ಜನರಿಗೆ ಬೇಡವಾದ ಉಕ್ಕಿನ ಮೇಲ್ಸೇತುವೆ ಮೇಲೆ ಸರ್ಕಾರಕ್ಕೇಕೆ ಈ ಪರಿಯ ಪ್ರೀತಿ?

(ಸಾಂದರ್ಭಿಕ ಚಿತ್ರ)

ಡಿಜಿಟಲ್ ಕನ್ನಡ ಟೀಮ್:

ಮರಗಳ ಮಾರಣಹೋಮ ಮಾಡಿ ಉಕ್ಕಿನ ಸೇತುವೆ ಕಟ್ಟಿ ದಾಖಲೆ ಬರೆಯುವ ತುರ್ತೇನೂ ನಮ್ಮ ಮುಂದಿಲ್ಲ ಅಂತಿದ್ದಾರೆ ಜನ. ಆದರೆ ಇದನ್ನು ಕಟ್ಟಿಯೇ ಸಿದ್ಧ ಎನ್ನುತ್ತಿದೆ ಸಿದ್ದರಾಮಯ್ಯ ಸರ್ಕಾರ.

ಹೌದು, ಕರ್ನಾಟಕ ರಾಜ್ಯ ಸಚಿವ ಸಂಪುಟ ದೇಶದಲ್ಲೇ ಅತಿ ದೊಡ್ಡ ಉಕ್ಕಿನ ಮೇಲ್ಸೆತುವೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿದೆ. ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೂ ಅಂರೆ ಸುಮಾರು 6.7 ಕಿ.ಮೀ ದೂರಕ್ಕೆ ಈ ಫ್ಲೈಓವರ್ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಚಾಲುಕ್ಯ ವೃತ್ತದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗಲು ಅನುಕೂಲವಾಗುವಂತೆ ಈ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದ್ದು, ಬಸವೇಶ್ವರ ವೃತ್ತ ಹಾಗೂ ಇತರೆ ಕಡೆಗಳಲ್ಲಿನ ಸಂಚಾರ ದಟ್ಟಣೆಗೆ ಪರಿಹಾರವಾಗಲಿದೆ. ಈ ಫ್ಲೈಓವರ್ ನಿಂದ ಟ್ರಾಫಿಕ್ ಸಿಗ್ನಲ್ ಸಮಯ ಹಾಗೂ ಸಂಚಾರ ತಡವಾಗುವುದಕ್ಕೆ, ಸಂಚಾರದ ಸಮಯ ಕಡಿಮೆ ಮಾಡಲು, ಎನ್.ಎಚ್ 7 ಮಾರ್ಗದಲ್ಲಿ ಸಂಚಾರ ಸುಗಮಗೊಳಿಸಲು, ವಿಮಾನ ನಿಲ್ದಾಣ ಮಾರ್ಗ ಸೇರಿದಂತೆ ಭವಿಷ್ಯದಲ್ಲಿ ಎದುರಾಗುವ ಸಂಚಾರ ದಟ್ಟಣೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ಸ್ಟೀಲ್ ಫ್ಲೈಓವರ್ ನೆರವಾಗಲಿದೆ ಎಂಬುದು ಸರ್ಕಾರದ ವಾದ.

ಆದರೆ, ಜನರು ಮಾತ್ರ ಈ ಸರ್ಕಾರದ ವಾದ ಒಪ್ಪಲು ಬಿಲ್ ಕುಲ್ ಸಿದ್ಧರಿಲ್ಲ. ಸಚಿವ ಸಂಪುಟದಲ್ಲಿ ಈ ಯೋಜನೆಗೆ ಒಪ್ಪಿಗೆ ಸಿಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವ್ಯಾಪಕ ವಿರೋಧಗಳು ಕೇಳಿಬರಲಾರಂಭಿಸಿವೆ. ಈ ವಿರೋಧದ ಕೂಗನ್ನೇ ಅಸ್ತ್ರ ಮಾಡಿಕೊಳ್ಳಲು ವಿರೋಧ ಪಕ್ಷಗಳು ಸಿದ್ಧವಾಗಿ ನಿಂತಿದ್ದು, ಸರ್ಕಾರದ ವಿರುದ್ಧ ಹರಿಹಾಯ್ದಿವೆ. ದೇಶದಲ್ಲೇ ಅತಿ ದೊಡ್ಡ ಸ್ಟೀಲ್ ಫ್ಲೈಓವರ್ ಅಂದ್ರೆ ಬೆಂಗಳೂರಿಗೆ ಕೀರ್ತಿ ಅಲ್ಲವೇ ಎಂದು ಪ್ರಶ್ನಿಸಬಹುದು. ಆದರೆ, ಈ ಫ್ಲೈಓವರ್ ನಿರ್ಮಾಣಕ್ಕೆ ತಗಲುತ್ತಿರುವ ವೆಚ್ಚ ಬರೋಬ್ಬರಿ ಸುಮಾರು ₹ 1800 ಕೋಟಿ. ಕೇವಲ ದುಡ್ಡಿನ ವಿಚಾರವೊಂದೇ ವಿರೋಧಕ್ಕೆ ಕಾರಣವಲ್ಲ ಈ ಮೇಲ್ಸೇತುವೆ ನಿರ್ಮಾಣದಿಂದ 800 ಮರಗಳ ಮಾರಣಹೋಮ ನಡೆಯಲಿದೆ ಎಂಬುದು ಜನರ ಹಾಗೂ ಪರಿಸರವಾದಿಗಳ ಆಕ್ರೋಶ.

