ಬಂಗಾಳಕೊಲ್ಲಿ ದೇಶಗಳೆಲ್ಲ ಪಾಕ್ ವಿರುದ್ಧ ಧ್ವನಿಗೂಡಿಸಿದವು, ಭಯೋತ್ಪಾದನೆ ವಿಷಯದಲ್ಲಿ ಪಾಕ್ ಪರ ಚೀನಾ, ಆದರೆ ಪಾಕ್ ಮಾಧ್ಯಮಗಳಲ್ಲೇ ಅಸಮಾಧಾನ, ಸಿದ್ದರಾಮಯ್ಯ ಸೋಲಿಸುವುದೇ ಶ್ರೀನಿವಾಸ್ ಪ್ರಸಾದ್ ಗುರಿಯಂತೆ…

ಬಿಮ್ಸ್ಟೆಕ್

ಉಗ್ರವಾದದ ವಿರುದ್ಧ ಬ್ರಿಕ್ಸ್ ಗಿಂತ ಖಚಿತ ಧ್ವನಿಯಲ್ಲಿ ಮಾತಾಡಿದ ಬಿಮ್ಸ್ಟೆಕ್

ಬಂಗಾಳಕೊಲ್ಲಿ ಪ್ರಾಂತ್ಯದ ದೇಶಗಳ ಬಹುವಿಧ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ವೇದಿಕೆಯೇ ಬಿಮ್ಸ್ಟೆಕ್. ಗೋವಾದಲ್ಲಿ ಸಭೆ ಸೇರಿದ್ದ ಏಳು ರಾಷ್ಟ್ರಗಳ ಮುಖ್ಯಸ್ಥರು, ‘ಉಗ್ರವಾದಿಗಳನ್ನು ಹುತಾತ್ಮರೆಂದು ಬಿಂಬಿಸುವುದನ್ನು ಒಪ್ಪಬಾರದು. ಅಲ್ಲದೇ ಉಗ್ರವಾದದ ವಿರುದ್ಧ ಹೋರಾಟವೆಂದರೆ ಉಗ್ರರನ್ನು ನಿರ್ಮೂಲನಗೊಳಿಸುವ ಯುದ್ಧವೆಂದಷ್ಟೇ ಅರ್ಥೈಸದೇ, ಉಗ್ರರಿಗೆ ನೆರವು ನೀಡುವ ಸರ್ಕಾರಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವುದಾಗಿರುತ್ತದೆ’ ಎಂದು ನಿರ್ಣಯ ತೆಗೆದುಕೊಂಡಿದೆ. ಈ ಮೂಲಕ ಉಗ್ರ ಬುರ್ಹಾನ್ ವಾನಿಯನ್ನು ಹೀರೋ ಆಗಿಸಿದ ಪಾಕಿಸ್ತಾನದ ವಿರುದ್ಧ ಧ್ವನಿ ಮೊಳಗಿದೆ.

ಬಾಂಗ್ಲಾದೇಶ, ಭಾರತ, ನೇಪಾಳ, ಮ್ಯಾನ್ಮಾರ್, ಶ್ರೀಲಂಕಾ, ಥೈಲ್ಯಾಂಡ್, ಭೂತಾನ್ ರಾಷ್ಟ್ರಗಳ ಮುಖ್ಯಸ್ಥರ ಸಭೆಯಲ್ಲಿ ಪರಸ್ಪರ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುವ ನಿರ್ಣಯ ತೆಗೆದುಕೊಳ್ಳಲಾಯಿತು. ಅಲ್ಲದೇ ಐರೋಪ್ಯ ಒಕ್ಕೂಟಗಳ ಮುಖ್ಯಸ್ಥರು ಶಿಷ್ಟಾಚಾರಗಳನ್ನು ಬದಿಗಿರಿಸಿ ನಿರಂತರವಾಗಿ ಶೀಘ್ರ ಭೇಟಿಗಳನ್ನು ಕೈಗೊಳ್ಳುವಂತೆಯೇ ಬಿಮ್ಸ್ಟೆಕ್ ವಿಷಯದಲ್ಲೂ ಪದ್ಧತಿ ರೂಪಿಸಿಕೊಳ್ಳುವ ಪ್ರಸ್ತಾವ ಚರ್ಚಿಸಲಾಯಿತು.

