‘ಕಾಸ್ಟಿಂಗ್ ಕೌಚ್’ ಎನ್ನುವ ಆಧುನಿಕ ಸಿನಿಮಾ ಜಗತ್ತಿನ ಕರಾಳ ವಾಸ್ತವ ಬಿಚ್ಚಿಟ್ಟಿರುವ ಕೃತಿ ‘ಆ್ಯಕ್ಟಿಂಗ್ ಸ್ಮಾರ್ಟ್’

ಅಥಿರಾ ಸಂತೋಷ್

author-ssreedhra-murthyಮಲೆಯಾಳಂನ ‘ ಧಾತುಪುತ್ರಿ’ ಕಿರುತೆರೆ ಧಾರಾವಾಹಿಯಿಂದ ಹೆಸರು ಮಾಡಿದ ಅಥಿರಾ ಸಂತೋಷ್ ಇತ್ತೀಚೆಗೆ ಆತ್ಮಹತ್ಯೆಗೆ ಪ್ರಯತ್ನಿಸಿದರು. ತಮಿಳು ಚಿತ್ರ ‘ನೆದುನಾರಾದಿಯಾ’ದಲ್ಲಿ ನಾಯಕಿಯಾಗಿ ಅಭಿನಯಿಸಲು ಹೋಗಿ   ಚಿತ್ರ ನಿರ್ದೇಶಕರಿಂದ ಶೋಷಣೆಗೆ ಒಳಗಾಗಿದ್ದರು. ಆ ನಿರ್ದೇಶಕರು ಒಂದು ಹಂತದಲ್ಲಂತೂ  ಅವರನ್ನು ಅಮಾನವೀಯ ಬಂಧನಕ್ಕೆ ಒಳ ಪಡಿಸಿದ್ದರು.  ಈ ಕಹಿ ಘಟನೆ ಇತ್ತೀಚೆಗೆ ಹೆಚ್ಚಾಗುತ್ತಿರುವ ಕಾಸ್ಟಿಂಗ್ ಕೌಚ್‍’ಎನ್ನುವ ಭಾರತೀಯ ಚಿತ್ರರಂಗದ ಸಮಸ್ಯೆಗೆ ಹೊಸ ಸೇರ್ಪಡೆಯಾಗಿದೆ. ಅವಕಾಶ ನೀಡುವ ಆಕರ್ಷಣೆ ತೋರಿಸಿ ಹೀರೋಯಿನ್‍ರನ್ನು ಲೈಂಗಿಕವಾಗಿ ಶೋಷಿಸುವ  ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಗಾಸಿಪ್‍ಗಿಂತಲೂ ಹೆಚ್ಚಿನ ಮಹತ್ವ ಅದಕ್ಕೆ ದೊರಕುತ್ತಿಲ್ಲ ಎನ್ನುವುದು ನಮ್ಮ   ಸಿನಿಮಾ ವಿಶ್ಲೇಷಣೆ ಮಾನವೀಯ ನೆಲೆಗಳನ್ನು ಕಳೆದು ಕೊಳ್ಳುತ್ತಿರುವುದಕ್ಕೂ ನಿದರ್ಶನವಾಗಿದೆ.

