ಸಂದರ್ಭವನ್ನು ಬಳಸಿಕೊಂಡು ಉಗ್ರರಿಂದ ಗುಂಡಿನ ದಾಳಿ ನಡೆದಿದೆ. ಪರಿಣಾಮ 14 ಮಂದಿ ಸಾವನ್ನಪ್ಪಿದ್ದು, ಸುಮಾರು 36 ಮಂದಿ ಗಾಯಗೊಂಡಿದ್ದಾರೆ.

ಭಾರತದ ಸ್ನೇಹಿತ ರಾಷ್ಟ್ರ ಅಫಘಾನಿಸ್ತಾನದಲ್ಲಿ ಆಗಿರುವ ವಿದ್ಯಮಾನ ಸಹಜವಾಗಿಯೇ ತಲ್ಲಣ ಎಬ್ಬಿಸುತ್ತಿದೆ.

ಈ ಸಂದರ್ಭದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಒಬ್ಬ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಅಫ್ಘನಿಸ್ತಾನ ಆಂತರಿಕ ಸಚಿವಾಲಯ ವಕ್ತಾರ ಸಿದಿಕ್ ಸೆದ್ದಿಕಿ ಮಾಹಿತಿ ನೀಡಿದ್ದಾರೆ. ಕಾಬುಲ್ ವಿಶ್ವವಿದ್ಯಾಲಯದ ಬಳಿ ಇರುವ ಕಾರ್ಟೆ ಸಾಖಿ ದೇವಾಲಯಕ್ಕೆ ತೆರಳಿದಲ್ಲಿ ಈ ಘಟನೆ ನಡೆದಿದ್ದು, ನಂತರ ಭದ್ರತಾ ಪಡೆ ಪ್ರಾರ್ಥನಾ ಮಂದಿರವನ್ನು ಪ್ರವೇಶಿಸಿ ಉಗ್ರನನ್ನು ಹೊಡೆದು ಹಾಕಿ ಕಾರ್ಯಾಚರಣೆ ಪೂರ್ಣಗೊಳಿಸಿದೆ. ಈ ಮೃತಪಟ್ಟ 14 ಮಂದಿ ಪೈಕಿ 13 ಮಂದಿ ನಾಗರಿಕರಾಗಿದ್ದು, ಓರ್ವ ಪೊಲೀಸ್ ಅಧಿಕಾರಿಯಾಗಿದ್ದಾರೆ. ಈ ದಾಳಿ ಇಲ್ಲಿಗೆ ಮುಕ್ತಾಯಗೊಂಡಿಲ್ಲ, ಇದು ಮುಂದಿನ ದಿನಗಳಲ್ಲೂ ಮರುಕಳಿಸುವ ಬಗ್ಗೆಯೂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ‘ಕಾರ್ಟೆ ಪ್ರಾರ್ಥನಾ ಮಂದಿರದ ಮೇಲೆ ಸಾಕಷ್ಟು ಉಗ್ರರು ಕಣ್ಣಿಟ್ಟಿದ್ದಾರೆ. ಶಿಯಾ ಪಂಥದವರು ಹೆಚ್ಚು ಗುಂಪಾಗಿ ಸೇರುವ ಕಡೆ ಮತ್ತೆ ದಾಳಿ ನಡೆಸುವ ಸಾಧ್ಯತೆಗಳಿವೆ’ ಎಂದು ಮಾಹಿತಿ ನೀಡಿದ್ದಾರೆ ಪೊಲೀಸರು.

ಇಸ್ಲಾಂ ಅಲ್ಪಸಂಖ್ಯಾತ ಶಿಯಾ ಪಂಗಡದವರ ಮೇಲಿನ ದಾಳಿ ಇದೇ ಮೊದಲಲ್ಲ. ಜುಲೈ 23 ರಂದು ಕಾಬುಲ್ ನಲ್ಲೇ ನಡೆದ ದಾಳಿಯಲ್ಲಿ 84 ಮಂದಿ ಮೃತಪಟ್ಟಿದ್ದರು. ಅಲ್ಲದೆ 130ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇದರೊಂದಿಗೆ ಇಸ್ಲಾಂ ರಾಷ್ಟ್ರಗಳಲ್ಲೂ ಉಗ್ರವಾದ ತಾಂಡವವಾಡುತ್ತಿರುವುದು ಉಗ್ರರ ಕ್ರೌರ್ಯಕ್ಕೆ ಸಾಕ್ಷಿ.

Leave a Reply