ಭಯೋತ್ಪಾದನೆ ವಿಷಯದಲ್ಲಿ ಪಾಕ್ ಪರ ಚೀನಾ, ಆದರೆ ಪಾಕ್ ಮಾಧ್ಯಮಗಳಲ್ಲೇ ಅಸಮಾಧಾನ

ಬ್ರಿಕ್ಸ್ ಸಮಾವೇಶ ಮುಗಿಸಿ ಸ್ವದೇಶಕ್ಕೆ ಹಿಂತಿರುಗುತ್ತಲೇ ಪಾಕಿಸ್ತಾನದ ಪರಮ ಮಿತ್ರ ಚೀನಾ. ಭಯೋತ್ಪಾದನೆ ವಿಷಯದಲ್ಲಿ ಪಾಕಿಸ್ತಾನದ ಪರ ಸಹಾನುಭೂತಿ ಮಾತುಗಳನ್ನು ಆಡಿದೆ. ಆ ಮೂಲಕ ಬ್ರಿಕ್ಸ್ ನಲ್ಲಿ ಉಗ್ರವಾದದ ವಿರುದ್ಧ ಭಾರತದ ನೇತೃತ್ವದಲ್ಲಿ ವ್ಯಕ್ತವಾಗಿದ್ದ ಕಟುಮಾತುಗಳು ಹಾಗೂ ಪಾಕಿಸ್ತಾನದ ಮೇಲೆ ಭಾರತದ ಪರೋಕ್ಷ ವಾಗ್ದಾಳಿಯ ಬಿಸಿಯನ್ನು ತಗ್ಗಿಸುವ ಕಾರ್ಯಕ್ಕೆ ಕೈಹಾಕಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನವು ಉಗ್ರವಾದದ ತಾಯ್ನೆಲ ಎಂದಿರುವುದಕ್ಕೆ ಪ್ರತಿಕ್ರಿಯೆಯೇನು ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಕಾರ್ಯದರ್ಶಿ,

‘ಯಾವುದೇ ದೇಶವನ್ನು ಅಥವಾ ಜನಾಂಗವನ್ನು ಉಗ್ರವಾದದೊಂದಿಗೆ ಸಮೀಕರಿಸುವುದಕ್ಕೆ ನಾವು ಒಪ್ಪುವುದಿಲ್ಲ. ಪಾಕಿಸ್ತಾನವೂ ಉಗ್ರವಾದದ ದಾಳಿಗೆ ತತ್ತರಿಸಿರುವ ದೇಶ ಎಂಬುದನ್ನು ಅಂತಾರಾಷ್ಟ್ರೀಯ ಸಮುದಾಯವು ಗುರುತಿಸಬೇಕು. ಭಾರತ-ಪಾಕಿಸ್ತಾನಗಳೆರಡೂ ಉಗ್ರದಾಳಿಯ ಸಂತ್ರಸ್ತರು. ಪಾಕಿಸ್ತಾನ ಸಹ ಉಗ್ರವಾದ ಎದುರಿಸುವಲ್ಲಿ ಹಲವು ತ್ಯಾಗಗಳನ್ನು ಮಾಡಿದೆ’ ಎಂದಿದ್ದಾರೆ.

ಆದರೆ, ಅತ್ತ ಪಾಕಿಸ್ತಾನದ ಪ್ರಮುಖ ಪತ್ರಿಕೆ ‘ದ ನೇಷನ್’ ಮಾತ್ರ, ಪಾಕಿಸ್ತಾನವು ದಿನ ಹೋದಂತೆ ಅಂತಾರಾಷ್ಟ್ರೀಯವಾಗಿ ಏಕಾಂಗಿ ಆಗುವುದನ್ನು ತಪ್ಪಿಸಬೇಕು. ಹೀಗಾಗಿ ಉಗ್ರವಾದಕ್ಕೆ ನಾನ್ ಸ್ಟೇಟ್ ಆ್ಯಕ್ಟರ್ ಗಳತ್ತ ಬೊಟ್ಟು ಮಾಡುವ ಮುನ್ನ ಇವರಲ್ಲಿ ಯಾರನ್ನು ನಾವು ಒಳ್ಳೆಯವರೆಂದು ಪರಿಗಣಿಸುತ್ತೇವೆ ಹಾಗೂ ಇನ್ಯಾರನ್ನು ಕೆಟ್ಟವರೆಂದು ಪರಿಗಣಿಸುತ್ತೇವೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅಭಿಪ್ರಾಯಪಟ್ಟಿದೆ.

