ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಮತೀಯ ಪ್ರೇರಿತ ಎಂಬುದಕ್ಕೆ ಬಿಜೆಪಿ ನೀಡುತ್ತಿರುವ ಕಾರಣಗಳೇನು?

Members of BJP stage Protest Rally from Bowring Hospital to Commissioners office against murder of RSS member Rudresh at Shivaji Nagar in Bengaluru on Monday. Former Deputy Chif Minister, R.Ashok, BJP members Shobha Karandlaje, P.C. Mohan , Tara, Katta Subramanya, and others were present along with Family Members of Rudresh were present during the Protest Rally.

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ (35) ಹತ್ಯೆಗೆ ಕಾರಣರಾದವರನ್ನು ತಕ್ಷಣವೇ ಬಂಧಿಸಬೇಕೆಂದು ಆಗ್ರಹಿಸಿ ಬಿಜೆಪಿ ಬೆಂಗಳೂರಿನಲ್ಲಿ ಬೀದಿಗಿಳಿದು ಪ್ರತಿಭಟನೆ ತೀವ್ರಗೊಳಿಸಿತು. ಪೊಲೀಸ್ ಕಮೀಷನರ್ ಕಚೇರಿಗೆ ಮುತ್ತಿಗೆ ಹಾಕುವ ಬಿಜೆಪಿ ನಾಯಕರ ಯತ್ನವನ್ನು ಪೊಲೀಸರು ಅರ್ಧದಲ್ಲೇ ತಡೆದರು.

ಹತ್ಯೆ ನಡೆದ ಶಿವಾಜಿನಗರ ಪ್ರಾಂತ್ಯದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ತೀವ್ರವಾಗಿದೆ. ಬಿಜೆಪಿ ನಾಯಕರಾದ ಆರ್. ಅಶೋಕ್, ಶೋಭಾ ಕರಂದ್ಲಾಜೆ, ಸುರೇಶ್ ಕುಮಾರ್, ಸಂಸದ ಪಿ ಸಿ ಮೋಹನ್ ಪ್ರತಿಭಟನೆಯನ್ನು ಮುನ್ನಡೆಸಿದರು.

ಬಿಜೆಪಿ-ಆರೆಸ್ಸೆಸ್ ಪ್ರತಿಪಾದನೆ ಏನು?

ಇದು ರಾಜಕೀಯ- ಸೈದ್ಧಾಂತಿಕ ಪ್ರೇರಿತ ಹತ್ಯೆಯೇ ಆಗಿದೆ ಎಂಬುದು ಬಿಜೆಪಿ ನಿಲುವು. ವೈಯಕ್ತಿಕ ಇಲ್ಲವೇ ವ್ಯಾಪಾರ ಕಾರಣಗಳಿಗೆ ಕೊಲೆ ಆಗಿರುವ ಸಂಶಯಗಳಲ್ಲಿ ಹುರುಳಿಲ್ಲ. ವ್ಯವಹಾರ ಕಾರಣ ಎಂದಾದರೆ ಅದು ಯಾವ ವ್ಯವಹಾರ, ಯಾರೊಂದಿಗಿನದ್ದು ಎಂದು ಹೇಳಿ ಅಂಥವರನ್ನು ವಿಚಾರಣೆಗೆ ಪಡೆಯಬೇಕಲ್ಲವೇ ಎಂಬ ಪ್ರಶ್ನೆ ಆರ್. ಅಶೋಕ್ ಅವರದ್ದು. ‘ಆರೆಸ್ಸೆಸ್ ಪಥಸಂಚಲನದಲ್ಲಿ ಭಾಗವಹಿಸಿ ಹಿಂತಿರುಗಿದ ಸಂದರ್ಭದಲ್ಲಿಯೇ ಹತ್ಯೆ ನಡೆದಿದೆ. ಮೃತ ರುದ್ರೇಶ್ ಶಿವಾಜಿನಗರದಂಥ ಮುಸ್ಲಿಂ ಬಾಹುಳ್ಯ ಪ್ರದೇಶದಲ್ಲಿ ಗಣೇಶೋತ್ಸವವೇ ಮೊದಲಾದ ಹಿಂದು ಧಾರ್ಮಿಕ ಕಾರ್ಯಗಳನ್ನು ಮಾಡುವಲ್ಲಿ ಮುಂಚೂಣಿಯಲ್ಲಿದ್ದರು. ಪಲ್ಸಾರ್ ಬೈಕೇರಿ ಬಂದಿದ್ದ ದುಷ್ಕರ್ಮಿಗಳು ಒಂದೇ ಏಟಿಗೆ ಕೊಚ್ಚಿ ಕೊಂದಿರುವುದು ಮೂಲಭೂತವಾದಿ ಪಾಳೆಯದ ವೃತ್ತಿಪರ ಕೊಲೆಗಾರರ ಸುಳಿವನ್ನು ನೀಡುತ್ತಿದೆ. ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆ ವಿಷಯದಲ್ಲಿ ಬಿಗು ಕಳೆದುಕೊಂಡಿರುವುದು ಮೂಲಭೂತವಾದಿಗಳ ಅಟ್ಟಹಾಸಕ್ಕೆ ದಾರಿ ಮಾಡಿಕೊಟ್ಟಿದೆ. ಹಾಗೆಂದೇ ಮಂಗಳೂರು-ಮೈಸೂರು ಹಾಗೂ ಬೆಂಗಳೂರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ನಿರಂತರ ಹತ್ಯೆ-ದಾಳಿಗಳಾಗುತ್ತಿವೆ’ ಎಂಬುದು ಬಿಜೆಪಿ ನಾಯಕರುಗಳ ಮಾತಿನ ಒಟ್ಟಾರೆ ಸಾರ.

