ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ಸಿಗೆ ದಲಿತ ವಿರೋಧಿ ಪಟ್ಟ ಖಾತರಿ ಮಾಡಿದ ಶ್ರೀನಿವಾಸ ಪ್ರಸಾದ್ ನಡೆ!

ಡಿಜಿಟಲ್ ಕನ್ನಡ ವಿಶೇಷ

ಹಿರಿಯ ರಾಜಕಾರಣಿ ವಿ. ಶ್ರೀನಿವಾಸ ಪ್ರಸಾದ್ ಇದ್ದಾಗ ಸಿದ್ದರಾಮಯ್ಯ ಸರಕಾರ ಮತ್ತು ಕಾಂಗ್ರೆಸ್ಸಿಗೆ ಎಷ್ಟು ಲಾಭ ಆಯಿತೋ ಬಿಟ್ಟಿತೋ ಗೊತ್ತಿಲ್ಲ. ಆದರೆ ಅವರನ್ನು ಕಳೆದುಕೊಂಡಿದ್ದರಿಂದ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರಿಗೆ ನಷ್ಟ ಆಗುವುದಂತೂ ಸುಳ್ಳಲ್ಲ.

ಹೌದು, ಜೆಡಿಎಸ್ಸಿನಿಂದ ಹೊರದಬ್ಬಿಸಿಕೊಂಡ ಸಿದ್ದರಾಮಯ್ಯ ಚಾಮುಂಡೇಶ್ವರಿ ಮರುಚುನಾವಣೆಯಲ್ಲಿ ಗೆದ್ದದ್ದರಿಂದ ಹಿಡಿದು ಮುಖ್ಯಮಂತ್ರಿ ಪಟ್ಟದವರೆಗೆ ಮಾಡಿದ ಯಾನದ ನಾವೆಗೆ ಹುಟ್ಟು ಹಾಕಿದವರ ಪೈಕಿ ಶ್ರೀನಿವಾಸ ಪ್ರಸಾದ್ ಪ್ರಮುಖರು. ಸಂಪುಟದಿಂದ ಹೊರದಬ್ಬಿಸಿಕೊಂಡು ಇದೀಗ ಶಾಸಕ ಸ್ಥಾನ ಮತ್ತು ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಶ್ರೀನಿವಾಸ ಪ್ರಸಾದ್ ಅವರು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ಸಿಗೆ ದಲಿತ ವಿರೋಧಿ ಪಟ್ಟವನ್ನು ಖಚಿತಪಡಿಸಿ ಹೋಗಿದ್ದಾರೆ. ಪರಿಶಿಷ್ಟರ ರಾಜಕೀಯ ಅಧಿಕಾರ ಕೂಗು ಭುಗಿಲೆದ್ದಾಗಲೆಲ್ಲ ‘ನಾನೇ ದಲಿತ ಸಿಎಂ’ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಸಿದ್ದರಾಮಯ್ಯನವರ ಮುಖವಾಡವನ್ನೂ ಪ್ರಸಾದ್ ಕಳಚಿ ಬಿಸಾಡಿದ್ದಾರೆ.

