‘ಇಬ್ಬರು ಹೊಸ ಸ್ನೇಹಿತರಿಗಿಂತ ಒಬ್ಬ ಹಳೇ ಸ್ನೇಹಿತ ಮುಖ್ಯ’ ಎಂದು ರಷ್ಯಾವನ್ನು ರಮಿಸಿದ ಮೋದಿ, ರಕ್ಷಣೆ ಸೇರಿದಂತೆ 18 ಒಪ್ಪಂದಗಳು

ಡಿಜಿಟಲ್ ಕನ್ನಡ ಟೀಮ್:

ನಿರೀಕ್ಷೆಯಂತೆ ಇಂದು ಗೋವಾದಲ್ಲಿ ಆರಂಭವಾದ ಬ್ರಿಕ್ಸ್ ರಾಷ್ಟ್ರಗಳ ಸಭೆಯಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್ ಹಲವು ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಿದರು.

ಭಾರತ ಹಾಗೂ ಅಮೆರಿಕ ನಡುವಣ ಸ್ನೇಹ ಗಟ್ಟಿಗೊಳ್ಳುತ್ತಿದ್ದಂತೆ ಭಾರತ ತನ್ನ ಹಳೆಯ ಸ್ನೇಹಿತನ ಜತೆ ಸಂಬಂಧ ಕೆಡಿಸಿಕೊಳ್ಳುತ್ತಿದೆಯೇ ಎಂಬ ಮಾತುಗಳು ವ್ಯಕ್ತವಾಗಿದ್ದವು. ಭಾರತ ಮತ್ತು ರಷ್ಯಾ ನಡುವಣ ಸಂಬಂಧದ ಮೇಲೆ ಎದ್ದಿದ್ದ ಹಲವು ವದಂತಿಗಳಿಗೂ ಇಂದು ತೆರೆ ಎಳೆಯುವ ಪ್ರಯತ್ನಗಳಾದವು. ಮಾತುಕತೆ ನಂತರ ಉಭಯ ನಾಯಕರು ಜಂಟಿಯಾಗಿ ಪತ್ರಿಕಾ ಹೇಳಿಕೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ಇಬ್ಬರು ಹೊಸ ಸ್ನೇಹಿತರಿಗಿಂತ ಒಬ್ಬ ಹಳೆ ಸ್ನೇಹಿತ ಉತ್ತಮ’ ಎಂದು ರಷ್ಯಾ ಜತೆಗಿನ ಸ್ನೇಹವನ್ನು ಬಣ್ಣಿಸಿದ್ರು. ವಾಸ್ತವವಾಗಿ ಇದು ರಷ್ಯಾಕ್ಕೆ ನೀಡಿದ ಸಲಹೆ ಎಂದರೂ ತಪ್ಪಲ್ಲ. ಪಾಕಿಸ್ತಾನದ ಜತೆ ಏಕೆ ಕೈ ಕುಲುಕುತ್ತೀರಿ, ಹಳೆಯ ಸ್ನೇಹಿತನಾಗಿ ನಾವಿಲ್ಲವೇ ಎಂಬ ಪರೋಕ್ಷ ಸೂಚನೆಯೂ ಇಲ್ಲಿರುವಂತಿದೆ.

ಈ ಸಭೆಯಲ್ಲಿ ರಷ್ಯಾದಿಂದ 5 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತಕ್ಕೆ ಎಸ್-400 ಶ್ರೇಣಿಯ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ಖರೀದಿಸಲಾಗುವುದು, ಕಾಮೋವ್ ಹೆಲಿಕಾಪ್ಟರ್ ಅನ್ನು ಜಂಟಿಯಾಗಿ ಉತ್ಪಾದಿಸುವ ಅನೂಕೂಲ ಕಲ್ಪಿಸುವುದರ ಜತೆಗೆ ಫ್ರಿಗೆಟ್ಸ್ ಯುದ್ಧ ನೌಕೆಯ ನಿರ್ಮಾಣ ಯೋಜನೆಯನ್ನು ಭಾರತ ಘೋಷಿಸಿತು. ಇನ್ನು ಭಾರತದ ತೈಲ ಸಮೂಹ ಎಸ್ಸಾರ್ ಆಯಿಲ್ ಅನ್ನು ರಷ್ಯಾದ ಪ್ರಮುಖ ತೈಲ ಸಮೂಹ ರೊಸ್ನೆಫ್ಟ್ ಖರೀದಿಸಿದೆ. ಎಸ್ಸಾರ್ ಆಯಿಲ್ ನ ಸಾಲವೂ ಸೇರಿದಂತೆ 12 ರಿಂದ 13 ಬಿಲಿಯನ್ ಅಮೆರಿಕನ್ ಡಾಲರ್ (₹ 80- 86 ಸಾವಿರ ಕೋಟಿ) ಮೊತ್ತಕ್ಕೆ ಖರೀದಿಸಿದೆ.

