ಕೇರಳದ ಕಮ್ಯುನಿಸ್ಟ್ ಪ್ರೇರಿತ ಹತ್ಯೆಗಳ ವಿರುದ್ಧ ರಾಷ್ಟ್ರಮಟ್ಟದಲ್ಲಿ ಧ್ವನಿ ಮೊಳಗಿಸಲು ಬಿಜೆಪಿ ಸನ್ನದ್ಧ, ಬೆಂಗಳೂರಿನಲ್ಲೂ ಈ ಭಾನುವಾರ ವೇದಿಕೆ ಸಿದ್ಧ

ಡಿಜಿಟಲ್ ಕನ್ನಡ ವಿಶೇಷ:

ರಾಜಕೀಯ ಹತ್ಯೆಗಳು ಕೇರಳಕ್ಕೆ ಹೊಸತೇನಲ್ಲ. ಆದರೆ ಮೇ ತಿಂಗಳಲ್ಲಿ ಅಲ್ಲಿ ಎಡಪಂಥೀಯ ಸರ್ಕಾರ ಅಸ್ತಿತ್ವಕ್ಕೆ ಬಂದಮೇಲೆ ಒಂದರಹಿಂದೊಂದರಂತೆ ಆರು ಹತ್ಯೆಗಳಾಗಿವೆ. ಹತ್ಯೆಯಾದವರಲ್ಲಿ ಇಬ್ಬರು ಪರಿಶಿಷ್ಟ ಜಾತಿಗೆ ಸೇರಿದವರು, ಬಿಜೆಪಿ-ಆರೆಸ್ಸೆಸ್ ಜತೆ ಗುರುತಿಸಿಕೊಂಡವರು.

ಇದು ಗುಜರಾತ್ ಅಥವಾ ಬೇರೆಲ್ಲಾದರೂ ಆಗಿದ್ದರೆ ಅದಾಗಲೇ ಪ್ರಗತಿಪರರರು ರಾಷ್ಟ್ರಮಟ್ಟದಲ್ಲಿ ದಲಿತ ದೌರ್ಜನ್ಯದ ವಿರುದ್ಧ ಪ್ರತಿಭಟನೆ- ಜಾಥಾಗಳನ್ನು ಹಮ್ಮಿಕೊಂಡುಬಿಡುತ್ತಿದ್ದರು. ಆದರೆ ಕೊಂದವರು ಪ್ರಗತಿಪರ ವರ್ಗಕ್ಕೇ ಸೇರಿರುವ ಸಿಪಿಎಂ ಪಾಳೆಯದವರಾದ್ದರಿಂದ ಈ ದಲಿತ ಸಾವುಗಳಿಗೆ ಮಾಫಿ ಇದೆ ಎಂಬಂತಿದೆ ಬುದ್ಧಿಜೀವಿಗಳ ವರ್ತನೆ.

