ಸಮಾನತೆ ಬೇಕಿರುವುದು ಹೆಣ್ಣಿನ ಏಳಿಗೆಗೆ ಮಾತ್ರವೇ ಹೊರತು ಪುರುಷನ ಮೇಲೆ ದಬ್ಬಾಳಿಕೆಗಲ್ಲ…

(ಸಾಂದರ್ಭಿಕ ಚಿತ್ರ)

author-geetha‘ಅಕ್ಟೋಬರ್ 10ನೇ ತಾರೀಖು International girl child day ಅಂತೆ’

‘ಓ! ಸರಿ… ಏನು ಮಾಡಬೇಕು ಅವತ್ತು?’

‘ಹೆಣ್ಣು ಮಕ್ಕಳು ಮುಖ್ಯ ಅಂತ awareness create ಮಾಡಬೇಕು ಮೇಡಂ… ನಮ್ಮ ಮೋದಿ ಅವರು ಕೂಡ ವಿಜಯದಶಮಿಯ ಭಾಷಣದಲ್ಲಿ ಹೇಳಿದ್ರು… ಹೆಣ್ಣು ಮಕ್ಕಳನ್ನು ರಕ್ಷಿಸಿ ಎಂದು, ಭ್ರೂಣ ಹತ್ಯೆ ಮಾಡಬೇಡಿ ಎಂದು..’

‘ಕೇಳಿದೆ. International boy child day ಯಾವತ್ತು?’

‘ಅದ್ಯಾಕೆ ಮೇಡಂ?’

‘ಹಾಗಾದ್ರೆ boy childಗೆ one day ಇಲ್ಲವೇ?’

‘ತಮಾಷಿ ಮಾಡ್ತಿದೀರಾ ಮೇಡಂ?’

‘ತಮಾಷಿ ಅಲ್ಲ… ಸೀರಿಯಸ್ ಆಗೇ ಕೇಳ್ತಾ ಇದ್ದೇನೆ. ಸಮಾನವಾಗಿ ನೋಡಿ ಎನ್ನುತ್ತಾ, ಅದೇ ಉಸಿರಿನಲ್ಲಿ ವರ್ಷದಲ್ಲಿ ಒಂದು ದಿನ ಕೇಳುತೀರಿ ಹೆಣ್ಣು ಮಕ್ಕಳಿಗೆ! ಅಂದರೆ ಉಳಿದ 364 ದಿನ ಗಂಡು ಮಕ್ಕಳ ದಿನಗಳೇ? ಬೇಡ… ಮಕ್ಕಳಲ್ಲಿ ಭೇದ ಮಾಡಬೇಡಿ ಎಂದು ತಿಳಿಸಲು ಭೇದ ಮಾಡುತ್ತಿರುವಿರಲ್ಲ? ಹೆಣ್ಮು ಮಕ್ಕಳಿಗೆ ಸಮಾನ ಅವಕಾಶ ಕೊಡಿ…’

‘ಅದೂ ಸರಿ ಮೇಡಂ.. ನಂಗಂತೂ ಹೆಣ್ಣು ಮಕ್ಕಳೇ ಇಷ್ಟ. ಗಂಡು ಮಕ್ಕಳಿಗಿಂಥ. ಹೆಣ್ಣಿ ಮಕ್ಕಳು ಪ್ರೀತಿ ತೋರುತ್ತಾರೆ…’

‘ಅಯ್ಯೊ… ಇಬ್ಬರನ್ನು ಸಮಾನರನ್ನಾಗಿ ನೋಡ್ರಿ. ಹೆಣ್ಣು ಮಕ್ಕಳು ಇಷ್ಟ ಅಂತ ಗಂಡು ಮಕ್ಕಳನ್ನು ತಾತ್ಸಾರ ಮಾಡಬೇಡಿ.’

