ಹೆಣ್ಣಿನ ಮೇಲೆ ಬಲತ್ಕಾರ ಮಾಡಬೇಡಿ ಎಂದು ಹೇಳಲು ಸಿನಿಮಾ ನಾಯಕನೇ ಆಗಬೇಕೆ? ಮನೆಯಲ್ಲಿನ ತಾಯಿ ಹೇಳಿದರೆ ಸಾಲದೇ?

author-geetha‘ಪಿಂಕ್ ಮೂವಿ ನೋಡಿದ್ಯ?’

‘ಹೂಂ…’

‘ಎಂಥ ಚೆಂದದ ಮೂವೀ…’

‘ಸರಿ..’

‘ಏನು ಸರಿ? ಅಪರೂಪಕ್ಕೆ ಒಂದು ಒಳ್ಳೆಯ ಚಿತ್ರ ಬಂದಿದೆ. ಎಂಥಹ ಒಳ್ಳೆಯ ಸಂದೇಶ ಇದೆ… ಹೆಣ್ಣು ಮಕ್ಕಳ ಪರವಾಗಿ ಇದೆ… ನೀನು ನಿನ್ನ ನೆಗೆಟಿವ್ ಥಿಂಕಿಂಗ್ ಬಿಡುವುದೇ ಇಲ್ಲವಲ್ಲ..’ ನನ್ನ ಸ್ನೇಹಿತೆ ರೇಗಿದಳು.

‘ಏನು ಸಂದೇಶ?’

‘NO… no means no’ ಅಂತ ಅಮಿತಾಭ್ ಬಚ್ಚನ್ ಹೇಳ್ತಾನೆ. ಇಡೀ ಕೋರ್ಟ್ ಸ್ಥಬ್ಧವಾಗುತ್ತೆ, ಥಿಯೇಟರ್ರಿನಲ್ಲಿ ಜನ ಚಪ್ಪಾಳೆ ಹೊಡೆದ್ರು ಗೊತ್ತಾ?

‘ನೋ.. ಯಾವುದಕ್ಕೆ?’

‘for sex… ಹೆಣ್ಣು sex ಬೇಡ ಅಂದರೆ ಗಂಡು ಸುಮ್ಮನಾಗಬೇಕು… ಒಳ್ಳೆಯ ಪಾಠ..’

‘ನಾವು ಎಂದಿನಿಂದ ಒಳ್ಳೆಯ ಪಾಠಕ್ಕೆ ಚಲನಚಿತ್ರಗಳನ್ನು ಅವಲಂಬಿಸಲು ಆರಂಭಿಸಿದ್ದೇವೆ? ಇದೇ ಅಮಿತಾಭ್ ಬಚ್ಚನ್ ‘ಜುಮ್ಮಾ ಚುಮ್ಮ ದೇ ದೇ..’ ಎಂದು ಹಾಡಿದ್ದು… ಇದೇ ಅಮಿತಾಭ್ ಕಾನೂನನ್ನು ಕೈಗೆ ತೆಗೆದುಕೊಂಡಿದ್ದು… ಅದೆಷ್ಟೋ ಚಲನಚಿತ್ರಗಳಲ್ಲಿ! ಹೆಣ್ಣನ್ನು ಗೌರವಿಸಿ ಎಂದು ಹೇಳಲು ಚಲನಚಿತ್ರಗಳ ನಾಯಕ ಬರಬೇಕೇ? ಮನೆಯಲ್ಲಿ ಅಮ್ಮ ಹೇಳಿದರೆ ಆಗದೇ?’

