ತಮ್ಮ ಪಾಳೆಯ ಬಿಟ್ಟಿದ್ದಕ್ಕೆ ಸದಾನಂದ ಮಾಸ್ಟರ್ ಅವರ ಕಾಲು ಕತ್ತರಿಸಿದರು ಕೇರಳದ ಕಮ್ಯುನಿಸ್ಟರು, ಅಷ್ಟಾಗಿಯೂ… ನನ್ನನ್ನು ಸಂತ್ರಸ್ತನೆನ್ನಬೇಡಿ ಸೇನಾನಿಯೆನ್ನಿ ಎನ್ನುತ್ತಿದ್ದಾರಿವರು!

ಡಿಜಿಟಲ್ ಕನ್ನಡ ಟೀಮ್:

ಕಮ್ಯುನಿಸ್ಟರ ಹಿಂಸಾಚಾರದ ಕುರಿತು ಬೆಂಗಳೂರಿನಲ್ಲಿ ಆಯೋಜನೆಯಾಗಿದ್ದ ವಿಚಾರಗೋಷ್ಟಿಯಲ್ಲಿ ಬಿಜೆಪಿಯ ಸದಾನಂದ ಮಾಸ್ಟರ್ ತಮ್ಮ ಮೇಲಿನ ಕತೆಯನ್ನು ಬಿಚ್ಚಿಟ್ಟರು. ಮಲಯಾಳಂನಲ್ಲಿಯೇ ಮಾತನಾಡಿದರೂ ಅವರ ಭಾವ ವಿಚಾರಗಳು ಕೇಳುಗರನ್ನು ತಾಗಿದ್ದಕ್ಕೆ ಭಾಷಣ ಮುಗಿಯುತ್ತಲೇ ಸಭಾಗೃಹದಲ್ಲಿದ್ದವರೆಲ್ಲ ಎದ್ದು ನಿಂತು ಚಪ್ಪಾಳೆ ತಟ್ಟಿದ್ದೇ ಸಾಕ್ಷಿಯಾಯಿತು. ಅವರ ಮಾತಿನ ನಂತರ ಕೇರಳ ಆರೆಸ್ಸೆಸ್ ಪ್ರಮುಖರಾದ ಜೆ. ನಂದಕುಮಾರ್ ಆ ಮಾತುಗಳನ್ನು ಆಂಗ್ಲಕ್ಕೆ ಅನುವಾದಿಸಿದರು.

ಕಣ್ಣೂರನ್ನು ಕೇಂದ್ರವಾಗಿರಿಸಿಕೊಂಡಿರುವ ಕೇರಳ ಕಮ್ಯುನಿಸ್ಟರ ಹಿಂಸಾಕಾಂಡ ಅದೇಕೆ ಅಷ್ಟು ತೀವ್ರವಾಗಿದೆ ಎಂಬುದಕ್ಕೆ ಸದಾನಂದ ಮಾಸ್ಟರ್ ಹೇಳಿಕೊಂಡ ಸ್ವಂತದ ಕತೆಯಲ್ಲೇ ಉತ್ತರಗಳು ಸಿಗುತ್ತ ಹೋಗುತ್ತವೆ.

