ಚೀನಾ ಉತ್ಪನ್ನಗಳು ಬೇಡವೆಂಬ ಅಭಿಯಾನ: ಸಣ್ಣ ವ್ಯಾಪಾರಿಗಳಿಗೆ ಹೊಡೆತ ಕೊಟ್ಟಿದೆಯೇ ಹೊರತು ಚೀನಾದ ದೊಡ್ಡ ಕಂಪನಿಗಳಿಗಲ್ಲ

ಡಿಜಿಟಲ್ ಕನ್ನಡ ಟೀಮ್:

ಪಾಕಿಸ್ತಾನದ ಉಗ್ರ ಮಸೂದ್ ಅಜರ್ ಯನ್ನು ವಿಶ್ವ ಸಂಸ್ಥೆ ಉಗ್ರರ ಪಟ್ಟಿಗೆ ಸೇರಿಸುವುದು ಹಾಗೂ ಭಾರತ ಎನ್ಎಸ್ಜಿ ಗುಂಪಿಗೆ ಸೇರ್ಪಡೆ ಮಾಡಲು ಮಹಾ ಗೋಡೆಯಾಗಿ ನಿಂತಿರುವ ಚೀನಾ ವಿರುದ್ಧ ಬಹುತೇಕ ಭಾರತೀಯರು ಸಿಟ್ಟುಗೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಚೀನಾಕ್ಕೆ ಪಾಠ ಕಲಿಸಬೇಕು, ಹೀಗಾಗಿ ಚೀನಾ ಉತ್ಪನ್ನಗಳ ಮೇಲೆ ನಾವು ನಿಷೇಧ ಹೇರಬೇಕು, ಅವುಗಳನ್ನು ಖರೀದಿಸಬಾರದು ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ವಾಸ್ತವದಲ್ಲಿ ಈ ಹೋರಾಟ ಎಷ್ಟರ ಮಟ್ಟಿಗಿದೆ ಹಾಗೂ ಈ ಹೋರಾಟ ನಡೆಸಲು ನಾವು ಎಷ್ಟು ಸಮರ್ಥರು ಎಂಬ ಪ್ರಶ್ನೆಯೂ ಮೂಡಿದೆ.

ಈ ನಿಟ್ಟಿನಲ್ಲಿ ಎರಡು ಚಿತ್ರಣಗಳು ನಮ್ಮ ಮುಂದಿವೆ. ದೀಪಾವಳಿ ಅಲಂಕಾರಕ್ಕೆ ವಸ್ತುಗಳ ಖರೀದಿ ಸಂದರ್ಭದಲ್ಲಿ ಗ್ರಾಹಕರು ಚೀನಿ ವಸ್ತುಗಳನ್ನು ಬಹಿಷ್ಕರಿಸುತ್ತಿದ್ದಾರೆ. ಆದರೆ, ಇನ್ನೊಂದೆಡೆ ಚೀನಾ ಮಾಧ್ಯಮದ ವರದಿ ಪ್ರಕಾರ ಕಳೆದ ತಿಂಗಳು ಚೀನಾ ಮೂಲದ ಕ್ಸಿಯೊಮಿ ಮೊಬೈಲ್ ಫೋನ್ ದಾಖಲೆಯ ಮಾರಾಟ ಕಂಡಿದೆ.

ಚೀನಾ ಉತ್ಪನ್ನಗಳನ್ನು ಅಷ್ಟು ಸುಲಭವಾಗಿ ಬಿಟ್ಟು ಬಿಡಲು ಸಾಧ್ಯವೇ? ಎಂಬ ಪ್ರಶ್ನೆಗೆ ಇಲ್ಲ ಎಂಬುದೇ ಸದ್ಯಕ್ಕೆ ಸಿಗೋ ಉತ್ತರ. ಕಾರಣ, ನಾವು ಮೊಬೈಲ್ ಗಳಿಂದ ಹಿಡಿದು, ಚಾರ್ಜರ್, ವಿದ್ಯುತ್ ಬಲ್ಬ್, ಎಲೆಕ್ಟ್ರಾನಿಕ್ ವಸ್ತುಗಳು ಹೀಗೆ ನಮಗೆ ಗೊತ್ತಿಲ್ಲದೇ ಅನೇಕ ನಿತ್ಯ ಬಳಕೆ ವಸ್ತುಗಳು ಚೀನಾ ಉತ್ಪನ್ನಗಳೇ ಆಗಿವೆ. ಒಂದು ರೀತಿಯಲ್ಲಿ ನಾವು ಚೀನಾ ಉತ್ಪನ್ನಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ.

