ಕಮ್ಯುನಿಸ್ಟ್ ಹಿಂಸಾಚಾರ ಕಾಂಗ್ರೆಸ್ ಪ್ರೇರಿತ ಭ್ರಷ್ಟಾಚಾರ ದೇಶದ 2 ಆತಂಕಗಳು: ರಾಜೀವ್ ಚಂದ್ರಶೇಖರ್, ಏಳು ವರ್ಷದ ಬಾಲಕನನ್ನೂ ಬಿಡದ ಕಮ್ಯುನಿಸ್ಟ್ ಕ್ರೌರ್ಯವೇಕೆ ರಾಷ್ಟ್ರೀಯ ಚರ್ಚೆಯಲ್ಲ?: ಮೀನಾಕ್ಷಿ ಲೇಖಿ

ಡಿಜಿಟಲ್ ಕನ್ನಡ ಟೀಮ್:

ಅಸಹಿಷ್ಣುತೆ, ಮಾನವತೆಯ ಪರ ವಾದ ಎಂದೆಲ್ಲ ಯಾವತ್ತೂ ರಾಷ್ಟ್ರೀಯ ಚರ್ಚೆಗಳಲ್ಲಿ ಮುಂಚೂಣಿಯಲ್ಲಿರುವ ಬುದ್ಧಿಜೀವಿಗಳು ಹಾಗೂ ಮಾಧ್ಯಮವೇಕೆ ಕೇರಳದ ಮಾನವತೆಯ ವಿರೋಧಿ ಕಮ್ಯುನಿಸ್ಟ್ ಹಿಂಸಾಚಾರದ ಬಗ್ಗೆ ಮಾತಾಡುತ್ತಿಲ್ಲ? ಈ ಹಿಂಸೆಗಳ ಕುರಿತೇಕೆ ಭಾರತೀಯರು ಕಳವಳದಿಂದ ಮಾತನಾಡುವ ವಾತಾವರಣ ಕಂಡುಬರುತ್ತಿಲ್ಲ?

ಕಮ್ಯುನಿಸ್ಟರ ಹಿಂಸಾಚಾರ ಹಾಗೂ ಹತ್ಯೆಗಳ ಬಗ್ಗೆ ಭಾನುವಾರ ಬೆಂಗಳೂರಿನ ಆರ್ ವಿ ಟೀಚರ್ ಕಾಲೇಜಿನ ಕಿಕ್ಕಿರಿದ ಸಭಾಂಗಣದಲ್ಲಿ ಮಂಥನ ವಿಚಾರವೇದಿಕೆಯಿಂದ ನಡೆದ ವಿಚಾರಗೋಷ್ಟಿಯಲ್ಲಿ ಧ್ವನಿಸಿದ ಪ್ರಶ್ನೆಗಳಿವು. ಈ ಎಡಪಂಥೀಯ ಪ್ರೇರಿತ ಕೊಲೆ- ಅತ್ಯಾಚಾರದ ಸನ್ನಿವೇಶವನ್ನು ರಾಷ್ಟ್ರಮಟ್ಟದಲ್ಲಿ ಜನರಿಗೆ ಪ್ರಚುರಪಡಿಸುವ ಅಂಗವಾಗಿ ನಡೆದ ವಿಚಾರಗೋಷ್ಟಿ ಇದಾಗಿತ್ತು. ಕಮ್ಯುನಿಸ್ಟರ ರಕ್ತದಾಹಕ್ಕೆ ತಮ್ಮೆರಡು ಕಾಲುಗಳನ್ನು ಕಳೆದುಕೊಂಡ ಬಿಜೆಪಿಯ ಸದಾನಂದ ಮಾಸ್ಟರ್ ಕಾರ್ಯಕ್ರಮದ ಕುತೂಹಲದ ಬಿಂದುವಾಗಿದ್ದರು. ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್ ಹಾಗೂ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ವಿಷಯದ ಬಗ್ಗೆ ಮಾತನಾಡಿದರು.