ಅವರು ಹೇಳಿದ್ದು- ‘ನಾನೀಗ ನಿಮ್ಮ ಮುಂದೆ ಕೃತಕ ಕಾಲುಗಳ ಸಹಾಯದಿಂದ ನಿಂತಿದ್ದೇನೆ. 26 ವರ್ಷಗಳಿಂದಲೂ ಇದೇ ನನ್ನ ವಾಸ್ತವವಾಗಿದೆ. ಆದರೂ ನನ್ನನ್ನು ಅದೃಷ್ಟವಂತ ಎಂದೇ ಕರೆದುಕೊಳ್ಳುತ್ತೇನೆ. ಏಕೆಂದರೆ, ಮಾನವತೆಯ ವಿರೋಧಿಗಳಾಗಿರುವ ಕಮ್ಯುನಿಸ್ಟರ ವಿರುದ್ಧ ಹೋರಾಡುವುದಕ್ಕೆ ನಿಮ್ಮೆಲ್ಲರ ಪ್ರೀತಿ ಸಿಗುತ್ತಿದೆ. ಹೀಗಾಗಿ ನನ್ನನ್ನು ಯಾವುದೇ ಕಾರ್ಯಕ್ರಮಗಳಲ್ಲಿ ಕಮ್ಯುನಿಸ್ಟ್ ಹಿಂಸಾಚಾರದ ಸಂತ್ರಸ್ತ ಎಂದು ಹೆಸರಿಸಬೇಡಿ. ನನ್ನನ್ನು ಈ ನಿರ್ಣಾಯಕ ಹೋರಾಟದ ಸೇನಾನಿ ಎಂದು ಕರೆದುಕೊಳ್ಳುವುದಕ್ಕೆ ಇಷ್ಟಪಡುತ್ತೇನೆ.

ಯಾಕೆ ಕಣ್ಣೂರಿನಲ್ಲೇ ಕಮ್ಯುನಿಸ್ಟ್ ಹಿಂಸೆ ತೀವ್ರವಾಗಿದೆ ಎಂದರೆ, ಎಡಪಕ್ಷಗಳು ಅದನ್ನು ಕಮ್ಯುನಿಸಂನ ತೊಟ್ಟಿಲು ಎಂದೇ ಪರಿಗಣಿಸುತ್ತವೆ. 1940ರಲ್ಲಿ ಕಣ್ಣೂರಿನ ಪಿಣರಾಯಿಯಲ್ಲೇ ಕಮ್ಯುನಿಸ್ಟ್ ಪಕ್ಷ ಪ್ರಾರಂಭವಾಯಿತು. ಪ್ರಾರಂಭದಲ್ಲಿ ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘ ತಮಗೆ ಪೈಪೋಟಿ ನೀಡುತ್ತದೆ ಎಂದು ಅಂದುಕೊಂಡಿರಲಿಲ್ಲ. ನಾಗ್ಪುರದಲ್ಲಿ ಶುರುವಾದ ಸಂಘಟನೆ ತಮ್ಮ ನೆಲದಲ್ಲಿ ಬೆಳೆಯಲಾರದು ಎಂದೇ ನಿರ್ಲಕ್ಷಿಸಿದರು. ಆದರೆ, ಸಂಘ ಬಲಗೊಳ್ಳತೊಡಗಿತು. ತಮ್ಮ ತೊಟ್ಟಿಲಾದ ಕಣ್ಣೂರಿನಲ್ಲಿ ಸಿಪಿಎಂ ಹಿಮ್ಮೆಟ್ಟಿದ್ದೇ ಆದರೆ ಉಳಿದೆಡೆ ಅದರ ಪತನ ನಿಶ್ಚಯವೆಂದೇ ಕಮ್ಯುನಿಸ್ಟರು ಹಿಂಸೆ- ಹತ್ಯೆಗಳ ಮೂಲಕ ಎದುರಾಳಿ ಸಿದ್ಧಾಂತದವರನ್ನು ಇಲ್ಲವಾಗಿಸಲು ಪ್ರಾರಂಭಿಸಿದರು.

ಮೊದಲಿಗೆ ಕೊಲೆಯಾದ ಸಂಘಪರಿವಾರದ ವಡಿಕ್ಕಳ್ ರಾಮಕೃಷ್ಣ, ಕಮ್ಯುನಿಸ್ಟರ ವ್ಯಾಖ್ಯೆಯ ರೀತಿಯಲ್ಲಿ ಯಾವುದೇ ಬಂಡವಾಳಶಾಹಿ ಆಗಿರಲಿಲ್ಲ. ತುಂಬ ಸಾಮಾನ್ಯ ಮನುಷ್ಯ. ಸಂಘ ಪರಿವಾರಕ್ಕೂ ಮುಂಚೆ ಕಮ್ಯುನಿಸ್ಟ್ ಪಾಳೆಯದಲ್ಲೇ ಇದ್ದವರು. ಇವತ್ತು ಮುಖ್ಯಮಂತ್ರಿ ಹುದ್ದೆಯಲ್ಲಿರುವ ಪಿಣರಾಯಿ ವಿಜಯನ್ ಈ ಹತ್ಯೆಯ ಆರೋಪಿಗಳಲ್ಲೊಬ್ಬರು.