ಇತ್ತೀಚಿನ ದಿನಗಳಲ್ಲಿ ಭಾರತವು ಅಮೆರಿಕ ಹಾಗೂ ಯುರೋಪ್ ರಾಷ್ಟ್ರಗಳ ಜತೆಗೆ ರಕ್ಷಣಾ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ. ಈ ಹಂತದಲ್ಲಿ ಭಾರತದ ಅತಿ ದೊಡ್ಡ ರಕ್ಷಣಾ ಪೂರೈಕೆ ರಾಷ್ಟ್ರವಾಗಿರುವ ರಷ್ಯಾ ಈ ರಾಷ್ಟ್ರಗಳ ಜತೆಗಿನ ಸ್ಪರ್ಧೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಈ ಮಹತ್ತರ ಹೆಜ್ಜೆಯನ್ನು ಇಟ್ಟಿದೆ.

ಭಾರತ ಹಾಗೂ ರಷ್ಯಾ ನಡುವೆ ಒಟ್ಟು 18 ಒಪ್ಪಂದಗಳು ಆಗಿದ್ದು, ಕೆಲವು ಈಗಾಗಲೇ ಪ್ರಕಟಿಸಲಾಗಿದ್ದು, ಮತ್ತೆ ಕೆಲವನ್ನು ಮುಂದೆ ಪ್ರಕಟಿಸಲಾಗುವುದು. ಆ ಪೈಕಿ ಪ್ರಮುಖ ಒಪ್ಪಂದಗಳು ಹೀಗಿವೆ…

 • ಆಂಧ್ರ ಪ್ರದೇಶ ಸ್ಮಾರ್ಟ್ ಸಿಟಿ ಯೋಜನೆ
 • ಆಂಧ್ರ ಪ್ರದೇಶದಲ್ಲಿ ಹಡಗು ನಿರ್ಮಾಣ
 • ಹರ್ಯಾಣ ಸ್ಮಾರ್ಟ್ ಸಿಟಿ ಯೋಜನೆ
 • ರೊಸ್ನೆಫ್ಟ್ ಮತ್ತು ಎಸ್ಸರ್ ಆಯಿಲ್ ತೈಲ ಸಂಸ್ಥೆಗಳ ಅಭಿವೃದ್ಧಿ
 • ರೊಸ್ನೆಫ್ಟ್ ಮತ್ತು ಒವಿಎಲ್ ನಡುವಣ ಇಂಧನ ಒಪ್ಪಂದ
 • ನಾಗ್ಪುರ, ಸಿಖಂದರಾಬಾದ್, ಹೈದರಾಬಾದ್ ನಡುವೆ ಹೈ ಸ್ಪೀಡ್ ರೈಲ್ವೇ
 • ಕ್ಯಾಮೊವ್ 226 ಹೆಲಿಕಾಪ್ಟರ್ ಒಪ್ಪಂದ
 • 2016 ಮತ್ತು 17ರ ಇಂಧನ ಸಹಕಾರ ಒಪ್ಪಂದ
 • ಭಾರತ ಮತ್ತು ರಷ್ಯಾ ವಿದೇಶಾಂಗ ಸಚಿವಾಲಯದ ನಡುವಣ ಸಲಹೆಗಳಿಗೆ ರಾಜತಾಂತ್ರಿಕ ಮಾರ್ಗ
 • ಸೈಬರ್ ಭದ್ರತೆಯ ಒಡಂಬಡಿಕೆ
 • ರಷ್ಯಾದಿಂದ ಫ್ರಿಗೆಟ್ಸ್ ಯುದ್ಧ ಹಡಗು ಖರೀದಿಗೆ ಸಂಬಂಧಿಸಿದಂತೆ ಎರಡು ಸರ್ಕಾರಗಳ ನಡುವಣ ಒಪ್ಪಂದ
 • ಎಸ್-400 ಕ್ಷಿಪಣಿ ವ್ಯವಸ್ಥೆ ಒಪ್ಪಂದ
 • ಜಾಗತಿಕ ಭದ್ರತೆಗೆ ಸಂಬಂಧಿಸಿದಂತೆ ಭಾರತ ರಷ್ಯಾದ ಸಹಭಾಗಿತ್ವ
 • ಕೂಡಂಕುಳಂ ಅಣುಸ್ಥಾವರದ 3 ಮತ್ತು 4ನೇ ಘಟಕಕ್ಕೆ ಸಂಬಂಧಿಸಿದ ಒಪ್ಪಂದ

Leave a Reply