ರಾಜೀವ್ ಚಂದ್ರಶೇಖರ್:

‘ಈ ಕಾರ್ಯಕ್ರಮಕ್ಕೆ ಬರುವುದಕ್ಕೂ ಮುಂಚೆ ಉಕ್ಕಿನ ಸೇತುವೆ ಯೋಜನೆ ವಿರೋಧಿಸಿ ಮಾತನಾಡಿ ಬಂದಿರುವೆ. ಅದು ಕಾಂಗ್ರೆಸ್ ಪ್ರೇರಿತ ಭ್ರಷ್ಟಾಚಾರದ ಯತ್ನ. ಇಲ್ಲಿ ಚರ್ಚಿಸಬೇಕಿರುವ ವಿಷಯ ಕಮ್ಯುನಿಸ್ಟ್ ಹಿಂಸಾಚಾರದ ಕುರಿತಾದದ್ದು. ವಾಸ್ತವವಾಗಿ ದೇಶವನ್ನು ಕಾಡುತ್ತಿರುವ ಎರಡು ಮುಖ್ಯ ಆತಂಕಗಳು ಇವೇ ಆಗಿವೆ. ಮೊದಲನೆಯದು ಭ್ರಷ್ಟಾಚಾರ ಹಾಗೂ ಎರಡನೆಯದು ರಾಜಕೀಯ ಹತ್ಯೆಗಳ ಮೂಲಕ ಅಧಿಕಾರವನ್ನು ಕಾಪಾಡಿಕೊಳ್ಳುವ ಕಮ್ಯುನಿಸ್ಟ್ ಮಾದರಿ.

ಅಧಿಕಾರ ಕೇಂದ್ರ ದೆಹಲಿಯ ಸಮಸ್ಯೆ ಎಂದರೆ ಅದು ತನ್ನ ಸೀಮೆಯಾಚೆಗಿನ ವಿದ್ಯಮಾನಗಳ ಬಗ್ಗೆ ಆಸಕ್ತಿ ವಹಿಸುವುದಿಲ್ಲ. ಹೀಗಾಗಿ ಅಸಹಿಷ್ಣುತೆಯ ಬಗ್ಗೆ ಮಾತನಾಡುವ ಸಿಪಿಎಂನ ಸೀತಾರಾಂ ಯೆಚೂರಿ, ಪಶ್ಚಿಮ ಬಂಗಾಳ ಹಾಗೂ ಕೇರಳಗಳಲ್ಲಿ ಕಮ್ಯುನಿಸ್ಟರು ನಡೆಸಿರುವ ಅಸಹಿಷ್ಣು ಹಿಂಸೆ ಹಾಗೂ ಹತ್ಯೆಗಳ ಬಗ್ಗೆ ಮೌನವಹಿಸುತ್ತಾರೆ. ಈ ಕಮ್ಯುನಿಸ್ಟ್ ಹಿಂಸಾಚಾರ ನಿನ್ನೆಯೋ, ಮೊನ್ನೆಯೋ ಪ್ರಾರಂಭವಾಗಿರುವಂಥದ್ದಲ್ಲ. ದಶಕಗಳಿಂದ ನಡೆದುಬಂದಿರುವಂಥದ್ದು. ಆದರೆ ಎಷ್ಟುಮಂದಿಗೆ ಈ ಬಗ್ಗೆ ಅರಿವಿದೆ ಎಂಬುದೇ ಪ್ರಶ್ನೆ. ಹೀಗಾಗಿ ಈ ಬಗ್ಗೆ ಅರಿವನ್ನು ಮೂಡಿಸುವ ಕೆಲಸವಾಗಬೇಕು.

ಈ ಹತ್ಯಾಕಾಂಡ- ಹಿಂಸೆಗಳು ಯಾರದೋ ಕಲ್ಪನೆಯ ಕತೆಗಳಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಸದಾನಂದ ಮಾಸ್ಟರ್ ನಮ್ಮ ನಡುವೆ ಸಂತ್ರಸ್ತರಾಗಿ ಇದ್ದಾರೆ.