ನನ್ನ ಹಳ್ಳಿ ‘ಪಾರ್ಟಿ ವಿಲೇಜ್’ ಎಂದು ಕರೆಸಿಕೊಳ್ಳುತ್ತದೆ. ಅರ್ಥಾತ್ ಕಮ್ಯುನಿಸ್ಟರ ಪಕ್ಷ ನಿಯಂತ್ರಣದ ಹಳ್ಳಿ ಎಂಬರ್ಥದಲ್ಲಿ. ಇಂಥ ಪಾರ್ಟಿ ವಿಲೇಜ್ ಗಳು ಕೇರಳದಲ್ಲಿ ಬಹಳಷ್ಟಿವೆ. ಶಿಕ್ಷಕರಾಗಿದ್ದ ನನ್ನ ತಂದೆ ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿದ್ದರು. ಈಗ ಡಿವೈಎಸ್ಎಫ್ ಎಂದು ಕರೆಸಿಕೊಳ್ಳುತ್ತಿರುವ ಆಗಿನ ಕಮ್ಯುನಿಸ್ಟ್ ಸಂಘಟನೆ ಕೆಎಸ್ ವೈಎಫ್ ನಲ್ಲಿ ನನ್ನ ಇಬ್ಬರು ಸಹೋದರರಿದ್ದರು. ಇಂಥ ವಾತಾವರಣದಲ್ಲಿ ಬೆಳೆದ ನಾನೂ ಸಹಜವಾಗಿ ಕಮ್ಯುನಿಸ್ಟರನ್ನು ಸೇರಿಕೊಂಡೆ. ಎಸ್ಎಫ್ಐ ಎಂಬ ಕಮ್ಯುನಿಸ್ಟ್ ವಿದ್ಯಾರ್ಥಿ ಕೂಟದ ಸದಸ್ಯನಾದೆ. ಆ ಸಂದರ್ಭದಲ್ಲೇ ನಮಗೆ ಕಾಲೇಜು ಚುನಾವಣೆಗಳ ವೇಳೆ ಎಬಿವಿಪಿ ಸದಸ್ಯರ ವಿರುದ್ಧ ಕಲ್ಲು ತೂರಬೇಕೆಂಬ ನಿರ್ದೇಶನಗಳನ್ನು ನೀಡಲಾಗುತ್ತಿತ್ತು.

ಆರೆಸ್ಸೆಸ್ ಏನೆಂದು ತಿಳಿಯುವ ಕುತೂಹಲವಾಯಿತು. ರಕ್ಷಾಬಂಧನದ ಪ್ರಯುಕ್ತ ಬೌದ್ಧಿಕ ಭಾಷಣವನ್ನು ಕೇಳಿದಾಗ, ಸಮಾಜ ನಿರ್ಮಾಣದಲ್ಲಿ ಈ ವಿಚಾರಗಳೇ ಸೂಕ್ತವಾಗಿವೆ ಎನ್ನಿಸಿತು. ಸಂಘದ ಕೇಸರಿ ಪತ್ರಿಕೆಗೆ ಚಂದಾದಾರನಾದೆ.

