ಪಾಕಿಸ್ತಾನ ನ್ಯೂಕ್ಲಿಯರ್ ಪೊಳ್ಳು ಪರಾಕ್ರಮ ಕೊಚ್ಚಿಕೊಳ್ಳುತ್ತಿರುವಾಗಲೇ ಇತ್ತ ಭಾರತದ ಬತ್ತಳಿಕೆಗೆ ಸದ್ದಿಲ್ಲದೇ ಸೇರಿದೆ ಐಎನ್ಎಸ್ ಅರಿಹಂತ, ನಾವೀಗ ತ್ರಿವಳಿ ಅಣ್ವಸ್ತ್ರ ಬಲ

ಡಿಜಿಟಲ್ ಕನ್ನಡ ಟೀಮ್:

ಕಳೆದ ಆಗಸ್ಟ್ ನಲ್ಲೇ ಭಾರತೀಯ ನೌಕಾ ಸೇನೆಗೆ ಬ್ರಹ್ಮಾಸ್ತ್ರವೊಂದು ಗೌಪ್ಯವಾಗಿ ಸೇರ್ಪಡೆಯಾಗಿದೆ. ಅದು ಯಾವುದೆಂದರೆ, ಸ್ವದೇಶಿ ನಿರ್ಮಿತ ಅಣ್ವಸ್ತ್ರ ಕ್ಷಿಪಣಿ ಜಲಾಂತರ್ಗಾಮಿ ‘ಐಎನ್ಎಸ್ ಅರಿಹಂತ್’…

ಭಾರತೀಯ ನೌಕಾ ಸೇನೆಗೆ ಮೊದಲ ಬಾರಿಗೆ ಸ್ವದೇಶಿ ನಿರ್ಮಿತ ಅಣ್ವಸ್ತ್ರ ಕ್ಷಿಪಣಿಯ ಜಲಾಂತರ್ಗಾಮಿಯನ್ನು ತನ್ನ ಬತ್ತಳಿಕೆಗೆ ಸೇರ್ಪಡೆಗೊಳಿಸಿಕೊಂಡಿದ್ದು, ಅದರೊಂದಿಗೆ ಭಾರತೀಯ ಸೇನೆ ತ್ರಿವಳಿ ಅಣ್ವಸ್ತ್ರ ಸಾಮರ್ಥ್ಯವನ್ನು ಪೂರೈಸಿಕೊಂಡಿದೆ. ಅಂದರೆ, ಮೂರೂ ವಿಧದ ರಕ್ಷಣಾ ವಿಭಾಗಗಳಾದ ಭೂ, ವಾಯು ಹಾಗೂ ನೌಕಾ ಸೇನೆಗಳಲ್ಲಿ ಅಣ್ವಸ್ತ್ರಗಳನ್ನು ಹೊಂದುವುದು. ಸುದೀರ್ಘ ವರ್ಷಗಳಿಂದ ಭಾರತ ಕಾಯುತ್ತಿದ್ದ ತ್ರಿವಳಿ ಅಣ್ವಸ್ತ್ರ ಸಾಮರ್ಥ್ಯ ಈಗ ಈಡೇರಿದಂತಾಗಿದೆ. ಭೂ ಸೇನೆಯಲ್ಲಿ ಅಗ್ನಿ ಬ್ಯಾಲಿಸ್ಟಿಕ್ ಕ್ಷಿಪಣಿ, ವಾಯು ಸೇನೆಯಲ್ಲಿ ಅಣ್ವಸ್ತ್ರಗಳನ್ನು ಹೊತ್ತೊಯ್ಯಬಲ್ಲ ಮಿರಾಜ್ 2000 ಶ್ರೇಣಿಯ ಯುದ್ಧ ವಿಮಾನಗಳು ತಮ್ಮ ಸೇವೆ ಆರಂಭಿಸಿದ್ದವು.  ನೌಕಾ ಸೇನೆಯಲ್ಲಿ ಪೂರ್ಣಮಟ್ಟದ ಅಣ್ವಸ್ತ್ರ ಬಲದ ಕೊರತೆ ಇತ್ತು. ಈಗ ಆ ಕೊರತೆಯನ್ನು ಐಎನ್ಎಸ್ ಅರಿಹಂತ್ ನೀಗಿಸಿದೆ.

