ಬ್ರಿಕ್ಸ್ ಸಭೆಯಲ್ಲಿ ಮೋದಿ ಮಾತು, ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ, ಮತ್ತೊಬ್ಬ ಆಪ್ ಶಾಸಕನ ಬಂಧನ

Citizens of Bengaluru take part in Human Chain Protest against Steel Bridge Flyover from Chalukya Circle to Mekhri Circle in Bengaluru on Sunday.

ರಾಜ್ಯ ಸರ್ಕಾರ ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೂ ನಿರ್ಮಿಸಲು ಹೊರಟಿರುವ ಉಕ್ಕಿನ ಮೇಲ್ಸೇತುವೆ ಯೋಜನೆಯನ್ನು ವಿರೋಧಿಸಿ ನಗರದ ಜನರು ಭಾನುವಾರ ಚಾಲುಕ್ಯ ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ಈ ಪ್ರದೇಶಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ಡಿಜಿಟಲ್ ಕನ್ನಡ ಟೀಮ್:

ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವವರು ಉಗ್ರಗಾಮಿಗಳಷ್ಟೇ ಅಪಾಯ: ಮೋದಿ

‘ಜಾಗತಿಕ ಮಟ್ಟದಲ್ಲಿ ಶಾಂತಿ ಸ್ಥಾಪನೆಗೆ ಉಗ್ರವಾದ ದೊಡ್ಡ ಸವಾಲು. ಈ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವವರು ಉಗ್ರಗಾಮಿಗಳಷ್ಟೇ ಅಪಾಯಕಾರಿ’ ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ.

ಗೋವಾದಲ್ಲಿ ನಡೆದ 8ನೇ ಬ್ರಿಕ್ಸ್ ರಾಷ್ಟ್ರಗಳ ಸಭೆ ಮುಕ್ತಾಯದ ನಂತರ ಮಾತನಡಾದಿ ಮೋದಿ ಈ ಸಭೆಯ ಹಾಗೂ ಇಲ್ಲಿ ತೆಗೆದುಕೊಂಡ ತೀರ್ಮಾನಗಳ ಬಗ್ಗೆ ಹೇಳಿದಿಷ್ಟು… ‘ಈಗಷ್ಟೇ ನಾವು 8ನೇ ಬ್ರಿಕ್ಸ್ ರಾಷ್ಟಗಳ ಸಭೆಯನ್ನು ಮುಕ್ತಾಯಗೊಳಿಸಿದ್ದೇವೆ. ಮೂರು ಹಂತಗಳಲ್ಲಿ ನಡೆದ ಈ ಸಭೆ ಪರಿಣಾಮಕಾರಿಯಾಗಿತ್ತು. ಇಲ್ಲಿನ ತೆಗೆದುಕೊಂಡ ನಿರ್ಧಾರಗಳು ನಮ್ಮ ಸಹಕಾರವನ್ನು ಉತ್ತಮ ದೃಷ್ಟಿಕೋನದತ್ತ ಸಾಗುವಂತೆ ಮಾಡಲಿವೆ ಎಂದು ಹೇಳಲು ಇಚ್ಛಿಸುತ್ತೇನೆ. ವಾಣಿಜ್ಯ ಸಹಕಾರದಲ್ಲಿ ವ್ಯಾಪಾರ ಸಮೂಹಗಳು ಪ್ರಬಲ ಅಂಶಗಳಾಗುತ್ತವೆ. ಅವರ ಸಹಕಾರದೊಂದಿಗೆ ನಮ್ಮ ಸಮಾಜದ ಸಂಪತ್ತು ಹೆಚ್ಚುತ್ತದೆ.

ಉಗ್ರವಾದ ಸ್ಥಳೀಯ ಹಾಗೂ ಜಾಗತಿಕ ಮಟ್ಟದ ಶಾಂತಿಗೆ ದೊಡ್ಡ ಪ್ರಮಾಣದಲ್ಲಿ ಮಾರಕ ಎಂಬುದು ಎಲ್ಲರ ಅಭಿಪ್ರಾಯ. ಅಷ್ಟೇ ಅಲ್ಲದೆ ಸುಸ್ಥಿರ ಆರ್ಥಿಕತೆಗೂ ಪೆಟ್ಟು ಬೀಳಲಿದೆ. ಉಗ್ರವಾದಕ್ಕೆ ಆಶ್ರಯ, ಪ್ರೋತ್ಸಾಹ ನೀಡುತ್ತಿರುವವರು ಉಗ್ರಗಾಮಿಗಳಷ್ಟೇ ಅಪಾಯಕಾರಿ. ಈ ಸಮಸ್ಯೆಯನ್ನು ನಿವಾರಿಸಲು ನಾವೆಲ್ಲರು ಒಟ್ಟಿಗೆ ನಿರ್ಧರಿಸಿದ್ದೇವೆ. ಇನ್ನು ಪ್ಯಾರಿಸ್ ನ ಹವಾಮಾನ ಒಪ್ಪಂದಕ್ಕೆ ಸಹಿಹಾಕಿದ್ದೇವೆ. ಅದು ಮಹಾತ್ಮಗಾಂಧಿ ಅವರ ಜನ್ಮದಿನವಾದ ಅ.2ರಂದು ಒಪ್ಪಂದಕ್ಕೆ ಸಹಿ ಹಾಕಿರುವುದು ಹೆಮ್ಮೆಯ ಸಂಗತಿ.