‘ಕಾಸ್ಟಿಂಗ್  ಕೌಚ್‍’ ಪರಿಕಲ್ಪನೆ ಹಿಂದಿರುವ ಭಯಾನಕ ಮುಖಗಳು ಬೆಳಕಿಗೆ ಬಂದಿದ್ದು ಪ್ರೀತಿ ಜೈನ್ ಪ್ರಸಿದ್ಧ ಬಾಲಿವುಡ್ ನಿರ್ದೇಶಕ ಮಧುರ ಭಂಡಾರ್ಕರ್  ಮೇಲೆ ಲೈಂಗಿಕ ಕಿರುಕಳ ಅಪಾದನೆಯನ್ನು ಮಾಡಿದ ನಂತರ. 1999ರಿಂದ 2004ರ ನಡುವೆ ಮಧುರ್ ಚಿತ್ರದಲ್ಲಿ ಅವಕಾಶ ಕೊಡುತ್ತೇನೆ ಎಂದು ಅಮಿಷ ಒಡ್ಡಿ ತಮ್ಮ ಮೇಲೆ ಹದಿನಾರು ಸಲ ಅತ್ಯಾಚಾರ ಎಸಗಿದ್ದರು ಎಂದು ಪ್ರೀತಿ ಆಪಾದಿಸಿದ್ದರು. ಆದರೆ ಅದನ್ನು ಅವರು ಕಾನೂನಿನ ಕಟೆಕಟೆಯಲ್ಲಿ ಸಾಬೀತು ಮಾಡಲಾಗಲಿಲ್ಲ. ಸುಪ್ರೀಂ ಕೋರ್ಟಿನಲ್ಲಿ ಅವರೇ ಹಿಂದೆಗೆದರು. ಇಂತಹ ಪ್ರಕರಣಗಳಲ್ಲಿ ಕಾನೂನು ಕೇಳುವ ಸಾಕ್ಷಿ ಒದಗಿಸುವುದು ಕಷ್ಟ ಎನ್ನುವ ಕಾರಣವನ್ನು ಅವರು ನೀಡಿದ್ದರು. ಈ ಘಟನೆ ನಂತರ ಅನೇಕ ಚಿತ್ರನಟಿಯರು ತಮಗೂ ಇಂತಹ ಅನುಭವ ಆಗಿರುವುದು ನಿಜ ಎಂದು ಖಾಸಗಿಯಾಗಿ ಇಲ್ಲವೆ ಹೆಸರು ಹೇಳದೆ ಒಪ್ಪಿಕೊಂಡರು. ಬಾಲಿವುಡ್‍ನ ನಂಬರ್ ಒನ್ ನಾಯಕಿ ದೀಪಿಕಾ ಪಡುಕೋಣೆ ತಾವು ಕೂಡ ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ಇಂತಹ ಕಿರುಕಳಗಳನ್ನು ಅನುಭವಿಸಿದ್ದಾಗಿ ವಿವರಿಸಿದಾಗ ಬಾಲಿವುಡ್ ಬೆಚ್ಚಿ ಬಿದ್ದಿತು. ಕಂಗನಾ ರಾವತ್ ನಂತರ  ‘ತನು ವೆಡ್ಸ್ ಮನು’ ಚಿತ್ರದ ಸಂದರ್ಭದಲ್ಲಿ ತಾವು ಅನುಭವಿಸಿದ ಲೈಂಗಿಕ ಕಿರುಕಳಗಳನ್ನು ಸುದೀರ್ಘವಾಗಿಯೇ ವಿವರಿಸಿದ್ದರು. ಆದರೆ ಇವೆಲ್ಲವೂ ಗಾಸಿಪ್‍ನ ಮಟ್ಟದಲ್ಲಿಯೇ ಉಳಿದು ಬಿಟ್ಟಿತು.