ಕಾರ್ಯಕರ್ತ ರಮಿತ್ ಹತ್ಯೆ ಸಂಬಂಧ ಗುರುವಾರ ಬಿಜೆಪಿ ಕೇರಳ ಬಂದ್ ಗೆ ಕರೆ ಕೊಟ್ಟಿತ್ತು. ಈ ಬಿಜೆಪಿ ಬೆಂಬಲಿಗನ ಹತ್ಯೆಯಂತೂ ರಾಜ್ಯದ ಕಾನೂನು-ಸುವ್ಯವಸ್ಥೆಗೇ ಪ್ರಶ್ನಾರ್ಥಕ ಚಿಹ್ನೆ. ಏಕೆಂದರೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಊರಾದ ಪಿಣರಾಯಿಯಲ್ಲೇ, ರಮಿತ್ ಅವರನ್ನು ಅವರ ಲಾರಿಯಿಂದ ಹೊರಗೆಳೆದು ಕೊಚ್ಚಿ ಕೊಂದರು. ಸಿಪಿಎಂನ ಕಾರ್ಯಕರ್ತ ಮೋಹನ್ ಎಂಬುವವರ ಹತ್ಯೆಯಾದ ಬೆನ್ನಲ್ಲೇ ಪ್ರತೀಕಾರವಾಗಿ ಈ ಕೃತ್ಯ ನಡೆದಿದೆ. ಮೋಹನ್ ಕೊಲೆಯಲ್ಲಿ ಬಿಜೆಪಿ-ಆರೆಸ್ಸೆಸ್ ಬೆಂಬಲಿಗರ ಕೈವಾಡವಿತ್ತು ಎಂಬುದು ಆರೋಪ. ಹೀಗೆ ಒಂದು ಪಾಳೆಯದಲ್ಲಿ ಹೆಣ ಬೀಳುತ್ತಲೇ ಪ್ರತೀಕಾರವಾಗಿ ಇನ್ನೊಂದು ಕಡೆ ಯಾರಾದರೂ ಸತ್ತುಬಿಡಬೇಕು ಎಂಬುದು ಅಲಿಖಿತ ನಿಯಮವಾಗಿಬಿಟ್ಟಿದೆ. ಜೀವಪರ-ಮಾನವಪರ ಎಂದು ಮೈಕು ಸಿಕ್ಕೆಡೆಯಲ್ಲೆಲ್ಲಾ ಭಾಷಣ ಮಾಡುವ ಎಡಪಂಥೀಯರು ಮಾತ್ರ ಆರೆಸ್ಸೆಸ್ ಅನ್ನು ದೂರಿಕೊಂಡಿದ್ದಾರೆಯೇ ಹೊರತು ಇದರ ನಿಯಂತ್ರಣಕ್ಕೆ ಮನಸ್ಸು ಮಾಡುತ್ತಿಲ್ಲ. ಹತ್ಯೆಯಾದ ರಮಿತ್ ತಂದೆಯೂ ಲಾರಿ ಚಾಲಕರೇ ಆಗಿದ್ದರು ಹಾಗೂ ಅವರೂ ಸಿಪಿಎಂ ಗೂಂಡಾಗಿರಿಗೆ ಕೊಲೆಯಾದರು ಎಂಬುದು ಕಠೋರ ವಾಸ್ತವ.

ಹಾಗಂತ, ಇದರಲ್ಲಿ ಕೇವಲ ಕೇಸರಿ ಪಡೆಗಳಷ್ಟೇ ಸಂತ್ರಸ್ತರು ಎಂದೇನಲ್ಲ. ಸಿಪಿಎಂ ಕಡೆಗೂ ಜೀವಹಾನಿ ಆಗಿದೆ. ಆದರೆ ಅಧಿಕಾರದಲ್ಲಿರುವ ಶಕ್ತಿಗಳ ಮೇಲೆ ಕಾನೂನು-ಸುವ್ಯವಸ್ಥೆ ಕಾಪಾಡುವ ಹೊಣೆ ಇರುತ್ತದೆ. ಕೇರಳ ಕಮ್ಯುನಿಸ್ಟರ ಆಡುಂಬೊಲ. ಆ ರಾಜ್ಯದಲ್ಲಿ ಒಂದೇ ಎಡಪಕ್ಷಗಳು ಅಧಿಕಾರದಲ್ಲಿರುತ್ತವೆ ಇಲ್ಲವೇ ಕಾಂಗ್ರೆಸ್ ಅಧಿಕಾರ ಗದ್ದುಗೆಯಲ್ಲಿರುತ್ತದೆ. ಹೀಗಿರುವಾಗ ಹತ್ಯೆಗಳನ್ನು ತಡೆಯಲಾಗದೇ ಇರುವುದಕ್ಕೆ ಹೊಣೆ ಹೊರಬೇಕಾದವರು ಯಾರು? ಗುಜರಾತ್ ಗಲಭೆಯಲ್ಲೂ ಮುಸ್ಲಿಮರು- ಹಿಂದುಗಳು ಇಬ್ಬರೂ ಪೆಟ್ಟು ತಿಂದರು ಹಾಗೂ ಜೀವಹಾನಿಗಳಾದವು. ಆದರೆ ಅಲ್ಲಿ ಎಲ್ಲವನ್ನೂ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮೇಲೆ ದೂರಲಾಯಿತು. ಇಲ್ಲಿ ಮಾತ್ರ ಅಧಿಕಾರಸ್ಥರಿಗೆ ಜವಾಬ್ದಾರಿಗಳೇ ಇಲ್ಲ ಎಂಬಂತಿದೆ. ಹಾಗೆಂದೇ ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ- ಇವೆಲ್ಲ ಆರೆಸ್ಸೆಸ್ ನಿಂದ ಆಗುತ್ತಿದೆ ಎಂದು ಸಿಟ್ಟಾಗಿ ಸುಮ್ಮನಾಗಿಬಿಡುತ್ತಾರೆ.