ರಕ್ತಪಾತವಿಲ್ಲದ ಕಡೆ ಕಮ್ಯುನಿಸ್ಟರಿಗೆ ಅಧಿಕಾರದಲ್ಲಿ ಉಳಿದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಒಂದರ್ಥದಲ್ಲಿ ಪಾಕಿಸ್ತಾನದ ನಾನ್ ಸ್ಟೇಟ್ ಆ್ಯಕ್ಟರ್ ಗಳಿದ್ದ ಹಾಗೆ. ಕೇರಳದ ‘ನಾನ್ ಸ್ಟೇಟ್ ವ್ಯಕ್ತಿ’ಗಳು ಅಲ್ಲಿನ ಅಧಿಕಾರ ಕೇಂದ್ರ ಹಾಗೂ ಸಂಸ್ಥೆಗಳನ್ನು ನಿಷ್ಕ್ರಿಯಗೊಳಿಸಿ ಈ ರಾಜಕೀಯ ಹತ್ಯೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.’

ಸಂವಾದದ ಸಂದರ್ಭದಲ್ಲಿ ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯೆಗಳಲ್ಲಿ ಬಂದ ಮಾತುಗಳು..

  • ಈ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಕೇರಳದಲ್ಲಿ ಕಮ್ಯುನಿಸ್ಟ್ ಪಕ್ಷ ಅಧಿಕಾರಕ್ಕೆ ಬಂದಿರುವುದು ಹೌದಾದರೂ ಶೇ. 15ರಷ್ಟು ಮತಪ್ರಮಾಣ ಎನ್ಡಿಎ ಕೂಟದ ಪಕ್ಷಗಳಿಗೆ ಸಿಕ್ಕಿದೆ. ಕೇರಳ ಕಾಂಗ್ರೆಸ್ ಮುಕ್ತವಾಗಿದೆ. ಇದು ಮೊದಲ ಹೆಜ್ಜೆ. ನಂತರದ ಹಂತಗಳಲ್ಲಿ ಕೇರಳವು ಕಮ್ಯುನಿಸ್ಟ್ ಮುಕ್ತವೂ ಆಗುವುದರಲ್ಲಿ ವಿಶ್ವಾಸವಿದೆ. ದೇಶದಲ್ಲಿ ಕಮ್ಯುನಿಸ್ಟ್ ರಾಜಕಾರಣ ಎರಡು ರಾಜ್ಯಗಳನ್ನು ಬಿಟ್ಟರೆ ಉಳಿದ ಕಡೆಗಳಲ್ಲಿ ಇಲ್ಲವಾಗಿದೆ. ಕಾಂಗ್ರೆಸ್ ಅನ್ನು ಮತದಾರ ದೇಶದೆಲ್ಲೆಡೆ ನೆಲೆ ಕಿತ್ತುಕೊಂಡಿದ್ದಾನೆ. ಕರ್ನಾಟಕದಲ್ಲಿ ಉಳಿಕೆ ಇದೆಯಾದರೂ ಮುಂದಿನ ಅವಧಿಗೆ ಅದೂ ಸರಿಯಾಗುವ ವಿಶ್ವಾಸವಿದೆ.
  • ಕಮ್ಯುನಿಸ್ಟ್ ಹಿಂಸಾಚಾರವೂ ಸೇರಿದಂತೆ ರಾಷ್ಟ್ರೀಯ ಚರ್ಚೆಗಳಲ್ಲಿ ರಾಹುಲ್ ಗಾಂಧಿಯಂಥವರಿಂದ ಉತ್ತರ ಬಯಸಬೇಕು ಎಂಬ ಧೋರಣೆ ಬಿಟ್ಟುಬಿಡಿ. ಅವರೆಲ್ಲ ಜನರ ಕಣ್ಣಲ್ಲಿ ಅದಾಗಲೇ ಅಪ್ರಸ್ತುತರಾಗಿದ್ದಾರೆ. ಸುತ್ತಲಿನ ಕೆಲವು ಚಮಚಾಗಳಷ್ಟೇ ಅಂಥವರ ಮಾತಿಗೆ ಬೆಲೆ ಕೊಡುತ್ತಿರುವುದು. ಚರ್ಚೆಗಳಲ್ಲಿ ಇಂಥವರ ಹೆಸರು ಪ್ರಸ್ತಾಪಿಸಿ ನಿರ್ಲಕ್ಷ್ಯಯೋಗ್ಯರಿಗೆ ಸುಮ್ಮನೇ ಪ್ರಚಾರ ಕೊಡುವುದು ಬೇಡ.

