ಮಂಗಳ ಗ್ರಹದ ಮೇಲೆ ಮನುಷ್ಯ ಕಾಲೂರಲು ಇದು ಸಮಯವಲ್ಲ, ಇಲಿಗಳ ಮೇಲೆ ಪ್ರಯೋಗ- ವಿಜ್ಞಾನಿಗಳ ಗಲಿಬಿಲಿ

author-ananthramuಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಎಫ್. ಕೆನೆಡಿ ಅವರಿಗೆ ಅದು ಅನಿವಾರ್ಯವಾಗಿತ್ತು. 1961ರ ಮೇ 25ರಂದು ಕಾಂಗ್ರೆಸ್ಸಿನ ಜಂಟಿ ಅಧಿವೇಶನದಲ್ಲಿ ಅವರು ಘೋಷಿಸಲೇಬೇಕಾಯಿತು. `ಈ ದಶಕ ಕಳೆಯುವುದರೊಳಗೆ ಅಮೆರಿಕದ ಪ್ರಜೆಯೊಬ್ಬ ಚಂದ್ರನ ಮೇಲೆ ಇಳಿಯುತ್ತಾನೆ’. ಸೋವಿಯತ್ ರಷ್ಯ ಶೀತಲ ಸಮರದಲ್ಲಿ ಅಮೆರಿಕಕ್ಕೆ ದೊಡ್ಡ ಪೆಟ್ಟು ಕೊಟ್ಟಿತ್ತು. ಯೂರಿ ಗಗಾರಿನ್ ಬಾಹ್ಯಾಕಾಶದಲ್ಲಿ ಪ್ರಯಾಣ ಮಾಡಿದ ಮೊದಲ ಮನುಷ್ಯ ಎನಿಸಿಕೊಂಡಿದ್ದು ಅಮೆರಿಕಕ್ಕೆ ಆಗ ಜೀರ್ಣಿಸಿಕೊಳ್ಳಲಾಗದ ಸತ್ಯ. ನೀಲ್ ಆರ್ಮ್ ಸ್ಟ್ರಾಂಗ್ 1969ರಲ್ಲಿ ಚಂದ್ರನ ಮೇಲೆ ಕಾಲೂರಿದಾಗ ಅಮೆರಿಕವಷ್ಟೇ ಅಲ್ಲ, ಇಡೀ ಮನುಕುಲ ಬೀಗಿತ್ತು. ಅಮೆರಿಕ ಆಗಲೇ ನಿರ್ಧರಿಸಿತ್ತು- ಮುಂದಿನ ನಿಲ್ದಾಣ ಮಂಗಳಗ್ರಹ.

ಕೆನೆಡಿ ಘೋಷಿಸಿದಂತೆ ಈಗಿನ ಅಧ್ಯಕ್ಷ ಒಬಾಮ ಅವರಾಗಲಿ ಅಥವಾ ಮುಂದೆ ಅಧ್ಯಕ್ಷರಾಗಿ ಆಯ್ಕೆಯಾಗುವ ಯಾರೇ ಆಗಲಿ (ಹಿಲರಿ ಕ್ಲಿಂಟನ್/ಡೊನಾಲ್ಡ್ ಟ್ರಂಪ್) ಅಷ್ಟೇ ಆತ್ಮವಿಶ್ವಾಸದಿಂದ ಮಾನವ ಸಹಿತ ಮಂಗಳ ಶೋಧನೆ ಮಾಡುತ್ತೇವೆ ಎಂದು ಎದೆತಟ್ಟಿ ಸದ್ಯಕ್ಕೆ ಹೇಳುವಂತಿಲ್ಲ. ಅದು ಸುಲಭದ ಕೆಲಸವಲ್ಲ. ತಾಂತ್ರಿಕವಾಗಿ ಅಮೆರಿಕ ಕಳೆದ ನಲವತ್ತು ವರ್ಷಗಳಿಂದಲೂ ಮಂಗಳಗ್ರಹದ ಬಗ್ಗೆ ರೋಬಟ್ ಶೋಧನೆ ಮಾಡುತ್ತಿದೆ. ಆ ಗ್ರಹದ ಪರಿಸರದ ಬಗ್ಗೆ ಸ್ಪಷ್ಟ ತಿಳಿವು ಗಗನಯಾನಿಗಳಿಗೂ ಇದೆ.

