‘ಉಗ್ರರ ತಾಯ್ನಾಡು ನಮ್ಮ ನೆರೆ ರಾಷ್ಟ್ರವಾಗಿರೋದು ದುರಾದೃಷ್ಟಕರ’ ಎಂದ ಮೋದಿ, ಬ್ರಿಕ್ಸ್ ವೇದಿಕೆಯಲ್ಲೂ ಮುಂದುವರಿದ ಪಾಕ್ ಮತ್ತು ಉಗ್ರವಾದ ವಿರುದ್ಧ ಭಾರತದ ಹೋರಾಟ

ಡಿಜಿಟಲ್ ಕನ್ನಡ ಟೀಮ್:

ಉರಿಯಲ್ಲಿನ ಭಾರತೀಯ ಸೇನಾ ನೆಲೆಯ ಮೇಲಿನ ದಾಳಿ ನಂತರ, ಇನ್ಯಾವುದೇ ಕಾರಣಕ್ಕೂ ಭಾರತವು ಪಾಕಿಸ್ತಾನವನ್ನು ಯಾವುದೇ ಹಂತದಲ್ಲೂ ಸಹಿಸುವುದಿಲ್ಲ ಎಂಬ ಮನಸ್ಥಿತಿಗೆ ಬಂದು ಬಿಟ್ಟಿದೆ. ಪರಿಣಾಮ ತನಗೆ ಸಿಕ್ಕ ಪ್ರತಿಯೊಂದು ವೇದಿಕೆಯಲ್ಲೂ ಪಾಕಿಸ್ತಾನ ಹಾಗೂ ಉಗ್ರರಿಗೆ ಆಶ್ರಯ ನೀಡುವ ಅದರ ದುರುದ್ದೇಶದ ಬಣ್ಣ ಬಯಲು ಮಾಡುತ್ತಲೇ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನವನ್ನು ಪ್ರತ್ಯೇಕಿಸುವ ಪ್ರಯತ್ನದಲ್ಲಿ ನಿರತವಾಗಿದೆ. ಇದಕ್ಕೆ ಬ್ರಿಕ್ಸ್ ರಾಷ್ಟ್ರಗಳ ಸಭೆಯೂ ಹೊರತಾಗಿಲ್ಲ.

ಬ್ರಿಕ್ಸ್ ರಾಷ್ಟ್ರಗಳ ಸಭೆಯನ್ನು ಭಾನುವಾರ ಅಧಿಕೃತವಾಗಿ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನ ವಿರುದ್ಧ ಮಾತಿನ ಚಾಟಿ ಬೀಸಿದರಲ್ಲದೇ ಬ್ರಿಕ್ಸ್ ಸಮೂಹದ ಎಲ್ಲ ರಾಷ್ಟ್ರಗಳೂ ಉಗ್ರವಾದದ ವಿರುದ್ಧ ಒಂದೇ ಧ್ವನಿಯಲ್ಲಿ ವಿರೋಧಿಸಬೇಕು ಎಂಬ ಕರೆ ನೀಡಿದರು. ಈ ವೇಳೆ ಮಾತನಾಡಿದ ಮೋದಿ ಹೇಳಿದ್ದು ಹೀಗೆ…

‘ಉಗ್ರರಿಗೆ ಆಶ್ರಯ ನೀಡುತ್ತಾ ಭಯೋತ್ಪಾದನೆಯ ತಾಯ್ನಾಡಾಗಿರುವ ದೇಶ, ಭಾರತದ ನೆರೆ ರಾಷ್ಟ್ರವಾಗಿರುವುದು ನಮ್ಮ ದುರಾದೃಷ್ಟ. ಈ ಭಯೋತ್ಪಾದನೆಯಿಂದ ಭಾರತದ ಮೇಲೆ ಸಾಕಷ್ಟು ಋಣಾತ್ಮಕ ಪರಿಣಾಮ ಬೀರುತ್ತಿದೆ. ಇದರಿಂದ ನಮ್ಮ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಿದ್ದು, ಪಾಕಿಸ್ತಾನದ ಉಗ್ರರ ಪ್ರೋತ್ಸಾಹ ನೀತಿ ಕೇವಲ ಭಾರತಕ್ಕಷ್ಟೇ ಮಾತ್ರವಲ್ಲ ವಿಶ್ವದ ಇತರ ದೇಶಗಳ ಮೇಲೂ ಪರಿಣಾಮ ಬೀರುತ್ತಿದೆ. ಹೀಗಾಗಿ ಎಲ್ಲ ರಾಷ್ಟ್ರಗಳು ಪಾಕಿಸ್ತಾನದ ಉಗ್ರವಾದದ ಪೋಷಣೆಯನ್ನು ಒಟ್ಟಾಗಿ ವಿರೋಧಿಸಬೇಕು.’