6.7 ಕಿ.ಮೀ ಉದ್ದದ ಈ ಕಾಮಗಾರಿಗೆ ತಗಲುತ್ತಿರುವ ವೆಚ್ಚ ಪ್ರತಿ ಕಿ.ಮೀಗೆ ₹ 264 ಕೋಟಿ. ಇಷ್ಟು ದುಬಾರಿ ವೆಚ್ಚದಲ್ಲಿ ಪರಿಸರವನ್ನು ಹಾಳು ಮಾಡಿ ಫ್ಲೈಓವರ್ ನಿರ್ಮಾಣ ನಮಗೆ ಬೇಕಿಲ್ಲ. ಈ ಸೇತುವೆ ನಿರ್ಮಾಣದಿಂದ ಕೇವಲ ವಿಮಾನ ನಿಲ್ದಾಣಕ್ಕೆ ಹೋಗುವವರಿಗೆ ಮಾತ್ರ ಅನುಕೂಲ ಮಾಡಿಕೊಡುವ ಉದ್ದೇಶವಿದೆ ಹೊರತು, ಬಡವರಿಗೆ ಯಾವುದೇ ಅನುಕೂಲವಿಲ್ಲ. ಇದೊಂದು ‘ವಿಐಪಿಗಳ ಮೇಲ್ಸೇತುವೆ’ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ಅದರ ಬದಲು ಸಾರ್ವಜನಿಕ ಸಂಚಾರಿ ವ್ಯವಸ್ಥೆಗೆ ಈ ಹಣ ವಿನಿಯೋಗಿಸಿ ಎಂದು ಸರ್ಕಾರಕ್ಕೆ ಸಲಹೆ ನೀಡುತ್ತಿದ್ದಾರೆ. ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿ ಸಾರ್ವಜನಿಕ ಹಿತಾಸಕ್ತಿ ಆಂದೋಲನದ ಮೂಲಕ ಅಂತರ್ಜಾಲದಲ್ಲಿ ಜನರ ಸಹಿ ಸಂಗ್ರಹ ಕಾರ್ಯ ನಡೆದಿದ್ದು, ಇದರಲ್ಲಿ ಗುರುವಾರದ ವೇಳೆಗೆ 4117 ಮಂದಿ ಸಹಿ ಹಾಕಿದ್ದರು. ಈ ಸಂಖ್ಯೆ ಕಡಿಮೆ ಎನಿಸಬಹುದು. ಆದರೆ, ರಾಜ್ಯವನ್ನೇ ಹೊತ್ತಿ ಉರಿಯುವಂತೆ ಮಾಡಿದ್ದ ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ಆಂದೋಲನದಲ್ಲಿ ಸಂಗ್ರಹವಾದ ಸಹಿ ಕೇವಲ 373. ಹೀಗಾಗಿ ವಿಷಯ ವ್ಯಾಪ್ತಿ ಗಮನಿಸಿದಾಗ ಇದು ಸ್ಥಳೀಯರ ಪ್ರಬಲ ವಿರೋಧವೇ ಆಗಿದೆ.

ಇನ್ನು ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಸಿಟಿಜನ್ ಮ್ಯಾಟರ್ಸ್ ಎಂಬ ಸಂಸ್ಥೆ ಆರ್ ಟಿ ಐ ಮೂಲಕ ಮಾಹಿತಿ ಕೋರಲಾಗಿತ್ತಾದರೂ, ಈ ಬಗ್ಗೆ ಪೂರ್ಣ ಮಾಹಿತಿ ನೀಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರಾಕರಿಸಿತ್ತು. ಹೀಗಾಗಿ ಈ ಯೋಜನೆಯ ಮಾಹಿತಿಯನ್ನು ಗುಟ್ಟು ಮಾಡುತ್ತಿರುವ ಬಗ್ಗೆಯೂ ವ್ಯಾಪಕ ಅನುಮಾನಗಳು ವ್ಯಕ್ತವಾಗಿವೆ.