ನಿಜ, ಅವತ್ತು ಚಾಮುಂಡೇಶ್ವರಿ ಮರುಚುನಾವಣೆಯಲ್ಲಿ ಕೇವಲ 257 ಮತಗಳಿಂದ ಗೆದ್ದು ರಾಜಕೀಯ ಮರುಜೀವ ಪಡೆದ ಸಿದ್ದರಾಮಯ್ಯನವರಿಗೆ ಪರಿಶಿಷ್ಟರ ಮತಗಳು ಇಡಿ ಇಡೀಯಾಗಿ ಬರುವಲ್ಲಿ ಶ್ರೀನಿವಾಸ ಪ್ರಸಾದ್ ಮತ್ತು ಎಚ್.ಸಿ. ಮಹದೇವಪ್ಪ ಕೊಟ್ಟ ಕೊಡುಗೆ ಮಹತ್ವದ್ದು. ಆಗ ಸಿದ್ದರಾಮಯ್ಯನವರು ತಾವೆಷ್ಟೇ ಅಹಿಂದ ನಾಯಕ ಎಂದು ಸಾರಿಕೊಂಡಿದ್ದರೂ ಮೈಸೂರು, ಚಾಮರಾಜನಗರ, ಮಂಡ್ಯ ಭಾಗದ ದಲಿತರ ಪಾಲಿಗೆ ಅವರೊಬ್ಬ ಜಾತೀವಾದಿಯೇ ಆಗಿ ಕಂಡಿದ್ದರು. ಮರುಚುನಾವಣೆ ಸಂದರ್ಭದಲ್ಲಿ ಒಂದೊಮ್ಮೆ ಶ್ರೀನಿವಾಸ ಪ್ರಸಾದ್ ಅವರು ಬೆನ್ನಿಗೆ ನಿಲ್ಲದೇ ಹೋಗಿದ್ದರೆ ಸಿದ್ದರಾಮಯ್ಯನವರು ಖಂಡಿತವಾಗಿಯೂ ಗೆಲ್ಲುತ್ತಿರಲಿಲ್ಲ. ಮುಖ್ಯಮಂತ್ರಿ ಪಟ್ಟದವರೆಗೂ ಸಾಗುತ್ತಿರಲಿಲ್ಲ. ಅಂಥ ಶ್ರೀನಿವಾಸ ಪ್ರಸಾದ್ ಅವರನ್ನು ಸಿದ್ದರಾಮಯ್ಯನವರು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದಿತ್ತು. ಪ್ರತಿಷ್ಠೆ ಮತ್ತು ಹಠಕ್ಕಿಂಥ ನಿಯತ್ತು ಮುಖ್ಯವಾಗಬೇಕಿತ್ತು.

ಕಾಂಗ್ರೆಸ್, ಜೆಡಿಎಸ್, ಬಿಜೆಪಿಯಲ್ಲಿ ಸುತ್ತು ಹೊಡೆದು ವಾಜಪೇಯಿ ಸಂಪುಟದಲ್ಲಿ ಸಚಿವರಾಗಿಯೂ ಕೆಲಸ ಮಾಡಿರುವ ಶ್ರೀನಿವಾಸ ಪ್ರಸಾದ್ ಕರ್ನಾಟಕದ ಮಟ್ಟಿಗೆ ದಲಿತರ ಪ್ರಶ್ನಾತೀತ ನಾಯಕ ಅಲ್ಲದಿದ್ದರೂ ಸಮುದಾಯದ ಅದರಲ್ಲೂ ಬಲಗೈ ಪಾಳೆಯದ ಪ್ರಭಾವಿ ಮುಖಂಡರಂತೂ ಆಗಿದ್ದರು. ಅವರಿಗೆ ಒಂದ್ಹತ್ತು ಮಂದಿಯನ್ನು ಗೆಲ್ಲಿಸಿಕೊಂಡು ಬರಲು ಆಗದಿದ್ದರೂ ಸೋಲಿಸುವ ತಾಕತ್ತಂತೂ ಇದ್ದೇ ಇದೆ. ರಾಜ್ಯದಲ್ಲಿ ದಲಿತ ಸಿಎಂ ಕೂಗು ಕೇಳಿಬಂದಾಗಲೆಲ್ಲ ಶ್ರೀನಿವಾಸ ಪ್ರಸಾದ್ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಬೇಡ ಅಂದಿರಲಿಲ್ಲ. ತಾವು ವಹಿಸಿಕೊಂಡಿದ್ದ ಕಂದಾಯ ಇಲಾಖೆಯಲ್ಲಿ ಹೇಳಿಕೊಳ್ಳುವಂಥ ಸುಧಾರಣೆ ತರದಿದ್ದರೂ ಭ್ರಷ್ಟಾಚಾರವನ್ನು ಒಂದು ಹಂತಕ್ಕೆ ನಿಯಂತ್ರಣದಲ್ಲಿ ಇರಿಸಿದ್ದರು. ತಾವು ವಾಜಪೇಯಿ ಸಂಪುಟದಲ್ಲಿ ಕೆಲಸ ಮಾಡಿದ್ದನ್ನೇ ಮುಂದಿಟ್ಟುಕೊಂಡು ಸಿದ್ದರಾಮಯ್ಯನವರ ಮುಖ್ಯಮಂತ್ರಿ ಸ್ಥಾನ ಬೇಡುವ ಗೌರವವನ್ನು ಪಕ್ಕಕ್ಕೆ ತಳ್ಳಿ ಹಾಕಿದ್ದರು. ಇದಕ್ಕೆ ಹಳೆಯ ಸಲುಗೆಯನ್ನು ಅವರು ನೆಪ ಮಾಡಿಕೊಂಡಿದ್ದರೂ ಸಿದ್ದರಾಮಯ್ಯನವರು ಸಿಎಂ ಪಟ್ಟದ ಕಣ್ಣಿಂದ ಇದನ್ನು ನೋಡಿದ್ದರಿಂದ
ಉಭಯತ್ರರ ನಡುವೆ ಸೃಷ್ಟಿಯಾದ ಬಿರುಕು ಇವತ್ತು ಶ್ರೀನಿವಾಸ ಪ್ರಸಾದ್ ಶಾಸಕ ಸ್ಥಾನದ ರಾಜೀನಾಮೆಯೊಂದಿಗೆ ಪರ್ಯವಸನಗೊಂಡಿದೆ.

