‘ಪಾಕಿಸ್ತಾನದ ಸುಖ ಲೋಲುಪ್ತ ಸೇನಾ ಪ್ರಮುಖರು ಭಾರತದ ವಿರುದ್ಧ ಯುದ್ಧ ಮಾಡುವ ಮಾತು ಹಾಗಿರಲಿ, ಚೀನಾ ಸಹಾಯವಿಲ್ಲದೇ ಬಲೊಚಿಸ್ತಾನ, ಪಿಒಕೆ ನಿಯಂತ್ರಿಸುವುದಕ್ಕೂ ಅಸಮರ್ಥರು!’

ಡಿಜಿಟಲ್ ಕನ್ನಡ ಟೀಮ್:

ಬಲೊಚಿಸ್ತಾನ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ನಾಯಕಿ ಎಂದರೆ ನಯೆಲ ಕ್ವಾದ್ರಿ ಬಲೊಚ್. ಅವರೀಗ ಭಾರತ ಭೇಟಿಯಲ್ಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಬಲೊಚಿಸ್ತಾನದ ವಿಷಯವನ್ನು ಪ್ರಸ್ತಾಪಿಸಿದ ನಂತರ ನಮ್ಮ ಹೋರಾಟಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಹೆಚ್ಚಾಗಿದೆ ಎಂದಿದ್ದಾರೆ ನಯೆಲಾ. ಭಾರತದ ಮಾತುಗಳಿಂದ ಪ್ರೇರಿತಗೊಂಡು ಹಲವು ದೇಶಗಳು ವಿಶ್ವಸಂಸ್ಥೆಯಲ್ಲಿ ನಮ್ಮನ್ನು ಬೆಂಬಲಿಸುತ್ತಿವೆ ಎಂದಿದ್ದಾರವರು.

ಭಾರತ- ಪಾಕಿಸ್ತಾನಗಳ ನಡುವೆ ಯುದ್ಧವೇನಾದರೂ ಆಗುತ್ತಾ ಎಂಬ ಪ್ರಶ್ನೆ ಹೊತ್ತಿರುವವರಿಗೆ ನಯೆಲಾ ಬಲೊಚರ ಪ್ರತಿಕ್ರಿಯೆಯೊಂದು ಮುಖ್ಯವಾಗುತ್ತದೆ. ಅವರು ಹೇಳುತ್ತಾರೆ, ‘ಭಾರತದ ಜತೆ ಯುದ್ಧ ಮಾಡುವ ಸ್ಥಿತಿಯಲ್ಲಿ ಪಾಕಿಸ್ತಾನದ ಸೇನೆ ಇಲ್ಲ. ಭಾರತದ ವಿರುದ್ಧ ಯುದ್ಧ ಮಾಡುವುದು ಹಾಗಿರಲಿ, ಪಾಕ್ ಆಕ್ರಮಿತ ಕಾಶ್ಮೀರದ ಜನರನ್ನು ಸುಮ್ಮನಾಗಿಸುವುದಕ್ಕೆ ಹಾಗೂ ಬಲೊಚಿಸ್ತಾನದ ಸ್ವಾತಂತ್ರ್ಯ ಹೋರಾಟ ಹತ್ತಿಕ್ಕುವುದಕ್ಕೆ ಪಾಕಿಸ್ತಾನಕ್ಕೆ ಚೀನಾ ಸೇನೆಯ ಸಹಾಯ ಬೇಕಾಗಿದೆ. ಪಾಕಿಸ್ತಾನದ ನೆಲದಲ್ಲಿ ಚೀನಿಯರು ಇಲ್ಲವಾದಲ್ಲಿ ಬಲೊಚಿಸ್ತಾನವು ಸ್ವತಂತ್ರವಾಗುವುದಕ್ಕೆ ಸಮಯ ಹಿಡಿಯುವುದಿಲ್ಲ. ಚೀನಿಯರ ಸಹಕಾರ ಇಲ್ಲದೇ ಪಾಕಿಸ್ತಾನ ಏನನ್ನೂ ಮಾಡುವ ಸ್ಥಿತಿಯಲ್ಲಿಲ್ಲ. ಬೇರೆ ದೇಶಗಳಿಂದ ಬರುತ್ತಿರುವ ಹಣ ಸಂಪೂರ್ಣ ನಿಂತಿದ್ದೇ ಆದರೆ, ಪಾಕಿಸ್ತಾನಿ ಸೈನಿಕರನ್ನು ಒಂದು ದಿನ ಹೊಟ್ಟೆ ಹೊರೆಯುವ ಸಾಮರ್ಥ್ಯವೂ ಪಾಕಿಸ್ತಾನಕ್ಕಿಲ್ಲ’ ಎಂದಿದ್ದಾರೆ ನಯೆಲಾ.

