ಇಸ್ರೇಲಿ ಸೇನೆಯ ಶೌರ್ಯದ ಬಗ್ಗೆ ಮಾತಾಡುತ್ತಿದ್ದವರೀಗ ಭಾರತೀಯ ಸೈನ್ಯದ ಬಗ್ಗೆ ಮಾತಾಡುತ್ತಿದ್ದಾರೆ: ಪ್ರಧಾನಿ ಮೋದಿ, ಪಾರಿಕರ್ ಪ್ರಕಾರ ಆರೆಸ್ಸೆಸ್ ತತ್ತ್ವಕ್ಕೂ ಇಲ್ಲಿ ಶ್ರೇಯಸ್ಸಿದೆ!


ಡಿಜಿಟಲ್ ಕನ್ನಡ ಟೀಮ್:

ಹಿಮಾಚಲ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆಗಳ ಉದ್ಘಾಟನೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೇನೆಯನ್ನು ಹೊಗಳಿದ್ದಾರೆ.

‘ಈ ಮೊದಲು ಮಿಲಿಟರಿ ಕಾರ್ಯಾಚರಣೆಗಳಿಗಾಗಿ ಇಸ್ರೇಲಿ ಸೇನೆಯನ್ನು ಹೊಗಳಲಾಗುತ್ತಿತ್ತು. ಭಾರತ ಸೇನೆಯೂ ಯಾವುದಕ್ಕೂ ಕಡಿಮೆ ಇಲ್ಲ ಎಂದು ಜಗತ್ತಿಗೆ ಗೊತ್ತಾಗಿದೆ.’ ಎಂದು ಪರೋಕ್ಷವಾಗಿ ಗುರಿ ನಿರ್ದಿಷ್ಟ ದಾಳಿಯನ್ನು ಪ್ರಧಾನಿ ಉಲ್ಲೇಖಿಸಿ ಸೇನೆಯನ್ನು ಪ್ರಶಂಸಿಸಿದರು.

ಈ ಸೇನಾ ಪ್ರಶಂಸೆಗೆ ಅವರು ಹಿಮಾಚಲ ಪ್ರದೇಶದಲ್ಲಿರುವ ಸಂದರ್ಭವೂ ಕಾರಣವಾಗಿತ್ತು- ‘ಹಿಮಾಚಲ ಪ್ರದೇಶವು ವೀರರ ಭೂಮಿಯಾಗಿದೆ. ಹಿಮಾಚಲದ ಪ್ರತಿ ಎರಡು ಕುಟುಂಬಗಳಲ್ಲಿ ಒಬ್ಬ ವ್ಯಕ್ತಿ ಸೇನೆಯಲ್ಲಿರುತ್ತಾರೆ’ ಎಂದರು ಮೋದಿ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನೂ ನೆನಪಿಸಿಕೊಂಡು ಜನರೊಂದಿಗೆ ಆಪ್ತತೆ ಸಾಧಿಸುವ ಯತ್ನ ತೋರಿದರು ಮೋದಿ. ‘ನನಗೇನಾದರೂ ಎರಡನೇ ಮನೆ ಅಂತಿದ್ದರೆ ಅದು ಹಿಮಾಚಲ ಪ್ರದೇಶ ಎಂದು ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ್ದರು. ಹಿಮಾಚಲ ಪ್ರದೇಶವು ದೇವಭೂಮಿ ಮಾತ್ರವಲ್ಲ, ವೀರಭೂಮಿಯೂ ಹೌದು’ ಎಂದರು.