ಇರಲಿ, ಈ ಪ್ರಹಸನದಲ್ಲಿ ಶ್ರೀನಿವಾಸ ಪ್ರಸಾದ್ ಕಳೆದುಕೊಂಡದ್ದಕ್ಕಿಂತ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಕಳೆದುಕೊಂಡಿದ್ದೇ ಹೆಚ್ಚು. ದಲಿತರಿಗೆ ರಾಜಕೀಯ ನಾಯಕತ್ವ ಕೊಡುವ ವಿಚಾರದಲ್ಲಿ ಪದೇ ಪದೇ ನಿರಾಕರಣೆ ಭಾವ ಪ್ರದರ್ಶಿಸುತ್ತಾ ಬಂದ ಸಿದ್ದರಾಮಯ್ಯ ದಲಿತ ವಿರೋಧಿ ಹಣೆಪಟ್ಟಿ ಹಚ್ಚಿಸಿಕೊಂಡರು. ಅದು ಡಾ. ಜಿ. ಪರಮೇಶ್ವರ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ವಿಚಾರವಿರಲಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ನಿವಾರಿಸಿಕೊಳ್ಳುವ ಯೋಜನೆ ಇರಲಿ – ಇವು ದಲಿತ ವಿರೋಧಿ ಪಟ್ಟ ತಂದುಕೊಡುವುದರ ಜತೆಜತೆಗೆ ದಲಿತ ಸಿಎಂ ವಾದ ಅನಾವರಣಕ್ಕೂ ನಾಂದಿ ಹಾಡಿತು. ಆಗ ಅಧೀರರಾದ ಸಿದ್ದರಾಮಯ್ಯ ತಮಗೊಲಿದ ಬಿರುದು ಕಳಚಿಕೊಳ್ಳಲು 50 ಲಕ್ಷ ರುಪಾಯಿವರೆಗಿನ ಕಾಮಗಾರಿಗಳ ಗುತ್ತಿಗೆಯಲ್ಲಿ ಪರಿಶಿಷ್ಟರಿಗೆ ಮೀಸಲು ವ್ಯವಸ್ಥೆ ಜಾರಿಗೆ ತಂದು ಆ ಸಮುದಾಯದ ಮೂಗಿಗೆ ತುಪ್ಪ ಸವರಲು ಯತ್ನಿಸಿದರು. ಆದರೂ ದಲಿತ ಸಿಎಂ ಕೂಗು ನಿಲ್ಲಲಿಲ್ಲ. ಈ ಕೂಗು ಕೇಂದ್ರಿತವಾಗಿದ್ದ ಖರ್ಗೆ ಅವರನ್ನು ಒಲಿಸಿಕೊಳ್ಳಲು ಅವರ ಪುತ್ರ ಪ್ರಿಯಾಂಕ ಅವರನ್ನು ಸಂಪುಟಕ್ಕೆ ತೆಗೆದುಕೊಂಡು ಶ್ರೀನಿವಾಸ ಪ್ರಸಾದ್ ಅವರನ್ನು ಕೈಬಿಟ್ಟ ಸಿದ್ದರಾಮಯ್ಯ ಇದರಿಂದ ಹೆಚ್ಚಿನ ಅನಾಹುತ ಏನೂ ಆಗುವುದಿಲ್ಲ ಎಂದುಕೊಂಡಿದ್ದರು. ಆದರೆ ಈ ವಿಚಾರದಲ್ಲಿ ಖರ್ಗೆ ಮತ್ತು ಸಿದ್ದರಾಮಯ್ಯ ಇಬ್ಬರೂ ‘ನೊಣ ತಿಂದು ಜಾತಿ ಕೆಡೆಸಿಕೊಂಡರು’ ಎಂಬಂತಾದರು. ಪುತ್ರ ವ್ಯಾಮೋಹಕ್ಕೆ ಖರ್ಗೆ ದಲಿತ ಸಿಎಂ ಕೂಗಿನ ಸುಪಾರಿ ಹಂತಕ ಪಟ್ಟ ತಂದುಕೊಂಡರೆ, ಸುಪಾರಿ ಕೊಟ್ಟ ಸಿದ್ದರಾಮಯ್ಯ ದಲಿತ ವಿರೋಧಿ ಅಭಿಯಾನದ ಅಭಿನವ ನಾಯಕರೆನಿಸಿಕೊಂಡರು.