‘ಚಲನಚಿತ್ರಗಳಲ್ಲಿ ಹೇಳಿಸಿದರೆ… ಅದೂ ನಮ್ಮೆಲ್ಲರ ಅಚ್ಚುಮೆಚ್ಚಿನ ನಾಯಕ ಹೇಳಿದರೆ ಹೆಚ್ಚು ಪ್ರಭಾವ ಬೀರುತ್ತದೆ. ಎಲ್ಲದರಲ್ಲೂ ತಪ್ಪು ಕಂಡು ಹಿಡಿಯಬೇಡ ಮೊದಲು ಚಿತ್ರ ನೋಡು’

‘ನೋಡಿದ್ದೇನೆ. ನೋ ಅಂದರೆ ನೋ ಒಪ್ಪುತ್ತೇನೆ. ಆದರೆ ಆ ಪರಿಸ್ಥಿತಿಯವರೆಗೆ ಹೋಗುವುದೇ ತಪ್ಪು. ಇದೊಂದು ತರಹ ಎಳೇ ಮಕ್ಕಳಿಗೆ ಹೇಳುತ್ತೀವಲ್ಲ… ಅಪರಿಚಿತರೊಂದಿಗೆ ಹೋಗಬೇಡ, ಏನು ಕೊಟ್ಟರೂ ತೆಗೆದುಕೊಳ್ಳಬೇಡ ಅಂತ ಹಾಗೇ. ಪಬ್ ಅಥವಾ ಬಾರ್ ಗೆ ಹೋದರೆ ಸ್ನೇಹಿತರೊಂದಿಗೆ ಮಾತ್ರ ಹೋಗಬೇಕು. ಗೊತ್ತಿರುವ ಜಾಗಕ್ಕೆ ಹೋಗಬೇಕು. ನಮಗೆ ಹೇಳೋರು.. ಫಾಂಟಾ, ಲಿಮ್ಕಾ ಕುಡಿದರೂ ನಿಮ್ಮೆದುರಿಗೇ ಸೀಲ್ಡ್ ಬಾಟಲ್ ಓಪನ್ ಮಾಡಿ ಲೋಟಕ್ಕೆ ಹಾಕಬೇಕು.ಇಲ್ಲದಿದ್ದರೆ ಬೇರೆ ಏನಾದರು ಸೇರಿಸಬಹುದು ಎಂದು… ಈಗ ಬೇರೆ ಏನಾದರೂ ಕುಡಿದರೂ ಅದಕ್ಕೆ ಬೇರೆ ಇನ್ನೇನಾದರೂ ಸೇರಿಸಬಹುದು. So.. ಈಗ ಮತ್ತಷ್ಟು ಹೆಚ್ಚು ಜಾಗರೂಕರಾಗಿರಬೇಕು.’

‘ನೀನು advice ಶುರು ಮಾಡಿದ್ಯಾ? ಈಗ ಯಾರು ಕೇಳ್ತಾರೆ? ಗ್ರೋ ಅಪ್!’ ಎಂದು ಹೇಳಿ ಹೊರಟಳು ನನ್ನ ಸ್ನೇಹಿತೆ.

‘Be safe than sorry’ ಅವಳ ಹಿಂದೆಯೇ ಕೂಗಿದೆ. ಕೇಳಿಸಿಕೊಂಡಿರುತ್ತಾಳೆ.

ಹುಡುಗೀಯರು ಸ್ಮೋಕ್ ಮಾಡುವುದು, ಡ್ರಿಂಕ್ಸ್ ತೆಗೆದುಕೊಳ್ಳುವುದು ಕಾಮನ್ ಈಗ. ಹುಡುಗರು ಮಾಡಿದಾಗ ‘Smoking is injurious to health’ ‘Don’t drink and drive’ ಎಂದು ಹೇಳಿ ಸುಮ್ಮನಿದ್ದು ಹುಡುಗಿಯರು ಮಾಡಿದಾಗ ಮಾತ್ರ ಅವಳ ಕ್ಯಾರೆಕ್ಟರ್ರೇ ಹಾಳಾದಂತೆ ಕೂಗಾಡುತ್ತೀರಲ್ಲ… ಸಮಾನತೆ ಇಲ್ಲವೇ… ಈ gender bias ಹೋಗಬೇಕು ಎಂದು ಬರೆದಿದ್ದ ಲೇಖನ ಓದಿದ ನೆನಪು.

