ಕಾವೇರಿ ಐತೀರ್ಪು ವಿರುದ್ಧ ಮೇಲ್ಮನವಿ ಅರ್ಹತೆಯ ಪರ- ವಿರೋಧದ ಚರ್ಚೆ, ವಿಚಾರಣೆ ನಾಳೆಗೆ ಮುಂದೂಡಿಕೆ, ತ.ನಾಡಿಗೆ ನೀರು ಹರಿವು ಮುಂದುವರಿಕೆಗೆ ಸುಪ್ರೀಂ ಸೂಚನೆ

ಡಿಜಿಟಲ್ ಕನ್ನಡ ಟೀಮ್:

ಕಾವೇರಿ ನ್ಯಾಯಾಧಿಕರಣ ಮಂಡಳಿ 2007 ರಲ್ಲಿ ನೀಡಿದ ಐತೀರ್ಪಿನ ವಿರುದ್ಧದ ಕರ್ನಾಟಕದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ನಡೆಸಿತು. ಮಂಗಳವಾರ ನಡೆದ ವಿಚಾರಣೆ ವೇಳೆ ಪ್ರಮುಖವಾಗಿ ಚರ್ಚೆಯಾಗಿದ್ದು, ರಾಜ್ಯದ ಮೇಲ್ಮನವಿ ಅರ್ಜಿ ವಿಚಾರಣೆಗೆ ಯೋಗ್ಯವೇ ಎಂಬ ಅಂಶ. ಈ ವಿಚಾರವಾಗಿ ಅಟಾರ್ನಿ ಜೆನರಲ್ ನ್ಯಾಯಾಧಿಕರಣದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸುವ ಅರ್ಜಿ ವಿಚಾರಣೆ ಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ ಎಂದು ವಾದಿಸಿದ್ರೆ, ರಾಜ್ಯದ ಪರ ವಕೀಲ ಫಾಲಿ ಎಸ್ ನಾರಿಮನ್ ಅವರು ರಾಜ್ಯದ ಅರ್ಜಿ ವಿಚಾರಣೆಗೆ ಅರ್ಹ ಎಂದರು. ಸುದೀರ್ಘ ಚರ್ಚೆ ನಂತರ ನ್ಯಾಯಾಲಯ ವಿಚಾರಣೆಯನ್ನು ನಾಳೆಗೆ ಮುಂದೂಡಿತಲ್ಲದೇ, ಕರ್ನಾಟಕ ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ಮುಂದುವರಿಸಬೇಕು ಎಂದು ಸೂಚನೆ ನೀಡಿದೆ.

ವಿಚಾರಣೆ ವೇಳೆ ಮೊದಲು ವಾದ ಆರಂಭಿಸಿದ ಕೇಂದ್ರದ ಅಟಾರ್ನಿ ಜೆನರಲ್ ಮುಕುಲ್ ರೊಹ್ಟಗಿ ಅವರು ನ್ಯಾಯಾಧಿಕರಣ ಐ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ ಎಂದು ವಾದಿಸಿದ್ರು. ಈ ಬಗ್ಗೆ ಸುಮಾರು ಒಂದೂವರೆ ತಾಸು ವಾದ ಮಾಡಿದ ಅವರು ತ್ರಿಸದಸ್ಯ ಪೀಠದ ಮುಂದೆ ಹೇಳಿದ ಪ್ರಮುಖ ಅಂಶ ಹೀಗಿತ್ತು…

‘ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನ್ಯಾಯಾಧಿಕರಣ ನೀಡಿರುವ ಐ ತೀರ್ಪನ್ನು ಈಗಾಗಲೇ ಸಂಸತ್ತಿನಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ಸಂಸತ್ತಿನ ಅಧಿಸೂಚನೆಯು ಸುಪ್ರೀಂ ಕೋರ್ಟ್ ತೀರ್ಪಿಗೆ ಸಮ. ಹೀಗಾಗಿ ಈ ತೀರ್ಪಿನ ವಿರುದ್ಧದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ನಡೆಸಲು ಸುಪ್ರೀಂ ಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ. ಕಲಂ 131 ಮತ್ತು 262ರ ಪ್ರಕಾರ ನ್ಯಾಯಾಲಯದಲ್ಲಿ ಈ ಐ ತೀರ್ಪಿನ ವಿರುದ್ಧ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸುವಂತಿಲ್ಲ.’

ಹೀಗೆ ಮುಕುಲ್ ರೊಹ್ಟಗಿ ಅವರು ಮೇಲ್ಮನವಿಯ ಅರ್ಜಿಯ ವಿಚಾರಣೆ ನಡೆಸುವಂತಿಲ್ಲ ಎಂದು ವಾದ ಮಾಡಿದಾಗ ರಾಜ್ಯದ ಅರ್ಜಿಯೇ ವಜಾವಾಗುವ ಆತಂಕ ಎದುರಾಗಿತ್ತು. ಅದರಿಂದ ಈ ವಿಚಾರಣೆಗಾಗಿ ಇಷ್ಟು ವರ್ಷಗಳ ಕಾಲ ಕಾದಿದ್ದ ರಾಜ್ಯದ ಜನರ ನಿರೀಕ್ಷೆ ಹಾಗೂ ಈ ವಿಚಾರಣೆ ಹಿನ್ನೆಲೆಯಲ್ಲಿ ದ್ವಿಸದಸ್ಯ ಪೀಠ ನೀಡಿದ ಕಠಿಣ ತೀರ್ಪನ್ನು ಕಷ್ಟಪಟ್ಟು ಅನುಸರಿಸಿದ ಸರ್ಕಾರದ ಪ್ರಯತ್ನಗಳು ವ್ಯರ್ಥವಾಗುವುದೇ ಎಂಬ ಅನುಮಾನಗಳು ಎದ್ದವು.