ಯಾವಾಗ ನಾನು ಆರೆಸ್ಸೆಸ್ ಸೇರುವ ನಿರ್ಧಾರ ತೆಗೆದುಕೊಂಡೆನೋ ಆಗ ಕಮ್ಯುನಿಸ್ಟ್ ಸಹವರ್ತಿಗಳಿಗೆ ಆಘಾತವಾಯಿತು. ಕುಟುಂಬದ ಸದಸ್ಯರೆಲ್ಲ ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿರುವ ಉದಾಹರಣೆ ಇರುವಾಗ ಅಂಥ ಕುಟುಂಬದಲ್ಲೊಬ್ಬ ಸ್ವಯಂಸೇವಕ ಸಂಘ ಸೇರಿಕೊಳ್ಳುವುದು ಅವರಿಗೆ ಸಹ್ಯ ವಿಚಾರವೇ ಆಗಿರಲಿಲ್ಲ. ದೊಡ್ಡ ದೊಡ್ಡ ಗುಂಪುಗಳಲ್ಲಿ ಮನೆಗೆ ಬಂದ ಕಮ್ಯುನಿಸ್ಟ್ ಕಾರ್ಯಕರ್ತರು ಮೊದಲಿಗೆ ಪ್ರೀತಿಯಿಂದಲೇ ಉಪದೇಶ ಕೊಟ್ಟರು. ಆರೆಸ್ಸೆಸ್ ಒಂದು ಫ್ಯಾಸಿಸ್ಟ್ ಸಂಘಟನೆ ಎಂದು ಎಚ್ಚರಿಸಿದರು. ಇದಕ್ಕೆ ಒಪ್ಪದಿದ್ದಾಗ ನನ್ನನ್ನು ಶಿಕ್ಷಿಸುವ ನಿರ್ಧಾರ ತೆಗೆದುಕೊಂಡರು. ಜೀವ ತೆಗೆಯದೇ ಬರ್ಬರವಾಗಿ ಹಲ್ಲೆ ನಡೆಸಿ, ಓಡಾಡಲು ಆಗದಂತೆ ಕಾಲು ಕತ್ತರಿಸಿ, ನನ್ನನ್ನು ಧೃತಿಗೆಡಿಸುವುದಲ್ಲದೇ ಇನ್ಯಾರೂ ಆರೆಸ್ಸೆಸ್ ಸೇರದಂತೆ ಮಾಡುವ ಉದ್ದೇಶ ಇದಾಗಿತ್ತು. ಹಾಗೆಂದೇ ನನ್ನ ಕಾಲು ಕತ್ತರಿಸಿ ತುಂಡಾದ ಭಾಗಗಳನ್ನು ಒಗೆದಿದ್ದಲ್ಲದೇ, ರಕ್ತ ಸೋರುತ್ತಿದ್ದ ಭಾಗಕ್ಕೆ ಸಗಣಿ ಮಣ್ಣು ಎಲ್ಲವನ್ನೂ ಸವರಿದರು.

ಹೀಗೆ ಕಾಲು ಕಳೆದುಕೊಂಡ ಕ್ಷಣಕ್ಕೆ ಅತ್ತಿದ್ದು ಹೌದಾದರೂ ನಂತರ ಯಾವತ್ತೂ ವ್ಯಥೆಪಟ್ಟಿಲ್ಲ. ಅದಕ್ಕೆ ಕಾರಣ ಆರೆಸ್ಸೆಸ್ ನ ಆಗಿನ ಸರಸಂಘಚಾಲಕರಿಂದ ಮೊದಲ್ಗೊಂಡು ನೂರಾರು ಕಾರ್ಯಕರ್ತರು ನಿಮ್ಮೊಂದಿಗೆ ನಾವಿದ್ದೇವೆಂದು ನಿಂತ ರೀತಿ. ಇದು ನನಗೆ ಸಂಘ ನೀಡಿರುವ ಆತ್ಮಬಲ..’