ಹೌದು, ಹೋಗಬೇಕು. ಆದರೆ ರಾತ್ರೋರಾತ್ರಿ ಹೋಗುವುದಿಲ್ಲ. ನಾವು ವಿಷ್ ಮಾಡಿದ ತಕ್ಷಣ ಎಲ್ಲಾ ಸರಿ ಹೋಗುವುದಿಲ್ಲ. ಕಳ್ಳತನ ತಪ್ಪು. ಮಾಡಿದರೆ ಶಿಕ್ಷೆಯಾಗುತ್ತದೆ. ಕೊಲೆ ಮಾಡಿದರೆ ಮರಣದಂಡನೆಯ ಶಿಕ್ಷೆಯೇ ಆಗಬಹುದು. ಆದರೂ ಕಳ್ಳತನ, ಕೊಲೆ ಆಗುತ್ತದೆ. ನಮ್ಮ ಹುಷಾರಿನಲ್ಲಿ ನಾವು ಇರಬೇಕು ಎಂದು ಮನೆಗೆ ಬೀಗ ಹಾಕುತ್ತೇವೆ. ಮಲಗುವ ಮುನ್ನ ಬಾಗಿಲು ಭದ್ರ ಮಾಡುತ್ತೇವೆ. ಮಚ್ಚು, ಲಾಂಗು ಹಿಡಿದು ಓಡಾಡುವವರಿಂದ ದೂರ ಇರುತ್ತೇವೆ. ಹುಡುಗೀಯರಿರಲಿ, ಹುಡುಗರೂ ಕೂಡ ಪರಿಚಯವಿಲ್ಲದವರೊಂದಿಗೆ ಕುಡಿಯಬಾರದು. ಕುಡಿತ ಹೆಚ್ಚಾಗಿ ಕಂಟ್ರೋಲ್ ತಪ್ಪಿದರೆ ಅನಾಹುತಗಳಾಗುತ್ತವೆ. ಹುಡುಗಿಯರ ವಿಚಾರದಲ್ಲಿ ಇನ್ನೊಂದು ಹೆಜ್ಜೆ ತಾಪತ್ರಯ ಹೆಚ್ಚು. ಅಪರಿಚಿತರೊಂದಿಗೆ ಡ್ರಿಂಕ್ಸ್ ತೆಗೆದುಕೊಳ್ಳುವುದು ಅಪಾಯ.

ಈ ಮೂವಿಯಲ್ಲಿಯಂತೂ ಆ ಹುಡುಗರ ಕೋಣೆಗೆ ಹೋಗುತ್ತಾರೆ. ಅಲ್ಲಿಯ ಟಾಯ್ಲೆಟ್ ಉಪಯೋಗಿಸುತ್ತಾರೆ. ಅವೆಲ್ಲಾ ಕೊಡುವ ಸೂಚನೆಗಳು ‘ನಾವು ಸಿದ್ಧ’ ಎಂದು ಹುಡುಗರಿಗೆ ಅನ್ನಿಸುತ್ತದೆ. ನಂತರ ನೋ ಅಂದಿದ್ದು… ಅವರು ಕೇಳದೆ ಮುಂದುವರೆದಿದ್ದು, ಅದು ಹೇಗೋ ತಪ್ಪಿಸಿಕೊಂಡು ಓಡಿ ಬಂದಿದ್ದು… ಕೇಸ್ ಆಗಿದ್ದು ಸಿನಿಮಾದ ಕಥೆ. ಕುಡಿಯದಿದ್ದಾಗಲೇ ‘ನೋ’ ಅಂದರೆ ಕೇಳದೆ ರೇಪ್ ಮಾಡುವವರಿರುವಾಗ, ಇಬ್ಬರೂ ಕುಡಿದಾಗ… (Under the influence of alcohol) ‘ನೋ’ಗೆ ಎಷ್ಟು ಬೆಲೆ?