ಮೀನಾಕ್ಷಿ ಲೇಖಿ:

ಕೇರಳದಲ್ಲಿ ನಾವು ಕಾಣುತ್ತಿರುವುದು ಕಮ್ಯುನಿಸ್ಟರ ತಾಲಿಬಾನಿ ಉನ್ಮಾದ. ಬಿಜೆಪಿ ಬೆಂಬಲಿಗರೆಂಬ ಕಾರಣಕ್ಕೆ ಸಿಪಿಎಂ ಗೂಂಡಾಗಳು ಕೆಟಿ ಜಯಕೃಷ್ಣನ್ ಮಾಸ್ಟರ್ ಅವರನ್ನು ತರಗತಿ ನಡೆಸುತ್ತಿರುವಾಗಲೇ ಅವರ ವಿದ್ಯಾರ್ಥಿಗಳ ಎದುರಲ್ಲೇ ಕೊಚ್ಚಿ ಕೊಂದರು. 2016ರಲ್ಲಿ ಚುನಾವಣೆಯ ವಿಜಯ ಆಚರಿಸುವುದಕ್ಕೆ ಏಳು ವರ್ಷದ ಹುಡುಗ ಕಾರ್ತಿಕನ ಕೈಯನ್ನೇ ಕಡಿದರು! ಇವನ್ನೆಲ್ಲ ಗಮನಿಸಿದಾಗ ನಾವು ಯಾವ ಜಗತ್ತಿನಲ್ಲಿ ಜೀವಿಸುತ್ತಿದ್ದೇವೆ ಎಂಬ ಗಾಬರಿ ಕಾಡದಿರದೇ?

ಆದರೆ, ಕಾನೂನು ಸುವ್ಯವಸ್ಥೆ ರಾಜ್ಯ ಸರ್ಕಾರದ ವಿಷಯವಾಗಿರುವ, ನಾವು ಅಧಿಕಾರದಲ್ಲಿಲ್ಲದ ಉತ್ತರ ಪ್ರದೇಶದಲ್ಲಿ ಅಖ್ಲಾಕ್ ಹತ್ಯೆಗೆ ಬಿಜೆಪಿಯನ್ನು ಪ್ರಶ್ನಿಸುವ ಅಭಿಪ್ರಾಯ ನಿರೂಪಕರು ಹಾಗೂ ರಾಜಕೀಯ ವರ್ಗವು ಬಿಜೆಪಿ ಕಾರ್ಯಕರ್ತರ ನಿರಂತರ ಹತ್ಯೆಗಳ ಬಗ್ಗೆ ಚಕಾರವನ್ನೂ ಎತ್ತುತ್ತಿಲ್ಲ!

