‘ನಾನು ಅಧ್ಯಕ್ಷನಾದ್ರೆ ಭಾರತ- ಅಮೆರಿಕ ಬೆಸ್ಟ್ ಫ್ರೆಂಡ್ಸು’, ಹಿಂದುಗಳೆಂದರೆ ಬಹಳ ಗೌರವ- ಇದು ಡೊನಾಲ್ಡ್ ಟ್ರಂಪ್ ಬಣ್ಣನೆ

ಡಿಜಿಟಲ್ ಕನ್ನಡ ಟೀಮ್:

‘ನಾನು ಅಧ್ಯಕ್ಷನಾಗಿ ಆಯ್ಕೆಯಾದರೆ ಭಾರತ ಮತ್ತು ಅಮೆರಿಕ ದೇಶಗಳು ಅತ್ಯುತ್ತಮ ಸ್ನೇಹ ರಾಷ್ಟ್ರಗಳಾಗಲಿವೆ…’ ಹೀಗೊಂದು ಹೇಳಿಕೆ ಕೊಟ್ಟಿದ್ದಾರೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಡೊನಾಲ್ಡ್ ಟ್ರಂಪ್.

ಸದ್ಯ ಅಮೆರಿಕ ಹಾಗೂ ಭಾರತದ ಜತೆಗಿನ ಸ್ನೇಹ ಉತ್ತಮವಾಗಿದೆ ಎಂದಿರುವ ಡೊನಾಲ್ಡ್ ಟ್ರಂಪ್, ತಾನು ಅಧ್ಯಕ್ಷನಾದ ಮೇಲೆ ಭಾರತದ ಜತೆಗಿನ ಸ್ನೇಹವನ್ನು ಉತ್ತಮದಿಂದ ಅತ್ಯುತ್ತಮ ಹಂತಕ್ಕೆ ಕೊಂಡೊಯ್ಯುವುದಾಗಿ ತಿಳಿಸಿದ್ದಾರೆ. ಭಾನುವಾರ ನಡೆದ ಇಂಡೊ-ಅಮೆರಿಕ ಕಾರ್ಯಕ್ರಮದಲ್ಲಿ ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದರು. ಆ ಮೂಲಕ ಇದೇ ಮೊದಲ ಬಾರಿಗೆ ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿ ಇಂಡೊ-ಅಮೆರಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದಂತಾಗಿದೆ. ಈ ವೇಳೆ ಭಾರತ, ಪ್ರಧಾನಿ ಮೋದಿ ಹಾಗೂ ಹಿಂದೂ ಧರ್ಮದ ಬಗ್ಗೆ ಮಾತನಾಡಿದ ಟ್ರಂಪ್ ಹೇಳಿದಿಷ್ಟು…

‘ಭಾರತ ರಾಜತಾಂತ್ರಿಕ ವಿಚಾರದಲ್ಲಿ ಪ್ರಮುಖ ಅಭ್ಯರ್ಥಿ. ನಾನು ಅಧ್ಯಕ್ಷನಾಗಿ ಆಯ್ಕೆಯಾದರೆ ಉತ್ತಮ ಹಂತದಲ್ಲಿರುವ ಭಾರತ-ಅಮೆರಿಕ ನಡುವಣ ಸ್ನೇಹ ಅತ್ಯುತ್ತಮ ಮಟ್ಟಕ್ಕೆ ಹೋಗಲಿದೆ. ಅದರೊಂದಿಗೆ ನಾವಿಬ್ಬರೂ (ಭಾರತ ಮತ್ತು ಅಮೆರಿಕ) ಅತ್ಯುತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು.

ಭಾರತದ ಪ್ರಧಾನಿ ನರೇಂದ್ರ ಮೋದಿ ಹಲವು ಆರ್ಥಿಕ ಸುಧಾರಣ ನೀತಿಗಳ ಮೂಲಕ ಭಾರತವನ್ನು ಅತ್ಯುತ್ತಮ ಹಾದಿಯಲ್ಲಿ ಕೊಂಡೊಯ್ಯುತ್ತಿದ್ದಾರೆ. ಈ ರೀತಿಯಾದ ಸುಧಾರಣೆ ಅಮೆರಿಕಕ್ಕೂ ಅಗತ್ಯವಿದೆ. ಹೀಗಾಗಿ ಭವಿಷ್ಯದಲ್ಲಿ ನಾನು ಮೋದಿ ಜತೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ನಾನು ಹಿಂದೂ ಧರ್ಮದ ದೊಡ್ಡ ಅಭಿಮಾನಿ. ನಾನು ಆಯ್ಕೆಯಾದರೆ ಶ್ವೇತ ಭವನದಲ್ಲಿ ಭಾರತೀಯ ಪ್ರಜೆ ಮತ್ತು ಹಿಂದೂ ಧರ್ಮದವರು ನಮ್ಮ ಜತೆ ಸ್ನೇಹಿತರಾಗಿರುತ್ತಾರೆ.