‘ಅಲ್ಲಾ…’

‘ನಮ್ಮ ಪ್ರಾಬ್ಲಮ್ಮೆ ಅದು. ಒಬ್ಬರಿಗೆ ಅವಕಾಶ ಕೊಡಬೇಕು, ಮೇಲೆ ತರಬೇಕು ಅಂದರೆ ಇನ್ನೊಬ್ಬರನ್ನು ತುಳಿಯಬೇಕು, ತಳ್ಳಬೇಕು, ವಂಚಿತರನ್ನಾಗಿ ಮಾಡಬೇಕು ಎಂದೇ ಯೋಚಿಸುತ್ತೇವೆ. ದಲಿತರನ್ನು ಮೇಲೆ ತರಬೇಕು… ಬ್ರಾಹ್ಮಣರನ್ನು ಕೆಳಗೆ ದೂಡಿ.. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳು, ಖಾಸಗಿ ಶಾಲೆಯಲ್ಲಿ ಓದುವ ಮಕ್ಕಳು ಒಂದೇ ತೆರನಾಗಿ ಇರಬೇಕು… ಅವರಿಗೂ ಸೌಲಭ್ಯ ಸವಲತ್ತು ಕೊಡುವ ಬದಲು… ಇವರ (ಖಾಸಗಿ) ಶಾಲೆಯ ಸ್ಟಾಂಡರ್ಡ್ ಅನ್ನೂ ಕಡಿಮೆ ಮಾಡಿ..! ಹೆಣ್ಣಿನ ಮೇಲೆ ದಬ್ಬಾಳಿಕೆಯಾಗುತ್ತಿದೆ… ಸರಿ, ಕಾನೂನುಗಳನ್ನು ಅವಳ ಪರ ಮಾಡಿ, ಅವಳು ಗಂಡಿನ ಮೇಲೆ ದಬ್ಬಾಳಿಕೆ ಮಾಡುವಂತೆ ಮಾಡಿ… ಸಮಾನತೆ ಸಾಧಿಸಲಾಗುತ್ತದೆಯೇ?’

‘ನೀವು ಎಲ್ಲಾ ಪ್ರಶ್ನೆ ಮಾಡ್ತೀರಿ ಮೇಡಂ… ನನ್ನ ಕಾಳಜಿ ನಿಮಗೆ ಅರ್ಥವಾಗೊಲ್ಲ… ಬಿಡಿ ನಂಗೆ ಲೇಟಾಯ್ತು…’

ಎದ್ದು ಹೊರಟು ಹೋದರು. ನನ್ನ ಮಾತಲ್ಲಿ ಏನು ತಪ್ಪು?

ಒಟ್ಟಿಗೆ ಬಾಳಬೇಕಾದವರನ್ನು ಒಬ್ಬರ ವಿರುದ್ಧ ಒಬ್ಬರನ್ನು ಎತ್ತಿ ಕಟ್ಟಿ… ಇವರನ್ನು ಹಿಂದೆ ಸರಿಸಿ, ಅವರನ್ನು ಮುಂದೆ ಇರಿಸಿ, ಅವರನ್ನು ಏಳಿಸಿ, ಇವರನ್ನು ಬೀಳಿಸಿ ನ್ಯಾಯ ಕೊಡಿಸಲು, ಸಮಾನತೆ ಸಾರಲು ಹೊರಟರೆ, ಅದೆಂದಿಗೂ ಸಾಧ್ಯವಿಲ್ಲ.

ಸಮಾನತೆ ಅಂದರೆ ಎಲ್ಲಾ ಸಮಾನವಾಗಿ ಇರಬೇಕು ಎಂದು ಕೂಡ ಅಲ್ಲ. ಸಮಾನ ಅವಕಾಶ ಇರಬೇಕು. ಆರಿಸಿಕೊಳ್ಳುವ ಸ್ವಾತಂತ್ರ್ಯ ಇರಬೇಕು. ಕಾಡಿನಲ್ಲಿ ಎಲ್ಲಾ ಮರಗಳು ಸಮಾನವಾಗಿ ಇರಬೇಕು ಎಂದು ಎತ್ತರದ ಮರಗಳನ್ನು ಕಡಿಯುವುದು ಅನ್ಯಾಯ. ಚಿಕ್ಕ ಮರಗಳು ದೊಡ್ಡವಾಗಲು ಸಹಾಯ ಮಾಡಿ. ಬೆಳೆಯದಿದ್ದರೆ ಅದರ ಎತ್ತರದಲ್ಲಿಯೂ ಸಂತಸ ಪಡಿ.