1957ರಲ್ಲಿ ಕೇರಳದಲ್ಲಿ ಮೊದಲಿಗೆ ಅಧಿಕಾರಕ್ಕೆ ಬಂದ ಸಿಪಿಎಂ ತನ್ನ ರಾಜಕೀಯ ಎದುರಾಳಿಗಳನ್ನು ಬೆಳೆಯದಂತೆ ಮಾಡಲು ಹತ್ಯೆ ಮತ್ತು ಫ್ಯಾಸಿಸಂ ನೀತಿಗೆ ಮೊರೆ ಹೋಗಿದೆ. ಕಮ್ಯುನಿಸ್ಟರ ಸಿದ್ಧಾಂತವೇ ಆ ನಿಟ್ಟಿನಲ್ಲಿ ರೂಪುಗೊಂಡಿದೆ. ಇದು ಕೇರಳಕ್ಕೆ ಸೀಮಿತವಾದುದಲ್ಲ. 1997ರಲ್ಲಿ ವಿಧಾನಸಭೆಯಲ್ಲಿ ಬುದ್ಧದೇವ ಭಟ್ಟಾಚಾರ್ಯರು ಪ್ರಶ್ನೆಯೊಂದಕ್ಕೆ ನೀಡಿದ ಉತ್ತರವಿದು… 1977ರಲ್ಲಿ ಅಲ್ಲಿ ಅವರ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ 1996ರವರೆಗೆ 28 ಸಾವಿರ ರಾಜಕೀಯ ಹತ್ಯೆಗಳಾಗಿವೆ ಅಂತ ಅವರು ವಿವರ ಕೊಟ್ಟಿದ್ದರು. 1997 ಮತ್ತು  2009ರ ಅವಧಿಯಲ್ಲಾದ ಹತ್ಯೆಗಳು 27,408. ಅಲ್ಲಿಗೆ ಕಮ್ಯುನಿಸ್ಟ್ ಆಡಳಿತದಲ್ಲಿ ಹತ್ಯೆಯಾದವರ ಸಂಖ್ಯೆ 55,408. ಇದರರ್ಥವೇನೆಂದರೆ, ನೀವು ವಾರ್ಷಿಕ ಸರಾಸರಿ ತೆಗೆದುಕೊಂಡರೆ 1787 ಹತ್ಯೆಗಳು ಹಾಗೂ ತಿಂಗಳಿಗೆ ಸರಾಸರಿ 149 ಹತ್ಯೆಗಳು ಹಾಗೂ ದಿನದ ಲೆಕ್ಕದಲ್ಲಿ ಐದು ಹತ್ಯೆಗಳು ಆಗುತ್ತವೆ. ಅಂದರೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕಾರಣಕ್ಕಾಗಿ ಈ ಅವಧಿಯಲ್ಲಿ ಪ್ರತೀ ನಾಲ್ಕು ತಾಸು 50 ನಿಮಿಷಗಳಿಗೊಂದರಂತೆ ರಾಜಕೀಯ ಹತ್ಯೆಯಾಗಿದೆ!

ಇದು ಕಮ್ಯುನಿಸ್ಟರ ಪಶ್ಚಿಮ ಬಂಗಾಳದ ಮಾದರಿ. ಇಂಥ ಬಂಗಾಳ ಮಾದರಿಯನ್ನು ಕೇರಳವೂ ಅನುಸರಿಸಿ ರಾಜಕೀಯ ಎದುರಾಳಿಗಳನ್ನು ಇಲ್ಲವಾಗಿಸಬೇಕು ಎಂದು ಕರೆ ಕೊಟ್ಟಿದ್ದು ಈಗ ಕೇರಳದ ಮುಖ್ಯಮಂತ್ರಿ ಆಗಿರುವ ಪಿಣರಾಯಿ ವಿಜಯನ್. 2008ರ ಮಾರ್ಚ್ ನಲ್ಲಿ ಪಕ್ಷದ ಕಣ್ಣೂರು ಕಚೇರಿಯಲ್ಲಿ ಮಾತನಾಡುತ್ತ ಪಿಣರಾಯಿ ರಕ್ತದಾಹದ ಮಾತುಗಳನ್ನಾಡಿದರೆಂದು ಆರೋಪಿಸಿದ್ದು ಮತ್ಯಾರೂ ಅಲ್ಲ, ಹಿಂದೊಮ್ಮೆ ಕಮ್ಯುನಿಸ್ಟ್ ಪಕ್ಷದ ಸಂಸದರೇ ಆಗಿದ್ದ ಎ.ಪಿ. ಅಬ್ದುಲ್ಲಾಕುಟ್ಟಿ. ‘ನಾವು ಬಂಗಾಳದವರಿಂದ ಕಲಿತುಕೊಳ್ಳಬೇಕು. ಅವರು ರಕ್ತ ನೆಲಕ್ಕೆ ಬೀಳಗೊಡದಂತೆ ಕಾರ್ಯ ಸಾಧಿಸುತ್ತಾರೆ. ಎದುರಾಳಿಗಳನ್ನು ಅಪಹರಿಸಿ ಕೊಂದು, ಶವಕ್ಕೆ ಉಪ್ಪುಹಾಕಿ ಹೂತುಬಿಡುತ್ತಾರೆ.ಈ ಬಗ್ಗೆ ಚಿತ್ರ, ಸುದ್ದಿ ಯಾವುದೂ ಜಗತ್ತಿಗೆ ತಿಳಿಯುವುದೇ ಇಲ್ಲ.’ ಎಂಬುದು ಪಿಣರಾಯಿ ಹೇಳಿದ್ದ ಮಾತುಗಳು.

