ಕೆಟ್ಟ ಸುದ್ದಿ: ಎರಡು ಪ್ರತ್ಯೇಕ ಬೆಂಕಿ ದುರಂತ ಒಟ್ಟು 26 ಮಂದಿ ಸಾವು, ಹಲವರಿಗೆ ಗಾಯ

ಭುವನೇಶ್ವರದ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದ ವೇಳೆ ರಕ್ಷಣಾ ಕಾರ್ಯ ನಡೆಸುತ್ತಿರುವ ಅಗ್ನಿ ಶಾಮಕ ಸಿಬ್ಬಂದಿ

ಡಿಜಿಟಲ್ ಕನ್ನಡ ಟೀಮ್:

ದೇಶದ ಪ್ರಮುಖ ನಗರಗಳಾದ ಭುವನೇಶ್ವರ ಹಾಗೂ ಮುಂಬೈನಲ್ಲಿ ಎರಡು ಪ್ರತ್ಯೇಕ ಅಗ್ನಿ ಆಕಸ್ಮಿಕ ಸಂಭವಿಸಿದೆ. ಭುವನೇಶ್ವರದ ಆಸ್ಪತ್ರೆಯಲ್ಲಿ ನಡೆದ ಅಗ್ನಿ ಅನಾಹುತದಲ್ಲಿ 24 ಮಂದಿ ಮೃತಪಟ್ಟಿದ್ದು, ಮುಂಬೈನ ಅಪಾರ್ಟ್ ಮೆಂಟ್ ನ ಅಗ್ನಿ ದುರಂತದಲ್ಲಿ 2 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಎಸ್ ಯು ಎಂ ಆಸ್ಪತ್ರೆ ದುರಂತ…

2011ರಲ್ಲಿ ಕೊಲ್ಕತಾದ ಎಎಂಆರ್ ಐ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತಕ್ಕೆ 90 ಮಂದಿ ಸಾವನ್ನಪ್ಪಿದ ಘಟನೆ ಮರೆಯುವಷ್ಟರಲ್ಲೇ ಭುವನೇಶ್ವದ ಎಸ್ ಯು ಎಂ ಆಸ್ಪತ್ರೆಯಲ್ಲಿ ಈ ಅಗ್ಮಿ ಅವಘಡ ಸಂಭವಿಸಿದೆ. 4 ಅಂತಸ್ತಿನ ಈ ಆಸ್ಪತ್ರೆಯ ಮೊದಲನೇ ಮಹಡಿಯಲ್ಲಿದ್ದ ಡಯಾಲಿಸಿಸ್ ಘಟಕದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಪಕ್ಕದಲ್ಲೇ ಇದ್ದ ತುರ್ತು ನಿಗಾ ಘಟಕಕ್ಕೂ ಬೆಂಕಿ ಪಸರಿಸಿತು. ಆ ಸಂದರ್ಭದಲ್ಲಿ ವಾರ್ಡ್ ನಲ್ಲಿ 30 ರೋಗಿಗಳು ಇದ್ದರು ಎಂಬ ಮಾಹಿತಿ ಬಂದಿದೆ.

ಎಲೆಕ್ಟ್ರಿಕ್ ಶಾರ್ಟ್ ಸರ್ಕಿಟ್ ನಿಂದಾಗಿ ಈ ದುರಂತ ಸಂಭವಿಸಿರುವ ಶಂಕೆ ವ್ಯಕ್ತಪಡಿಸಲಾಗಿದ್ದು, ಅಗ್ನಿ ಶಾಮಕ ಸಿಬ್ಬಂದಿ ಜತೆಗೆ ಆಸ್ಪತ್ರೆ ಸಿಬ್ಬಂದಿಗಳು ಸಹ ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಆಸ್ಪತ್ರೆಯಲ್ಲಿ ಒಟ್ಟು 500ಕ್ಕೂ ಹೆಚ್ಚು ರೋಗಿಗಳು ದಾಖಲಾಗಿದ್ದು, ಈ ಅಪಘಾತ ಸಂಭವಿಸಿದ ನಂತರ ಸಿಬ್ಬಂದಿ ಕಿಟಕಿ ಬಾಗಿಲು ಒಡೆದು ಕೆಲವರನ್ನು ರಕ್ಷಿಸಿದ್ದಾರೆ. ಆದರೂ 24 ಮಂದಿ ಮೃತಪಟ್ಟಿದ್ದು ಇನ್ನು 20 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ. ಈ ದುರಂತದಲ್ಲಿ ಬೆಂಕಿಯನ್ನು ನಂದಿಸಲು 24 ಅಗ್ನಿಶಾಮಕ ವಾಹನ ನಿಯೋಜಿಸಲಾಗಿತ್ತು.