ಹಿಮಾಚಲ ಪ್ರದೇಶದಲ್ಲಿ 2014ರಲ್ಲಿ ಲೋಕಸಭೆ ಚುನಾವಣೆಯ ಪ್ರಚಾರಕ್ಕೆ ತೊಡಗಿಸಿಕೊಂಡಿದ್ದಾಗ ಏಕ ಶ್ರೇಣಿ ಏಕ ಪಿಂಚಣಿ ಈಡೇರಿಕೆಯ ಭರವಸೆ ಕೊಟ್ಟಿದ್ದೆ. ಅದನ್ನು ಈ ಸರ್ಕಾರ ಬಂದಮೇಲೆ ಯೋಧರ ಹಕ್ಕನ್ನು ನೀಡಲಾಗಿದೆ ಎಂದು ಮೋದಿ ನೆನಪಿಸಿದರಲ್ಲದೇ, ಈ ಹಿಂದಿನ ಸರ್ಕಾರಗಳು 40 ವರ್ಷಗಳಿಂದ ಇದನ್ನು ಈಡೇರಿಸದೇ ಇದ್ದಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಬಿಲಾಸಪುರದಲ್ಲಿ 800 ಮೆಗಾವ್ಯಾಟ್ ವಿದ್ಯುತ್ ಘಟಕ, ಕುಲ್ಲುವಿನಲ್ಲಿ ಮೂರನೇ ಹಂತದ 540 ಮೆಗಾವ್ಯಾಟ್ ವಿದ್ಯುತ್ ಸ್ಥಾವರ ಹಾಗೂ ಶಿಮ್ಲಾದಲ್ಲಿ 412 ಮೆಗಾವ್ಯಾಟ್ ವಿದ್ಯುತ್ ಘಟಕ- ಇವು ಮಂಗಳವಾರ ಪ್ರಧಾನಿ ಮೋದಿಯಿಂದ ಲೋಕಾರ್ಪಣೆಗೊಳ್ಳಲಿರುವ ಯೋಜನೆಗಳು.

ಗುರಿ ನಿರ್ದಿಷ್ಟ ದಾಳಿ ಕುರಿತು ಪರೋಕ್ಷ ಪ್ರಸ್ತಾವ ಮಾಡಿದಾಗಲೆಲ್ಲ ಸೇನೆಯನ್ನು ಹೊಗಳುವ ಮೋದಿ ‘ಮುತ್ಸದ್ಧಿತನ’ದ ಭಾಗ ಒಂದೆಡೆ ಆದರೆ, ರಕ್ಷಣಾ ಮಂತ್ರಿ ಮನೋಹರ ಪಾರಿಕರ್ ಅವರು ಎಂದಿನಂತೆ ಸೇನೆಯ ಪ್ರಶಂಸೆ ಜತೆಗೆ ರಾಜಕೀಯ ಶ್ರೇಯಸ್ಸನ್ನು ತೆಗೆದುಕೊಳ್ಳುವ ನಾಜೂಕುತನವನ್ನು ಮುಂದುವರಿಸಿದ್ದಾರೆ. ಸೋಮವಾರ ಅಹಮದಾಬಾದ್ ನ ಕಾರ್ಯಕ್ರಮದಲ್ಲಿ ಅವರ ಮಾತುಗಳು ಹೀಗಿದ್ದವು, ‘ಮಹಾತ್ಮ ಗಾಂಧಿಯ ನೆಲದಿಂದ ಬಂದ ಪ್ರಧಾನಿ ಇದ್ದಾರೆ, ಗೋವಾದ ಮಿಲಿಟರಿ ನೆಲದಿಂದ ಬಂದ ರಕ್ಷಣಾ ಮಂತ್ರಿ ಇದ್ದಾರೆ, ಗುರಿ ನಿರ್ದಿಷ್ಟ ದಾಳಿಯ ಉದಾಹರಣೆ ಇದೆ. ಈ ಮಿಶ್ರಣವು ರೂಪುಗೊಳ್ಳುವುದಕ್ಕೆ ಆರೆಸ್ಸೆಸ್ ಪಾಠವೇ ಆಂತರ್ಯದಲ್ಲಿದೆಯೇ ಎಂದು ಅಚ್ಚರಿಯಾಗುತ್ತದೆ.’

ಗೋವಾದಲ್ಲಿ ಮಾತೃಭಾಷೆ ಶಿಕ್ಷಣದ ವಿಚಾರವಾಗಿ ಪಾರಿಕರ್ ಜತೆ ಮುನಿಸಿಕೊಂಡು ಗೋವಾ ಆರೆಸ್ಸೆಸ್ ನಿಂದ ಸಿಡಿದಿರುವ ವೆಂಗ್ಲಿಕರ್ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವುದು ಗಮನಾರ್ಹವಾಗಿದೆ. ‘ಪಾರಿಕರ್ ಅವರಿಗೆ ಸಂಘದ ಸಿದ್ಧಾಂತಗಳ ಬಗ್ಗೆ ನಿಜಕ್ಕೂ ಪ್ರೀತಿ ಇದ್ದರೆ ಗೋವಾದಲ್ಲಿರುವ ಆಂಗ್ಲ ಮಾಧ್ಯಮ ಶಾಲೆಗಳಿಗೆ ಮೊದಲು ಸರ್ಕಾರದ ಅನುದಾನವನ್ನು ಮೊಟಕುಗೊಳಿಸಲಿ’ ಎಂದಿದ್ದಾರೆ.

Leave a Reply