ಇಂತಹ ಪರಿಸ್ಥಿತಿಯಲ್ಲಿ ನಮಗೆ ಎಷ್ಟೇ ಕಷ್ಟವಾದರೂ ಸರಿಯೇ ದೇಶವೇ ಮುಖ್ಯ ಎಂಬ ಗಟ್ಟಿ ಮನಸ್ಸು ಮಾಡಿ ಚೀನಾ ಉತ್ಪನ್ನಗಳ ಬಳಕೆ ನಿಲ್ಲಿಸಿಬಿಡುತ್ತೇವೆ ಎಂಬ ನಿರ್ಧಾರ ಮಾಡಿದರೂ ಸಹ ಚೀನಾ ಉತ್ಪನ್ನಗಳಿಗೆ ಬದಲಿಯಾಗಿ ಬಳಸಲು ನಮ್ಮ ಬಳಿ ಆಯ್ಕೆಯ ಅವಕಾಶವಿಲ್ಲ ಎಂಬುದು ಸಹ ಒಪ್ಪಲೇ ಬೇಕಾದ ವಾಸ್ತವ ಅಂಶ. ನಾವು ಯಾವೆಲ್ಲಾ ಚೀನಾ ವಸ್ತುಗಳನ್ನು ಬಳಕೆ ಮಾಡಲು ನಿಲ್ಲಿಸಬೇಕೋ ಆ ವಸ್ತುಗಳನ್ನು ನಾವೇ ತಯಾರಿಸಿಕೊಳ್ಳುವುದನ್ನು ಮೊದಲ ಆರಂಭಿಸಬೇಕು.

ಕೆಲವು ಮಾಧ್ಯಮಗಳ ವರದಿ ಪ್ರಕಾರ ದೀಪಾವಳಿ ಸಮೀಪಿಸುತ್ತಿದ್ದಂತೆ ಬಹುತೇಕ ಜನರು ಚೀನಾ ಉತ್ಪನ್ನದ ವಿದ್ಯುತ್ ದೀಪಗಳ ಬಗ್ಗೆ ಆಸಕ್ತಿ ಕಡಿಮೆ ಮಾಡಿದ್ದಾರೆ. ಪರಿಣಾಮ ಈ ಬಾರಿ ದೀಪಾವಳಿ ಸಂದರ್ಭದಲ್ಲಿ ಸುಮಾರು ಶೇ.50 ರಷ್ಟು ಚೀನಾ ಉತ್ಪಾದಿತ ವಿದ್ಯುತ್ ದೀಪಗಳ ಮಾರಾಟ ಪ್ರಮಾಣ ಕುಸಿತ ಕಂಡಿದೆ. ಈ ಹೋರಾಟಕ್ಕೆ ಇದು ಒಂದು ರೀತಿಯ ಸಕಾರಾತ್ಮಕ ಅಂಶ ಎಂದೇ ಪರಿಗಣಿಸಬಹುದು. ಆದರೆ ವ್ಯಾಪಾರಿಗಳ ಪ್ರಕಾರ ಇಂತಹ ಸಂದರ್ಭದಲ್ಲಿ ಚೀನಾ ವಸ್ತು ಬದಲಿಗೆ ಬೇರೆ ರಾಷ್ಟ್ರಗಳ ಅಥವಾ ಸ್ವದೇಶಿ ವಿದ್ಯುತ್ ದೀಪಗಳ ಸರಕು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ‘ಕ್ರಾಂತಿ ಮಾಡಬೇಕು ಎಂದು ಹೊರಡುವ ಮುಂಚೆ ತಯಾರಿ ಬೇಕಲ್ಲವೇ’ ಅಂತ ದೆಹಲಿ ವ್ಯಾಪಾರಿಯೊಬ್ಬರು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.

ಒಂದೆಡೆ ಚೀನಾ ಉತ್ಪಾದಿತ ವಿದ್ಯುತ್ ದೀಪಗಳ ಬಳಕೆ ಕಡಿಮೆಯಾಗುತ್ತಿದೆ ಎಂಬುದರ ಜತೆಗೆ ಮೊಬೈಲ್ ಫೋನ್ ಗಳ ಮಾರಾಟ ಪ್ರಮಾಣ ದಾಖಲೆ ಪ್ರಮಾಣ ಮುಟ್ಟಿರುವುದು ಚೀನಾ ಉತ್ಪನ್ನಗಳನ್ನು ನಿಷೇಧಿಸಬೇಕು ಎಂಬ ಹೋರಾಟಕ್ಕೆ ವಾಸ್ತವಿಕವಾಗಿ ಬೆಂಬಲ ಸಿಗುತ್ತಿಲ್ಲ ಎಂಬುದನ್ನು ಮನದಟ್ಟು ಮಾಡುತ್ತಿದೆ. ದೀಪಾವಳಿ ಹಬ್ಬದ ಪ್ರಯುಕ್ತ ದೇಶದಲ್ಲಿ ಶಾಪಿಂಗ್ ಸಂಭ್ರಮ ಸ್ವಲ್ಪ ಹೆಚ್ಚಾಗಿಯೇ ಇದೆ. ಈ ಶಾಂಪಿಗ್ ಸಂಭ್ರಮದಲ್ಲಿ ಚೀನಾ ಉತ್ಪಾದಿತ ಮೊಬೈಲ್ ಗಳ ಮಾರಾಟ ದಾಖಲೆ ಪ್ರಮಾಣ ಮುಟ್ಟಿದೆ ಎಂಬ ವರದಿಯನ್ನು ಪ್ರಕಟಿಸಿದೆ ಗ್ಲೋಬಲ್ ಟೈಮ್ಸ್.