ಸದಾನಂದ ಮಾಸ್ಟರ್ ಮಾತುಗಳನ್ನು ಅನುವಾದಿಸುತ್ತ, ಜೆ. ನಂದಕುಮಾರರು ಅವತ್ತಿನ ಸ್ಥಿತಿಯ ಬಗ್ಗೆ ತಮ್ಮ ಕೆಲ ಮಾತುಗಳನ್ನೂ ಸೇರಿಸಿ ಕಟ್ಟಿಕೊಟ್ಟ ಚಿತ್ರಣ ಹೀಗಿತ್ತು- ‘ವಿಶೇಷ ವಿತ್ತ ವಲ ಇದ್ದಂತೆ ಕಮ್ಯುನಿಸ್ಟರ ರಾಜಕೀಯದಲ್ಲಿ ಎಸ್ಪಿಝಡ್ ಅರ್ಥಾತ್ ಸ್ಪೆಷಲ್ ಪೊಲಿಟಿಕಲ್ ಜೋನ್ ಇರುತ್ತವೆ. ಕಮ್ಯುನಿಸ್ಟ್ ಪಾರ್ಟಿ ವಿಲೇಜ್ ಜತೆಗೆ ಪಾರ್ಟಿ ಕೋರ್ಟ್ ಗಳೂ ಇಲ್ಲಿವೆ. ಸದಾನಂದ ಮಾಸ್ಟರ್ ಅವರ ಕಾಲು ಕತ್ತರಿಸುವ ನಿರ್ಧಾರವಾಗಿದ್ದು ಇಂಥದೇ ಕೋರ್ಟ್ ನಲ್ಲಿ. ಯಾವಾಗ ಇವರು ಉಪದೇಶದ ಮಾತುಗಳಿಗೆ ಮಣಿಯುವುದಿಲ್ಲ ಎಂದಾಯಿತೋ, ಆಗಲೇ ಇವರನ್ನು ಪಾರ್ಟಿ ಕೋರ್ಟಿಗೆ ಕರೆತರಲಾಯಿತು. ಅಲ್ಲಿನ ಚರ್ಚೆಯಲ್ಲಿ ಕಮ್ಯುನಿಸ್ಟ್ ಸದಸ್ಯರು ಸದಾನಂದ ಮಾಸ್ಟರಿಗೆ ಮರಣದಂಡನೆ ಆಗಬೇಕು ಅಂತಲೇ ಕೇಳಿದರು. ಆದರೆ, ನಂತರ ಉಳಿದವರಿಗೆ ಭಯದ ಮಾದರಿ ಆಗಿರಲಿ ಎಂಬ ಕಾರಣಕ್ಕೆ ಕಾಲು ಕತ್ತರಿಸುವ ನಿರ್ಧಾರ ಕೈಗೊಳ್ಳಲಾಯಿತು. ಇದೇನೂ ಆಕ್ರೋಶದ ಭರದಲ್ಲಿ ಮಾಡಿದ ಕಾರ್ಯವಲ್ಲ. ಯಾರು ಕಾಲು ಕತ್ತರಿಸಬೇಕು, ಇನ್ಯಾರು ಇವರನ್ನು ಹಿಡಿದುಕೊಳ್ಳಬೇಕು, ಮತ್ಯಾರು ಮಣ್ಣು-ಸಗಣಿ ಮೆತ್ತಬೇಕು ಎಂಬುದೆಲ್ಲ ಯೋಜನಾಬದ್ಧವಾಗಿ ಸಿದ್ಧಗೊಂಡಿತು.

ಪಾರ್ಟಿ ವಿಲೇಜ್ ಗಳ ಮುಖ್ಯ ಲಕ್ಷಣ ಎಂದರೆ ಅಲ್ಲಿ ಯಾವ ಅಭಿವೃದ್ಧಿ ಕಾರ್ಯಗಳೂ ಆಗಿರುವುದಿಲ್ಲ. ರಸ್ತೆ- ಮೂಲಸೌಕರ್ಯಗಳನ್ನು ರಹಿತವಾಗಿಸಿ ಯಾರೂ ಅತ್ತ ಹೋಗದಂತೆ ಕಾಪಾಡಿಕೊಳ್ಳಲಾಗುತ್ತದೆ. ವಿದ್ಯುತ್ ಇರುವುದೇ ಅಪರೂಪ. ಇದ್ದರೂ ಸಂಜೆಯ ನಂತರ ಸ್ಥಗಿತ. ಸದಾನಂದ ಮಾಸ್ಟರ್ ಮೇಲೆ ಹಲ್ಲೆಯ ದಿನ ವಿದ್ಯುತ್ ತೆಗೆಯಲಾಯಿತು. ಎಲ್ಲ ಭೀಬತ್ಸದ ವಿವರಗಳು ಇರುವಂತೆ ಹಲ್ಲೆ ನಡೆಸಲಾಯಿತು. ಸದಾನಂದ್ ಮಾಸ್ಟರ್ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು, ಕಾಲಿಗೆ ತೂರಿಸಿದ್ದ ಸಗಣಿ, ಮಣ್ಣು ತೆಗೆಯುವುದಕ್ಕೆ ನಾಲ್ಕು ತಾಸು ತೆಗೆದುಕೊಂಡಿತು ಎಂದಿದ್ದರು.