ಹೀಗೆ ಪಾಕಿಸ್ತಾನ ವಿರುದ್ಧ ಹರಿಹಾಯ್ದ ಮೋದಿಯ ಮಾತಿನ ಹಿಂದೆ ರಷ್ಯಾ ದೇಶ ಪಾಕಿಸ್ತಾನ ವಿಷಯದಲ್ಲಿ ಕಠಿಣ ನಿಲುವು ತೆಗೆದುಕೊಳ್ಳಬೇಕು ಎಂಬ ಸಂದೇಶವಿತ್ತು. ಅಲ್ಲದೆ ಪಾಕಿಸ್ತಾನದ ಜೈಶ್ ಎ ಮೊಹಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ನನ್ನು ವಿಶ್ವ ಸಂಸ್ಥೆ ಉಗ್ರರ ಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನಕ್ಕೆ ತಡೆಯಾಗಿರುವ ಚೀನಾ ತನ್ನ ನಿಲುವು ಬದಲಿಸಿಕೊಳ್ಳುವ ಅಗತ್ಯವಿದೆ ಎಂಬ ಎಚ್ಚರಿಕೆಯು ಅಡಕವಾಗಿತ್ತು.

ಇನ್ನು ಶನಿವಾರ ನಡೆದ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನಡುವಣ ಮಾತುಕತೆಯಲ್ಲಿ ಉಗ್ರ ಮಸೂದ್ ಅಜರ್ ಕುರಿತಂತೆ ಚೀನಾ ಸ್ಪಷ್ಟ ನಿಲುವು ವ್ಯಕ್ತಪಡಿಸಲಿಲ್ಲ. ಆದರೆ ಚೀನಾ, ತಾನು ಉಗ್ರವಾದದ ವಿರುದ್ಧ ನಿಂತಿದೆ ಎಂದು ಹೇಳಿತಾದರೂ ಇದರಿಂದ ಇಸ್ಲಾಮಾಬಾದ್ ಜತೆಗಿನ ಸಂಬಂಧವನ್ನು ಅನುಮಾನ ಪಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ಇತ್ತ ಚೀನಾ ಜತೆಗಿನ ಮಾತುಕತೆ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯ ವಕ್ತಾರ ವಿಕಾಸ್ ಸ್ವರೂಪ್, ‘ಅಜರ್ ಕುರಿತಂತೆ ಚೀನಾ ಜತೆಗೆ ನಾವು ನಿರಂತರ ಮಾತುಕತೆ ನಡೆಸುತ್ತಿದ್ದೇವೆ. ಚೀನಾ ನಮ್ಮ ವಾದದಲ್ಲಿನ ವಾಸ್ತವ ಅಂಶವನ್ನು ಆದಷ್ಟು ಬೇಗ ಅರ್ಥ ಮಾಡಿಕೊಳ್ಳುವ ವಿಶ್ವಾಸವಿದೆ’ ಎಂದಿದ್ದಾರೆ.

ಬ್ರಿಕ್ಸ್ ರಾಷ್ಟ್ರಗಳ ಸಭೆ ಜಾಗತಿಕ ಮಟ್ಟದಲ್ಲಿ ದೊಡ್ಡ ಪರಿಣಾಮ ಬೀರುವ ಸಾಮರ್ಥ್ಯವಿದೆ. ಕಾರಣ ವಿಶ್ವದ ಶೇ.40ರಷ್ಟು ಜನಸಂಖ್ಯೆ ಈ ಐದು ರಾಷ್ಟ್ರಗಳಲ್ಲಿದೆ. ಹೀಗಾಗಿ ಇಲ್ಲಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಮಹತ್ವವಿದೆ. ಇದೇ ಕಾರಣಕ್ಕೆ ಭಾರತ ಈ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡು ಪಾಕಿಸ್ತಾನದ ವಿರುದ್ಧ ತನ್ನ ಹೋರಾಟ ಮುಂದುವರಿಸಿದೆ.

Leave a Reply