ಇಷ್ಟಕ್ಕೂ ಈ ರಕ್ತಚರಿತೆಯಲ್ಲಿ ಮೊದಲು ಹಿಂಸೆಗಿಳಿದವರು ಯಾರು?

ಈ ರಕ್ತಚರಿತೆ ಇತಿಹಾಸ ಹೇಳುವವರು 1968ನೇ ಇಸ್ವಿಯನ್ನು ಬೊಟ್ಟು ಮಾಡುತ್ತಾರೆ. ಆ ವರ್ಷ ಆರೆಸ್ಸೆಸ್ ಕಾರ್ಯಕರ್ತ ವಡಿಕ್ಕಳ್ ರಾಮಕೃಷ್ಣ ಅವರನ್ನು ಸಿಪಿಎಂ ಬೆಂಬಲಿಗರು ಕೊಂದರು. ಅಲ್ಲಿಂದ ಶುರುವಾದ ರಾಜಕೀಯ ಹತ್ಯೆಗಳ ಸರಮಾಲೆ ಈವರೆಗೆ ಒಂದು ಲೆಕ್ಕಾಚಾರದ ಪ್ರಕಾರ 170 ಮಂದಿಯನ್ನು ಬಲಿ ತೆಗೆದುಕೊಂಡಿದೆ. 16 ಲಕ್ಷ ಜನಸಂಖ್ಯೆಯ ಕಣ್ಣೂರು ಪ್ರಾಂತ್ಯದಲ್ಲಿ ಈ ರಾಜಕೀಯ ಹಲ್ಲಾಹಲ್ಲಿಯಲ್ಲಿ ಗಂಭೀರವಾಗಿ ಗಾಯಗೊಂಡು ಜೀವನ ಕೆಡಿಸಿಕೊಂಡವರು 3 ಸಾವಿರ ಸಂಖ್ಯೆಯಲ್ಲಿದ್ದಾರೆ. ಸಿಪಿಎಂ ಪಾಳೆಯದಲ್ಲೂ ಹತ್ಯೆ- ನೋವುಗಳಾಗಿವೆ. ಆದರೆ ಹೆಚ್ಚು ಸಾವು- ನೋವು ಉಂಡಿರುವುದು ಕೇಸರಿ ಪಡೆ. 1981ರಲ್ಲಿ ಆರೆಸ್ಸೆಸ್- ಸಿಪಿಎಂಗಳು ವಾರಗಳ ಕಾಲ ಬಡಿದಾಡಿಕೊಂಡು ರಕ್ತದಲ್ಲೇ ಮಿಂದೆದ್ದವು. ಸಂಘರ್ಷ ಮುಗಿದಾಗ ಆರೆಸ್ಸೆಸ್ ಕಡೆ 12 ಹಾಗೂ ಸಿಪಿಎಂ ಕಡೆ 12 ಮಂದಿ ಪ್ರಾಣ ಕಳೆದುಕೊಂಡಿದ್ದರು. 2014ರಲ್ಲಿ ಭಾರತೀಯ ಮಜ್ದೂರ್ ಸಂಘದ ಸುರೇಶ್ ಕುಮಾರ್ ಹಾಗೂ ಆರೆಸ್ಸೆಸ್ ಕಾರ್ಯಕರ್ತ ಇ. ಮನೋಜ್ ಅವರ ಹತ್ಯೆಯಾಗಿತ್ತು. ಇಲ್ಲೂ ಸಿಪಿಎಂ ಕಾರ್ಯಕರ್ತರ ಸಂಚು ಮೇಲ್ನೋಟಕ್ಕೆ ಸಾಬೀತಾಗಿ, ನ್ಯಾಯಾಲಯದಲ್ಲಿ ಮೊಕದ್ದಮೆ ಜಾರಿಯಲ್ಲಿದೆ.

