ಬಾಂಗ್ಲಾದೇಶಕ್ಕೆ $24 ಬಿಲಿಯನ್ ಸಾಲ ನೀಡಿ ಭಾರತದ $2 ಬಿಲಿಯನ್ ಸಾಲ ಸೌಕರ್ಯ ಮುಸುಕಾಗಿಸಿದ ಚೀನಾ, ಕಾಂಬೋಡಿಯದಲ್ಲೂ ಸುರಿದ ಕಾಂಚಾಣ, ಸದ್ಯಕ್ಕಿದೇ ದಕ್ಷಿಣ ಏಷ್ಯದ ದೊಡ್ಡಣ್ಣ

ಡಿಜಿಟಲ್ ಕನ್ನಡ ಟೀಮ್:

ಅಕ್ಟೋಬರ್ 15ರಿಂದ ಗೋವಾದಲ್ಲಿ ‘ಬ್ರಿಕ್ಸ್’ ಸಮಾವೇಶ ನಡೆಯಲಿದೆ. ಬ್ರೆಜಿಲ್- ರಷ್ಯ- ಭಾರತ-ಚೀನಾ- ದಕ್ಷಿಣ ಆಫ್ರಿಕಾಗಳು ಸೇರಿ ನಿರ್ಮಿಸಿಕೊಂಡಿರುವ ಕೂಟವಿದು. ಇದಕ್ಕೆ ಮುನ್ನುಡಿಯಾಗಿ ಅದಾಗಲೇ ಜಾಗತಿಕ ರಾಜಕೀಯದ ಆಟಗಳು ರಂಗೇರಿವೆ.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಚೀನಾದಲ್ಲಿ ನಡೆದಿದ್ದ ಜಿ20 ಸಮಾವೇಶಕ್ಕೆ ಹೋಗುವಾಗ ವಿಯೆಟ್ನಾಂಗೆ ಭೇಟಿ ನೀಡಿ ಹೋಗಿದ್ದರು. ಚೀನಾದ ಮಗ್ಗುಲಲ್ಲೇ ಇರುವ ಭಾರತಸ್ನೇಹಿ ರಾಷ್ಟ್ರಕ್ಕೆ ಕಸುವು ತುಂಬಿದ್ದರು.

ಚೀನಾ ಏನು ಕಡಿಮೆಯೇ? ಅದು ಬ್ರಿಕ್ಸ್ ನಲ್ಲಿ ಪಾಲ್ಗೊಳ್ಳುವುದಕ್ಕೆ ಬಾಂಗ್ಲಾದೇಶ ಮಾರ್ಗವಾಗಿ ಬರುತ್ತಿದೆ. ವರ್ಷದ ಹಿಂದೆ ನರೇಂದ್ರ ಮೋದಿಯವರು ಬಾಂಗ್ಲಾದೇಶಕ್ಕೆ ಭೇಟಿ ನೀಡಿದಾಗ ಎರಡು ಬಿಲಿಯನ್ ಡಾಲರುಗಳ ಸಾಲ ಸೌಕರ್ಯ ನೀಡಿದ್ದರು. ಇದೀಗ ಚೀನಾವು ಬರೋಬ್ಬರಿ 24 ಬಿಲಿಯನ್ ಡಾಲರುಗಳ ಸಾಲ ಸೌಕರ್ಯವನ್ನು ನೀಡುವ ಮೂಲಕ ಬಾಂಗ್ಲಾದೇಶಕ್ಕೆ ಅತ್ಯಾಪ್ತವಾಗಿದೆ.

ಚೀನಾ ಅಧ್ಯಕ್ಷರೊಬ್ಬರು ಬಾಂಗ್ಲಾದೇಶಕ್ಕೆ ಭೇಟಿ ನೀಡುತ್ತಿರುವ ವಿದ್ಯಮಾನವು 30 ವರ್ಷಗಳ ನಂತರ ಇದೇ ಮೊದಲಿನದು. ಹೀಗಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರಿಗೆ ಬಾಂಗ್ಲಾದೇಶ 21 ಕುಶಾಲ ತೋಪುಗಳ ಸಿಡಿತದ ಸಕಲ ಮಿಲಿಟರಿ ಗೌರವಗಳೊಂದಿಗೆ ಕೆಂಪುಹಾಸು ಹಾಕಿತು.