ಅಮೆರಿಕದ ನಾಸಾ ಸಂಸ್ಥೆ ಮಂಗಳ ಗ್ರಹದ ಮೇಲೆ ಮನುಷ್ಯನನ್ನು ಇಳಿಸುವುದು ಸಾಧ್ಯ ಎಂಬುದನ್ನು ತಾಂತ್ರಿಕ ದೃಷ್ಟಿಯಿಂದ ಹೇಳುತ್ತಿದೆ. ಸುಮಾರು ಐದು ನೂರು ಬಿಲಿಯನ್ ಡಾಲರ್ ಇದಕ್ಕೆ ವೆಚ್ಚವಾಗುತ್ತದೆಂದೂ ಲೆಕ್ಕಹಾಕಿದೆ. ಕಾರ್ಬನ್ ಡೈ ಆಕ್ಸೈಡನ್ನೇ ವಿಘಟಿಸಿ ಆಕ್ಸಿಜನ್ ಉತ್ಪಾದಿಸಿ ರಾಕೆಟ್ ಇಂಧನವಾಗಿ ಬಳಸಬಹುದು; ಹಾಗೆಯೇ ಗಗನಯಾನಿಗಳಿಗೆ ಉಸಿರಾಡಲು ಅದು ಒದಗಿಬರುತ್ತದೆ ಎಂಬುದನ್ನು ಪ್ರಯೋಗಗಳ ಮೂಲಕ ತೋರಿಸಿಕೊಟ್ಟಿದೆ. ಅಂದಾಜು 2030ರ ಹೊತ್ತಿಗೆ ಇದು ಸಾಧ್ಯವಾಗಬಹುದು ಎಂಬ ಸಂಕಲನ- ವ್ಯವಕಲನದಲ್ಲಿ ನಾಸಾ ತೊಡಗಿದೆ. ಭಾರತವು ಮಾನವಸಹಿತ ಮಂಗಳಯಾನಕ್ಕೆ ಸಿದ್ಧವಾಗುತ್ತಿದೆ. ಜಪಾನ್, ಚೀನಗಳಿಗೆ ಯಶಸ್ವಿಯಾಗಿ ಮಂಗಳಯಾನ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಸದ್ಯಕ್ಕೆ ಮಂಗಳ ಗ್ರಹ ಶೋಧವೆಂದರೆ ಅದು ಪೈಪೋಟಿಯೇನಲ್ಲ.

ತಾಂತ್ರಿಕ ಸಾಧನೆ-ಸಾಧನಗಳೇನೂ ಈಗ ದೊಡ್ಡ ಸಮಸ್ಯೆಗಳಾಗಿಲ್ಲ. ವಾಸ್ತವವಾಗಿ ಅಮೆರಿಕದ ನಾಸಾ ಸಂಸ್ಥೆ ದೀರ್ಘಕಾಲ ಅಂದರೆ ಮಂಗಳಗ್ರಹಕ್ಕೆ ಹೋಗಿ ಹಿಂದಿರುಗಲು ಕನಿಷ್ಠ ಮೂರು ವರ್ಷ ಬೇಕು ಎಂಬುದನ್ನಷ್ಟೇ ಲೆಕ್ಕಹಾಕುತ್ತಿಲ್ಲ, ತೂಕರಹಿತ ಸ್ಥಿತಿಯಲ್ಲಿ ಗಗನಯಾನಿಗಳು ದೀರ್ಘಕಾಲ ಕಳೆದರೆ ಏನಾಗುತ್ತದೆ? ಅವರ ಆರೋಗ್ಯದ ಮೇಲೆ ಬೀರುವ ಪರಿಣಾಮಗಳೇನು? ಯಾನ ಮುಗಿಸಿ ಹಿಂತಿರುಗಿದ ನಂತರ ನಿಧಾನವಾಗಿ ಗೋಚರಿಸುವ ಬದಲಾವಣೆಗಳು ಯಾವುವು? ಯಾವ ಬಗೆಯ ಔಷಧಿಯ ದಾಸ್ತಾನಿಡಬೇಕು? ಏಕಾಂತತೆಯಿಂದ ಮಾನಸಿಕ ಸ್ಥಿರತೆಗೆ ಎದುರಾಗುವ ಅಪಾಯಗಳೇನು? ಇವೆಲ್ಲವನ್ನೂ ಗಣನೆಮಾಡಿದೆ. ಅದಕ್ಕಾಗಿಯೇ `ಮಾನವ ಸಂಶೋಧನೆ ಕಾರ್ಯಕ್ರಮ’ ಎಂಬ ವಿಶೇಷ ಘಟಕವೇ ಅಲ್ಲಿ ಸದಾ ಸಂಶೋಧನೆಯಲ್ಲಿ ತೊಡಗಿರುತ್ತದೆ.