ಸಮಾನತೆ ಅಂದರೆ ಸಮಾನ ಅವಕಾಶ ಹಾಗೂ ಆಯ್ಕೆಯ ಸ್ವಾತಂತ್ರ್ಯ. ನಾವು ಆಲದ ಮರವನ್ನು ಕುಬ್ಜಗೊಳಿಸುವ, ಸುಂದರ ಬಳ್ಳಿಯನ್ನು ಮರವಾಗಿಸುವ ಪ್ರಯತ್ನ ಪಡದೆ ಅವುಗಳು ಇರುವಂತೆ ಸಂತಸಪಡಬಹುದಲ್ಲವೇ? ಸಹಾಯಬೇಕಿದ್ದರೆ ಮಣ್ಣು, ಗೊಬ್ಬರ, ನೀರು ಹಾಕಿ… ಆದರೆ ಅವತಾರ ಇರುವಿಕೆಯನ್ನೇ ಬದಲಿಸಬಾರದು.

ಮರ, ಗಿಡ, ಪ್ರಾಣಿ ಪಕ್ಷಿಗಳಿಗೆ ಪುರುಷ ಸ್ತ್ರೀಯರನ್ನು ಹೋಲಿಸಿ ಮಾತನಾಡುವ ಅವಶ್ಯಕತೆಯಿಲ್ಲ. ಬೇಕಾಗಿಯೂ ಇಲ್ಲ. ಪ್ರಕೃತಿಯ ಸೃಷ್ಠಿ ಎಂದಾಗಲೀ ಅಥವಾ ದೇವರ ಸೃಷ್ಠಿ ಎಂದಾಗಲೀ ಜೀವ ಸಂಕುಲವನ್ನು ತೆಗೆದುಕೊಂಡಾಗ ಎದ್ದು ಕಾಣುವುದು ವೈವಿಧ್ಯತೆ ಹಾಗೂ ಪರಸ್ಪರ ಅವಲಂಬನೆ. ವೈವಿಧ್ಯತೆ ಹಾಗೂ ಅವಲಂಬನೆಯೊಂದಿಗೆ ಏಕತೆ ಹಾಗೂ ಐಕ್ಯತೆ.

ಒಂದು ಜೀವದ ಸೃಷ್ಠಿಗೆ ಪುರುಷ ಹಾಗೂ ಸ್ತ್ರೀ ಒಂದಾಗಬೇಕು. ಅಲ್ಲಿ ಯಾರೂ ಹೆಚ್ಚಿಲ್ಲ ಕಡಿಮೆಯಿಲ್ಲ. ಹೊರುವ, ಹೆರುವ, ಹಾಲು ಕುಡಿಸುವ ಕ್ರಿಯೆ ಹೆಣ್ಣಿಗೆ ಪ್ರಕೃತಿ ಕೊಟ್ಟಿರುವುದರಿಂದ ಅವಳನ್ನು ಸಂರಕ್ಷಿಸುವ, ಪೋಷಿಸುವ ಹೊಣೆಯನ್ನು ಪುರುಷ ಹೊತ್ತುಕೊಂಡಿದ್ದು ಸಹಜವಾಗಿಯೇ ಇತ್ತು.