ಬಾಂಗ್ಲಾದೇಶದಲ್ಲಿ ರೈಲ್ವೆ, ವಿದ್ಯುತ್ ಸ್ಥಾವರಗಳು ಹಾಗೂ ಬಂದರುಗಳ ನಿರ್ಮಾಣದಲ್ಲಿ ಈ ಹಣ ಬಳಕೆಯಾಗಲಿದೆ. ಭಾರತ ಮತ್ತು ಜಪಾನ್ ಗಳು ಸೇರಿಕೊಂಡು ಬಾಂಗ್ಲಾದೇಶದ ಮೂಲಸೌಕರ್ಯಾಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದವು. ಆದರೆ ಇವೆಲ್ಲವನ್ನೂ ಮೀರಿಸುವ ರೀತಿಯಲ್ಲಿ ಚೀನಾವು ಬಾಂಗ್ಲಾದೇಶದಲ್ಲೀಗ ಹಣದ ಮಳೆ ಸುರಿಸಿದೆ. ಇದಕ್ಕೆ ಪ್ರತಿಯಾಗಿ ಬಾಂಗ್ಲಾದೇಶವು ಚೀನಾದ ಮಾಹಾತ್ವಾಕಾಂಕ್ಷಿ ಯೋಜನೆಯಾಗಿರುವ ‘ಒನ್ ಬೆಲ್ಟ್ ಒನ್ ರೋಡ್’ ಎಂಬ ಏಷ್ಯ ಮತ್ತು ಯುರೋಪುಗಳನ್ನು ಬೆಸೆಯುವ ಸಂಪರ್ಕಜಾಲದ ಕಲ್ಪನೆಗೆ ಬೆಂಬಲ ನೀಡಿದೆ.

ಚೀನಾದ ಸಹಯೋಗವನ್ನು ಸ್ವಾಗತಿಸುವಲ್ಲಿ ಪ್ರಧಾನಿ ಶೇಖ್ ಹಸೀನಾ ಹಾಗೂ ಪ್ರತಿಪಕ್ಷಗಳು ಒಟ್ಟಾಗಿವೆ. ಬಾಂಗ್ಲಾದೇಶವು ಹೀಗೆ ಚೀನಾದೊಂದಿಗೆ ಬಾಂಧವ್ಯ ವೃದ್ಧಿಸಿಕೊಳ್ಳುತ್ತಿರುವುದು ಭಾರತದ ಹಿತಾಸಕ್ತಿಗೇನೂ ಅಡ್ಡಿಯಲ್ಲಿ ಎಂಬ ಜಾಗೃತ ಪ್ರತಿಕ್ರಿಯೆಯನ್ನೂ ಬಾಂಗ್ಲಾದೇಶ ಸರ್ಕಾರ ನೀಡಿದೆ. ಈ ಪ್ರಕ್ರಿಯೆಯಲ್ಲಿ ಯಾವತ್ತೂ ಬಾಂಗ್ಲಾ ವಿರೋಧಿ ಪಾಳೆಯದಲ್ಲಿರುವ ಪಾಕಿಸ್ತಾನವು ಎಷ್ಟರಮಟ್ಟಿಗೆ ಕಣ್ಣು ಕೆಂಪಾಗಿಸಿಕೊಳ್ಳಲಿದೆ ಎಂಬುದೂ ಆಸಕ್ತಿಕರ ಆಯಾಮವೇ.