ಕೇರಳದಲ್ಲಿ ಹತ್ಯೆ-ಹಿಂಸೆಗಳದ್ದು ಒಂದು ಕತೆಯಾದರೆ ಸಿಪಿಎಂನ ಮಾನವ ವಿರೋಧಿ ಕೆಲಸ ಇನ್ನೊಂದಿದೆ. ಕಣ್ಣೂರು- ಪಿಣರಾಯಿ ಕಡೆಯಲ್ಲಿ ಏನಿಲ್ಲವೆಂದರೂ 200 ಮನೆಗಳನ್ನು ನಾಶಪಡಿಸಲಾಗಿದೆ. ಹಳ್ಳಿಯಲ್ಲಿ ಒಂದು ಮನೆ ಕಟ್ಟುವುದೆಂದರೆ ದುಡಿಮೆಯ ಶೇ. 80 ಭಾಗ ಹಾಕಿರುತ್ತಾರೆ. ಅವರ ಜೀವನವನ್ನೇ ಕಸಿಯುವ ಕ್ರೌರ್ಯ ಇದು.

ಅಲ್ಲಿನ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯನ್ನು ಹಾಡಹಗಲೇ ಎಳೆದು ಥಳಿಸಲಾಗಿತ್ತು. ನಾನಲ್ಲಿಗೆ ಹೋದಾಗ ಆಕೆ ಆಸ್ಪತ್ರೆ ಸೇರಿ 4 ದಿನಗಳಾಗಿದ್ದವು. ಎಕ್ಸರೇ ವರದಿ ಸಹ ಬಂದಿರಲಿಲ್ಲ. ಹಾಗಂತ ಆಸ್ಪತ್ರೆಯವರು ಮನೆಗೂ ಬಿಟ್ಟುಕೊಡುತ್ತಿರಲಿಲ್ಲ. ಏಕೆಂದರೆ ದೇಹಕ್ಕೆ ಆಗಿರುವ ಗಾಯದ ಬಗ್ಗೆ ಯಾವ ದಾಖಲೆಗಳೂ ಸಿಗಬಾರದು, ಆಕೆ ಖಾಸಗಿ ಆಸ್ಪತ್ರೆಗೂ ಹೋಗಬಾರದು ಎಂಬ ಸಂಚು.

ಹೀಗಾಗಿ ಇಲ್ಲಿ ಪ್ರಕರಣವನ್ನು ನ್ಯಾಯಾಲಯದ ಮುಂದೆ ತರುವಷ್ಟರಲ್ಲೇ ಸಾಮಾನ್ಯ ಕಾರ್ಯಕರ್ತನಿಗೆ ಸಾಕುಬೇಕಾಗಿರುತ್ತದೆ. ಎಲ್ಲ ಹಂತಗಳಲ್ಲೂ ಲೋಪಗಳನ್ನೆಸಗಿ ಕಮ್ಯುನಿಸ್ಟ್ ಗೂಂಡಾಗಳನ್ನು ರಕ್ಷಿಸಲಾಗುತ್ತದೆ. ಅಷ್ಟಾಗಿಯೂ ಕೆಲವು ಪ್ರಕರಣಗಳಲ್ಲಿ ತೀರ್ಪುಗಳು ಬಂದಿವೆ. ಅಂಥ ಒಂದು ಪ್ರಕರಣದಲ್ಲಿ ಕಮ್ಯುನಿಸ್ಟ್ ಗೂಂಡಾಗಳಿಗೆ ಶಿಕ್ಷೆ ಘೋಷಣೆಯಾದಾಗ, ಆ ಆದೇಶ ನೀಡಿದ ಹೈಕೋರ್ಟ್ ನ್ಯಾಯಮೂರ್ತಿಗಳ ಪ್ರತಿಕೃತಿಯನ್ನು ಸಾರ್ವಜನಿಕವಾಗಿ ದಹಿಸಿ ಪ್ರತಿಭಟಿಸಿದರು ಸಿಪಿಎಂ ಕಾರ್ಯಕರ್ತರು! ಇಂಥದ್ದನ್ನೆಲ್ಲಾದರೂ ಕೇಳಿದ್ದೀರಾ?