ಸದ್ಯ ಜಾಗತಿಕ ಮಟ್ಟದಲ್ಲಿ ಸಮಸ್ಯೆಯಾಗಿರುವ ಇಸ್ಲಾಮಿಕ್ ಉಗ್ರವಾದವನ್ನು ಕಿತ್ತುಹಾಕಲು ಅಮೆರಿಕಕ್ಕೆ ಭಾರತದಿಂದ ಸಿಗುತ್ತಿರುವ ಬೆಂಬಲವನ್ನು ಪ್ರಶಂಶಿಸುತ್ತೇನೆ. ಮುಂಬೈ ದಾಳಿ ಸೇರಿದಂತೆ ಭಾರತವು ಉಗ್ರವಾದದ ಕ್ರೂರತೆಯನ್ನು ಕಂಡಿದೆ. ಮುಂಬೈ ನನಗೆ ಪ್ರಿಯವಾದ ನಗರ. ಅಲ್ಲಿ ಉಗ್ರರ ದಾಳಿ ಖಂಡನೀಯ. ನಾನು ಅಧ್ಯಕ್ಷನಾಗಿ ಆಯ್ಕೆಯಾದರೆ ಭಾರತದ ಜತೆಗೆ ಹೆಗಲಿಗೆ ಹೆಗಲು ಕೊಟ್ಟು ಮುಂದೆ ಸಾಗುತ್ತೇನೆ.’

ಡೊನಾಲ್ಡ್ ಟ್ರಂಪ್ ಅವರ ಭಾಷಣದ ಮಾತುಗಳಲ್ಲಿ ಚುನಾವಣೆಯ ಪ್ರಚಾರದ ಸ್ಟಂಟ್ ಕೂಡ ಇತ್ತು. ಹಾಗೆಂದು ಇದು ಕೇವಲ ಚುನಾವಣಾ ಹೇಳಿಕೆ ಎಂದೇ ಪರಿಗಣಿಸುವುದು ಸೂಕ್ತವಲ್ಲ. ಕಾರಣ, ಪ್ರಸ್ತುತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುರೋಪಿಯನ್ ರಾಷ್ಟ್ರಗಳು ಭಾರತದ ಜತೆಗೆ ಉತ್ತಮ ಸಂಬಂಧವನ್ನು ಎದುರು ನೋಡುತ್ತಿವೆ. ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳ ಈ ನಡೆಯಿಂದಾಗಿ ಭಾರತದ ಜತೆಗಿನ ತನ್ನ ಸ್ನೇಹಕ್ಕೆ ಎಲ್ಲಿ ಹಿನ್ನಡೆಯಾಗುತ್ತದೋ ಎಂಬ ಎಚ್ಚರದಿಂದ ರಷ್ಯಾ ಸಹ ಭಾರತದ ಜತೆಗಿನ ತನ್ನ ಹಳೆಯ ಸ್ನೇಹವನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಹೀಗೆ ವಿಶ್ವದ ಬೇರೆ ಬೇರೆ ಬಲಿಷ್ಠ ರಾಷ್ಟ್ರಗಳು ಭಾರತ ತನ್ನ ಹೆಗಲ ಮೇಲೆ ಕೈ ಹಾಕಿಕೊಂಡು ಓಡಾಡುವಂತಾಗಲಿ ಎಂದು ಪ್ರಯತ್ನಿಸುತ್ತಿವೆ. ಅದೂ ಒಬ್ಬರಿಗೊಬ್ಬರು ಪೈಪೋಟಿ ಎಂಬ ರೀತಿಯಲ್ಲಿ.

ಈ ಎಲ್ಲ ಬೆಳವಣಿಗೆಗಳಿಂದ ಟ್ರಂಪ್ ಭಾರತದ ಸ್ನೇಹಕ್ಕೆ ಸಂಬಂಧಿಸಿದಂತೆ ನೀಡಿರುವ ಈ ಹೇಳಿಕೆ ಚುನಾವಣೆಗೂ ಹೊರತಾಗಿ ಭವಿಷ್ಯದ ಕುರಿತ ಚಿಂತನೆ ಇದೆ ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಿ ಸದ್ಯ ಜಾಗತಿಕ ಮಟ್ಟದಲ್ಲಿ ಭಾರತದ ಜತೆಗಿನ ಸ್ನೇಹ ಎಲ್ಲರ ಹಾಟ್ ಫೇವರಿಟ್ ಎಂದೇ ಹೇಳಬಹುದು.

Leave a Reply