ಸಹಜ ಕ್ರಿಯೆಗಳನ್ನು ಸಹಜವಾಗಿ ನೋಡುವ, ಪರಿಣಾಮವನ್ನು ಸಮಗ್ರವಾಗಿ ತೆಗೆದುಕೊಳ್ಳುವ ಮನೋಭಾವ ಬದಲಾದಂತೆ ಪಾತ್ರಗಳ ವ್ಯಾಖ್ಯಾನ ಬದಲಾಯಿತು. ಮನೆಯನ್ನು ನೋಡಿಕೊಳ್ಳುವ, ಮಕ್ಕಳನ್ನು ಸಂಭಾಳಿಸುವ ಕೆಲಸ ಕೀಳು, ದೈಹಿಕವಾಗಿ ಪುರುಷನಿಗಿಂಥ ದುರ್ಬಲಳಿರುವ ಹೆಣ್ಣು ಅರ್ಹಳಲ್ಲ. ಹೊರಗೆ ದುಡಿಯಲು ಹೋಗುವ ಗಂಡು ಮೇಲು, ಹೀಗೇ ತಾರತಮ್ಯ ಹುಟ್ಟಿ, ಒಂದಕ್ಕೆ ಒಂದು ಕೊಂಡಿಯಾಗಿ, ಆಳುವವ ಪುರುಷನಾಗಿ, ಕಾನೂನು ಸಂಪ್ರದಾಯ ಮಾಡುವವ ಅವನಾಗಿ… ಪುರುಷ ಪ್ರಧಾನ ಸಮಾಜವಾಯಿತು. ಹೆಣ್ಣು ಆಸ್ತಿಯಾದಳು. ಅವಳನ್ನು ಸಂರಕ್ಷಿಸುವ ಭರದಲ್ಲಿ ಅವಳು ಬಂಧಿಯಾದಳು, ಅವಗಣನೆಗೆ ತುತ್ತಾದಳು (exploitation in the name of protection). ಈ ದಬ್ಬಾಳಿಕೆಯನ್ನು ಶತಮಾನಗಳ ಕಾಲ ಸಹಿಸಿಕೊಂಡ ಮಹಿಳೆ, ಅದರ ಅರಿವಾಗಿ ತನ್ನ ಹಕ್ಕಿಗಾಗಿ ತಿರುಗಿ ಬೀಳಲು, ಇತ್ತೀಚಿನ ಅಂದರೆ ಕೆಲವು ದಶಕಗಳ ಹಿಂದೆ ನಿರ್ಧರಿಸಿದ್ದು, ಹಲವು ಪುರುಷರೂ ಅವರ ಹಿಂದೆ ನಿಂತರು. ತನ್ನನ್ನು ಒಂದು ವಸ್ತುವಿನಂತೆ ಕಾಣುವುದನ್ನು ವಿರೋಧಿಸುವ ಭರದಲ್ಲಿ ಕೆಲವು ಮಹಿಳೆಯರು ಪುರುಷದ್ವೇಷಿಗಳಾದರು. ಸಮಾನ ಹಕ್ಕುಗಳಿಗಿಂತ ಪುರುಷರನ್ನು ಬಗ್ಗು ಬಡಿಯುವುದಕ್ಕೆ ಸೀಮಿತವಾಯಿತು (ಆಗುತ್ತಿದೆ) ಹೋರಾಟ. ಮಹಿಳಾ ಪರ ಕಾನೂನುಗಳು ಬಂದವು. ಆ ಕಾನೂನುಗಳು ನಿಜ ಸಂತ್ರಸ್ತರಿಗಿಂಥ ಅದನ್ನು ಅಸ್ತ್ರವಾಗಿ ಬಳಸಿಕೊಳ್ಳುವವರ ಹಿಡಿತಕ್ಕೆ ಸಿಕ್ಕಿ ತಿರುಗಿ ಸಹ ಜೀವನ, ನೆಮ್ಮದಿ ಕನಸಾಗುತ್ತಿದೆ.