ಮಾತೆತ್ತಿದರೆ ಅಣ್ವಸ್ತ್ರ ಪ್ರಯೋಗಿಸುತ್ತೇವೆ ಎನ್ನುತ್ತ ಬಡಾಯಿಯಲ್ಲಿರುವ ಪಾಕ್ ಸೇನೆಯ ಅಸಲಿ ಚಿತ್ರಣವೂ ನಯೆಲಾ ಮಾತುಗಳಲ್ಲಿ ವ್ಯಕ್ತವಾಗಿದೆ. ‘ಪಾಕಿಸ್ತಾನದ ಸೇನಾ ಮುಖ್ಯಸ್ಥರೆಲ್ಲ ಐಷಾರಾಮಿ ವೈಭೋಗದಲ್ಲಿ, ಸಂಪನ್ಮೂಲಗಳನ್ನು ದೋಚುವುದರಲ್ಲಿ ನಿರತವಾಗಿದ್ದಾರೆ. ಅವರು ಭಾರತದ ವಿರುದ್ಧ ಯುದ್ಧ ಮುನ್ನಡೆಸುವ ಸ್ಥಿತಿಯಲ್ಲಿಲ್ಲ’ ಎಂದಿದ್ದಾರೆ.

‘ಪಾಕಿಸ್ತಾನವು ಶಾಂತಿಯುತ ಪ್ರತಿಭಟನೆಗಳನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಮಾನವ ಹಕ್ಕು ದಮನದ ಅಭಿಪ್ರಾಯಗಳಿಗೆ- ಆಕ್ರೋಶಗಳಿಗೆ ಅದು ಕಿವಿಗೊಡುತ್ತಿಲ್ಲ. ಹೀಗಾಗಿ ಅದಕ್ಕೆ ಪ್ರಜಾಪ್ರಭುತ್ವ ಮಾರ್ಗಕ್ಕಿಂತ ಸರ್ಜರಿಯ ಅಗತ್ಯವೇ ಇದೆ’ ಎಂದು ಪರೋಕ್ಷವಾಗಿ ಭಾರತದ ಗುರಿ ನಿರ್ದಿಷ್ಟ ದಾಳಿಗಳು ಇನ್ನಷ್ಟು ಹೆಚ್ಚಾಗಲೆಂಬ ಆಶಯ ವ್ಯಕ್ತಪಡಿಸಿದರು.

ಪಾಕಿಸ್ತಾನದ ದಮನ ನೀತಿಯಿಂದಾಗಿ ದೇಶಭ್ರಷ್ಟರಾಗಿ ಕೆನಡಾದಲ್ಲಿ ಆಶ್ರಯ ಪಡೆದಿರುವ ನಯೆಲಾ ಕ್ವಾದ್ರಿ ಬಲೊಚ್, ಭಾರತ ಭೇಟಿ ಸಂದರ್ಭದಲ್ಲಿ ನಾನಾ ಸೆಮಿನಾರುಗಳಲ್ಲಿ ಭಾಗವಹಿಸಿ, ಅಭಿಪ್ರಾಯ ಹಾಗೂ ನೀತಿ ನಿರೂಪಕರೊಂದಿಗೆ ಚರ್ಚೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

1 COMMENT

Leave a Reply