ಅತ್ತ ಬಿಜೆಪಿಯಲ್ಲಿ ರಾಯಣ್ಣ ಬ್ರಿಗೇಡ್ ಮೂಲಕ ದಲಿತರು ಹಾಗೂ ಹಿಂದುಳಿದವರನ್ನು ಸಂಘಟಿಸಲು ಕೆ.ಎಸ್. ಈಶ್ವರಪ್ಪ ಹೊರಟಿರುವಾಗ ಇತ್ತ ಶ್ರೀನಿವಾಸ ಪ್ರಸಾದ್ ಹೋದಲ್ಲಿ-ಬಂದಲ್ಲಿ ಸಿದ್ದರಾಮಯ್ಯ ದಲಿತ ವಿರೋಧಿ ಎಂದು ಸಾರುತ್ತಿರುವುದು ಮುಖ್ಯಮಂತ್ರಿ ಅವರನ್ನು ವಿಚಲಿತರನ್ನಾಗಿ ಮಾಡಿದೆ. ದಲಿತರು ಸಿದ್ದರಾಮಯ್ಯ ಅವರಿಂದ ದೂರ ಸರಿಯುತ್ತಾರೆ ಎನ್ನುವುದಕ್ಕಿಂತ ಕಾಂಗ್ರೆಸ್ಸಿನಿಂದ ವಿಮುಖರಾಗುತ್ತಾರೆ ಎನ್ನುವುದೇ ಆತಂಕವನ್ನು ಇಮ್ಮಡಿಗೊಳಿಸಿದೆ. ಯಾಕೆಂದರೆ ಹಳೇ ಮೈಸೂರು ಭಾಗದಲ್ಲಿ ಒಂದಷ್ಟು ದಲಿತ ಮತಗಳನ್ನು ಪಲ್ಲಟ ಮಾಡುವ ಶಕ್ತಿ ಪ್ರಸಾದ್ ಅವರ ನಾಲಿಗೆಗೆ ಇದೆ.
ಇದನ್ನರಿತೇ ಸಿದ್ದರಾಮಯ್ಯನವರು ಪರಿಶಿಷ್ಟರಿಗೆ ಸಿಗುವ ಒಟ್ಟಾರೆ ಮೀಸಲು ಪ್ರಮಾಣ ಶೇಕಡಾ 50 ಕ್ಕಿಂತ ಹೆಚ್ಚು ಇರಬೇಕು ಎಂದು ಹೇಳಿದ್ದೇ ಅಲ್ಲದೇ ಈ ಬಗ್ಗೆ ಸಾಧಕ-ಬಾಧಕಗಳ ಪರಾಮರ್ಶೆಗೆ ಸಮಿತಿ ರಚನೆ ಮಾಡುವುದಾಗಿಯೂ ಘೋಷಿಸಿದ್ದಾರೆ. ಇದರ ಹಿಂದೆ ಶಾಸಕ ಸ್ಥಾನ ಮತ್ತು ಕಾಂಗ್ರೆಸ್ ಸದಸ್ಯತ್ವ ತ್ಯಜಿಸಿರುವ ಶ್ರೀನಿವಾಸ ಪ್ರಸಾದ್ ಮುಂದೆ ಹೂಡಬಹುದಾದ ವಾಗ್ಬಾಣಗಳು ಪಕ್ಷಕ್ಕೆ ಮಾಡಬಹುದಾದ ಅನಾಹುತ ತಡೆ ಪ್ರಯತ್ನ ಅಡಗಿದೆ.