ಇಲ್ಲಿ ಉಭಯ ಬಣಗಳಿಂದಲೂ ಪ್ರಮಾದಗಳಿವೆ. ಆದರೆ ಒಂದು ರಾಜಕೀಯ ಸತ್ಯವೇನೆಂದರೆ, ಕಮ್ಯುನಿಷ್ಟರು ಬಾಯಲ್ಲಿ ಎಷ್ಟೇ ಪ್ರಜಾಪ್ರಭುತ್ವದ ಆಣಿಮುತ್ತುದುರಿಸಿದರೂ ಹಿಂಸೆಯಿಲ್ಲದೇ ಅವರು ಅಧಿಕಾರ ಉಳಿಸಿಕೊಂಡಿದ್ದೇ ವಿರಳ. ಪಶ್ಚಿಮ ಬಂಗಾಳದ ಉದಾಹರಣೆ ನೋಡಿದರೂ ಇದು ಸ್ಪಷ್ಟವಾಗುತ್ತದೆ. ಹೀಗಿರುವಾಗ ಕೇರಳದಲ್ಲಿ ಆರೆಸ್ಸೆಸ್-ಬಿಜೆಪಿ ಬೇರು ಬಿಡುವುದನ್ನು ಅದು ಸಹಿಸುತ್ತಿಲ್ಲ. ಕಾಂಗ್ರೆಸ್- ಸಮಾಜವಾದಿಗಳಾದರೆ ತುಸು ಸಹಿಸಬಹುದು. ಏಕೆಂದರೆ ಅಗತ್ಯಬಿದ್ದಾಗ ಮೈತ್ರಿ ಸಾಧ್ಯ. ಆದರೆ ಒಮ್ಮೆ ಆರೆಸ್ಸೆಸ್ ಒಳನುಗ್ಗಿಬಿಟ್ಟರೆ ಮತ್ತೆ ತಮ್ಮ ಅಸ್ತಿತ್ವ ಕಷ್ಟ ಎಂಬ ವಾಸ್ತವದಿಂದಲೇ ಸಿಪಿಎಂ ವ್ಯಗ್ರವಾಗಿದೆ. ಯುವಕರನ್ನು ಕೊಚ್ಚಿ ಕಡಿದಾಡಲು ಬಿಡುತ್ತಿದೆ. ಹಾಗೆ ನೋಡಿದರೆ ಇವತ್ತು ಆರೆಸ್ಸೆಸ್- ಬಿಜೆಪಿ ಪಾಳೆಯದಲ್ಲಿರುವವರು ಬಹುತೇಕರು ಮಾಜಿ ಕಾಮ್ರೆಡ್ ಗಳು. ಕಣ್ಣೂರಿನಲ್ಲಿ ಆರೆಸ್ಸೆಸ್- ಬಿಜೆಪಿಗಳ ಬಿಗಿಪಟ್ಟು ನಿಧಾನಕ್ಕೆ ಕೇರಳದ ಇತರ ಕಡೆಗಳಲ್ಲೂ ಕೇಸರಿ ಧ್ವನಿಗಳಿಗೆ ಬಲ ಕೊಡುತ್ತಿರುವುದು ಸಿಪಿಎಂಗೆ ಅರಗಿಸಿಕೊಳ್ಳಲಾಗದ ಸತ್ಯ. ನಾರಾಯಣ ಗುರುಗಳ ಪೀಠಕ್ಕೆ ನಡೆದುಕೊಳ್ಳುವ ಕೇರಳದ ದೊಡ್ಡ ಸಮುದಾಯವಾದ ಏಳವ, ಬಿಜೆಪಿ ಬಗ್ಗೆ ಆಸಕ್ತಿ ತೋರಿಸುತ್ತಿರುವುದು ಇತ್ತೀಚಿನ ಬೆಳವಣಿಗೆ. ಕಣ್ಣೂರಿನಲ್ಲೂ ಏಳವರು ದೊಡ್ಡ ಸಂಖ್ಯೆಯಲ್ಲೇ ಇದ್ದಾರೆ. ಸಮುದಾಯದವರ ಪೀಠವಾದ ‘ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ’ ಅಥವಾ ಎಸ್ ಎನ್ ಡಿ ಪಿ, ಬಿಜೆಪಿಯನ್ನು ತನ್ನೊಂದಿಗಿನ ಸಂಪರ್ಕಕ್ಕೆ ಬಿಟ್ಟುಕೊಂಡಿರುವುದು ಕಮ್ಯುನಿಸ್ಟರು- ಕಾಂಗ್ರೆಸ್ಸಿಗರೆಲ್ಲರಿಗೂ ನಿದ್ದೆ ಕೆಡಿಸಿದೆ. ‘ಈ ಮೂಲಕ ನಾರಾಯಣ ಗುರುಗಳ ಆದರ್ಶಕ್ಕೆ ದ್ರೋಹ ಬಗೆಯಲಾಗುತ್ತಿದೆ’ ಅಂತ ಸಿಪಿಎಂ ದೂರಿತು. ಆ ಬಗ್ಗೆ ಎಸ್ ಎನ್ ಡಿ ಪಿ ತಲೆಕೆಡಿಸಿಕೊಳ್ಳದ ಕಾರಣ, ಸಿಪಿಎಂ ತನ್ನ ಎಂದಿನ ಸಿದ್ಧಾಂತ ವರಸೆಯನ್ನು ಬಿಟ್ಟು ಕೇಸರಿ ಪಡೆಯನ್ನು ಎದುರಿಸುವಲ್ಲಿ ಕೆಲವು ರಾಜಿಗಳಿಗೆ ಮುಂದಾಯಿತು. ಅದರಂತೆ, ಗಣೇಶೋತ್ಸವ ಆಚರಿಸುವುದಕ್ಕೆ ತನ್ನ ಕಾರ್ಯಕರ್ತರಿಗೆ ಕರೆ ಕೊಟ್ಟಿತು. ಸಂಘ ಪರಿವಾರ ಅಲ್ಲಿ ಮೊದಲಿಂದ ಬಾಲಗೋಕುಲ ಜಯಂತಿ ಆಚರಿಸಿಕೊಂಡುಬಂದಿತ್ತು. ಇದಕ್ಕೆ ಪ್ರತಿಯಾಗಿ ಸಿಪಿಎಂ ಸಹ ಹಿಂದಿನ ವರ್ಷ ಕೃಷ್ಣ ಜಯಂತಿ ಅಂಗವಾಗಿ ವೇಷಭೂಷಣ ಸ್ಪರ್ಧೆ ಆಯೋಜಿಸಿತ್ತು.

