ಯಡಿಯೂರಪ್ಪ, ಈಶ್ವರಪ್ಪ ನಡುವಣ ಸಮರದ ತಿದಿ ಸುಡುತ್ತಿರುವುದು ಮಾತ್ರ ಬಿಜೆಪಿಯನ್ನೇ..!

BJP State President B S Yediyurappa affreing sweet to Former DCM Eshwarappa during the breakfast meeting at BSY residence in Bengaluru on Thrusday. --

author-thyagarajಯಾಕೋ ಏನೋ ರಾಜ್ಯ ಬಿಜೆಪಿ ಗ್ರಹಚಾರ ನೆಟ್ಟಗಿದ್ದಂತಿಲ್ಲ. 2018 ರ ವಿಧಾನಸಭೆ ಚುನಾವಣೆಗೆ ಉಳಿದ ಪಕ್ಷಗಳು ವೇದಿಕೆ ನಿರ್ಮಾಣಕ್ಕೆ ಸಜ್ಜಾಗುತ್ತಿರುವ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಮುಂದುವರಿದಿರುವ ರಾಜಕೀಯ ಮಹತ್ವಾಕಾಂಕ್ಷೆ ಪೂರಿತ ಪ್ರತಿಷ್ಠೆ ಕಲಹ ಪಕ್ಷಕ್ಕೆ ದುಬಾರಿ ಆಗುತ್ತಿದೆ.

ಯಡಿಯೂರಪ್ಪ ಅವರು ಕೆಜೆಪಿ ಯಾತ್ರೆ ಮುಗಿಸಿ ಬಿಜೆಪಿಗೆ ಮರಳಿದ ಗಳಿಗೆಯಿಂದ ಒಂದೇ ಜಿಲ್ಲೆಯ ಈ ಇಬ್ಬರು ನಾಯಕರ ನಡುವೆ ಸ್ಫೋಟಿಸಿರುವ ಜಗಳ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್ ಬಂದು ಬುದ್ಧಿ ಹೇಳಿ ಹೋದರೂ ತಣ್ಣಗಾಗಿಲ್ಲ. ಬದಲಿಗೆ ಮತ್ತಷ್ಟು ಪರ್ಯಾಯ ಅಸ್ತ್ರಗಳ ಅನ್ವೇಷಣೆ ಹಾಗೂ ಪ್ರಯೋಗ ಮಾರ್ಗೋಪಾಯಗಳಲ್ಲಿ ಈ ನಾಯಕರು ನಿರತರಾಗಿರುವುದು ಪಕ್ಷದ ಇತರ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಆತಂಕ ಮೂಡಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದೇ ತಡ ಸರ್ವಾಧಿಕಾರಿ ಧೋರಣೆ ಆವಾಹನೆ ಮಾಡಿಕೊಂಡ ಯಡಿಯೂರಪ್ಪ ವಿರುದ್ಧ ಪಕ್ಷದ ಸಮಾನ ಮನಸ್ಕರ ಸಂಘಟಿತ ಮನೋಭಾವದ ಪ್ರತೀಕವಾಗಿ ಸಿಡಿದೆದ್ದ ಈಶ್ವರಪ್ಪ ಪ್ರತೀಕಾರ ತೀರಿಸಿಕೊಳ್ಳಲು ತಮ್ಮದೇ ಆದ ಮಾರ್ಗ ಕಂಡುಕೊಂಡಿದ್ದಾರೆ. ದಲಿತ ಮತ್ತು ಹಿಂದುಳಿದ ವರ್ಗದ ಸಂಘಟನೆ ನೆಪದಲ್ಲಿ ಅವರು ರಚಿಸಿರುವ ರಾಯಣ್ಣ ಬ್ರಿಗೇಡ್ ಯಡಿಯೂರಪ್ಪನವರ ನಿದ್ದೆಗೆಡಿಸಿರುವುದು ಸುಳ್ಳಲ್ಲ. ಮೇಲ್ನೋಟಕ್ಕೆ ಏನೇ ಹೇಳಿಕೊಂಡರು ಅವರ ಆಂತರ್ಯದಲ್ಲಿ ಮಾತ್ರ ಆತಂಕ ಅವಡುಗಚ್ಚಿ ಕೂತಿದೆ. ರಾಜ್ಯಾದ್ಯಂತ ರಾಯಣ್ಣ ಬ್ರಿಗೇಡ್ ಸಭೆ, ಸಮಾವೇಶ ಎಂದು ಅಡ್ಡಾಡಿಕೊಂಡಿರುವ ಈಶ್ವರಪ್ಪ ನಡೆಗೆ ಕಡಿವಾಣ ಹಾಕಬೇಕೆಂಬ ಅಭಿಲಾಷೆಯಿಂದ ಯಡಿಯೂರಪ್ಪ ಕರೆಯಿಸಿದ ವರಿಷ್ಠ ರಾಮಲಾಲ್ ಈ ವಿಚಾರದಲ್ಲಿ ನಿಖರವಾಗಿ ಏನನ್ನೂ ಹೇಳಿಲ್ಲ. ರಾಯಣ್ಣ ಬ್ರಿಗೇಡಿನಿಂದ ಹಿಂದೆ ಸರಿಯಬೇಕು ಎಂದಾಗಲಿ ಅಥವಾ ಮುಂದುವರಿಬಹುದು ಅಂತಾಗಲಿ ಈಶ್ವರಪ್ಪನವರಿಗೆ ಸ್ಪಷ್ಟ ಸೂಚನೆ ನೀಡದೆ ಇಬ್ಬರೂ ಮುಖಂಡರು ಪರಸ್ಪರ ಚರ್ಚೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂದು ಅಡ್ಡಗೋಡ ಮೇಲೆ ದೀಪವಿಟ್ಟು ಹೋಗಿದ್ದಾರೆ. ಬಹುಶಃ ಒಬ್ಬರಿಗೆ ಆದೇಶ ಕೊಟ್ಟರೆ ಮತ್ತೊಬ್ಬರ ತಲೆ ಕುತ್ತಿಗೆ ಮೇಲೆ ನಿಲ್ಲುವುದಿಲ್ಲ ಎಂಬುದೋ ಅಥವಾ ರಾಯಣ್ಣ ಬ್ರಿಗೇಡ್ ಚಟುವಟಿಕೆಯಿಂದ ಹಿಂದೆ ಸರಿಯುವಂತೆ ಈಶ್ವರಪ್ಪ ಅವರಿಗೆ ನಿರ್ದಿಷ್ಟ ಸೂಚನೆ ಕೊಟ್ಟುಬಿಟ್ಟರೆ ಯಡಿಯೂರಪ್ಪನವರಲ್ಲಿನ ಸರ್ವಾಧಿಕಾರಿ ಬ್ರಹ್ಮ ರಾಕ್ಷಸನಾಗಬಹುದು ಎಂಬ ಪ್ರಜ್ಞೆ ಇಲ್ಲಿ ಕೆಲಸ ಮಾಡಿರಬಹುದು. ಇದೇನೆ ಆಗಿರಲಿ  ಸಮಸ್ಯೆ ಮಾತ್ರ ಯಥಾಸ್ಥಿತಿ ಕಾಯ್ದುಕೊಂಡಿರುವುದು ಮಾತ್ರ ಸತ್ಯ.