ಕುಡಿಯುವ ಸ್ಮೋಕ್ ಮಾಡುವ ಹುಡುಗಿ… sexಗೆ available ಎಂದು ಗಂಡು ಅಂದುಕೊಳ್ಳುವುದು ಬದಲಾಗಬೇಕು. ಹಾಗೆಂದು ಎಲ್ಲಾ ಹುಡುಗಿಯರು ಕುಡಿಯುತ್ತಾರೆ, ಅದು ಕಾಮನ್ ಎಂದು ಬಿಂಬಿಸುವ ಪ್ರಯತ್ನಬೇಕೆ? ನಿನ್ನ ತಂಗಿಯೂ ಕುಡಿಯುತ್ತಾಳೆ ಎಂದು ಆರೋಪಿಗೆ ತೋರಿಸುವ ಫೋಟೋ ಬಾಲಿಷ ಎನ್ನಿಸುತ್ತದೆ. ಚಿತ್ರದಲ್ಲಿ ಕಥೆ ನಿರ್ದೇಶಕನ ಕೈಯಲ್ಲಿ ಇರುತ್ತದೆ. ರೇಪ್ ಗೆ ಪ್ರಯತ್ನವಾಯಿತು ರೇಪ್ ಆಗಲಿಲ್ಲ ಎಂದು ಬರೆಯುತ್ತಾರೆ, ಚಿತ್ರಿಸುತ್ತಾರೆ. Molestation ಆಯಿತು, ರೇಪ್ ಆಗಲಿಲ್ಲ ಎಂದು ಚಿತ್ರಿಸುತ್ತಾರೆ. ಆದರೆ ನಿಜಜೀವನದಲ್ಲಿ ಘಟನೆಗಳು ನಮ್ಮ ಕೈಲಿ ಇರುವುದಿಲ್ಲ. ಹೆಣ್ಣು ‘ನೋ’ ಅಂದರೆ ನಾಚಿಕೆಯಿಂದ ‘ನೋ’ ಎನ್ನುತ್ತಿದ್ದಾಳೆ ಎಂದು ಅರ್ಥೈಸುವ ಗಂಡಸರೇ ಹೆಚ್ಚು. ಅವರು ನಮ್ಮ ಚಲನಚಿತ್ರಗಳನ್ನು ನೋಡಿರುತ್ತಾರೆ. ನೋ… ನೋ ಎಂದು ಮೊದಲು ಹೇಳುವ ಹೆಣ್ಣು ಕೊನೆಯಲ್ಲಿ ನಾಚಿ ಎದೆಗೊರಗುತ್ತಾಳೆ ಎಂದುಕೊಳ್ಳುತ್ತಾರೆ. ಕುಡಿಯುವ, ಸೆಕ್ಸಿ ಉಡುಪು ಧರಿಸುವ ಹೆಣ್ಣು, ತನ್ನ ಕೋಣೆಗೆ ಬರುವ ಹೆಣ್ಣು ಸುಲಭದಲ್ಲಿ ಸಿಗುತ್ತಾಳೆ ಎಂದುಕೊಳ್ಳುತ್ತಾರೆ. ಹಣ ಕೊಟ್ಟರೆ ಆಯಿತು ಎಂದುಕೊಳ್ಳುತ್ತಾರೆ. ಅದೂ ನಮ್ಮ ಚಲನಚಿತ್ರಗಳ ಪ್ರಭಾವವೇ. ಕೆಟ್ಟ ಹೆಣ್ಣುಮಕ್ಕಳು ಹಾಗಿರುತ್ತಾರೆ. ಅವರನ್ನು ನಾಯಕ ಮಣಿಸಬೇಕು. ಒಳ್ಳೆಯ ಹೆಣ್ಣು ಮಕ್ಕಳು ಸೀರೆ ಉಟ್ಟು ನಾಚುತ್ತಾ ನಿಂತಿರುತ್ತಾರೆ ಎಂದು ಬಂದಿರುವ ಚಿತ್ರಗಳು ಎಣಿಕೆಗೆ ಸಿಗದಷ್ಟು.