‘ಕೇರಳದ ಕಣ್ಣೂರಿನಲ್ಲಿ ಆರೆಸ್ಸೆಸ್-ಬಿಜೆಪಿ ಕೇಂದ್ರೀಕರಿಸಿಕೊಂಡು ರಾಜಕೀಯ ಹತ್ಯೆಗಳಾಗುತ್ತಿದ್ದವು. ಇದೀಗ ಕರ್ನಾಟಕಕ್ಕೂ ಕಾಲಿಟ್ಟಿದೆ. ಇವೆಲ್ಲ ಹತ್ಯೆಗಳ ಹಿಂದೆ ಉದ್ದೇಶಿತ ಯೋಜನೆಯೊಂದು ಕೆಲಸ ಮಾಡುತ್ತಿದೆ’ ಎಂದು ಶೋಭಾ ಕರಂದ್ಲಾಜೆ ಕಿಡಿ ಕಾರಿದರು.

‘ಈ ಸರ್ಕಾರಕ್ಕೆ ಕಾನೂನು ಪಾಲನೆ ಸಾಧ್ಯವಿಲ್ಲ ಎಂದಾದರೆ, ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತರಿಗೆ ಶಸ್ತ್ರ ಹೊಂದುವ ಪರವಾನಗಿಯ್ನಾದರೂ ಕೊಟ್ಟುಬಿಡಿ’ ಅಂತ ಶಾಸಕ ಸುರೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

Police Personnel on security detail at Slain RSS Member Rudresh'

ಮೃತ ರುದ್ರೇಶ್ ಮನೆ ಬಳಿ ಪೊಲೀಸ್ ಪಹರೆ

ಸರ್ಕಾರದ ಪ್ರತಿಕ್ರಿಯೆ ಏನು?

‘ಕೊಲೆಗೆ ಕಾರಣವೇನು ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕು. ರುದ್ರೇಶ್ ಆರೆಸ್ಸೆಸ್ ಕಾರ್ಯಕರ್ತ ಎಂಬುದನ್ನು ಬಿಟ್ಟರೆ ಹೆಚ್ಚಿನ ಮಾಹಿತಿಗಳಿಲ್ಲ. ಪೊಲೀಸರು ಅದಾಗಲೇ ನಾಲ್ಕು-ಐದು ತಂಡ ರಚಿಸಿ, ಲಭ್ಯ ಸಾಕ್ಷ್ಯಗಳ ಆಧಾರದಲ್ಲಿ ತನಿಖೆಗೆ ತೊಡಗಿದ್ದಾರೆ. ಕೆಲವರನ್ನು ವಶಕ್ಕೂ ತೆಗೆದುಕೊಂಡು ವಿಚಾರಣೆ ಮಾಡಿದ್ದಾರೆ’ ಎಂದಿದ್ದಾರೆ ಗೃಹ ಸಚಿವ ಪರಮೇಶ್ವರ್.

ಬಿಜೆಪಿ ನಾಯಕರ ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ ಪೊಲೀಸ್ ಆಯುಕ್ತ ಮೇಘರಿಕ್ ಅವರು, ‘ನಮ್ಮ ಮೇಲೆ ಯಾವ ಒತ್ತಡಗಳೂ ಇಲ್ಲ. ಕೊಲೆಗಾರರನ್ನು ಶೀಘ್ರದಲ್ಲೇ ಹಿಡಿಯುತ್ತೇವೆ. ಯಾರ ಮರ್ಯಾದೆ ಕಾಪಾಡುತ್ತೇವೋ, ಸಮವಸ್ತ್ರದ ಮರ್ಯಾದೆ ಕಾಪಾಡಿಕೊಳ್ಳುವುದು ಗೊತ್ತು’ ಎಂದು ಪ್ರತಿಕ್ರಿಯಿಸಿದರು.

ಇದಕ್ಕೂ ಮೊದಲು ಬಿಜೆಪಿ ನಾಯಕರು ಸರ್ಕಾರದ ಮೇಲೆ ಹರಿಹಾಯ್ದು, ಪೊಲೀಸರ ಕ್ಷಮತೆ ಪ್ರಶ್ನಿಸುವ ಮಾತುಗಳನ್ನಾಡಿದ್ದಕ್ಕೆ ಮೇಘರಿಕ್ ಪ್ರತಿಕ್ರಿಯೆ ಅದಾಗಿತ್ತು.

Leave a Reply