ಆದರೆ ಇಲ್ಲೊಂದು ಬೆಳವಣಿಗೆ ಆಗಿದೆ. ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ರಾಮಲಾಲ್ ಕೊಟ್ಟ ಸೂಚನೆಯಲ್ಲಿ ತಮ್ಮ ಪಾಲನ್ನು ನಿರ್ವಹಣೆ ಮಾಡಿರುವ ಯಡಿಯೂರಪ್ಪನವರು ಈಶ್ವರಪ್ಪ ಅವರನ್ನು ಮನೆಗೆ ಕರೆದು ತಿಂಡಿ ಕೊಟ್ಟು ಮಾತಾಡಿಸಿದ್ದಾರೆ. ಆದರೆ ‘ರಾಯಣ್ಣ ಬ್ರಿಗೇಡ್’ ಬಿಟ್ಬಿಡಿ ಎಂಬ ಅವರ ಮಾತು ಮಾತ್ರ ಈಶ್ವರಪ್ಪನವರಿಗೆ ಸಹ್ಯವಾಗಿಲ್ಲ. ಈ ವಿಚಾರದಲ್ಲಿ ಅಷ್ಟು ಸುಲಭವಾಗಿ ಬಗ್ಗುವ ಆಸಾಮಿಯೂ ಅವರಲ್ಲ. ಅಹಿಂದ ಹೇಗೆ ಸಿದ್ದರಾಮಯ್ಯನವರ ಕೈ ಹಿಡಿದು ಮುಖ್ಯಮಂತ್ರಿ ಪದವಿಯಲ್ಲಿ ತಂದು ಕೂರಿಸಿತೋ ಅದೇ ರೀತಿ ತಾವು ಆರಂಭಿಸಿರುವ ಹಿಂದುಳಿದ ಮತ್ತು ದಲಿತ (ಹಿಂದ) ಸಂಘಟನೋಪಾಸನೆಯ ರಾಯಣ್ಣ ಬ್ರಿಗೇಡ್ ಕೂಡ ಮುಂದೊಂದು ದಿನ ತಮ್ಮ ತಲೆ ಕಾಯುತ್ತದೆ ಎಂಬ ಅಪರಿಮಿತ ನಂಬಿಕೆ ಅವರದಾಗಿದೆ. ಹೀಗಾಗಿ ಇಷ್ಟು ಮುಂದಕ್ಕೆ ತಂದಿರುವ ರಾಯಣ್ಣ ಬ್ರಿಗೇಡ್ ನಿಂದ ಈಗ ಇದ್ದಕ್ಕಿದ್ದಂತೆ ಹಿಂದೆ ಸರಿದರೆ ಸಮಸ್ಯೆ ಆಗುತ್ತದೆ, ಹಿಂದ ಸಮುದಾಯದ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತೆ, ಅದು ತಮ್ಮ ನಾಯಕತ್ವಕ್ಕೂ ಕುತ್ತು ತರುತ್ತದೆ ಎಂದು ಬಗೆದಿರುವ ಈಶ್ವರಪ್ಪ ಒಂದು ಕಡೆ ವರಿಷ್ಠರಿಗೂ ಸಮಾಧಾನ ಆಗಬೇಕು, ಇನ್ನೊಂದು ಕಡೆ ಯಡಿಯೂರಪ್ಪನವರನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸಬೇಕು ಅಂಥದೊಂದು ಹೊಸ ಉಪಾಯ ಕಂಡುಕೊಂಡಿದ್ದಾರೆ. ಅದುವೇ ಮೊನ್ನೆ ಚಿತ್ರದುರ್ಗದಲ್ಲಿ ಸಂಘಟಿಸಿದ ದಲಿತ ಮತ್ತು ಹಿಂದುಳಿದ ಸಮುದಾಯಗಳ ಸ್ವಾಮೀಜಿಗಳ ಸಭೆ!

