ಎ ಎಫ್ ಸಿ ಕಪ್ ಫೈನಲ್ ಪ್ರವೇಶಿಸಿದ ಬೆಂಗಳೂರು ಫುಟ್ಬಾಲ್ ಕ್ಲಬ್, ಇದು ಭಾರತೀಯ ಫುಟ್ಬಾಲ್ ನಲ್ಲೇ ಐತಿಹಾಸಿಕ ಸಾಧನೆ

AppleMark

ಡಿಜಿಟಲ್ ಕನ್ನಡ ಟೀಮ್:

ಭಾರತೀಯ ಫುಟ್ಬಾಲ್ ಇತಿಹಾಸದಲ್ಲಿ ಬುಧವಾರ (ಅಕ್ಟೋಬರ್ 19) ಅವಿಸ್ಮರಣೀಯ ದಿನ. ಕಾರಣ, ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ ಸಿ) ಏಷ್ಯನ್ ಫುಟ್ಬಾಲ್ ಕಾನ್ಫೆಡರೇಷನ್ (ಎಎಫ್ ಸಿ) ಕಪ್ ಟೂರ್ನಿಯ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ತಂಡವಾಗಿದೆ. ಅದರಲ್ಲೂ ಹಾಲಿ ಚಾಂಪಿಯನ್ ತಂಡವಾಗಿರುವ ಮಲೇಷ್ಯಾದ ಜೊಹೊರ್ ದಾರುಲ್ ತಜ್ಮಿ ತಂಡವನ್ನು 4-2 ಗೋಲುಗಳ ಸರಾಸರಿಯಲ್ಲಿ ಮಣಿಸಿರುವುದು ಜಯದ ಸಂಭ್ರಮವನ್ನು ದುಪ್ಪಟ್ಟಾಗಿಸಿದೆ.

ಎಎಫ್ ಸಿ ಕಪ್ ಟೂರ್ನಿ ಏಷ್ಯಾದ 2ನೇ ಪ್ರತಿಷ್ಠಿತ ಕ್ಲಬ್ ಫುಟ್ಬಾಲ್ ಟೂರ್ನಿ. ಏಷ್ಯಾ ಖಂಡದ ರಾಷ್ಟ್ರಗಳ ಪ್ರಬಲ ಕ್ಲಬ್ ಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತವೆ. ಈ ಟೂರ್ನಿಯ 13 ಆವೃತ್ತಿಗಳ ಪೈಕಿ ಈವರೆಗೂ ಭಾರತದ 2 ತಂಡಗಳು (ಈಸ್ಟ್ ಬೆಂಗಾಲ್ ಹಾಗೂ ಡೆಂಪೊ) ಮಾತ್ರ ಸೆಮಿಫೈನಲ್ ಸುತ್ತಿನವರೆಗೂ ತಲುಪಿದ್ದವು. ಆದರೆ ಬೆಂಗಳೂರು ಎಫ್ ಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕುವ ಮೂಲಕ ಭಾರತದ ಪರ ಈ ಸಾಧನೆಯನ್ನು ಉತ್ತಮಗೊಳಿಸಿದೆ. ಬೆಂಗಳೂರು ಎಫ್ ಸಿ ನವೆಂಬರ್ 5ರಂದು ನಡೆಯಲಿರುವ ಅಂತಿಮ ಸುತ್ತಿನ ಪಂದ್ಯದಲ್ಲಿ ಇರಾಕಿನ ಅಲ್ ಕುವಾ ಅಲ್ ಜಾವಿಯಾ ಫುಟ್ಬಾಲ್ ಕ್ಲಬ್ ವಿರುದ್ಧ ಸೆಣಸಲಿದ್ದಾರೆ.

