ಅನಿವಾಸಿಗಳ ಸೆಳೆಯಲು ಮೋದಿ ಮಾದರಿ ಪ್ರಯತ್ನಿಸಿದ ಬಿಎಸ್ ವೈ, ಸೋಮವಾರ ಶ್ರೀನಿವಾಸ್ ಪ್ರಸಾದ್ ರಾಜಿನಾಮೆ, ಉಕ್ಕಿನ ಫ್ಲೈಓವರ್ ಸಮರ್ಥಿಸಿಕೊಂಡ ಜಾರ್ಜ್, ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಅಗತ್ಯ ಅಂದ್ರು ಸಿಎಂ, ವಾರಣಾಸಿಯಲ್ಲಿ ಕಾಲ್ತುಳಿತಕ್ಕೆ 19 ಸಾವು

ಶನಿವಾರ ಬ್ಯಾಂಕ್ವೆಟ್ ಹಾಲಿನಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಆಂಜನೇಯ ಮತ್ತಿತರರು ಪಾಲ್ಗೊಂಡಿದ್ದರು.

ಡಿಜಿಟಲ್ ಕನ್ನಡ ಟೀಮ್:

ಅನಿವಾಸಿ ಭಾರತೀಯರ ಜತೆ ಶೋಭಾ-ಬಿಎಸ್ ವೈ ಚರ್ಚೆ

ಕಳೆದ ಲೋಕ ಸಭೆ ಚುನಾವಣೆಗೂ ಮುನ್ನ ಹಾಗೂ ಪ್ರಧಾನಿಯಾದ ನಂತರ ನರೇಂದ್ರ ಮೋದಿ ಅನಿವಾಸಿ ಭಾರತೀಯರ ಜತೆಗಿನ ಸಂಪರ್ಕ ಹಾಗೂ ನಿರ್ವಹಣೆ ಪ್ರಮುಖ ಅಂಶ.ಅನೇಕ ಅನಿವಾಸಿ ಭಾರತೀಯರು ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರವೂ ಸೇರಿದಂತೆ ಹಲವು ಬಗೆಯಲ್ಲಿ ಮೋದಿಯವರನ್ನು ಬೆಂಬಲಿಸಿದ್ದರು.

ಈ ಮಾದರಿಯನ್ನು ಕರ್ನಾಟಕದಲ್ಲೂ ಅನುಸರಿಸುವ ಯತ್ನ ಯಡಿಯೂರಪ್ಪನವರದ್ದು. ಬಿಜೆಪಿ ಐಟಿ ವಿಭಾಗದ ಉತ್ಸಾಹಿ ಯುವಕರ ಐಡಿಯಾ  ಇದ್ದಂತಿರುವ ಇದು ಹೇಗೆ ಪ್ರಭಾವ ಬೀರಲಿದೆ ಎಂಬುದು ಕಾದು ನೋಡಬೇಕಾದ ಸಂಗತಿ. ಪ್ರಯತ್ನವಂತೂ ಆರಂಭವಾಗಿದೆ.  ಪಕ್ಷದ ಕಚೇರಿಯಲ್ಲಿ ಇಂದು ಸಂಸದೆ ಶೋಭಾ ಕರಂದ್ಲಾಜೆ ಜತೆಗೂಡಿ ಅನಿವಾಸಿ ಭಾರತೀಯರ ಜತೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತನಾಡಿದ ಯಡಿಯೂರಪ್ಪ ಮುಂಬರುವ ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬಂದು ಭಾಗವಹಿಸಬೇಕು ಹಾಗೂ ತಮ್ಮ ಪಕ್ಷಕ್ಕೆ ಬೆಂಬಲ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ವೇಳೆ ಯಡಿಯೂರಪ್ಪನವರು ಹೇಳಿದಿಷ್ಟು…

‘2018ರ ಏಪ್ರಿಲ್- ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ನಮ್ಮ ಜತೆ ನೀವು ಸಕ್ರಿಯವಾಗಿ ಭಾಗವಹಿಸಬೇಕು. ಈ ಸಂದರ್ಭದಲ್ಲಿ ನಮಗೆ ಬೆಂಬಲಿಸಿ. ಪಕ್ಷ ಅಧಿಕಾರಕ್ಕೆ ಬಂದರೆ ನಿಮ್ಮೊಂದಿಗೆ ರಾಜ್ಯದ ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತೇನೆ.

ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ವಿಫುಲ ಅವಕಾಶಗಳಿವೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಹೆಚ್ಚಿನ ಒತ್ತಡ ಇದೆ. ರಾಜ್ಯದ ಇತರೆ ಕಡೆಗಳಲ್ಲೂ ಕೈಗಾರಿಕೆಗೆ ಅವಕಾಶ ಇರುವುದರಿಂದ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಇತರೆ ಪ್ರಮುಖ ಜಿಲ್ಲೆಗಳಲ್ಲೂ ಕೈಗಾರಿಕೆಗೆ ಅವಕಾಶ ನೀಡಲಾಗುವುದು’ ಎಂದು ತಮ್ಮ ಮುಂದಿನ ಕಾರ್ಯ ಯೋಜನೆಗಳ ನೀಲಿ ನಕ್ಷೆಯನ್ನು ಅನಿವಾಸಿ ಭಾರತೀಯರ ಮುಂದೆ ವಿವರಿಸಿದರು.