photo

ನಿಜವಾಗಲೂ ವಿಜ್ಞಾನಿಗಳು ಹೆದರಿರುವುದು ಅಲ್ಲಿನ ವಿಕಿರಣಕ್ಕೆ. ಗಾಢಾಂತರಿಕ್ಷಕ್ಕೆ (ಡೀಪ್ ಸ್ಪೇಸ್) ಹೋದಷ್ಟೂ ಕಾಸ್ಮಿಕ್ ವಿಕಿರಣದಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಯಾವುದು ಈ ಅಗೋಚರ ಶತ್ರು? ಸೌರಮಂಡಲದಿಂದಾಚೆಯಿಂದ ತೂರಿಬರುವ ಅತಿ ಶಕ್ತಿಶಾಲಿ ಆವಿಷ್ಟಕಣಗಳು (ಹೈ ಎನರ್ಜಿ ಚಾರ್ಜ್ಡ್ ಪಾರ್ಟಿಕಲ್ಸ್) ವಿಶೇಷವಾಗಿ ಎಲೆಕ್ಟ್ರಾನ್ ಗಳಿಲ್ಲದ ನ್ಯೂಕ್ಲಿಯಸ್ ಹಾಗೆಯೇ ಪ್ರೊಟಾನುಗಳು ಇವೆಲ್ಲ ನಮ್ಮ ಗೆಲಕ್ಸಿಯ ನಕ್ಷತ್ರಗಳ ಸಾವಿನಂಚಿನಲ್ಲಿ ಹೊರಬೀಳುತ್ತವೆ. ಒಂದು ಗಂಟೆ ದೇಹಕ್ಕೆ ಯಾವುದೇ ರಕ್ಷಣೆ ಇಲ್ಲದೆ ಚಂದ್ರನ ಮೇಲೆ ನಿಂತರೂ ಸಾಕು, ಅವು ನಮ್ಮ ದೇಹದ ಮೇಲೆ ದಾಳಿಮಾಡುತ್ತವೆ. ನಿಧಾನವಾಗಿ ಮಿದುಳಿನ ನರಕೋಶ ವ್ಯವಸ್ಥೆಯನ್ನು ಧ್ವಂಸಮಾಡಬಲ್ಲವು. ಒಮ್ಮೆ ನರಕೋಶ ವ್ಯವಸ್ಥೆಯಲ್ಲಿ ಏರುಪೇರಾದರೆ ಅದು ನಿಧಾನಗತಿಯ ಸಾವಿಗೆ ಎಡೆಮಾಡಿಕೊಡುತ್ತದೆ.