ಇದಕ್ಕೂ ಮೊದಲು ಭಾರತದ ಬಳಿ ಅಣ್ವಸ್ತ್ರ ಹೊಂದಿದ ಜಲಾಂತರ್ಗಾಮಿಗಳು ಇರಲೇ ಇಲ್ಲ ಎಂದಲ್ಲ. ಆದರೆ ಅವು ದಾಳಿಗೆ ಬಳಸುವವಾಗಿದ್ದವು. ಈ ಮಟ್ಟದ ಕ್ಷಿಪಣಿ ಸಾಮರ್ಥ್ಯವಿರಲಿಲ್ಲ. ಮುಖ್ಯವಾಗಿ ಇವೆಲ್ಲ ರಷ್ಯಾ, ಜರ್ಮನಿ ನಿರ್ಮಿತ ವಿದೇಶಿ ಜಲಾಂತರ್ಗಾಮಿಗಳಾಗಿದ್ದವು.

ಈ ಅಣ್ವಸ್ತ್ರ ಜಲಾಂತರ್ಗಾಮಿ ಭಾರತೀಯ ಸೇನೆಗೆ ಸೇವೆ ಆರಂಭಿಸಿರುವುದನ್ನು ಅಧಿಕೃತವಾಗಿ ಘೋಷಿಸಿಲ್ಲ. ಇದೊಂದು ತಂತ್ರಗಾರಿಕೆಯ ಅಸ್ತ್ರವಾಗಿ ಬಳಸಿಕೊಳ್ಳಲು ಭಾರತ ಸರ್ಕಾರ ನಿರ್ಧರಿಸಿದ್ದು, ಈ ಬಗ್ಗೆ ನಾಕಾ ಸೇನಾಧಿಕಾರಿಗಳಾಗಲಿ ಅಥವಾ ಇದಕ್ಕೆ ಸಂಬಂಧಿಸಿದ ಇತರೆ ಅಧಿಕಾರಿಗಳು ಅಧಿಕೃತ ಮಾಹಿತಿಯನ್ನು ನೀಡುತ್ತಿಲ್ಲ. ಈ ಬಗೆಗಿನ ಎಲ್ಲ ನಿರ್ಧಾರಗಳನ್ನು ಪ್ರಧಾನ ಮಂತ್ರಿ ಕಾರ್ಯಾಲಯವೇ ನಿರ್ವಹಿಸುತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಸುದ್ದಿ ಜಾಲತಾಣ ವರದಿ ಮಾಡಿದೆ.