ಈ ಆಕಸ್ಮಿಕಕ್ಕೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದು, ರೋಗಿಗಳಿಗೆ ಅಗತ್ಯ ನೆರವು ನೀಡುವಂತೆ ಆರೋಗ್ಯ ಸಚಿವರಾದ ಜೆ.ಪಿ ನಡ್ಡಾ ಮತ್ತು ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಸೂಚಿಸಿದ್ದಾರೆ. ಈ ಸ್ಥಳಕ್ಕೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಆಗಮಿಸಿ ಪರಿಶೀಲನೆ ನಡೆಸಿದ್ದು, ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶ ನೀಡಿದ್ದಾರೆ. ಇನ್ನು ಈ ಅಪಘಾತಕ್ಕೆ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯ ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದಿರುವುದೇ ಕಾರಣ ಎಂಬ ಆರೋಪಗಳು ಕೇಳಿ ಬಂದಿವೆ.

ಮುಂಬೈ ಅಪಾರ್ಟ್ ಮೆಂಟ್ ನಲ್ಲೂ ಅಗ್ನಿ ಅನಾಹುತ…

ವಾಣಿಜ್ಯ ನಗರಿ ಮುಂಬೈನ ಬೃಹತ್ ಅಪಾರ್ಟ್ ಮೆಂಟ್ ಗಳಲ್ಲಿ ಒಂದಾಗಿರುವ ಕುಫಿ ಪರೇಡ್ ಪ್ರದೇಶದಲ್ಲಿರುವ ಮೇಕರ್ ಟವರ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು 2 ಮೃತಪಟ್ಟಿದ್ದಾರೆ. ಮಂಗಳವಾರ ಬೆಳಗಿನ ಜಾವ 6.30ರ ಸುಮಾರಿಗೆ ಅಪಾರ್ಟ್ ಮೆಂಟಿನ 20ನೇ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ಬಜಾಜ್ ಎಲೆಕ್ಟ್ರಿಕಲ್ಸ್ ಸಂಸ್ಥೆ ಮುಖ್ಯಸ್ಥ ಶೇಖರ್ ಬಜಾಜ್ ಅವರಿಗೆ ಸೇರಿದ ಪ್ಲಾಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದಾಗಿ ಮಾಹಿತಿ ಇದ್ದು, ಅಕ್ಕ ಪಕ್ಕದ ಎರಡು ಫ್ಲಾಟ್ ಗಳಿಗೂ ಬೆಂಕಿ ವ್ಯಾಪಿಸಿದೆ. ಪರಿಣಾಮ ಪೀಠೋಪಕರಣಗಳು ಸುಟ್ಟು ಕರಕಲಾಗಿವೆ. ಈ ಅಗ್ನಿ ಆಕಸ್ಮಿಕಕ್ಕೂ ವಿದ್ಯುತ್ ಶಾರ್ಟ್ ಸರ್ಕಿಟ್ ಕಾರಣ ಎಂದು ಹೇಳಲಾಗಿದೆ. ಅಗ್ನಿ ಶಾಮಕ ದಳ ಒಟ್ಟು 11 ಮಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

Leave a Reply