ಈಗ ನಾಸಾ ವಿಜ್ಞಾನಿಗಳು ಗಲಿಬಿಲಿಗೊಂಡಿದ್ದಾರೆ. ಮಂಗಳ ಗ್ರಹಕ್ಕೆ ಮಾನವ ಯಾನ ಮಾಡುವುದಾದರೆ ಈ ಕಣಗಳಿಂದ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯ ಕೈಗೆತ್ತಿಕೊಂಡ ಇಲಿಗಳ ಮೇಲಿನ ಸಂಶೋಧನೆ ಗಾಬರಿಹುಟ್ಟಿಸಿದೆ. ಇಲ್ಲಿ ಮಾಡಿದ್ದಿಷ್ಟು-ಇಲಿಗಳು ನಮ್ಮ ಪ್ರಯೋಗಕ್ಕೆ ಎಂದೂ ಸುಲಭ ಲಭ್ಯ ತಾನೇ. ಅವುಗಳ ಮೇಲೆ ಅತಿ ಶಕ್ತಿಯುತ ಆವಿಷ್ಟ ಕಣಗಳನ್ನು ಕಳಿಸಿದಾಗ ಅವುಗಳ ಮಿದುಳು ಕೋಶದಲ್ಲಿ ಯಾವ ಬದಲಾವಣೆ ಆಗುತ್ತದೆಂದು ಗಮನಿಸುತ್ತಿದ್ದರು. ಆರು ತಿಂಗಳ ನಂತರ ಗೋಚರಿಸತೊಡಗಿತು- ನಿಧಾನಗತಿಯಲ್ಲಿ ಇಲಿಗಳ ಮಿದುಳಿನ ನರಕೋಶಗಳಲ್ಲಿ ಉರಿಯೂತ ಪ್ರಾರಂಭವಾಯಿತು. ವಾಸ್ತವವಾಗಿ ನರಕೋಶಗಳೂ ಧ್ವಂಸವಾಗಿದ್ದವು. ಇದನ್ನೇ ಈಗ `ಸ್ಪೇಸ್ ಬ್ರೈನ್’ ಎನ್ನುವುದುಂಟು. ಹೊಸ ರೋಗ, ಹೊಸ ಸಂಗತಿ ಇವಿಷ್ಟೇ ಅಲ್ಲ, ದೀರ್ಘಕಾಲ ಗಗನಯಾನಿ ಇಂಥ ಕಣಗಳ ಪ್ರಭಾವಕ್ಕೆ ತುತ್ತಾದರೆ ನಿಧಾನವಾಗಿ ಮರೆವು ಕಾಣಿಸಿಕೊಳ್ಳುತ್ತದೆ, ಇದರ ಜೊತೆಜೊತೆಗೆ ಉದ್ವೇಗವಾಗುತ್ತದೆ. ಅಂತಿಮವಾಗಿ ಖಿನ್ನತೆ ಅಮರಿಕೊಳ್ಳುತ್ತದೆ. ಗಗನಯಾನಿಯ ಜೀವನದುದ್ದಕ್ಕೂ ಅದು ಕಾಡುತ್ತಲೇ ಹೋಗುತ್ತದೆ ಎಂಬ ಸತ್ಯಶೋಧನೆ ಇದರಿಂದಾಗಿದೆ.