ಇದೆಲ್ಲ ಏನೇ ಇರಲಿ ಪ್ರಸಾದ್ ಪ್ರಹಸನದಿಂದ ದಲಿತ ಸಮುದಾಯಕ್ಕೆ ಬೇಸರ ಆಗಿರುವುದು ಸುಳ್ಳಲ್ಲ. ಈ ಬೇಸರ ಅವರನ್ನು ಕಾಂಗ್ರೆಸ್ಸಿನಿಂದ ವಿಮುಖರನ್ನಾಗಿ ಮಾಡುತ್ತಿರುವುದು ಸುಳ್ಳಲ್ಲ. ಪ್ರಸಾದ್ ಮುಂದೆ ಯಾವ ಪಕ್ಷಕ್ಕೆ ಹೋಗುತ್ತಾರೋ, ಅವರಿಂದ ಆ ಪಕ್ಷಕ್ಕೆ ಸಮುದಾಯದ ಮತಗಳು ಅವೆಷ್ಟು ಹರಿದು ಬರುತ್ತವೋ, ಅದರಿಂದ ಆ ಪಕ್ಷಕ್ಕೆ ಎಷ್ಟು ಲಾಭ ಆಗುತ್ತದೋ ಬಿಡುತ್ತದೋ ಅದು ಬೇರೆ ವಿಚಾರ. ಆದರೆ ಸದಾ ದಲಿತೋದ್ಧಾರ ಘೋಷಣೆಯ ಝಂಡಾ ಹಿಡಿದುಕೊಂಡೇ ಕುಣಿಯುತ್ತಿದ್ದ ಕಾಂಗ್ರೆಸ್ಸಿನಿಂದ
ಆ ಸಮುದಾಯದವರು ವಿಮುಖರಾಗುವ ಪರಿಸ್ಥಿತಿ ನಿರ್ಮಾಣ ಮಾಡಿರುವ ಹೆಗ್ಗಳಿಕೆ ಮಾತ್ರ ಸಿದ್ದರಾಮಯ್ಯನವರಿಗೇ ಸಲ್ಲಬೇಕು. ಅವರೆಷ್ಟೇ ಯೋಜನೆಗಳನ್ನು ಪ್ರಕಟಿಸಲಿ, ಆಮಿಷಗಳನ್ನು ಒಡ್ಡಲಿ ಅವರನ್ನು ನಂಬುವ ಸ್ಥಿತಿಯಲ್ಲಿ ಪರಿಶಿಷ್ಟ ಸಮುದಾಯದವರು ಇಲ್ಲ.

Leave a Reply