ಕನ್ನಡದಲ್ಲಿ  ಕೂಡ ಕೆಲವು ವರ್ಷದ ಹಿಂದೆ ಪ್ರಸಿದ್ಧ ನಿರ್ದೇಶಕರೊಬ್ಬರ ಕುರಿತು  ಕುಟುಕು ಕಾರ್ಯಾಚರಣೆಯಲ್ಲಿ ಈ ಅಪಾದನೆ ಕೇಳಿ ಬಂದಿತ್ತು.  ಆಗ ಚಲನಚಿತ್ರ ವಾಣಿಜ್ಯ ಮಂಡಳಿ ತೊಂದರಗೆ ಒಳಗಾದವರು ದೂರು ನೀಡದಿದ್ದರೆ ಕ್ರಮ ಕೈಗಳ್ಳುವುದು ಅಸಾಧ್ಯ ಎನ್ನುವ ನಿಲುವನ್ನು ತಳೆದಿತ್ತು. ಈ ಹಿನ್ನೆಲೆಯಲ್ಲಿ ಗಮನಿಸಲೇ ಬೇಕಾದ ಕೃತಿ ‘ತಾರೆ ಜಮಿನ್ ಪರ್’ ಖ್ಯಾತಿಯ ನಟಿ  ಟಿಸ್ಕಾ ಚೋಪ್ರ ಬರೆದಿರುವ ‘ಆಕ್ಟಿಂಗ್ ಸ್ಮಾರ್ಟ್’. ಚಿತ್ರರಂಗ, ಕಿರುತೆರೆ, ರಂಗಭೂಮಿ ಮೂರೂ ಕ್ಷೇತ್ರದಲ್ಲೂ ಅನುಭವ ಹೊಂದಿರುವ ಟಿಸ್ಕಾ  ಖುಷವಂತ್ ಸಿಂಗ್ ಅವರ ಸೋದರ ಸಂಬಂಧಿ ಕೂಡ ಹೌದು.  ಹದಿನಾಲ್ಕು ಅಧ್ಯಾಯಗಳ  202 ಪುಟಗಳ  ಟಿಸ್ಕಾ ಚೋಪ್ರ ಅವರ ಕೃತಿ ಚಿತ್ರರಂಗದ ಕರಾಳ ಮುಖಗಳನ್ನು ತೆರೆದಿಡುತ್ತದೆ. ಈ ಕೃತಿ ರೂಪುಗೊಳ್ಳಲೂ ಒಂದು ಕಾರಣವಿದೆ. ಟಿ.ವಿ.ಷೋ ಒಂದರಲ್ಲಿ ಅವರು ಚಿತ್ರರಂಗದಲ್ಲಿ ತಾವು ಅನುಭವಿಸಿದ ಕಿರುಕಳಗಳ ಕುರಿತು ಟಿಸ್ಕಾ ಮಾತನಾಡಿದ್ದರು. ಈ ಕಾರ್ಯಕ್ರಮ ನೋಡಿದ ಅನೇಕ ಕಲಾವಿದೆಯರೂ ತಮಗೂ ಇಂತಹ ಅನುಭವಗಳಾಗಿದೆ ಎನ್ನುವ ಮಾತನ್ನು ಖಾಸಗಿಯಾಗಿ ಅವರಿಗೆ ಹೇಳಿದರು. ‘ಹೊಸದಾಗಿ ಚಿತ್ರರಂಗಕ್ಕೆ ಬರುವವರಿಗೆ ಇಲ್ಲಿನ ಕರಾಳತೆ ಕುರಿತು ಎಚ್ಚರಿಕೆ ನೀಡು ಕೃತಿ ಬರೆಯ ಬೇಕು’ ಎಂದು ಆಗ ಅವರಿಗನ್ನಿಸಿತು.

