ರಾಜಿನಾಮೆ ಅಂಗೀಕರಿಸಲು ಸಮಯ ಬೇಕು ಅಂದ್ರು ಕೋಳಿವಾಡ,  ಸಿಎಂಗೆ ಗಿಫ್ಟ್ ಬೇಡ್ವಂತೆ, ರುದ್ರೇಶ್ ಹತ್ಯೆ- ತೆರೆದುಕೊಂಡಿರುವ ರಾಜಕೀಯ ಅನುಮಾನಗಳು, ಸರ್ಕಲ್ ಇನ್ಸ್ ಪೆಕ್ಟರ್ ಆತ್ಮಹತ್ಯೆ, ರಾಮಾಯಣ ವಸ್ತುಸಂಗ್ರಹಾಲಯ- ಉ.ಪ್ರ. ಚುನಾವಣಾ ಕಣದಲ್ಲಿ ಬಿಜೆಪಿ ಕಸರತ್ತು, ಸ್ಮೃತಿ ಇರಾನಿ ಪದವಿ ನಿರಾಳ

RAF Police force during route March at Shivajinagar in Bengaluru on Tuesday.

ಹತ್ಯೆಗೀಡಾದ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಅವರ ಅಂತ್ಯಸಂಸ್ಕಾರ ಮಂಗಳವಾರ ನೆರವೇರಿತು. ಶಾಂತಿಪಾಲನೆಗಾಗಿ ಶಿವಾಜಿನಗರದಲ್ಲಿ ತುರ್ತು ದಳವು ಪಥಸಂಚಲನ ನಡೆಸಿತು.

ಡಿಜಿಟಲ್ ಕನ್ನಡ ಟೀಮ್:

ಶ್ರೀನಿವಾಸ ಪ್ರಸಾದ್ ರಾಜಿನಾಮೆ ಅಂಗೀಕರಿಸಲು ಸಮಯಬೇಕು

ಮಾಜಿ ಸಚಿವ ಹಾಗೂ ಹಿರಿಯ ನಾಯಕ ವಿ.ಶ್ರೀನಿವಾಸ ಪ್ರಸಾದ್ ಅವರ ರಾಜಿನಾಮೆ ಅಂಗೀಕರಿಸಲು ಕಾಲಾವಕಾಶ ಬೇಕಿದೆ ಎಂದಿದ್ದಾರೆ ವಿಧಾನ ಸಭೆ ಅಧ್ಯಕ್ಷರಾದ ಕೆ.ಬಿ ಕೋಳಿವಾಡ. ಶ್ರೀನಿವಾಸ ಪ್ರಸಾದ್ ಅವರ ರಾಜಿನಾಮೆ ಅಂಗೀಕರಿಸುವುದಿಲ್ಲ ಎಂಬ ಮಾಧ್ಯಮಗಳ ವರದಿಗೆ ಸ್ಪಷ್ಟನೆ ನೀಡಿದ ಅವರು ಹೇಳಿದಿಷ್ಟು… ‘ಶ್ರೀನಿವಾಸ ಪ್ರಸಾದ್ ಅವರ ರಾಜಿನಾಮೆ ಸ್ವೀಕರಿಸಿದ್ದೇನೆ. ಅದನ್ನು ನಿರಾಕರಿಸಿಲ್ಲ. ಹಾಗೆಯೇ ಅಂಗೀಕರಿಸಿಯೂ ಇಲ್ಲ. ಆದರೆ ಈ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ಸರಿಯಲ್ಲ. ಈ ಬಗ್ಗೆ ಇಲಾಖೆ ಅಧಿಕಾರಿಗಳ ಜತೆ ನಾನು ಸಮಾಲೋಚನೆ ಮಾಡಿಲ್ಲ. ಹೀಗಾಗಿ ಈ ರಾಜಿನಾಮೆ ಪತ್ರ ಅಂಗೀಕರಿಸಲು ನಮಗೆ ಕಾಲಾವಕಾಶಬೇಕು. ಈ ರಾಜಿನಾಮೆಯನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ನನಗೆ ಇದೆ.’

ಜೆಡಿಎಸ್ ನಿಂದ ಅಮಾನತುಗೊಂಡಿರುವ ಎಂಟು ಶಾಸಕರ ಅನರ್ಹತೆಗೊಳಿಸುವ ಬಗ್ಗೆ ಅಕ್ಟೋಬರ್ 27 ರಂದು ಅಂತಿಮ ತೀರ್ಮಾನ ಕೈಗೊಳ್ಳುವುದಾಗಿಯೂ ಮಾಹಿತಿ ನೀಡಿದರು.