ಈ ಸಮಾನತೆಯನ್ನು ಸಾಧಿಸುವ ಭರದಲ್ಲಿ ಗಂಡಿನ ತಪ್ಪುಗಳೇನಿದ್ದವು, ಅವನೆಲ್ಲಾ ತಾನೂ ಮಾಡಲಾರಂಭಿಸಿದ್ದಾಳೆ ಮಹಿಳೆ.

ಗಂಡು ಮಾಡಿದಾಗ ಸುಮ್ಮನಿದ್ರಿ… ನಾನು ಮಾಡಿದಾಗ ವಿರೋಧವೇಕೆ ಎಂದು ಪ್ರಶ್ನಿಸುತ್ತಾಳೆ ಮಹಿಳೆ. ತಪ್ಪು ತಪ್ಪೇ. ಅದಕ್ಕೆ ಲಿಂಗಬೇಧವಿಲ್ಲ ತಪ್ಪಿಗೆ ವಿರೋಧವಿದ್ದೇ ಇದೆ.

ವಿಧ್ಯಾಭ್ಯಾಸದಲ್ಲಿ ಉದ್ಯೋಗವಕಾಶಗಳಲ್ಲಿ ಸಮಾನತೆಯಿರಲಿ. ಆಯ್ಕೆಯ ಸ್ವಾತಂತ್ರ್ಯವಿರಲಿ.  ಸ್ವಾತಂತ್ರ್ಯದ ಜತೆಗೆ ಜವಾಬ್ದಾರಿಗಳ ಅರಿವಿರಲಿ. Nothing comes free. There is a price to be paid for everything we get.. knowingly or unknowingly.

ಜೀವನದಲ್ಲಿ ಪ್ರತಿಯೊದಕ್ಕೂ ಬೆಲೆ ತೆರಬೇಕು. ಗಂಡಾಗಲೀ ಹೆಣ್ಣಾಗಲೀ ಬೆಲೆ ತೆರಬೇಕು. ಗೊತ್ತಿದ್ದು ಕೊಡುವ ಬೆಲೆ ಕೆಲವು, ಗೊತ್ತಿಲ್ಲದೆ ಜೀವನ ನಮ್ಮಿಂದ ಕಿತ್ತುಕೊಳ್ಳುವ ಬೆಲೆ, ಒಮ್ಮೊಮ್ಮೆ ಅರಿವಿಗೇ ಬರುವುದಿಲ್ಲ.

ಈ ಬಾರಿಯ ಲೇಖನದಲ್ಲಿ ಹಲವು ವಿಚಾರಗಳನ್ನು ಹೇಳಬೇಕಿತ್ತು. ಬಹಳ ಸಿಂಪಲ್ಲಾಗಿ ಹೇಳಿದ್ದೇನೆ. ಇದು ಪೀಠಿಕೆಯಷ್ಟೇ…

ನಮ್ಮ ಸಿನಿಮಾಗಳು, ನಮ್ಮ ಕೋರ್ಟುಗಳು ಈಗ ಕೊಡುತ್ತಿರುವ ತೀರ್ಪುಗಳು… (ಅಪ್ಪ ಅಮ್ಮನನ್ನು ಮಗ ನೋಡಿಕೊಳ್ಳಬೇಕು ಎಂದು ಹೇಳುವ ಭರದಲ್ಲಿ ಮಗಳು ಏನು ಮಾಡಬೇಕು ಎಂದು ಹೇಳುವುದನ್ನು ಮರೆತಿರುವ ನ್ಯಾಯಾಧೀಶರು… ಆ ತೀರ್ಪನ್ನು ಹಿಡಿದುಕೊಂಡು ಸಂತಸಪಡುತ್ತಿರುವವರ ಬಗ್ಗೆ ಬರೆಯಬೇಕು.. ಬರೆಯುತ್ತೇನೆ.. ಇದು ಮುಂದೆ ಬರೆಯುವ ಲೇಖನಕ್ಕೆ ಪೀಠಿಕೆ..!)

Leave a Reply