ಸಿದ್ದರಾಮಯ್ಯ ವಿರುದ್ಧ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ

ವಿಧಾನಸಭೆ ಹಾಗೂ ಕಾಂಗ್ರೆಸ್‍ನ ಪ್ರಾಥಮಿಕ ಸದಸ್ಯತ್ವಕ್ಕೆ ಹಿರಿಯ ದಲಿತ ನಾಯಕ ಹಾಗೂ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ರಾಜಿನಾಮೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾಧ್ಯಮಗಳೆದುರು ಶ್ರೀನಿವಾಸ್ ಪ್ರಸಾದ್ ಆಡಿರುವ ನುಡಿಗಳು…

– ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ಹೊಣೆ ಹೊತ್ತ ದಿಗ್ವಿಜಯ್‍ಸಿಂಗ್ ಸೇರಿದಂತೆ ಆರು ಮುಖಂಡರ ಕಪಿಮುಷ್ಟಿಯಲ್ಲಿ ಪಕ್ಷ ಮತ್ತು ಸರ್ಕಾರವಿದೆ. ಇಲ್ಲಿ ಕಪ್ಪಕಾಣಿಕೆ ಕೊಡದಿದ್ದರೆ ಸಂಪುಟದಲ್ಲಾಗಲೀ, ರಾಜಕೀಯ ನೇಮಕಗಳಲ್ಲಾಗಲೀ ಸ್ಥಾನ ಸಿಗದು.

– ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಂಬರುವ ಚುನಾವಣೆಗಳಲ್ಲಿ ರಾಜಕೀಯವಾಗಿ ಹೊಡೆದು ಉರುಳಿಸುವುದೇ ನನ್ನ ಗುರಿ.

– ಪರಿಣಾಮಕಾರಿ ಆಡಳಿತ ನೀಡುವ ಉದ್ದೇಶದಿಂದ ಸಂಪುಟ ಪುನಾರಚನೆ ಎಂದರು ಮುಖ್ಯಮಂತ್ರಿ. ನನ್ನನ್ನು ಕೈಬಿಟ್ಟು ಪ್ರಮೋದ್ ಮದ್ವರಾಜ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಕೆಲವರನ್ನು ಸೇರಿಸಿಕೊಳ್ಳುವುದರ ಮೂಲಕ ಪರಿಣಾಮಕಾರಿ ಆಡಳಿತ ನೀಡಲು ಸಾಧ್ಯವಾಗಿದೆಯೇ?

– ಮುಖ್ಯಮಂತ್ರಿ ನಾವಿಬ್ಬರೂ ಒಂದೇ ಜಿಲ್ಲೆಯವರು, ಬಹಳ ಆತ್ಮೀಯರು. ಮೂರು ವರ್ಷಗಳಲ್ಲಿ ಒಂದು ಬಾರಿಯೂ ಆರೋಗ್ಯದ ವಿಷಯದಲ್ಲಿ ನನ್ನ ಬಳಿ ಚರ್ಚೆ ನಡೆಸಲಿಲ್ಲ. ಬದಲಿಗೆ ಹೇಳದೆ ಕೇಳದೆ ಮಂತ್ರಿ ಸ್ಥಾನದಿಂದ ಕಿತ್ತು ಹಾಕಿ ನನ್ನನ್ನು ಅವಮಾನಿಸಿದರು.

– ಮನಸ್ವಿನಿ ಯೋಜನೆ ನನ್ನ ಕನಸಿನ ಕೂಸು. ಜಾತಿವಾರು ಸ್ಮಶಾನಗಳ ಬದಲು ಸರ್ಕಾರಿ ಸ್ಮಶಾನ ಮಾಡಿದ್ದು ನನ್ನ ಸಾಧನೆಯಲ್ಲವೇ? ಕಂದಾಯ ಸಚಿವನಾಗುವ ಮುನ್ನ ಸರ್ವೇಯರ್ಗಳ ಕೊರತೆ ಇತ್ತು. ಯಾವುದೇ ಲೋಪ ದೋಷಗಳಾದಂತೆ ಸಾವಿರಕ್ಕೂ ಹೆಚ್ಚು ಸರ್ವೇಯರ್ಗಳ ನೇಮಕವಾಗುವಂತೆ ನೋಡಿಕೊಂಡೆ.

– ವೈಯಕ್ತಿಕ ಕಾರಣಗಳಿಂದ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ನನ್ನ ಸಂಪರ್ಕದಲ್ಲಿದ್ದಾರೆ ನಿಜ. ಆದರೆ ಎಲ್ಲದರ ಕುರಿತು ಪಕ್ಷದ ಕಾರ್ಯಕರ್ತರ ಜತೆ ಚರ್ಚಿಸಿ ಮುಂದಿನ ನಿರ್ಧಾರಕ್ಕೆ ಬರುತ್ತೇನೆ.

– ಅಹಿಂದ ಅಂದ್ರೆ ಸಿದ್ದರಾಮಯ್ಯ, ಸಿ.ಎಂ.ಇಬ್ರಾಹಿಂ ಹಾಗೂ ಹೆಚ್.ಸಿ.ಮಹದೇವಪ್ಪ ಈ ಮೂವರೇ ಆಗಿದ್ದರು. ನನ್ನ ಮನ ಒಲಿಸಿ ಬಸವಕಲ್ಯಾಣದಲ್ಲಿ ಚಾಲನೆ ಕೊಡಿಸಿದರು.

Leave a Reply