ins harihant

ಐಎನ್ಎಸ್ ಅರಿಹಂತ್ ಅಣ್ವಸ್ತ್ರ ಕ್ಷಿಪಣಿ ಜಲಾಂತರ್ಗಾಮಿ ಗ್ರಾಫಿಕ್ಸ್ ನೀಲನಕ್ಷೆ

ಐಎನ್ಎಸ್ ಅರಿಹಂತ್ ಸಾಮರ್ಥ್ಯ ಹಾಗೂ ಪ್ರಯೋಜನಗಳು…

ಈ ಜಲಾಂತರ್ಗಾಮಿ 6 ಸಾವಿರ ಟನ್ ತೂಕದಲ್ಲಿದೆ. ಈ ಶ್ರೇಣಿಯ ಜಲಾಂತರ್ಗಾಮಿಗಳು 750 ಕಿ.ಮೀ ನಿಂದ 3,500 ಕಿ.ಮೀ ಸಾಮರ್ಥ್ಯದ ಕ್ಷಿಪಣಿಗಳನ್ನು ಹಾರಿಸಬಲ್ಲವು. 2014ರ ಡಿಸೆಂಬರ್ ನಿಂದ ನಿರಂತರವಾಗಿ ಸಮುದ್ರದಲ್ಲಿ ಹಲವು ಹಂತದ ಪ್ರಯೋಗಗಳನ್ನು ನಡೆಸಿದ ನಂತರ ಈ ಅಣ್ವಸ್ತ್ರ ಜಲಾಂತರ್ಗಾಮಿಯನ್ನು ಸೇವೆಗೆ ಒಳಪಡಿಸಿದೆ. ಚೀನಾ, ರಷ್ಯಾ ಮತ್ತು ಅಮೆರಿಕ ರಾಷ್ಟ್ರಗಳು ಈಗಾಗಲೇ 5,000 ಕಿ.ಮೀ ಸಾಮರ್ಥ್ಯದ ಅಣ್ವಸ್ತ್ರ ಕ್ಷಿಪಣಿ ಜಲಾಂತರ್ಗಾಮಿಗಳನ್ನು ಹೊಂದಿದ್ದು, ಭಾರತೀಯ ಸೇನೆಗೆ ಈ ಜಲಾಂತರ್ಗಾಮಿ ಸೇರ್ಪಡೆ ಮಹತ್ವದ್ದಾಗಿದೆ.

ಇನ್ನು ಈ ಜಲಾಂತರ್ಗಾಮಿಗಳಲ್ಲಿ ಅಳವಡಿಸಲಾಗುವ ಅಣ್ವಸ್ತ್ರ ಕ್ಷಿಪಣಿಗಳಿಗೆ ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್ ಕಲಾಂ ಅವರ ನೆನಪಿನ ಹಿನ್ನೆಲೆಯಲ್ಲಿ ‘ಕೆ’ ಶ್ರೇಣಿಯ ಹೆಸರನ್ನಿಡಲಾಗಿದೆ. ಆ ಪೈಕಿ ಕೆ-15 ಕ್ಷಿಪಣಿಯು 750 ಕಿ.ಮೀ ದೂರ ಸಾಮರ್ಥ್ಯವನ್ನು ಹೊಂದಿದ್ದು, ಕೆ-4 3,500 ಕಿ.ಮೀ ದೂರ ಸಾಗಬಲ್ಲ ಸಾಮರ್ಥ್ಯ ಹೊಂದಿದೆ.

ಮೊದಲ ಐಎನ್ಎಸ್ ಅರಿಹಂತ್ ಅಣ್ವಸ್ತ್ರ ಕ್ಷಿಪಣಿ ಜಲಾಂತರ್ಗಾಮಿಯ ಸೇವೆಗೆ ಸೇರಿದ ನಂತರ, ಎರಡನೇ ಜಲಾಂತರ್ಗಾಮಿಯನ್ನು 2018ರ ವೇಳೆಗೆ ನಿರ್ಮಿಸಿ ಸೇವೆಗೆ ಸಿದ್ಧಗೊಳಿಸುವ ನಿರೀಕ್ಷೆ ಹೊಂದಿದೆ ಭಾರತೀಯ ಸೇನೆ. ಪಾಕಿಸ್ತಾನ ಮತ್ತು ಚೀನಾದ ಅಣ್ವಸ್ತ್ರ ನೀತಿಯಿಂದಾಗಿ ಹಿಂದೂ ಮಹಾ ಸಾಗರದಲ್ಲಿ ಚೀನಾದ ಅಣ್ವಸ್ತ್ರ ಜಲಾಂತರ್ಗಾಮಿಗಳು ಉಪಸ್ಥಿತಿ ಹೆಚ್ಚಾಗಿವೆ. ಹೀಗಾಗಿ ಭಾರತೀಯ ಸೇನೆ ತನ್ನ ಅಣ್ವಸ್ತ್ರ ಕ್ಷಿಪಣಿ ಜಲಾಂತರ್ಗಾಮಿಯನ್ನು ಹೊಂದುವ ಅಗತ್ಯ ಹೆಚ್ಚಾಗಿತ್ತು.

Leave a Reply