ಇದರ ಜತೆಗೆ ಕಾವೇರಿ ಜಲವಿವಾದವನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು. ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರಗಳ ನಡುವೆ ಉದ್ಭವಿಸಿರುವ ಮಹದಾಯಿ ನದಿ ನೀರಿನ ವಿವಾದದ ಪರಿಹಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಈಗಾಗಲೇ ಒಂದು ಹೆಜ್ಜೆ ಮುಂದಿಟ್ಟಿದೆ. ಮುಂದಿನ ಹೆಜ್ಜೆಯನ್ನು ಕಾಂಗ್ರೆಸ್ ಇಡಬೇಕು. ಅಕ್ಟೋಬರ್ 19ರಂದು ರಾಜ್ಯದಲ್ಲಿ ನಡೆಯಲಿರುವ ಸರ್ವಪಕ್ಷಗಳ ಸಭೆಯಲ್ಲಿ ನಾವು ಭಾಗವಹಿಸಿ ನಮ್ಮ ಅಭಿಪ್ರಾಯ ತಿಳಿಸುತ್ತೇವೆ.ಈ ವಿಷಯದಲ್ಲೂ ಎಲ್ಲ ಪಕ್ಷಗಳು ಮುತ್ಸದ್ದಿತನ ತೋರಿದರೆ ಸಮಸ್ಯೆ ಪರಿಹಾರವಾಗಲಿದೆ ಎಂದರು.

ಶ್ರೀನಿವಾಸ್ ಪ್ರಸಾದ್ ರಾಜಿನಾಮೆ

ಮಾಜಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ಸೋಮವಾರ ಮಧ್ಯಾಹ್ನ 12 ಗಂಟೆಗೆ ರಾಜೀನಾಮೆ ಸಲ್ಲಿಸಲಿದ್ದಾರೆ. ವಿಧಾನ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ್ ಅವರನ್ನು ಭೇಟಿ ಮಾಡಿ, ತಾವು ಪ್ರತಿನಿಧಿಸುವ ನಂಜನಗೂಡು ಕ್ಷೇತ್ರದ ಶಾಸಕ ಸ್ಥಾನಕ್ಕೆ ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡುತ್ತಿದ್ದು, ಇದನ್ನು ಅಂಗೀಕರಿಸುವಂತೆ ಮನವಿ ಮಾಡಿಕೊಳ್ಳಲಿದ್ದಾರೆ.

ಸ್ಟೀಲ್ ಫ್ಲೈಓವರ್ ಸಮರ್ಥಿಸಿಕೊಂಡ್ರು ಸಚಿವ ಜಾರ್ಜ್

ಬೆಂಗಳೂರಿನ ಜನರ ಕೆಂಗಣ್ಣಿಗೆ ಗುರಿಯಾಗಿರುವ ಚಾಲುಕ್ಯ ವೃತ್ತದಿಂದ ಹೆಬ್ಬಾಳವರೆಗಿನ ಸ್ಟೀಲ್ ಫ್ಲೈ ಓವರ್ ಯೋಜನೆಯನ್ನು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಸಮರ್ಥಿಸಿಕೊಂಡಿದ್ದಾರೆ. ‘ಇದು ಬಿಜೆಪಿ ಸರ್ಕಾರದ ಅವಧಿಯಲ್ಲಿ ರೂಪುಗೊಂಡ ಯೋಜನೆ. ಈಗ ಅವರೇ ಅದನ್ನು ವಿರೋಧಿಸುತ್ತಿದ್ದಾರೆ ಎಂದರು.