ಇವೇನೇ ಇದ್ದರೂ ದಕ್ಷಿಣ ಏಷ್ಯದ ನಾಯಕತ್ವವನ್ನು ಭಾರತಕ್ಕೆ ಬಿಟ್ಟುಕೊಡಬಾರದೆಂದು ಚೀನಾ ಭಾರಿ ಹೆಜ್ಜೆಗಳನ್ನೇ ಇಡುತ್ತಿರುವುದೂ ಸ್ಪಷ್ಟ. ಇದಕ್ಕೂ ಮೊದಲು ಕಾಂಬೋಡಿಯಾಕ್ಕೆ ಭೇಟಿ ನೀಡಿದ ಚೀನಾ ಅಧ್ಯಕ್ಷರು ಅಲ್ಲೂ ಹಣದ ಮಳೆಯ ಭರವಸೆ ನೀಡಿದ್ದಾರೆ. ಯುರೋಪ್ ಒಕ್ಕೂಟದಿಂದಲೂ ಕಾಂಬೋಡಿಯ ಹಣ ಪಡೆಯುತ್ತಿತ್ತು. ಆದರೆ ಪ್ರತಿಯಾಗಿ ಆ ದೇಶದ ಮಾನವ ಹಕ್ಕುಗಳ ದಾಖಲೆ ಮೇಲೆ ಆಗಾಗ ಪ್ರಶ್ನೆಗಳೇಳುತ್ತಿದ್ದವು. ಚೀನಾ ಮಾನವ ಹಕ್ಕುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ದೇಶವೇ ಅಲ್ಲವಾದ್ದರಿಂದ, ಅದರೊಂದಿಗಿನ ಸ್ನೇಹದಲ್ಲೇ ಹೆಚ್ಚು ಲಾಭವಿದೆ ಎಂಬ ನಿರ್ಧಾರಕ್ಕೆ ಬಂದಿದೆ ಕಾಂಬೋಡಿಯ. ದಕ್ಷಿಣ ಚೀನಾ ಸಮುದ್ರದ ವಿಷಯದಲ್ಲಿ ಚೀನಾವನ್ನು ಅದಾಗಲೇ ಬೆಂಬಲಿಸಿರುವ ಕಾಂಬೋಡಿಯಾ, ಪುರಾತನ ರೇಷ್ಮೆ ಮಾರ್ಗವನ್ನು ಪುನರುತ್ಥಾನ ಮಾಡುವ ಚೀನಾದ ಒನ್ ಬೆಲ್ಟ್ ಒನ್ ರೋಡ್ ಪರಿಕಲ್ಪನೆಗೂ ಧ್ವನಿಗೂಡಿಸಲಿದೆ. ವಿಯೆಟ್ನಾಮಿನ ಮಗ್ಗುಲಲ್ಲೇ ಇರುವ ದೇಶ ಕಾಂಬೋಡಿಯಾ ಎಂಬುದು ಗಮನಾರ್ಹ.

ಹಿಂದು-ಬೌದ್ಧ ಸಂಸ್ಕೃತಿಗಳ ನೆಲೆಯಲ್ಲಿ ಭಾರತಕ್ಕೆ ಒಂದನೇ ಶತಮಾನದಿಂದಲೂ ಕಾಂಬೋಡಿಯದೊಂದಿಗೆ ಬಾಂಧವ್ಯವಿದೆ. ಈ ಹಿಂದೆ ಹಲವು ಮಿಲಿಟರಿ ಕಾರ್ಯಾಚರಣೆಗಳಲ್ಲಿ ಕಾಂಬೋಡಿಯಕ್ಕೆ ಭಾರತ ಸಹಕರಿಸಿದ್ದಿದೆ. ಮುಖ್ಯವಾಗಿ ಅಂಗ್ಕೋರ್ ವಾಟ್ ಹಿಂದು ದೇವಾಲಯದ ಪುನರುತ್ಥಾನದಲ್ಲಿ ಉಭಯ ದೇಶಗಳು ತೊಡಗಿಸಿಕೊಂಡಿದ್ದವು. ಕಾಂಬೋಡಿಯಕ್ಕೆ ಹತ್ತಿರ ಹತ್ತಿರ ನೂರು ಮಿಲಿಯನ್ ಡಾಲರ್ ಮೊತ್ತದಷ್ಟು ರಫ್ತು ವಹಿವಾಟು ಮಾಡುತ್ತದೆ ಭಾರತ.

ರಾಜತಾಂತ್ರಿಕ ರಂಗಮಂದಿರದಲ್ಲಿ ಯಾರದ್ದೋ ಜತೆಗೆ ನಿಂತ ತಕ್ಷಣ ಇನ್ಯಾರದ್ದೋ ವಿರುದ್ಧ ಎಂದು ನಿರ್ಧರಿಸಲಾಗುವುದಿಲ್ಲವಾದರೂ, ದಕ್ಷಿಣ ಏಷ್ಯದ ರಾಜಕೀಯದಲ್ಲಿ ಚೀನಾ ಮುಂಚೂಣಿಯಲ್ಲಿದೆ ಹಾಗೂ ನರೇಂದ್ರ ಮೋದಿ ಪ್ರಧಾನಿಯಾಗುತ್ತಲೇ ಅದು ತನ್ನ ಪ್ರಭಾವಲಯ ವೃದ್ಧಿಯ ಬಗ್ಗೆ ಮತ್ತಷ್ಟು ತ್ವರಿತವಾಗುತ್ತಿದೆ ಎಂಬುದಂತೂ ಕಣ್ಣಿಗೆ ರಾಚುವ ವಾಸ್ತವ.

Leave a Reply