ಬ್ರಿಕ್ಸ್ ರಾಷ್ಟಗಳು ಈ ಸಭೆಯಲ್ಲಿ ಕೃಷಿ ಸಂಶೋಧನೆ ವೆದಿಕೆ, ರೈಲ್ವೆ ಸಂಶೋಧನಾ ಸಂಪರ್ಕ, ಕ್ರೀಡಾ ಪ್ರಾಧಿಕಾರ ಮತ್ತು ಯುವಕರ ಕೇಂದ್ರಿತ ವಿಚಾರವಾಗಿ ಏಕ ರೂಪ ದೃಷ್ಠಿಕೋನ ಹೊಂದಿವೆ. ಎನ್ ಡಿಬಿ ಒಂದು ವರ್ಷ ಪೂರೈಸಿರುವ ಬೆನ್ನಲ್ಲೇ ಅದು ಮೂಲ ಸೌಕರ್ಯ, ತಂತ್ರಜ್ಞಾನ ಮತ್ತು ನವೀಕರಿಸಬಹುದಾದ ಸಂಪನ್ಮೂಲ ಕ್ಷೇತ್ರದಲ್ಲೂ ಕಾರ್ಯ ನಿರ್ವಹಿಸಬೇಕು ಎಂಬ ನಿರ್ಧಾರ ತೆಗೆದುಕೊಂಡಿದ್ದೇವೆ.’

ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ

ಆರೆಸ್ಸೆಸ್ ಕಾರ್ಯಕರ್ತನನ್ನು ಶಿವಾಜಿನಗರದ ಕಮರ್ಷಿಯಲ್ ಸ್ಟ್ರೀಟ್ ನ ಕಾಮರಾಜ ರಸ್ತೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಭಾನುವಾರ ನಡೆದಿದೆ. ಕೊಲೆಯಾದ ವ್ಯಕ್ತಿ ರುದ್ರೇಶ್ (35) ಎಂದು ಹೇಳಲಾಗಿದೆ. ರುದ್ರೇಶ್ ಶಾಖೆ ಮುಗಿಸಿ ಗಣವೇಷದಲ್ಲಿದ್ದ ಬರುತ್ತಿದ್ದ ವೇಳೆ ಪಲ್ಸರ್ ಬೈಕಿನಲ್ಲಿ ಹೆಲ್ಮೆಟ್ ಧರಿಸಿ ಬಂದ ಇಬ್ಬರು ಇವರನ್ನು ಕೊಚ್ಚಿ ಹತ್ಯೆ ಮಾಡಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದು, ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದು ಸೈದ್ಧಾಂತಿಕ ನೆಲೆಯಲ್ಲಾದ ರಾಜಕೀಯ ಹತ್ಯೆಯೋ ಅಥವಾ ಭೂ ವ್ಯವಹಾರ ನಡೆಸುತ್ತಿದ್ದರೆನ್ನಲಾದ ರುದ್ರೇಶ್ ಅವರನ್ನು ವೈಯಕ್ತಿಕ ಕಾರಣಗಳಿಗೆ ಹತ್ಯೆ ಮಾಡಲಾಯಿತೋ ಎಂಬುದು ಈಗಿನ ಪ್ರಶ್ನೆ. ಸರ್ಕಾರ ಈ ಬಗ್ಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಆರೆಸ್ಸೆಸ್- ಬಿಜೆಪಿಗಳು ಒತ್ತಾಯಿಸಿವೆ.

ಗುಜರಾತಿನ ಉಸ್ತುವಾರಿ ಹೊತ್ತಿದ್ದ ಆಪ್ ಶಾಸಕ ಬಂಧನ

ದೆಹಲಿಯ ಆಮ್ ಆದ್ಮಿ ಪಕ್ಷದ ಮತ್ತೊಬ್ಬ ಶಾಸಕ ಹಾಗೂ ಗುಜರಾತಿನ ಉಸ್ತುವಾರಿ ವಹಿಸಿಕೊಂಡಿದ್ದ ಗುಲಾಬ್ ಸಿಂಗ್ ಅವರನ್ನು ದೆಹಲಿ ಪೊಲೀಸರು ಸೂರತ್ ನಲ್ಲಿ ಭಾನುವಾರ ಬಂಧಿಸಿದ್ದಾರೆ. ಗುಜರಾತ್ ನಲ್ಲಿ ಒಂದು ವಾರಗಳಿಂದ ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಗುಲಾಬ್ ಸಿಂಗ್ ಅವರನ್ನು ಭಾನುವಾರ ನಡೆಯಬೇಕಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಸಮಾವೇಶ ಆರಂಭಕ್ಕೂ ಕೆಲವೇ ಗಂಟೆಗಳ ಮುನ್ನ ಪೊಲೀಸರು ಬಂಧಿಸಿದ್ದಾರೆ. ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿರುವ ಗುಲಾಬ್ ಸಿಂಗ್ ತನಿಖೆಗೆ ಹಾಜರಾಗದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆಯೇ ಬಂಧನದ ವಾರೆಂಟ್ ನೀಡಲಾಗಿತ್ತು. ಬಂದನದ ನಿರೀಕ್ಷೆ ಹೊಂದಿದ್ದ ಗುಲಾಬ್ ಸಿಂಗ್ ಸೂರತ್ ಪೊಲೀಸ್ ಆಯುಕ್ತರ ಮುಂದೆ ಹಾಜರಾಗಿದ್ದರು. ಈ ವೇಳೆ ಜಾಮೀನು ರಹಿತ ವಾರೆಂಟ್ ತಂದ ದೆಹಲಿ ಪೊಲೀಸರು ಗುಲಾಬ್ ಸಿಂಗ್ ರನ್ನು ಬಂಧಿಸಿದರು. ಅದರೊಂದಿಗೆ ಬಂಧನವಾದ ಆಮ್ ಆದ್ಮಿ ಪಕ್ಷದ 14ನೇ ಶಾಸಕನಾದರು.

Leave a Reply