ಈ ಸಭೆಯಲ್ಲಿ ಈಶ್ವರಪ್ಪನವರು ಒಂದು ಚಾಣಾಕ್ಷ ನಿಲುವು ತಳೆದಿದ್ದಾರೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆ ಮತ್ತು ನಿರ್ವಹಣೆ ಜವಾಬ್ದಾರಿಯನ್ನು ಈ ಸ್ವಾಮೀಜಿಗಳಿಗೆ ವಹಿಸಿಬಿಟ್ಟಿದ್ದಾರೆ. ಇನ್ನು ಮುಂದೆ ಸ್ವಾಮೀಜಿಗಳೇ ಬ್ರಿಗೇಡ್ ಮುಂದುವರಿಸಿಕೊಂಡು ಹೋಗುತ್ತಾರೆ, ತಾವೊಬ್ಬ ಹಿಂದುಳಿದ ವರ್ಗದ ಪ್ರತಿನಿಧಿಯಾಗಿ, ಮುಖಂಡನಾಗಿ ಈ ಸಂಘಟನೆಗೆ ಬೆಂಬಲ ನೀಡುತ್ತೇನೆ ಎಂದು ಹೇಳಿದ್ದಾರೆ. ಅಂದರೆ ಈಗ ಯಡಿಯೂರಪ್ಪನವರು ರಾಯಣ್ಣ ಬ್ರಿಗೇಡ್ ಹೆಸರೇಳಿ ಈಶ್ವರಪ್ಪನವರ ಮೇಲೆ ಗೂಬೆ ಕೂರಿಸುವಂತಿಲ್ಲ. ಏಕೆಂದರೆ ಅದೀಗ ಈಶ್ವರಪ್ಪನವರ ಕೈದಾಟಿ ಸ್ವಾಮೀಜಿಗಳ ಸುಪರ್ದಿಯಲ್ಲಿದೆ. ಅಪ್ಪಿತಪ್ಪಿ ಏನಾದರೂ ಅಡ್ಡ ಮಾತಾಡಿದರೆ ಹಿಂದ ಸಮುದಾಯ ಹಾಗೂ ಈ ಸಮುದಾಯದ ಸ್ವಾಮೀಜಿಗಳನ್ನು ಎದಿರು ಹಾಕಿಕೊಳ್ಳಬೇಕಾಗುತ್ತದೆ. ಇನ್ನೊಂದುವರೆ ವರ್ಷ ಬಾಕಿ ಇರುವ ಚುನಾವಣೆ ಮೇಲೂ ಇದು ಪರಿಣಾಮ ಬೀರುತ್ತದೆ. ಸುಮ್ಮನಿದ್ದರೆ ಈಶ್ವರಪ್ಪ ನೆರಳಲ್ಲಿ ರಾಯಣ್ಣ ಬ್ರಿಗೇಡ್ ಬೆಳೆಯುತ್ತಾ ಹೋಗುತ್ತದೆ. ಮುಂದೆ ಚುನಾವಣೆ ಸಂದರ್ಭದಲ್ಲಾಗಲಿ, ನಂತರವಾಗಲಿ ಅದು ಯಾವ ರೀತಿಯ ಅಸ್ತ್ರವಾಗಿ ಪರಿವರ್ತನೆ ಆಗುತ್ತದೆ ಎಂದು ಹೇಳಲು ಬರುವುದಿಲ್ಲ. ಸುಮ್ಮನಿರುವಂತೆಯೂ ಇಲ್ಲ, ಸುಮ್ಮನಿರದಿರುವಂತೆಯೂ ಇಲ್ಲ. ಎಲ್ಲಕ್ಕಿಂತ ಮಿಗಿಲಾಗಿ ವರಿಷ್ಠರಿಗೆ ದೂರು ಹೇಳಲೂ ಆಗುವುದಿಲ್ಲ. ಅಂಥದೊಂದು ಇಕ್ಕಟ್ಟಿನಲ್ಲಿ ಯಡಿಯೂರಪ್ಪನವರನ್ನು ಸಿಕ್ಕಿಸಿಟ್ಟಿದ್ದಾರೆ ಈಶ್ವರಪ್ಪ. ಒಂದು ಕಡೆ ಯಡಿಯೂರಪ್ಪನವರ ಜತೆ ಹೊಂದಾಣಿಕೆ ಮಾಡಿಕೊಂಡಂತೆ ತೋರಿಸಿದ್ದೂ ಆಯಿತು, ಇನ್ನೊಂದೆಡೆ ರಾಯಣ್ಣ ಬ್ರಿಗೇಡ್ ಸಂಘಟನೆಯನ್ನು ಮುಂದುವರಿಸಿದಂತೆಯೂ ಆಯಿತು. ಈಶ್ವರಪ್ಪನವರ ರಾಜಕೀಯ ಗರಡಿ ಮನೆಯ ಈ ‘ಕತ್ತರಿ ಶಾಟ್’ ಗೆ ಪತರುಗುಟ್ಟಿ ಹೋಗಿದ್ದಾರೆ ಯಡಿಯೂರಪ್ಪ.