ಗಿಫ್ಟ್ ಸಹವಾಸ ಬೇಡ ಅಂದ್ರು ಸಿದ್ದು

ದೀಪಾವಳಿ ಹಬ್ಬದ ಪ್ರಯುಕ್ತ ಸರ್ಕಾರಿ ಸ್ವಾಮ್ಯದ ರೇಷ್ಮೆ ಉದ್ಯಮ ನಿಗಮವು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಉಡುಗೊರೆ ನೀಡಲು ಮುಂದಾಗಿತ್ತು. ಆದರೆ ಈ ಉಡುಗೊರೆಯನ್ನು ಸಿಎಂ ನಿರಾಕರಿಸಿದ್ದಾರೆ. ರೇಷ್ಮೆ ಹಾಗೂ ಪಶುಸಂಗೋಪನಾ ಇಲಾಖೆ ಸಾಧನೆಗಳನ್ನು ಪರಿಶೀಲಿಸಲು ಕರೆದಿದ್ದ ಸಭೆಯಲ್ಲಿ ಈ ಇಲಾಖೆ ಜವಾಬ್ದಾರಿ ಹೊತ್ತಿರುವ ಸಚಿವ ಎ.ಮಂಜು ಅವರು ಮುಖ್ಯಮಂತ್ರಿಗಳಿಗೆ ರೇಷ್ಮೇ ಸೀರೆ, ಪಂಚೆ ಸೇರಿದಂತೆ ಉಡುಗೊರೆ ನೀಡಲು ಮುಂದಾದರು. ಅದು ತಮಗೆ ಉಡುಗೊರೆಯಾಗಿ ಸಿಗುತ್ತಿದೆ ಎಂದು ತಿಳಿದ ಮುಖ್ಯಮಂತ್ರಿಗಳು ತಕ್ಷಣವೇ ಹಿಂತಿರುಗಿಸಿ ಗಿಫ್ಟ್ ಸಹವಾಸವೇ ಬೇಡ ಎಂದರು. ಇದರೊಂದಿಗೆ ದುಬಾರಿ ವಾಚ್ ಗಿಫ್ಟ್ ಪ್ರಕರಣ ಸಿದ್ದರಾಮಯ್ಯನವರನ್ನು ಎಷ್ಟರ ಮಟ್ಟಿಗೆ ಕಾಡಿದೆ ಎಂಬುದು ತಿಳಿಯುತ್ತದೆ.

ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ,ಈಗ ಅನುಮಾನ ಪರ್ವ

ನಿನ್ನೆ ಶಿವಾಜಿ ನಗರದ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಹಾಡಹಗಲೇ ಹತ್ಯೆಯಾಗಿದ್ದ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಬಿಬಿಎಂಪಿ ಕಾಂಗ್ರೆಸ್ ಸದಸ್ಯನ ಕೈವಾಡವಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಭಾರತೀನಗರ ವಾರ್ಡಿನ ಪಾಲಿಕೆ ಸದಸ್ಯ ಶಕೀಲ್ ಅಹಮದ್ ಹಾಗೂ ಶಿವಾಜಿನಗರ ಕ್ಷೇತ್ರದ ಕಾರ್ಪೊರೇಟರ್ ಪತಿ ಇಫ್ತರ್ ಅಹಮದ್ ಜತೆಯಾಗಿ ಕುಮ್ಮಕ್ಕು ಕೊಟ್ಟರೇ ಎಂಬ ಅನುಮಾನ ವ್ಯಕ್ತವಾಗಿದೆ. ಈ ಇಬ್ಬರೂ ರೌಡಿ ಶೀಟರ್ ಗಳಾಗಿದ್ದು, ಅನೇಕ ಕೊಲೆ ಪ್ರಕರಣಗಳಲ್ಲಿ ತನಿಖೆ ಎದುರಿಸುತ್ತಿದ್ದಾರೆ. ರುದ್ರೇಶ್ ಮತ್ತು ಶಕೀಲ್ ಅಹ್ಮದ್ ನಡುವೆ ಈ ಹಿಂದೆ ಬ್ಯಾನರ್ ಕಟ್ಟುವ ವಿಚಾರದಲ್ಲಿ ಜಗಳಗಳಾಗಿದ್ದವು ಹಾಗೂ ಇದನ್ನವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು ಎಂಬ ಮಾಹಿತಿಗಳಿವೆ.

ಮಾಲೂರು ಸರ್ಕಲ್ ಇನ್ಸ್ ಪೆಕ್ಟರ್ ಆತ್ಮಹತ್ಯೆ

ರಾಜ್ಯದಲ್ಲಿ ಮತ್ತೊಬ್ಬ ಪೊಲೀಸ್ ಅಧಿಕಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಎಂ.ಕೆ ಗಣಪತಿ, ಕಲ್ಲಪ್ಪ ಹಂಡಿಭಾಗ್ ಅವರ ಪ್ರಕರಣ ಎಲ್ಲರ ಮನಸಲ್ಲಿ ಹಸಿಯಾಗಿರುವಾಗಲೇ ಕೇಲಾರದ ಮಾಲೂರಿನ ಸರ್ಕಲ್ ಇನ್ಸ್ ಸ್ಪೆಕ್ಟರ್ ರಾಘವೇಂದ್ರ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೋಮವಾರ ರಾತ್ರಿ ತಮ್ಮ ಸರ್ವೀಸ್ ರಿವಾಲ್ವಾರ್ ನಿಂದಲೇ ಠಾಣೆಯ ಕಚೇರಿಯಲ್ಲಿ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ. ತಾವು ಬರೆದಿಟ್ಟ ಆತ್ಮಹತ್ಯಾ ಪತ್ರದಲ್ಲಿ, ‘ನನ್ನ ಸಾವಿಗೆ ನಾನೇ ಕಾರಣ’ ಎಂದು ಬರೆದಿದ್ದಾರೆ.

ರಾಮಾಯಣ ವಸ್ತುಸಂಗ್ರಹಾಲಯಕ್ಕೆ ಮುಂದಾದ ಬಿಜೆಪಿ

ಉತ್ತರ ಪ್ರದೇಶ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರತಿಯೊಂದು ಪಕ್ಷಗಳು ತಮ್ಮದೇ ಆದ ಟ್ರಂಪ್ ಕಾರ್ಡ್ ಬಳಸುತ್ತಿವೆ. ಈ ಹಂತದಲ್ಲಿ ಬಿಜೆಪಿಯು ರಾಮ ಮಂದಿರ ನಿರ್ಮಾಣ ವಿಚಾರವಾಗಿ ಜನರಿಗೆ ನೀಡಿದ್ದ ಭರವಸೆ ಈಡೇರಿಸಲು ವಿಫಲವಾಗಿದ್ದು, ಇದರಿಂದ ಬೇಸರಗೊಂಡಿರುವ ಜನರ ಮನವೊಲಿಸಲು ಈಗ ರಾಮಾಯಣ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಓಡಾಡುತ್ತಿದೆ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ 150 ಎಕರೆ ಜಮೀನು ಮಂಜೂರು ಮಾಡಲಾಗಿದ್ದು, ಇದರಿಂದ ಪ್ರವಾಸೋದ್ಯಮಕ್ಕೆ ಉತ್ತಮ ಪ್ರೋತ್ಸಾಹ ಸಿಗಲಿದೆ ಎಂದಿದ್ದಾರೆ ಕೇಂದ್ರ ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮಾ. ಅಲ್ಲದೆ ರಾಮ ಪ್ರತಿಯೊಬ್ಬ ಭಾರತೀಯನ ಜೀವನದ ಆಂತರಿಕ ಭಾಗವಾಗಿದ್ದಾನೆ. ಅಯೋಧ್ಯೆಯಂತಹ ಸೂಕ್ಷ್ಮ ಪ್ರದೇಶದಲ್ಲಿ ರಾಮಾಯಣ ವಸ್ತುಸಂಗ್ರಹಾಲಯ ನಿರ್ಮಾಣದ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂಬ ಸಮರ್ಥನೆ ನೀಡಿದ್ದಾರೆ.

ನಕಲಿ ಪ್ರಮಾಣ ಪತ್ರ ಪ್ರಕರಣದಲ್ಲಿ ಸ್ಮೃತಿ ಇರಾನಿಗೆ ನಿರಾಳ

ಚುನಾವಣಾ ಆಯೋಗಕ್ಕೆ ನಕಲಿ ವಿದ್ಯಾರ್ಹತೆ ಪ್ರಮಾಣ ಪತ್ರನೀಡಿರುವ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಸಮನ್ಸ್ ನೀಡದಿರಲು ದೆಹಲಿ ಕೋರ್ಟ್ ನಿರ್ಧರಿಸಿದೆ. ಅದರೊಂದಿಗೆ ಸ್ಮೃತಿ ಅವರಿಗೆ ಈ ವಿಚಾರದಲ್ಲಿ ನಿರಾಳತೆ ಸಿಕ್ಕಂತಾಗಿದೆ. ಈ ಮೊದಲು ಚುನಾವಣ ಆಯೋಗ 2004ರ ಚುನಾವಣೆ ಸಂದರ್ಭದಲ್ಲಿ ಸ್ಮೃತಿ ಇರಾನಿ ನೀಡಿದ್ದ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು.

ಅಗ್ನಿ ಅವಘಡ…

ದೇಶದ ಪ್ರಮುಖ ನಗರಗಳಾದ ಭುವನೇಶ್ವರ ಹಾಗೂ ಮುಂಬೈನಲ್ಲಿ ಎರಡು ಪ್ರತ್ಯೇಕ ಅಗ್ನಿ ಆಕಸ್ಮಿಕ ಸಂಭವಿಸಿದೆ. ಭುವನೇಶ್ವರದ ಆಸ್ಪತ್ರೆಯಲ್ಲಿ ನಡೆದ ಅಗ್ನಿ ಅನಾಹುತದಲ್ಲಿ 24 ಮಂದಿ ಮೃತಪಟ್ಟಿದ್ದು, ಮುಂಬೈನ ಅಪಾರ್ಟ್ ಮೆಂಟ್ ನ ಅಗ್ನಿ ದುರಂತದಲ್ಲಿ 2 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಕುರಿತ ಪೂರ್ಣ ವರದಿಯನ್ನು ಇಲ್ಲಿ ಓದಿ.

Leave a Reply