ಟೂರ್ನಿಯಲ್ಲಿ ಸೆಮಿಫೈನಲ್ ಹಂತದಲ್ಲಿ ಎರಡು ಪಂದ್ಯಗಳು ನಡೆಯುತ್ತವೆ. ಅಂದರೆ ಉಭಯ ತಂಡಗಳು ತಮ್ಮ ತವರಿನಲ್ಲಿ ಒಂದೊಂದು ಪಂದ್ಯಗಳನ್ನಾಡುತ್ತವೆ. ಜೊಹೊರ್ ದಾರುಲ್ ತಂಡದ ತವರಿನ ಅಂಗಣದಲ್ಲಿ ನಡೆದ ಸೆಮಿಫೈನಲ್ ಮೊದಲ ಪಂದ್ಯದಲ್ಲಿ ಉಭಯ ತಂಡಗಳು 1-1 ಗೋಲುಗಳ ಅಂತರದ ಸಮಬಲ ಸಾಧಿಸಿದ್ದವು. ಈಗ ಬೆಂಗಳೂರು ಎಫ್ ಸಿಯ ತವರು ಅಂಗಣ ಕಂಠೀರವ ಕ್ರೀಡಾಂಗಣದಲ್ಲಿ ಎರಡನೇ ಪಂದ್ಯ ನಡೆದಿದ್ದು, ಬಿಎಫ್ ಸಿ 3-1 ಗೋಲುಗಳ ಭರ್ಜರಿ ಜಯ ಸಾಧಿಸಿದೆ. ಅದರೊಂದಿಗೆ ಬಿಎಫ್ ಸಿ 4-2 ಸರಾಸರಿಯಲ್ಲಿ ಜಯಿಸಿತು.

ಬೆಂಗಳೂರು ಎಫ್ ಸಿ ಪರ ಅಮೋಘ ಆಟ ಪ್ರದರ್ಶಿಸಿದ್ದು, ನಾಯಕ ಸುನೀಲ್ ಛೆಟ್ರಿ ಹಾಗೂ ಯುಜೆನ್ಸನ್ ಲಿಂಗ್ಡೊ. ಪಂದ್ಯದ 11ನೇ ನಿಮಿಷದಲ್ಲೇ ಆಕ್ರಮಣಕಾರಿ ಆಟದೊಂದಿಗೆ ಗೋಲು ದಾಖಲಿಸಿದ ಜೊಹೊರ್ ದಾರುಲ್ ತಂಡ ಪಂದ್ಯದಲ್ಲಿ ಮುನ್ನಡೆ ಸಾಧಿಸಿತ್ತು. ಈ ಹಂತದಲ್ಲಿ ಒತ್ತಡಕ್ಕೆ ಸಿಲುಕದೇ ಸಂಘಟಿತ ಪ್ರದರ್ಶನದತ್ತ ಗಮನ ಹರಿಸಿದ ಬಿಎಫ್ ಸಿ ಸೂಕ್ತ ಅವಕಾಶವನ್ನು ಕಲ್ಪಿಸಿಕೊಂಡಿತು. ಪಂದ್ಯದ ಮೊದಲಾರ್ಧ ಅಂತಿಮ ಘಟ್ಟದ 41ನೇ ನಿಮಿಷದಲ್ಲಿ ಲಿಂಗ್ಡೊ ಚೆಂಡಿನ ಮೇಲೆ ಉತ್ತಮ ನಿಯಂತ್ರಣ ಸಾಧಿಸಿ ನಾಯಕ ಛೆಟ್ರಿಗೆ ಅತ್ಯುತ್ತಮವಾಗಿ ಪಾಸ್ ನೀಡಿದರು. ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡ ಸುನೀಲ್ ಛೆಟ್ರಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸುವಲ್ಲಿ ಯಶಸ್ವಿಯಾದರು. ಅದರೊಂದಿಗೆ ಬಿಎಫ್ ಸಿ ಪಂದ್ಯದಲ್ಲಿ ಸಮಬಲ ಸಾಧಿಸಿತು. ನಂತರ ಮತ್ತೆ 66ನೇ ನಿಮಿಷದಲ್ಲಿ ಚಮತ್ಕಾರಿ ಪ್ರದರ್ಶನ ನೀಡಿದ ಲಿಂಗ್ಡೊ- ಛೆಟ್ರಿ ಜೋಡಿ ತಂಡಕ್ಕೆ ಮತ್ತೊಂದು ಗೋಲು ತಂದುಕೊಡುವ ಮೂಲಕ ತಂಡ ಪಂದ್ಯದಲ್ಲಿ ಮುನ್ನಡೆ ಸಾಧಿಸುವಂತೆ ನೋಡಿಕೊಂಡಿತು.  ಇದಾದ ಸ್ವಲ್ಪ ಹೊತ್ತಿನಲ್ಲೇ 75ನೇ ನಿಮಿಷದಲ್ಲಿ ಬಿಎಫ್ ಸಿ ಪರ ಮಯೆಮ್ 3ನೇ ಗೋಲು ದಾಖಲಿಸಿ ಎದುರಾಳಿ ತಂಡದ ಮೇಲೆ ಒತ್ತಡ ಹೇರಿದರು. ಪಂದ್ಯ ಅಂತಿಮ ಹಂತದಲ್ಲಿ ಒತ್ತಡದಿಂದ ಹೊರಬರಲಾಗದ ಜೊಹೊರ್ ದಾರುಲ್ ತಂಡ ಬಿಎಫ್ ಸಿ ಮುಂದೆ ತಲೆಬಾಗಿತು.