ಹಾಗಾದರೆ ಈಶ್ವರಪ್ಪನವರಿಗೆ ಇಷ್ಟೆಲ್ಲ ಧೈರ್ಯ ಎಲ್ಲಿಂದ ಬಂತು, ಅವರಿಗೆ ವರಿಷ್ಠರು ಏಕೆ ಸ್ಪಷ್ಟ ಸೂಚನೆ ನೀಡುತ್ತಿಲ್ಲ, ಈಶ್ವರಪ್ಪನವರಿಗೆ ರಾಜ್ಯ ಮತ್ತು ವರಿಷ್ಠ ಮಟ್ಟದಲ್ಲಿ ಪರೋಕ್ಷ ಬೆಂಬಲ ಏನಾದರೂ ಇದೆಯೇ, ಇಲ್ಲದಿದ್ದರೆ ಅವರು ಇಷ್ಟೊಂದು ಬಹಿರಂಗವಾಗಿ ಯಡಿಯೂರಪ್ಪನವರ ವಿರುದ್ಧ ತಿರುಗಿ ಬೀಳಲು ಸಾಧ್ಯವಿತ್ತೇ, ಅವರಿಗೆ ಮತ್ತೇನಾದರೂ ರಾಜಕೀಯ ಮಹತ್ವಾಕಾಂಕ್ಷೆ ಇದೆಯೇ ಎಂಬ ಕುತೂಹಲಭರಿತ ಪ್ರಶ್ನೆಗಳ ಸರಮಾಲೆಗೆ ಸಿಗುವುದು ಒಂದೇ ಉತ್ತರ. ಅದು ‘ಹೌದು’ ಎಂಬುದು.

ನಿಜ, ಯಡಿಯೂರಪ್ಪನವರು ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ತಮ್ಮ ಹಳೆಯ ಪಟಾಲಂಗೆ ಮಣೆ ಹಾಕುವ ಭರದಲ್ಲಿ ಪಕ್ಷದ ಮೂಲನಿವಾಸಿಗಳನ್ನು ಬಿಡಿಗಾಸಿಗಿಂತಲೂ ಕಡೆಯಾಗಿ ಕಂಡದ್ದು ಇಷ್ಟೆಲ್ಲ ಬೆಳವಣಿಗೆಗಳಿಗೆ ಮೂಲ ಕಾರಣ. ಕೆಜೆಪಿಯಲ್ಲಿ ಅಡ್ರೆಸ್ ಕಳೆದು ಕೊಂಡಿದ್ದ ತಮಗೆ ಮತ್ತೆ ರಾಜಾಶ್ರಯ ಕೊಟ್ಟ ಬಿಜೆಪಿಯ ನಿಷ್ಠ ನಾಯಕರನ್ನು ಕೋರ್ ಕಮಿಟಿ ರಚನೆಯಿಂದ ಹಿಡಿದು ಪದಾಧಿಕಾರಿಗಳ ನೇಮಕದವರೆಗೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪಕ್ಕಕ್ಕಿಟ್ಟಿದ್ದೆ ಈಶ್ವರಪ್ಪನಂತವರು ದಿಲ್ಲಿ ಟೂರ್ ಮಾಡಿ ವರಿಷ್ಠರ ಒಲವು ಗಳಿಸಿ ಪದಾಧಿಕಾರಿಗಳ ಪಟ್ಟಿ ಬದಲಿಸುವುದರಿಂದ ಹಿಡಿದು ರಾಯಣ್ಣ ಬ್ರಿಗೇಡ್ ರಚನೆವರೆಗೂ ಬೆಳೆಯಲು ಅವಕಾಶ ಮಾಡಿಕೊಟ್ಟದ್ದು. ಹಿಂದೆ ಕೆಜೆಪಿಯಿಂದ ತಮ್ಮ ವಿರುದ್ಧ ಸ್ಪರ್ಧಿಸಿದ್ದ ರುದ್ರಗೌಡರನ್ನು ರಾಜಕೀಯ ದುರುದ್ದೇಶದಿಂದ ಪಕ್ಷದ ಶಿವಮೊಗ್ಗ ಜಿಲ್ಲಾಧ್ಯಕ್ಷ ಮಾಡಿದ ಯಡಿಯೂರಪ್ಪನವರ ಮೇಲೆ ಅಮರಿಕೊಂಡು ಬಿದ್ದಿರುವ ಈಶ್ವರಪ್ಪ ಇವತ್ತು ಬಿಜೆಪಿಯ ಹಿಂದ ನಾಯಕನಾಗಿ ಹೊರಹೊಮ್ಮಿದ್ದಾರೆ. ಇದಕ್ಕೆ ಕಾರಣ ಯಡಿಯೂರಪ್ಪನವರ ದ್ವೇಷದ ರಾಜಕಾರಣ ಹಾಗೂ  ಅವರ ಈ ದ್ವೇಷ ಸಂಘರ್ಷಕ್ಕೆ ಗುರಿ ಆಗಿರುವ ಇತರ ನಾಯಕರು ಈಶ್ವರಪ್ಪನವರಿಗೆ ನೀಡಿರುವ ಪರೋಕ್ಷ ಬೆಂಬಲ. ತೆರೆಯ ಹಿಂದೆ ನಿಂತು ಅವರೆಲ್ಲ ನೀಡುತ್ತಿರುವ ಪ್ರೋತ್ಸಾಹ ಈಶ್ವರಪ್ಪನವರಲ್ಲಿ ಕೆರಳಿಸಿರುವ ರಾಜಕೀಯ ಕಿಚ್ಚು ಯಡಿಯೂರಪ್ಪನವರ ಸ್ವಜನ ಪಕ್ಷಪಾತದ ಕಣ್ಪೊರೆ ಕಳಚುವ ಶಸ್ತ್ರವಾಗಿ ಪರಿಣಮಿಸಿದೆ. ವರಿಷ್ಠರು ಕೂಡ ಇಲ್ಲಿ ಶಸ್ತ್ರಚಿಕಿತ್ಸಕರ ಸ್ಥಾನದಲ್ಲಿದ್ದಾರೆ.

ಇದು ಬಿಜೆಪಿ ಆಂತರಿಕ ವಿಚಾರವಾಯ್ತು. ಇನ್ನು ಪಕ್ಷದ ಹೊರ ರಾಜಕಾರಣದ ಹಿನ್ನೆಲೆಯಲ್ಲಿ ಈಶ್ವರಪ್ಪನವರ ನಡೆಯನ್ನು ನೋಡುವುದಾದರೆ ಅವರು ಪ್ರತಿನಿಧಿಸುವ ಕುರುಬ ಸಮುದಾಯ ಹಾಗೂ ಆ ಸಮುದಾಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸುತ್ತಲೂ ಅದು ಸುತ್ತುತ್ತದೆ. ಸಿದ್ದರಾಮಯ್ಯ ಅವರನ್ನು ಬಿಟ್ಟರೆ ಈಶ್ವರಪ್ಪನವರೇ ಸಮುದಾಯದ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಜಾತಿ ಪ್ರೇಮಕ್ಕೆ ಯಾವ ರಾಜಕೀಯ ನಾಯಕರೂ ಹೊರತಲ್ಲ. ಜಾತಿ, ಅದರ ಮೂಲಕ ರಾಜಕೀಯ ಎಂಬ ಸ್ಥಿತಿಗೆ ಬಹುತೇಕರು ಬಂದು ನಿಂತಿದ್ದಾರೆ. ಆದರೆ ಸಿದ್ದರಾಮಯ್ಯ ಅವರಿಗೆ ಕುರುಬ ಸಮುದಾಯದಿಂದ ಆಗಿರುವಷ್ಟು ಅನುಕೂಲ ಅವರಿಂದ ಸಮುದಾಯಕ್ಕೆ ಆಗಿಲ್ಲ ಎನ್ನುವ ಮಾತಿದೆ. ಅದು