ಈ ಬಗ್ಗೆ ರಾಜಕೀಯ ನಾಯಕರುಗಳು ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಟೀಕೆ ಮಾಡಿದ್ದು ಹೀಗಿ…

‘ಸರ್ಕಾರ ಪ್ಯಾಕೇಜ್ ಸಿಸ್ಟಂ ಕೈ ಬಿಡಬೇಕು ಎಂದು ಈ ಹಿಂದೆ ಸಾಕಷ್ಟು ಬಾರಿ ಆಗ್ರಹಿಸಿದ್ದೇನೆ. ಆದರೆ ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶ ಹಾಗೂ ಪಂಜಾಬ್ ಚುನಾವಣೆಗಾಗಿ ಹಣ ಸಂಗ್ರಹಿಸಲು ಸರ್ಕಾರ ಮುಂದಾಗಿರುವಂತೆ ಕಾಣ್ತಿದೆ. ಈ ಉಕ್ಕಿನ ಸೇತುವೆಗೆ ₹ 1800 ಕೋಟಿ ವೆಚ್ಚದ ಅಂದಾಜು ಪಟ್ಟಿ ಸಿದ್ಧ ಮಾಡಿದ್ದು, ಪ್ರತಿ ಕಿ.ಮೀ ₹ 264 ಕೋಟಿ ಖರ್ಚು ಮಾಡುತ್ತಿರುವುದು ಇದೇ ಮೊದಲು. ಇದರಿಂದ ಸರ್ಕಾರ ಹೇಗೆ ಜನರ ಹಣವನ್ನು ಲೂಟಿ ಮಾಡುತ್ತಿದೆ ಎಂಬುದು ಗೊತ್ತಾಗುತ್ತದೆ.’

ಸರ್ಕಾರದ ಈ ನಿರ್ಧಾರವನ್ನು ಪ್ರತಿಭಟಿಸಿ ಭಾನುವಾರ ಚಾಲುಕ್ಯ ಹೊಟೇಲ್, ಬಿಡಿಎ ಕಚೇರಿ, ಕಾವೇರಿ ಚಿತ್ರಮಂದಿರ ಮತ್ತು ಮೇಖ್ರಿ ಸರ್ಕಲ್ ಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲು ಹಲವು ಸಂಘಟನೆಗಳು ಕರೆ ನೀಡಿವೆ.

ಹೀಗೆ ಜನರು ಹಾಗೂ ವಿಪಕ್ಷ ನಾಯಕರ ವಿರೋಧಗಳು ಕೇಳಿ ಬರುತ್ತಿದ್ದರೂ, ಸರ್ಕಾರ ಮಾತ್ರ ಈ ಕಾಮಗಾರಿಯನ್ನು ಕೈಬಿಡಲು ಸಿದ್ಧವಿಲ್ಲ. ಈ ಕಾಮಗಾರಿ ಬಿಜೆಪಿ ಸರ್ಕಾರವಿದ್ದಾಗಲೇ ಪ್ರಸ್ತಾಪ ಮಾಡಲಾಗಿದ್ದು, ಈಗ ಅದನ್ನು ಮಾಡುತ್ತಿದ್ದೇವೆ ಎಂಬ ಸಮಜಾಯಷಿ ಹೇಳುತ್ತಿದೆ. 800 ಮರಗಳಿಗೆ ಬದಲಾಗಿ ಬೇರೆ ಗಿಡ ನೆಡಲಾಗುವುದು ಎಂಬ ಸಮಜಾಯಿಷಿಯಂತೂ ಹಾಸ್ಯಾಸ್ಪದವಾಗಿದೆ. ನಗರದಹಸಿರು ಹೊದಿಕೆ ಕ್ಷೀಣಿಸುತ್ತಲೇ ಸಾಗಿರುವ ಸಂದರ್ಭದಲ್ಲಿ, ಮರ ಬೆಳೆಯುವುದೆಂದರೆ ರಾತ್ರಿ ಬೆಳಗಲ್ಲಾಗುವ ಕೆಲಸ ಎಂಬಷ್ಟು ಉಡಾಫೆಯೇ?

Leave a Reply