acting smart -3

ಹೀರೋಯಿನ್‍ ಆಗಲು ಬಯಸುವವರು ಎಲ್ಲಕ್ಕೂ ಸಿದ್ದರಾಗಿರುತ್ತಾರೆ ಎನ್ನುವ ಸಾರ್ವಜನಿಕರ ಭಾವನೆ, ಹೀಗಾಗಿಯೇ ಇಂತಹ ಪ್ರಕರಣಗಳಲ್ಲಿ ಅವರಿಗೆ ಸಹಾನುಭೂತಿ ಸಿಕ್ಕುವುದಿಲ್ಲ. ಈ ಕುರಿತು ಟಿಸ್ಕಾ ಹೇಳುತ್ತಾರೆ ‘ನಾವೆಲ್ಲರೂ ಕಲಾವಿದೆಯರಾಗಲೆಂದೇ  ಚಿತ್ರರಂಗಕ್ಕೆ ಬಂದವರು’ ಬೆಳ್ಳಿತೆರೆಯ ಮೇಲೆ ಬೆಳಗುವ ಆಸೆ ಇಟ್ಟುಕೊಂಡು ಬಂದವರ ಸುತ್ತಾ ಮಾಯದ ಬಲೆ ಹೆಣೆಯುತ್ತಾ ಹೋಗಲಾಗುತ್ತದೆ. ತಾವು ಅದರಲ್ಲಿ ಸಿಕ್ಕಿ ಬಿದ್ದಿದ್ದೇವೆ ಎಂದು ತಿಳಿಯುವ ಹೊತ್ತಿಗೆ ಪರಿಸ್ಥಿತಿ ಕೈ ಮೀರಿರುತ್ತದೆ. ತೆರೆಯ ಮೇಲೆ ಹೆಣ್ಣುಮಕ್ಕಳಿಗೆ ಗೌರವವಿರುವ ಪಾತ್ರಗಳು ಈಗ ರೂಪುಗೊಳ್ಳುತ್ತಿಲ್ಲ ಅದರ ಪ್ರತಿಫಲನ ತೆರೆಯ ಹಿಂದೆ ಕೂಡ ಕಾಣುತ್ತಿದೆ. ಟಿಸ್ಕಾ ತಮ್ಮ ಅನುಭವವನ್ನೇ ಹೀಗೆ ದಾಖಲಿಸುತ್ತಾರೆ ‘ನನ್ನ ಮೊದಲ ಚಿತ್ರ ಸೋತಿದ್ದರಿಂದ ಹತಾಶಳಾಗಿದ್ದೆ, ಆಗ ನಿರ್ದೇಶಕನೊಬ್ಬ ಚಿತ್ರರಂಗದಲ್ಲಿ ಗೆಲ್ಲುವ ಹಲವು ಸಲಹೆಗಳನ್ನು ನೀಡಿದ ನನಗೆ ಉಪಯುಕ್ತ ಅನ್ನಿಸಿತು. ಕ್ರಮೇಣ ಅವನ ಮಾರ್ಗದರ್ಶನಕ್ಕೆ ಹಾತೊರೆಯ ತೊಡಗಿದೆ. ಅವನು ಕ್ರಮೇಣ ಶೋಷಣೆಯ ಒಂದೊಂದೇ ವರಸೆಗಳನ್ನು ತೋರಿಸ ತೊಡಗಿದಾಗ ವಾಸ್ತವದ ಅರಿವಾಯಿತು. ಅದೃಷ್ಟವಶಾತ್ ಬಚಾವಾಗುವ ದಾರಿ ಸಿಕ್ಕಿತು. ಆದರೆ ಬಹಳ ಮಂದಿ ಕಲಾವಿದೆಯರಿಗೆ ಇಂತಹ ಅವಕಾಶ ಸಿಕ್ಕುವುದಿಲ್ಲ. ಉದ್ಯಮದಲ್ಲಿ ಪ್ರಬಲರಾದವರ ವಿರುದ್ದದ ಹೋರಾಟ ಬೆಂಕಿಗೆ ಬಿದ್ದ ಹುಲ್ಲುಕಡ್ಡಿಯ ಚಡಪಡಿಕೆಯಾಗಿಯಷ್ಟೇ ಉಳಿದುಕೊಳ್ಳುತ್ತದೆ ಎನ್ನುವ ಟಿಸ್ಕಾ  ಇದು ಒಂದು ಸರಳ ಸಾಧ್ಯತೆ ಮಾತ್ರ ಎಂದು  ಗುರುತಿಸಿ ಚಿತ್ರರಂಗದಲ್ಲಿ ಶೋಷಣೆಯ ಮಾರ್ಗಗಳು ಹಲವಿದೆ ಎನ್ನುವ ಕಹಿ ಸತ್ಯವನ್ನು ತೆರೆದಿಡುತ್ತಾರೆ. ಅವರ ಪ್ರಕಾರ ನಾಯಕಿರಿಗಿಂತಲೂ ಪೋಷಕ ಪಾತ್ರದಲ್ಲಿರುವವರು ಎಕ್ಸಟ್ರಾಗಳು ಎಂದು ಕರೆಸಿಕೊಳ್ಳುವ ಸಹ ಕಲಾವಿದೆಯರು ಶೋಷಣೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು. ನಿರ್ದೇಶಕರು ಮಾತ್ರವಲ್ಲದೆ ನಿರ್ಮಾಪಕರು, ನಟರು, ಛಾಯಾಗ್ರಾಹಕರು ಕೊನೆಗೆ ಪತ್ರಕರ್ತರು ಕೂಡ  ಈ ಶೋಷಣೆಯಲ್ಲಿ ಶಾಮೀಲು ಎನ್ನುತ್ತಾರೆ ಅವರು.

‘ಆಕ್ಟಿಂಗ್ ಸ್ಮಾಟ್‍ ’ಚಿತ್ರರಂಗಕ್ಕೆ ಬರಲು ಇಚ್ಚಿಸುವ ಕಲಾವಿದೆಯರಿಗೆ ಗೈಡ್‍ನಂತಿದೆ. ಸಾಮಾನ್ಯ ಓದುಗರಿಗೂ ಕೂಡ ಚಿತ್ರರಂಗದ ಕರಾಳ ಮುಖಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ. ಸಿನಿಮಾ ಕುರಿತು ಇಂದು ಬಹುಮುಖಿ ವ್ಯಾಪ್ತಿಯ ಅಧ್ಯಯನಗಳು ನಡೆಯುತ್ತಿದೆ. ಆದರೆ ಗಾಸಿಪ್‍ಗಳ ನೆಲೆಯ ವರದಿಗಾರಿಕೆಯ ಪ್ರಮಾಣ ಹೆಚ್ಚಿ ಸಹೃದಯ ನೆಲೆಗಳ ವಿಶ್ಲೇಷಣೆಗಳು ಕಡಿಮೆಯಾಗುತ್ತಿವೆ. ಜಗಜಗಿಸುವ ಚಿತ್ರರಂಗದ ಹಿಂದಿನ ಕರಾಳ ಮುಖಗಳ ಅರಿವಾಗಲು ಇಂತಹ ಕೃತಿಗಳು ಇನ್ನಷ್ಟು ಬರಬೇಕಾದ ಅಗತ್ಯವಿದೆ.

Leave a Reply