ಕಮ್ಯುನಿಸ್ಟರು ಹೇಳುವ ಸಿದ್ಧಾಂತಕ್ಕೂ ಆಚರಣೆಗೂ ತಾಳೆಯೇ ಇಲ್ಲ. ಲಿಂಗ ಸಮಾನತೆ ಬಗ್ಗೆ ಮಾತನಾಡುವ ಇವರ ಪಾಲಿಟ್ ಬ್ಯೂರೊದಲ್ಲಿ ಮಹಿಳೆಯರಿಗೆ ಸ್ಥಾನವಿಲ್ಲ. ಕಮ್ಯುನಿಸ್ಟ್ ಪಕ್ಷದ ಮುಂಚೂಣಿಯಲ್ಲಿ ಎಷ್ಟು ದಲಿತ ನಾಯಕರಿದ್ದಾರೆ? ಇಲ್ಲಿಯೂ ಪ್ರಾತಿನಿಧ್ಯ ಸಿಗುವುದು ಕಾಂಗ್ರೆಸ್ ರೀತಿಯಲ್ಲೇ ಕುಟುಂಬ ಉದ್ಯಮಕ್ಕೆ.

ಇಂಥ ಕಮ್ಯುನಿಸ್ಟ್ ಹಿಂಸಾಚಾರದ ಬಗ್ಗೆ ಸಾರ್ವಜನಿಕ ಅಭಿಪ್ರಾಯವೊಂದು ರೂಪುಗೊಳ್ಳಬೇಕಿದೆ.

ಸಂವಾದ ಸಂದರ್ಭದಲ್ಲಿ ಲೇಖಿಯವರ ಪ್ರತಿಕ್ರಿಯೆಗಳು…

  • ಸಂಸತ್ತಿನಲ್ಲಿ ಈ ಬಗ್ಗೆ ಪ್ರಶ್ನೆ ಎತ್ತಿಲ್ಲ ಎಂಬ ಆಕ್ಷೇಪ ಸರಿಯಲ್ಲ. ಹಿಂದೆಯೂ ಪ್ರಸ್ತಾಪಿಸಿದ್ದೇನೆ. ಮುಂದೆಯೂ ಈ ಬಗ್ಗೆ ಪ್ರಖರವಾಗಿ ವಾದ ಮಂಡನೆ ಆಗಲಿದೆ. ಕಾನೂನಾತ್ಮಕ ಹಾದಿಗಳ ಪ್ರಯತ್ನವೂ ನೇಪಥ್ಯದಲ್ಲಿ ಸಾಗಿಯೇ ಇದೆ. ರಾಜ್ಯಪಾಲರ ಗಮನ ಸೆಳೆಯುವ ಕಾರ್ಯವೂ ಆಗಿದೆ. ಕಾನೂನು ಸುವ್ಯವಸ್ಥೆ ರಾಜ್ಯ ಸರ್ಕಾರದ ವಿಷಯವಾದ್ದರಿಂದ ಕಣ್ಣೂರನ್ನು ಹಿಂಸಾಗ್ರಸ್ತ ಜಿಲ್ಲೆ ಎಂದು ಕೇಂದ್ರ ಸರ್ಕಾರವು ಘೋಷಿಸಲು ಆಗುವುದಿಲ್ಲ. ಅದಕ್ಕೆ ರಾಜ್ಯದ ಅನುಮೋದನೆ ಬೇಕಾಗುತ್ತದೆ.
  • ಕನ್ನಡಿಗರು ಕೇರಳದ ಹಿಂಸಾಗ್ರಸ್ತರಿಗೆ ಆತ್ಮಸ್ಥೈರ್ಯ ತುಂಬುವ ಪ್ರಯತ್ನಗಳಿಗೆ ಕೈಜೋಡಿಸಿ.

1 COMMENT

Leave a Reply