ಹೆಬ್ಬಾಳದ ಉದ್ದಕ್ಕೂ ಉಕ್ಕಿನ ಸೇತುವೆಯ ಪ್ರಯೋಜನ ಜನರಿಗಾಗಲಿದೆ. ಕೆಲವರ ವಿರೋಧದ ಮಾತ್ರಕ್ಕೆ ಯೋಜನೆಯನ್ನು ಅನುಷ್ಟಾನಗೊಳಿಸದೆ ಇರಲಾಗುವುದಿಲ್ಲ. ಅಲ್ಲದೆ ಎತ್ತಿನಹೊಳೆ ಸೇರಿದಂತೆ ಹಲವು ಯೋಜನೆಗಳನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಮುಂದಿನ ಪೀಳಿಗೆಗೆ ನೀರು ಲಭ್ಯವಾಗಬೇಕಾದರೆ ನೀರಿನ ನಿರ್ವಹಣೆ ವಿಷಯದಲ್ಲಿ ಜಾಗರೂಕರಾಗಿರಬೇಕು. ಈ ಬಾರಿ ಕೇರಳದಿಂದ ಕರ್ನಾಟಕದವರೆಗೆ ಎಲ್ಲೂ ವಾಡಿಕೆ ಮಳೆ ಆಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರೈತರು ಹಾಗೂ ಜನತೆ ನೀರಿನ ಮೌಲ್ಯಯುತ ನಿರ್ವಹಣೆ ಮಾಡದಿದ್ದರೆ ನೀರಿನ ಕ್ಷಾಮ ಎದುರಾಗುವುದು ಖಚಿತ. ಹೀಗಾಗಿ ಕಾವೇರಿ ಜಲಾನಯನ ಪ್ರದೇಶಗಳಲ್ಲಿರುವ ರೈತರು ಹಾಗೂ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು, ತಪ್ಪಿದಲ್ಲಿ ರಾಜ್ಯ ನೀರಿನ ಗಂಭೀರ ಕೊರತೆಗೆ ಸಿಲುಕಲಿದೆ’ ಎಂದರು.

ಜನಸಂಖ್ಯೆ ಅನುಗುಣವಾಗಿ ಪರಿಶಿಷ್ಟರಿಗೆ ಉದ್ಯೋಗ ಮೀಸಲು

ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗದಲ್ಲಿ ಮೀಸಲು ಒದಗಿಸುವುದು ಅನಿವಾರ್ಯ. ಹೀಗಾಗಿ ಮೀಸಲಾತಿಯ ಪ್ರಮಾಣವನ್ನು ಶೇಕಡಾ ಐವತ್ತಕ್ಕಿಂತ ಹೆಚ್ಚು ಮಾಡುವ ಕುರಿತು ಪರಿಶೀಲನೆ ನಡೆಸಲಾಗಿದೆ ಎಂದಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.

ವಿಧಾನಸೌಧದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಿಸಲಾತಿ ಹೆಚ್ಚಳ ಮಾಡುವ ಸಂಬಂಧ ಕಾನೂನು ತಜ್ಞರೊಟ್ಟಿಗೆ ಮಾತುಕತೆ ನಡೆಸಲಾಗುವುದು. ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದೆ. ಆ ವ್ಯವಸ್ಥೆಯನ್ನು ಗೊಬ್ಬರ ಹಾಕಿ ಬಲವಾಗಿ ಬೆಳೆಸಲಾಗಿದೆ. ಜಾತಿ ವ್ಯವಸ್ಥೆ ಯ ಬೇರುಗಳನ್ನು ಸಡಿಲ ಮಾಡಬೇಕಿದೆ ಎಂದರು.

ಜಾತಿ ವ್ಯವಸ್ಥೆಯಲ್ಲಿ ಅಧಿಕಾರ ಎಂಬುದು ಮುಖ್ಯ. ಹೀಗಾಗಿ ಅಧಿಕಾರ ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು. ಸರ್ಕಾರ ಎಸ್ ಸಿಪಿ, ಟಿಎಸ್ ಪಿಯಲ್ಲಿ ₹ 19,545 ಕೋಟಿ ವೆಚ್ಚ ಮಾಡುತ್ತಿದ್ದೇವೆ. ಇದು ಉಪಕಾರ ಅಲ್ಲ. ಅದು ಪರಿಶಿಷ್ಟ ಜಾತಿ ಮತ್ತು ವರ್ಗದವರ ಹಕ್ಕು. ನಿಗದಿಪಡಿಸಿದ ಹಣ ಕಾಯಿದೆ ಪ್ರಕಾರ ವೆಚ್ಚ ಆಗಲೇಬೇಕು. ಯಾವುದೇ ಕಾರಣಕ್ಕೂ ನಿರುಪಯುಕ್ತವಾಗಬಾರದು. ಈ ವರ್ಷ ಖರ್ಚು ಆಗದಿದ್ದರೂ ಮುಂದಿನ ವರ್ಷ ಬಳಕೆ ಮಾಡಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.

ವಾರಾಣಸಿಯಲ್ಲಿ ಕಾಲ್ತುಳಿತಕ್ಕೆ 19 ಸಾವು

ವಾರಾಣಸಿಯಲ್ಲಿ ಬಾಬಾ ಜೈ ಗುರುದೇವ್ ಸಮಾಗಮ ಕಾರ್ಯಕ್ರಮ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಒಟ್ಟು 19 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇಲ್ಲಿನ ಐತಿಹಾಸಿಕ ರಾಜ್ ಘಾಟ್ ಸೇತುವೆ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಜನರು ಸೇರಿದ್ದ ಪರಿಣಾಮ ಕಾಲ್ತುಳಿತ ಸಂಭವಿಸಿದೆ ಎಂದು ವರದಿಗಳು ಬಂದಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆ ಪೈಕಿ ಕೆಲವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿವೆ.

Leave a Reply