ಉಭಯ ರಾಜ್ಯಗಳಲ್ಲೂ ನೀರಿನ ಸಂಕಷ್ಟ ಎಂಬ ಕೇಂದ್ರದ ಕಾವೇರಿ ತಜ್ಞ ಸಮಿತಿ ವರದಿಯಲ್ಲಿ ಕರ್ನಾಟಕದ ಬರ ಪರಿಸ್ಥಿತಿ ಉಲ್ಲೇಖ, ಸುಪ್ರೀಂನಲ್ಲಿ ನೆರವಿಗೆ ಬಂದಾವೇ ಈ ಅಂಶಗಳು?

Meeting on Cauvery Basin Visit at Vidhan Soudha in Bengaluru on Friday.

 

ಡಿಜಿಟಲ್ ಕನ್ನಡ ಟೀಮ್:

ಕೇಂದ್ರದ ಕಾವೇರಿ ತಾಂತ್ರಿಕ ಸಮಿತಿಯು ಉಭಯ ರಾಜ್ಯಗಳ ತಮ್ಮ ಸಮೀಕ್ಷಾ ವರದಿಯನ್ನು ಸೋಮವಾರ ಸುಪ್ರೀಂಕೋರ್ಟಿಗೆ ಸಲ್ಲಿಸಿದೆ.

ತಮಿಳುನಾಡಿಗೆ ನೀರು ಬಿಡಬೇಕೋ-ಬೇಡವೋ ಎಂಬ ಶಿಫಾರಸಿನ ವ್ಯಾಪ್ತಿಯೇನೂ ಇದರದ್ದಲ್ಲ. ಉಭಯ ರಾಜ್ಯಗಳ ಕಾವೇರಿ ಕೊಳ್ಳದಲ್ಲಿ ಪರಿಸ್ಥಿತಿ ಹೇಗಿದೆ ಎಂಬುದನ್ನಷ್ಟೇ ಇದು ಪಟ್ಟಿ ಮಾಡಿದೆ.

ಈ ಬಗ್ಗೆ ಅಧಿಕೃತ ಮಾಹಿತಿಗಳು ಬಿಡುಗಡೆ ಆಗಿಲ್ಲವಾದರೂ, ವರದಿಯಲ್ಲಿ ಉಭಯ ರಾಜ್ಯಗಳೂ ನೀರಿನ ಕೊರತೆ ಎದುರಿಸುತ್ತಿರುವ ಬಗ್ಗೆ ಹೇಳಲಾಗಿದೆ. ತಮಿಳುನಾಡಿನಲ್ಲಿ ಸಾಂಬಾ ಬೆಳೆಗೆ ನೀರಿನ ಕೊರತೆ ಇದ್ದರೆ, ಕರ್ನಾಟಕದ ಕಾವೇರಿ ಕೊಳ್ಳದ ಪ್ರದೇಶಗಳಲ್ಲಿ ಪೈರುಗಳು ಒಣಗಿ ನಿಂತಿವೆ ಎಂದೂ ವರದಿ ನೀಡಲಾಗಿದೆ.

ಕರ್ನಾಟಕಕ್ಕೆ ಸಹಕಾರಿಯಾಗಬಲ್ಲ ಅಂಶವೆಂದರೆ, ಕಾವೇರಿ ಕೊಳ್ಳದ 48 ತಾಲೂಕುಗಳ ಪೈಕಿ 42 ಬರಪೀಡಿತವಾಗಿವೆ ಎಂಬ ಅಂಶವನ್ನು ವರದಿ ಒಳಗೊಂಡಿದೆ. ಅಲ್ಲದೇ ಮಂಡ್ಯ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿರುವುದನ್ನು ವರದಿಯಲ್ಲಿ ಉಲ್ಲೇಖಿಸಿರುವ ಬಗ್ಗೆ ಮೂಲಗಳು ಹೇಳುತ್ತಿವೆ.

ಉಳಿದಂತೆ, ಉಭಯ ರಾಜ್ಯಗಳಲ್ಲೂ ಕಾವೇರಿ ಕೊಳ್ಳ ಪ್ರದೇಶದಲ್ಲೇ ಕೊಳವೆ ಬಾವಿಗಳನ್ನು ಅತಿಯಾಗಿ ಕೊರೆದಿರುವ ಉದಾಹರಣೆಗಳೂ ಇದ್ದು, ಕಬ್ಬಿಗೆ ಅತಿಯಾದ ನೀರು ಬಳಕೆಯಾಗುತ್ತಿರುವುದರಿಂದ ದೀರ್ಘಾವಧಿಯಲ್ಲಿ ಇದು ಆತಂಕವನ್ನೇ ತಂದೊಡ್ಡಲಿದೆ ಅಂತಲೂ ವಿಶ್ಲೇಷಿಸಲಾಗಿದೆ.

ಉಭಯ ರಾಜ್ಯಗಳಿಗೆ ಅಗತ್ಯವಿರುವ ನೀರಿನ ಪ್ರಮಾಣವನ್ನೂ ತಜ್ಞರ ಸಮಿತಿ ಸುಪ್ರೀಂಕೋರ್ಟಿಗೆ ಸೂಚಿಸಿದೆ.

ತಮಿಳುನಾಡು- ಪುದುಚೆರಿಗಳ ನೀರಾವರಿ ಜಾಲಗಳು ಬತ್ತಿರುವುದು ನಿಜ. ರಾಸುಗಳಿಗೆ ಕುಡಿಯುವ ನೀರಿನ ಕೊರತೆ ಇದೆ ಎಂದೂ ಸಮಿತಿ ಹೇಳಿದೆ.

ಆದರೆ, ಇದಕ್ಕೆ ವಿರೋಧವೆಂಬಂತೆ ಸೋಮವಾರದಿಂದಲೇ ತಮಿಳುನಾಡಿನ ಕಾವೇರಿ ಕೊಳ್ಳದ ಪ್ರದೇಶಗಳಲ್ಲಿ ಪ್ರತಿಭಟನೆ ಶುರುವಾಗಿದ್ದು, ಎರಡು ದಿನಗಳ ರೈಲು ತಡೆಗೆ ಅಲ್ಲಿನ ಸಂಘಟನೆಗಳು ಕರೆ ಕೊಟ್ಟಿವೆ. ಕಾವೇರಿ ನಿರ್ವಹಣಾ ಮಂಡಳಿ ರಚನೆಯಾಗಬೇಕು ಎಂಬುದು ತಮಿಳುನಾಡಿನ ಒತ್ತಾಯವಾಗಿದೆ. ಅಲ್ಲದೇ, ಕರ್ನಾಟಕಕ್ಕೆ ಅನುಕೂಲವಾಗುವಂತೆ ವರದಿಗಳು ಬರುತ್ತಿರುವುದಕ್ಕೆ ಕೇಂದ್ರದಲ್ಲಿರುವ ಬಿಜೆಪಿಯೇ ಕಾರಣ, ಕರ್ನಾಟಕದಲ್ಲಿ ಎದುರಾಗಲಿರುವ ವಿಧಾನಸಭೆ ಚುನಾವಣೆಯಲ್ಲಿ ಮತಗಳಿಕೆಗೆ ಬಿಜೆಪಿ ಈ ರೀತಿ ನಡೆದುಕೊಳ್ಳುತ್ತಿದೆ ಅಂತಲೂ ಡಿಎಂಕೆ ದೂರಿದೆ.

Leave a Reply