ಇದೀಗ ಬಿಜೆಪಿಯು ಕಮ್ಯುನಿಷ್ಟರ ಕೇರಳ ಹಿಂಸೆಯನ್ನು ರಾಷ್ಟ್ರಮಟ್ಟದಲ್ಲಿ ಚಿತ್ರಿಸುವುದಕ್ಕೆ ಮುಂದಾಗಿದೆ. ಸಿಪಿಎಂ ಹಿಂಸೆಯಿಂದ ಹತರಾದ ಈವರೆಗಿನ ತನ್ನ ಕಾರ್ಯಕರ್ತರ ದಾಖಲೆ ಮತ್ತು ಕತೆಗಳನ್ನು ಒಳಗೊಂಡ ಆಹುತಿ ಎಂಬ ಪುಸ್ತಕವನ್ನೇ ತಂದಿದೆ. ಕಮ್ಯುನಿಸ್ಟ್ ಹಿಂಸೆಯಲ್ಲಿ ಎರಡೂ ಕಾಲು ಕಳೆದುಕೊಂಡ ನಂತರವೂ ಸಿಪಿಎಂ ವಿರುದ್ಧ ಚುನಾವಣಾ ರಾಜಕೀಯದಲ್ಲಿ ಸಕ್ರಿಯರಾಗಿರುವ ಸದಾನಂದ ಮಾಸ್ಟರ್ ಅವರನ್ನು ತನ್ನ ಮುಖ್ಯ ಮುಖವನ್ನಾಗಿಸಿದೆ ಬಿಜೆಪಿ.

ಇದೇ ಭಾನುವಾರ, (ಅ.16) ಬೆಂಗಳೂರಿನ ಆರ್ ವಿ ಟೀಚರ್ಸ್ ಕಾಲೇಜು ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ‘ಮಂಥನ’ ವೇದಿಕೆಯು ಕಮ್ಯುನಿಸ್ಟ್ ಹಿಂಸಾಚಾರದ ಬಗ್ಗೆ ವಿಚಾರ ಸಂಕಿರಣವನ್ನು ಆಯೋಜಿಸಿದೆ. ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಸಂಸದೆ ಮೀನಾಕ್ಷಿ ಲೇಖಿ, ಕಲಾವಿದ ಮತ್ತು ಚಿಂತಕ ಪ್ರಕಾಶ್ ಬೆಳವಾಡಿ, ಸದಾನಂದ ಮಾಸ್ಟರ್, ಆರೆಸ್ಸೆಸ್ ನ ಜೆ. ನಂದಕುಮಾರ್ ಭಾಗವಹಿಸಲಿದ್ದು, ಸಾರ್ವಜನಿಕರಿಗೆ ಪ್ರವೇಶವಿದೆ.

kerala communist violence

Leave a Reply