ಈ ವರದಿ ಪ್ರಕಾರ ಅಕ್ಟೋಬರ್ ಮೊದಲ ವಾರದಲ್ಲಿ ನಡೆದ ಶಾಪಿಂಗ್ ಮೇಳದಲ್ಲಿ ಚೀನಾದ ಮೊಬೈಲ್ ಕಂಪನಿ ಕ್ಸಿಯೋಮಿಯು ಫ್ಲಿಪ್ ಕಾರ್ಟ್, ಅಮೇಜಾನ್ ಮತ್ತು ಸ್ನ್ಯಾಪ್ ಡೀಲ್ ನಂತಹ ಇ ಕಾಮರ್ಸ್ ಮೂಲಕ ಕೇವಲ ಮೂರು ದಿನಗಳಲ್ಲಿ ಬರೋಬ್ಬರಿ 5 ಲಕ್ಷ ಮೊಬೈಲ್ ಫೋನ್ ಗಳನ್ನು ಮಾರಾಟ ಮಾಡಿದೆ.

ಇಂತಹ ಪರಿಸ್ಥಿತಿಯಲ್ಲಿ ಕೆಲವರು ಚೀನಾ ಉತ್ಪನ್ನಗಳನ್ನು ಸರ್ಕಾರವೇ ನಿಷೇಧಿಸಬೇಕು ಎಂಬ ಆಗ್ರಹ ಮಾಡಿದ್ದಾರೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ ಒಪ್ಪಂದ ಇದಕ್ಕೆ ಸುಲಭ ಅವಕಾಶ ಮಾಡಿಕೊಡುವುದಿಲ್ಲ. ಈ ಬಗ್ಗೆ ಸ್ವತಃ ಕೇಂದ್ರ ವಾಣಿಜ್ಯ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಹೇಳಿರುವ ಮಾತುಗಳು ಹೀಗಿವೆ…

‘ಚೀನಾ ಉತ್ಪನ್ನಗಳನ್ನು ಸಂಪೂರ್ಣವಾಗಿ ಭಾರತದಲ್ಲಿ ನಿಷೇಧಿಸಬೇಕು ಎಂಬ ಬೇಡಿಕೆ ಈಡೇರಿಸುವುದು ಸುಲಭದ ಮಾತಲ್ಲ. ನಮಗೆ ಇಷ್ಟವಿಲ್ಲ ಎಂಬ ಒಂದೇ ಕಾರಣಕ್ಕೆ ನಾವು ಒಂದು ದೇಶದ ಉತ್ಪನ್ನಗಳನ್ನು ನಿಷೇಧಿಸಲಾಗುವುದಿಲ್ಲ. ರಾಷ್ಟ್ರವೊಂದರ ಉತ್ಪನ್ನಗಳನ್ನು ನಿಷೇಧಿಸಬೇಕಾದರೆ ಅದು ವಸ್ತುಗಳನ್ನು ಸುಮ್ಮನೇ ತಂದು ಸುರಿಯುತ್ತಿದೆ ಎಂಬುದನ್ನು ನಿರೂಪಿಸಬೇಕು ಇಲ್ಲವೇ ಗುಣಮಟ್ಟದ ಸಮಸ್ಯೆ ಇರಬೇಕು. ಚೀನಾ ಉತ್ಪನ್ನಗಳ ಸುರಿಯುವಿಕೆಯನ್ನು ಅಂತಾರಾಷ್ಟ್ರೀಯವಾಗಿ ಸಾಬೀತುಪಡಿಸುವುದು ಕಷ್ಟ.’

ಪರಿಸ್ಥಿತಿ ಹೀಗಿರುವಾಗ ಜನರು ಗಟ್ಟಿ ನಿರ್ಧಾರ ಮಾಡಿ ಚೀನಾ ಉತ್ಪನ್ನಗಳು ಬೇಡ, ಅದರ ಬದಲಿ ಆಯ್ಕೆ ಅವಕಾಶವಿಲ್ಲದಿದ್ದರೂ ಸರಿಯೇ ನಾವು ಚೀನಾ ಉತ್ಪನ್ನಗಳ ಮೇಲಿನ ಅವಲಂಬನೆಯಿಂದ ಮುಕ್ತರಾಗಬೇಕು ಎಂದು ನಿರ್ಧರಿಸಿದರಷ್ಟೇ ಈ ವಿಚಾರದಲ್ಲಿ ಭಾರತೀಯರ ಹೋರಾಟ ಯಶಸ್ವಿಯಾಗುವುದು. ಅದನ್ನು ಬಿಟ್ಟು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ರವಾನಿಸುತ್ತಾ ಮತ್ತೊಂದೆಡೆ ದಾಖಲೆ ಪ್ರಮಾಣದಲ್ಲಿ ಮೊಬೈಲ್ ಮಾರಾಟವಾಗುತ್ತಿದ್ದರೆ, ಹೋರಾಟವೆಂಬುದು ಕೇವಲ ಹೇಳಿಕೆಯಾಗೇ ಉಳಿದುಬಿಡುತ್ತದೆ.

Leave a Reply