ಇದಲ್ಲದೆ ಸದಾ ಸಾವಿಗೀಡಾಗುವ ಭಯ ಬೇರೆ. ಈ ಹಂತದಲ್ಲಿ ವ್ಯಕ್ತಿಯ ಮಿದುಳು ಮನಸ್ಸಿಗೊಗ್ಗದ ಭಾವನೆಯನ್ನು ಅದುಮಿಡುತ್ತದೆ. ನೀರಿಗೆ ಬಿದ್ದರೆ ಸತ್ತೇ ಹೋಗುತ್ತೇನೆಂಬ ಹೆದರಿಕೆಯಿಂದ ನಿಜವಾಗಲೂ ನೀರಿಗೆ ಬಿದ್ದಾಗ ಒದ್ದಾಡಿ ಈಜಿ ಆಚೆ ಬರುವಂತಹ ಸ್ಥಿತಿ ಇದು. ಒಂದುವೇಳೆ ಇಂಥ ಸ್ಥಿತಿ ಅಂತರಿಕ್ಷ ಯಾನದಲ್ಲಿ ಉಂಟಾದರೆ ಭೂನಿಯಂತ್ರಣ ಕೋಣೆಯಿಂದ ಅವರಿಗೆ ಕೊಟ್ಟ ಸಂದೇಶಗಳ ಗತಿ ಏನು?  ಏಕೆಂದರೆ ಮಂಗಳಯಾನವೆಂದರೆ ದೀರ್ಘಯಾತ್ರೆ. ಇದು ಈಗ ಅಂತಾರಾಷ್ಟ್ರೀಯ ಅಂತರಿಕ್ಷ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಗನಯಾನಿಗಳಿಗೂ ತಟ್ಟಬೇಕಲ್ಲ? ವಾಸ್ತವದಲ್ಲಿ ಹಾಗೆ ಆಗುತ್ತಿಲ್ಲ. ಏಕೆಂದರೆ ಭೂಮಿಯಿಂದ ಹೊರಗೆ ಕೊಡೆಯಂತೆ ಹಬ್ಬಿರುವ ಕಾಂತಕ್ಷೇತ್ರ ಅಂತರಿಕ್ಷ ನಿಲ್ದಾಣದಾಚೆಗೂ ವಿಸ್ತರಿಸಿದೆ. ಸದಾ ಲಗ್ಗೆಮಾಡುವ ಈ ಶಕ್ತ ಕಣಗಳನ್ನು ಉರುಳಿಹೋಗುವಂತೆ ಮಾಡುತ್ತದೆ. ನಿಸರ್ಗ ಭೂಮಿಗೆ ಕೊಟ್ಟಿರುವ ಶ್ರೀರಕ್ಷೆ ಇದು. ಆದರೆ ಗಾಢಂತರಿಕ್ಷದಲ್ಲಿ ಈ ಕಣಗಳ ದಾಳಿಯನ್ನು ತಡೆಯುವ ಯಾವ ರಕ್ಷಣೆಯೂ ಇಲ್ಲ. ಅವು ಮಳೆಗರೆದಂತೆ ನುಗ್ಗಿಬರುತ್ತಿರುತ್ತವೆ. ಹಾಗಿದ್ದರೆ ಈ ಅಪಾಯದಿಂದ ರಕ್ಷಣೆ ಪಡೆಯಲು ಬೇರೆ ದಾರಿಗಳೇ ಇಲ್ಲವೆ? ಗಗನನೌಕೆಗೆ ದೊಡ್ಡ ರಕ್ಷಣಾ ಪದರವನ್ನು ಹೊದಿಸಿದರೆ? ಆಗ ನೌಕೆಯ ತೂಕವೇ ಹೆಚ್ಚಾಗಬಹುದು. ಈಗ ಈ ಸಮಸ್ಯೆ ಹೊಸ ಆವಿಷ್ಕಾರಕ್ಕೆ ಪ್ರೇರೇಪಿಸುತ್ತಿದೆ. ನಾಸಾ ಸಂಸ್ಥೆಯ ಜೀವಿ ವಿಜ್ಞಾನಿಗಳು ಮತ್ತು ಕಣಭೌತ ವಿಜ್ಞಾನದ ಪರಿಣತರು ಒಟ್ಟುಗೂಡಿ ಸಮಸ್ಯೆಗೆ ಪರಿಹಾರ ರೂಪಿಸಲು ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ನಿಸರ್ಗ ಎಂದೂ ಸವಾಲೆಸೆಯುತ್ತಿರುತ್ತದೆ, ವಿಜ್ಞಾನ ಜವಾಬು ಕೊಡುತ್ತಲೇ ಸವಾಲಿಗೆ ಪರಿಹಾರ ನೀಡುತ್ತದೆ. ಅದು ನಿಸರ್ಗದ ನೀತಿ – ಇದು ವಿಜ್ಞಾನದ ರೀತಿ.

Leave a Reply