ಹೀಗೆ ಆಸ್ಪತ್ರೆ ಸೇರಿದಾಗಿನ ಯಾತನಾಮಯ ಸಂದರ್ಭದಲ್ಲೂ ಸದಾನಂದ ಮಾಸ್ಟರ್ ಏನನ್ನೋ ಉಸುರುತ್ತಿದ್ದರು. ವಾಸ್ತವದಲ್ಲಿ ಅದು ಸಂಘದ ಗೀತೆಯೊಂದಾಗಿತ್ತು. ಆ ಗೀತೆಯ ಅರ್ಥ- ಎಲೆಗಳು ಉದುರಿದರೆ ಮರಕ್ಕೇನೂ ಆಗುವುದಿಲ್ಲ, ಹೊಸ ಚಿಗುರು ಮೂಡುತ್ತದೆ ಎಂಬುದಾಗಿತ್ತು. ಆ ಕ್ಷಣದಲ್ಲೂ ಅವರು ತಾನು ಸತ್ತರೂ ಸಿದ್ಧಾಂತ ಅಳಿಯದು ಎಂಬುದನ್ನು ಸಾರುತ್ತಿದ್ದರು.

ಕೇವಲ ಆರೆಸ್ಸೆಸ್ ಸೇರಿದವರ ಮೇಲಷ್ಟೇ ಸಿಪಿಎಂನವರ ಈ ಕ್ರೌರ್ಯ ಎಂದುಕೊಳ್ಳಬೇಡಿ. ತಮ್ಮನ್ನು ತೊರೆದು ಮತ್ತೊಂದು ಕಮ್ಯುನಿಸ್ಟ್ ಪಕ್ಷ ರಚಿಸಲು ಹೋದವರನ್ನೂ ಕೊಂದಿದ್ದಾರೆ. ಈ ಬಗ್ಗೆ ಮಲಯಾಳಂ ವಾಹಿನಿ ಚರ್ಚೆಯೊಂದರಲ್ಲಿ, ರಾಜಕೀಯ ಹಲ್ಲೆಗಳಲ್ಲಿ ಸಂತ್ರಸ್ತರಾದ 83 ಮಂದಿಯಲ್ಲಿ 70 ಮಂದಿ ಸಿಪಿಎಂ ತೊರೆದವರು ಎಂಬ ಅಂಶ ಎತ್ತಿದಾಗ, ಸಿಪಿಎಂ ಪ್ರತಿನಿಧಿ ಫಕ್ರುದ್ದೀನ್ ಪ್ರತಿಕ್ರಿಯಿಸಿದ್ದು- ಇನ್ನೇನು ಪಕ್ಷ ತೊರೆದವರಿಗೆ ಚಹಾ ಕೊಡಲಾಗುವುದೇ ಅಂತ!

ಇವೇನೇ ಇದ್ದರೂ ಒಂದಂತೂ ಸ್ಪಷ್ಟ. ಕಮ್ಯುನಿಸ್ಟರ ಕೇರಳ ಚರಿತ್ರೆ ಪಿಣರಾಯಿಯಲ್ಲಿ ಪ್ರಾರಂಭವಾಯಿತು. ಪಿಣರಾಯಿಯೇ ಅದನ್ನು ಮುನ್ನಡೆಸಿತು. ಅದರ ಅವಸಾನವೂ ಪಿಣರಾಯಿಯಲ್ಲೇ ಆಗಲಿದೆ.’

Leave a Reply