ಸಮುದಾಯದ ಇತರ ನಾಯಕರ ವಿಚಾರವಾಗಿರಲಿ, ಮಠದ ವಿಚಾರವಿರಲಿ ಸಿದ್ದರಾಮ್ಯನವರು ಅಂತರ ಕಾಯ್ದುಕೊಂಡರು ಎಂಬುದು ಅಪವಾದ. ಈಶ್ವರಪ್ಪನವರು ಡಿಸಿಎಂ ಆಗಿದ್ದಾಗ ಕಾಗಿನೆಲೆ ಕನಕ ಪೀಠಕ್ಕೆ ಸಿಕ್ಕಷ್ಟು ಅನುದಾನ ಸಿದ್ದರಾಮಯ್ಯನವರ ಅವಧಿಯಲ್ಲಿ ಸಿಗಲಿಲ್ಲ. ಸಿದ್ದರಾಮಯ್ಯನವರು ಸಿಎಂ ಆಗಲಿ ಎಂದು ಅವಿರತ ಶ್ರಮಿಸಿದ ಕಾಗಿನೆಲೆ ಕನಕಪೀಠ ಶ್ರೀಗಳು, ಮಾಜಿ ಸಂಸದ ಎಚ್. ವಿಶ್ವನಾಥ್, ಮಾಜಿ ಸಚಿವ ಎಚ್.ಎಂ. ರೇವಣ್ಣ, ಸಮುದಾಯದ ಮುಖಂಡರಾದ ಮುಕುಡಪ್ಪ, ಡಿ.ಕೆ. ರವಿ ಮತ್ತಿತರರು ಬೇಸರಗೊಂಡಿದ್ದಾರೆ. ಸಮುದಾಯದ ಅಧಿಕಾರಿಗಳಿಗೆ ಕೊಟ್ಟ ಮನ್ನಣೆಯನ್ನು ನಾಯಕರಿಗೆ ಕೊಡಲಿಲ್ಲ ಎಂಬ ಕೋಪವೂ ಇದೆ.  ತಾವೇ ಅತ್ಯುನ್ನತ ಸಿಎಂ ಹುದ್ದೆ ಅಲಂಕರಿಸಿರುವಾಗ ಸಮುದಾಯದ ಬೇರೊಬ್ಬರು ಸಂಪುಟ ಸೇರುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿಕೊಂಡು ಬಂದ ಸಿದ್ದರಾಮಯ್ಯನವರಲ್ಲಿ ಸಿದ್ಧಾಂತಕ್ಕಿಂತ ಅನ್ಯ ನಾಯಕರು ಬೆಳೆಯುವುದು ಅವರಿಗೆ ಬೇಕಿಲ್ಲ ಎಂಬ ಮನೋವಾಸನೆಯನ್ನು ಮುಖಂಡರು ಆಘ್ರಾಣಿಸಿದ್ದರು. ಸತತ ಒತ್ತಡದ ನಂತರ ಸಿದ್ದರಾಮಯ್ಯನವರ ಮನಸ್ಥಿತಿ ಕೊಂಚ ಕದಲಿ ಎಚ್.ವೈ. ಮೇಟಿ ಸಂಪುಟ ಸೇರಲು ಮೂರು ವರ್ಷ ಕಾಯಬೇಕಾಯಿತು. ಹೀಗೆ ಸಮುದಾಯದ ನಾನಾ ವಲಯಗಳಲ್ಲಿ ಇರುವ ಬೇಸರವನ್ನು ತಮ್ಮೆಡೆಗಿನ ಅಭಿಮಾನವಾಗಿ ಪರಿವರ್ತಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಈಶ್ವರಪ್ಪನವರದು. ರಾಯಣ್ಣ ಬ್ರಿಗೇಡ್ ಮೈದಳೆದಿರುವುದರ ಹಿಂದಿನ ಮರ್ಮಗಳಲ್ಲಿ ಇದೂ ಒಂದು.