ಅಲ್ಪಾವಧಿಯಲ್ಲೇ ಐತಿಹಾಸಿಕ ಸಾಧನೆ ಮಾಡಿದ ಕೀರ್ತಿ…

ಭಾರತದ ಫುಟ್ಬಾಲ್ ನಲ್ಲಿ ಬೆಂಗಳೂರು ಎಫ್ ಸಿ ಅಸ್ಥಿತ್ವಕ್ಕೆ ಬಂದು ಕೇವಲ 3 ವರ್ಷ ಆಗಿದೆ ಅಷ್ಟೇ. 2013 ರಲ್ಲಿ ಮೊದಲ ಬಾರಿಗೆ ಐ ಲೀಗ್ ಟೂರ್ನಿಗೆ ಪದಾರ್ಪಣೆ ಮಾಡಿದ ಬೆಂಗಳೂರು ಎಫ್ ಸಿ, ಆರಂಭದಲ್ಲೇ ತನ್ನ ಗುರಿ ಎಎಫ್ ಸಿ ಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವುದು ಹಾಗೂ ಏಷ್ಯಾದಲ್ಲಿ ಪ್ರಬಲ ತಂಡವಾಗಿ ಬೆಳೆಯುವುದಾಗಿ ಅಭಿಮಾನಿಗಳಿಗೆ ಭರವಸೆ ನೀಡಿತ್ತು. ಬಿಎಫ್ ಸಿ ಈ ಟೂರ್ನಿಯ ಪ್ರಶಸ್ತಿ ಸುತ್ತಿಗೆ ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿ ತನ್ನ ಮಾತನ್ನು ತಕ್ಕ ಮಟ್ಟಿಗೆ ಪೂರೈಸಿದೆ. ಇನ್ನು ನವೆಂಬರ್ 5ರಂದು ನಡೆಯಲಿರುವ ಅಂತಿಮ ಸುತ್ತಿನ ಪಂದ್ಯ ಬಾಕಿ ಇದ್ದು, ಅದರಲ್ಲಿ ಗೆದ್ದು ತನ್ನ ಗುರಿ ಮುಟ್ಟಲು ತಂಡ ಕಾತುರದಿಂದ ಕಾಯುತ್ತಿದೆ.

2013-14ನೇ ಸಾಲಿನಲ್ಲಿ ರಲ್ಲಿ ಮೊದಲ ಬಾರಿಗೆ ಐ ಲೀಗ್ ನಲ್ಲಿ ಆಡಿದ ಬಿಎಫ್ ಸಿ ಇಲ್ಲಿಯವರೆಗೂ ತನ್ನ ಸಾಧನೆಯ ಹಾದಿಯಲ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ. ಮೊದಲ ಐ ಲೀಗ್ ಟೂರ್ನಿಯಲ್ಲೇ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದ ಬೆಂಗಳೂರು ಎಫ್ ಸಿ 2014-15ನೇ ಆವೃತ್ತಿಯಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತವಾಗಿತ್ತು. ಕಳೆದ ಋತುವಿನಲ್ಲಿ ಮತ್ತೆ ಐ ಲೀಗ್ ಚಾಂಪಿಯನ್ ಪಟ್ಟ ಅಲಂಕರಿಸಿದ ಬಿಎಫ್ ಸಿ ಭಾರತದ ಪ್ರಮುಖ ವೃತ್ತಿಪರ ಫುಟ್ಬಾಲ್ ಕ್ಲಬ್ ಗಳಲ್ಲಿ ಒಂದು ಎಂಬ ಘನತೆಯನ್ನು ಸಂಪಾದಿಸಿಕೊಂಡಿದೆ.

Leave a Reply