ಈ ಹಂತದಲ್ಲಿ ರಾಜ್ಯದ ಪರ ವಾದ ಮಂಡಿಸಿದ ಹಿರಿಯ ವಕೀಲ ಫಾಲಿ ಎಸ್. ನಾರಿಮನ್, ರಾಜ್ಯದ ಮೇಲ್ಮನವಿ ಅರ್ಜಿ ವಿಚಾರಣೆಗೆ ಅರ್ಹ ಎಂದು ವಾದಿಸಿದರು. ಸುಮಾರು 20 ನಿಮಿಷ ವಾದ ಮಂಡಿಸಿದ ನಾರಿಮನ್ ಅವರು ವಾದ ಮಂಡಿಸಿದ್ದು ಹೀಗೆ… ‘ಕಾವೇರಿ ಐ ತೀರ್ಪಿಗೆ ಸಂಬಂಧಿಸಿದಂತೆ ಕರ್ನಾಟಕದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸುವ ವ್ಯಾಪ್ತಿ ನ್ಯಾಯಾಲಯಕ್ಕೆ ಇದೆ. ಕಲಂ 262 ಅನ್ನು ಪರಿಗಣಿಸಿ ಕಲಂ 136ನ್ನು ನಿರ್ಲಕ್ಷಿಸುವಂತಿಲ್ಲ. ಕಲಂ 136 ರ ಪ್ರಕಾರ ರಾಜ್ಯದ ಅರ್ಜಿ ವಿಚಾರಣೆಗೆ ಅರ್ಹವಾಗಿದೆ.’

ಹೀಗೆ ಅರ್ಜಿ ಮೇಲ್ವಿಚಾರಣೆ ನಡೆಯಬೇಕು ಎಂಬ ನಾರಿಮನ್ ಅವರ ವಾದಕ್ಕೆ ಕೇರಳ ರಾಜ್ಯದ ವಕೀಲರೂ ಧ್ವನಿಗೂಡಿಸಿದರು. ಅವರೂ ಸಹ ಮೇಲ್ವಿಚಾರಣಾ ಅರ್ಜಿಯನ್ನು ಸಲ್ಲಿಸಿ, ಈ ವಿಷಯದಲ್ಲಿ ಅರ್ಜಿಯ ವಿಚಾರಣೆ ನಡೆಯಬೇಕು ಎಂದು ಮನವಿ ಮಾಡಿಕೊಂಡರು. ಇದರಿಂದ ರಾಜ್ಯದ ಮನವಿಗೆ ಬಲ ಬಂದಂತಾಯಿತು.

ನಂತರ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದ ತ್ರಿಸದಸ್ಯ ಪೀಠ, ನ್ಯಾಯಾಲಯ ಮುಂದಿನ ಆದೇಶ ನೀಡುವವರೆಗೂ ತಮಿಳುನಾಡಿಗೆ ನೀರು ಹರಿಸುವುದನ್ನು ಮುಂದುವರಿಸಬೇಕು ಎಂದು ಸೂಚನೆ ನೀಡಿತು. ಅದರೊಂದಿಗೆ ಅಕ್ಟೋಬರ್ 7 ರಿಂದ ನಿತ್ಯ ತಮಿಳುನಾಡಿಗೆ 2 ಸಾವಿರು ಕ್ಯುಸೆಕ್ಸ್ ನೀರಿನ ಪ್ರಮಾಣ ಹರಿಸುವುದನ್ನು ನ್ಯಾಯಾಲಯದ ಮುಂದಿನ ಆದೇಶ ಬರುವವರೆಗೂ ರಾಜ್ಯ ಸರ್ಕಾರ ಪಾಲಿಸಬೇಕು. ಕೆ.ಆರ್.ಎಸ್ ಜಲಾಶಯದಿಂದ ಬಿಳಿಗೊಂಡಲು ಜಲ ಮಾಪನ ಕೇಂದ್ರಕ್ಕೆ ಸುಮಾರು 250 ಕಿ.ಮೀ ದೂರವಿದ್ದು ಈ ಪ್ರದೇಶಗಳಲ್ಲಿ ಮಳೆ ನೀರು ಹರಿದರೂ ಈ ಪ್ರಮಾಣ ಸರಿದೂಗಲಿದೆ. ಹೀಗಾಗಿ ಈ ಆದೇಶ ರಾಜ್ಯಕ್ಕೆ ಹೆಚ್ಚು ಹೊರೆಯಾಗುವುದಿಲ್ಲ ಎಂದೇ ಪರಿಗಣಿಸಬಹುದು. ಆದರೂ ಇಲ್ಲಿ ವರುಣನ ಪಾತ್ರ ರಾಜ್ಯದ ಪಾಲಿಗೆ ಮಹತ್ವದ್ದಾಗಿದೆ.

ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ತಮಿಳುನಾಡು ಪರ ವಕೀಲರು, ಕರ್ನಾಟಕದಿಂದ ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರು ಬರಬೇಕು ಎಂಬ ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಉತ್ತರ ನೀಡಿದ ನಾರಿಮನ್, ಕರ್ನಾಟಕದ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ನ್ಯಾಯಾಲಯಕ್ಕೆ ರಾಜ್ಯದ ಪರಿಸ್ಥಿತಿ ಮನವರಿಕೆ ಮಾಡಿದರು.

Leave a Reply