ಅದೇ ರೀತಿ ಸಿದ್ದರಾಮಯ್ಯನವರು ಪ್ರತಿಪಾದಿಸಿದ ಅಹಿಂದ ಪೈಕಿ ದಲಿತ ಸಿಎಂ ಬೇಡಿಕೆ ಈಡೇರಲಿಲ್ಲ ಎಂಬ ಕಾರಣಕ್ಕೆ ದಲಿತರು ಕೂಡ ಕಾಂಗ್ರೆಸ್ನಿಂದ ವಿಮುಖರಾಗಿದ್ದಾರೆ. ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅಥವಾ ಡಾ. ಜಿ. ಪರಮೇಶ್ವರ ಸಿಎಂ ಆಗಬಹುದು ಎಂಬುದು ಅವರ ನಿರೀಕ್ಷೆ ಆಗಿತ್ತು. 2008 ರ ವಿಧಾನಸಭೆ ಚುನಾವಣೆಯಲ್ಲಿ 28 ಮಂದಿ ಪರಿಶಿಷ್ಟರು ಬಿಜೆಪಿಯಿಂದ ಗೆದ್ದಿದ್ದರು. ಆದರೆ 2013 ರ  ಚುನಾವಣೆ ಹೊತ್ತಿಗೆ ಅಹಿಂದ ನಾಯಕ ಸಿದ್ದರಾಮಯ್ಯ ಅಥವಾ ಪರಮೇಶ್ವರ ಸಿಎಂ ಆಗುತ್ತಾರೆ ಎಂಬ ಕಾರಣಕ್ಕೆ ಪರಿಶಿಷ್ಟ ಸಮುದಾಯದ ಮತಗಳು ಗಣನೀಯ ಪ್ರಮಾಣದಲ್ಲಿ ಕಾಂಗ್ರೆಸ್ಸಿನತ್ತ ಹೊರಳಿದ್ದವು. ತತ್ಪರಿಣಾಮ ಬಿಜೆಪಿಗೆ ದಕ್ಕಿದ್ದು ಕೇವಲ 11 ಸ್ಥಾನಗಳು ಮಾತ್ರ. ದಲಿತ ಸಿಎಂ ಬೇಡಿಕೆ ಈಡೇರದ ಬೇಸರದಲ್ಲಿರುವ ಈ ಸಮುದಾಯದ ಮತಗಳನ್ನು ಬಿಜೆಪಿಗೆ ತರಬಹುದು ಎನ್ನುವ ಲೆಕ್ಕಾಚಾರ ಕೂಡ ಈಶ್ವರಪ್ಪನವರಲ್ಲಿದೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿನಲ್ಲಿ 118 ಮಂದಿ ಅಹಿಂದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿತ್ತು. ಅವರ ಪೈಕಿ 63 ಮಂದಿ ಗೆದ್ದು ಬಂದು ಸಿದ್ದರಾಮಯ್ಯ ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಇದೀಗ ಅಹಿಂದ ಹಿಂದಿನಂತೆ ಪೂರ್ಣ ಪ್ರಮಾಣದಲ್ಲಿ ಸಿದ್ದರಾಮಯ್ಯನವರ ಜತೆಗಿದೆ ಎಂದು ಹೇಳುವ ಸ್ಥಿತಿಯಲ್ಲಿ ಅವರೇ ಇಲ್ಲ. ಹೀಗಾಗಿ ಮುಂದಿನ ಚುನಾವಣೆ ಹೊತ್ತಿಗೆ ಹಿಂದ ಮತಗಳನ್ನು ಬಿಜೆಪಿಗೆ ಸೆಳೆಯುವ ನೇತಾರನಾಗಿ ಹೊರಹೊಮ್ಮುವ ಮೂಲಕ ಈಗಾಗಲೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಆಗಿರುವ ಯಡಿಯೂರಪ್ಪನವರಿಗೆ ಸೆಡ್ಡು ಹೊಡೆಯುವ ಮನೋಭಿಲಾಷೆ ಈಶ್ವರಪ್ಪನವರದು. ಈ ಮನೋಭಿಲಾಷೆ ಸಾಧನಾಸ್ತ್ರ ಪ್ರತೀಕವೇ ರಾಯಣ್ಣ ಬ್ರಿಗೇಡ್. ರಾಜಕೀಯದಲ್ಲಿ ಇಂತಹ ಲೆಕ್ಕಾಚಾರಗಳೆಲ್ಲ ಇದ್ದದ್ದೇ. ಆದರೆ ಉತ್ಪ್ರೇಕ್ಷಿತ ಎನ್ನಬಹುದಾದ ಈ ಲೆಕ್ಕಾಚಾರಗಳು ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಣ ಹೋರಾಟಕ್ಕೆ ಒತ್ತಿರುವ ತಿದಿ ಬಿಜೆಪಿಯನ್ನೇ ಸುಡುತ್ತಿರುವುದು ಸುಳ್ಳಲ್ಲ.

ಲಗೋರಿ : ಸತ್ಯದ ವಲಯದಲ್ಲಿ ಪರಿಭ್ರಮಣೆ ಆದಾಗ ಮಾತ್ರ ಭ್ರಮೆಗೂ ಒಂದು ಗೌರವ.

Leave a Reply