ಇನ್ನೊಂದು ಚಿತ್ರ… ಹೆಸರು ನೆನಪಿಗೆ ಬರುತ್ತಿಲ್ಲ.. ಓದುತ್ತಾ, ಮೆಡಿಸಿನ್ ಮಾಡುತ್ತಿರುವ ಹೆಣ್ಣು (ದೀಪಿಕಾ) ತನ್ನ ಜೀವನ ಬೋರಿಂಗ್ ಎಂದು ಗುಂಪಿನೊಂದಿಗೆ trekking ಹೋಗುತ್ತಾಳೆ.. ಅಲ್ಲಿ ಪುಟ್ಟ ಡ್ರೆಸ್ ಹಾಕಿಕೊಂಡು ಬಾಂಗ್ ಕುಡಿಯುತ್ತಾಳೆ, ಕುಣಿಯುತ್ತಾಳೆ. ಜೀವನ ಅನುಭವಿಸುವುದು ಅಂದರೆ ಅದು. ಅಷ್ಟೇ!  ಮುಂದೆ ಡಾಕ್ಟರ್ ಆಗುತ್ತಾಳೆ. ಅದು ಚಿತ್ರದ ಕಥೆ ಡೈರೆಕ್ಟರ್ ಕೈಲಿ ಇರುವುದರಿಂದ.

ಮತ್ತೊಂದು ಚಿತ್ರ… Mr. & miss ರಾಮಾಚಾರಿ… ಗೂಂಡಾ ಹುಡುಗರು ಮಾಲ್ನಲ್ಲಿ ಹುಡುಗಿಯರ ದುಪ್ಪಟ ಎಳೆಯುತ್ತಾರೆ. ನಾಯಕಿ ಜಗಳವಾಡುತ್ತಾಳೆ. ನಾಯಕನಲ್ಲದ ನಾಯಕ ಇಂತವರ ಸಹವಾಸ ಬೇಡ, ನಡಿ ಹೋಗೋಣ ಅನ್ನುತ್ತಾನೆ. ಪೊಲೀಸರಿಗೆ ಫೋನ್ ಮಾಡಲು ಮೊಬೈಲ್ ತೆಗೆಯುತ್ತಾನೆ. ನಾಯಕನ ಎಂಟ್ರಿ… 100 ಅಲ್ಲ, 101ಗೆ ಫೋನ್ ಮಾಡಿ.. ಆಂಬ್ಯುಲೆನ್ಸ್ ಗೆ ಎನ್ನುತ್ತಾನೆ. ಗೂಂಡಾಗಳನ್ನು ಹಿಡಿದು ಚಚ್ಚುತ್ತಾನೆ. ಮತ್ತೆ.. ನಾನು ಹೇಳಿದಂತೆ ಚಿತ್ರಕಥೆ ನಿರ್ದೇಶಕರ ಕೈಲಿ ಇರುತ್ತದೆ. ಅಲ್ಲಿ ಫೈಟ್ ಮಾಸ್ಟರ್ ನಾಯಕನ ಹಿಂದೆ ಇರುತ್ತಾರೆ. ಪೊಲೀಸ್ ಬರುವುದೇ ಇಲ್ಲ. ಚಿತ್ರ ನಿಜವೆಂದುಕೊಂಡು ನಿಜ ಜೀವನದಲ್ಲಿ ಎಂಟು ರೌಡಿಗಳನ್ನು ಹೊಡೆಯಲು ಹೋದರೆ… ನಾವು ನೆಟ್ಟಿಗೆ ಇರಲಾಗುತ್ತದೆಯೇ?

ಚಲನಚಿತ್ರ ಚಲನಚಿತ್ರವಷ್ಟೇ. ಅದು ಇರುವುದು ಮನೋರಂಜನೆಗಾಗಿ. ಸಂದೇಶಕ್ಕೆ ಹೋಗುವುದು ಬೇಡ. ಅದಕ್ಕೆ ತಂದೆ, ತಾಯಿ, ಗುರುಗಳು, ಮನೆ, ಶಾಲೆ… ಇದ್ದಾರೆ, ಇದೆ. ನಾಯಕ ಪಾತ್ರಧಾರಿ ಅಷ್ಟೇ. ಅವನ larger than life imageನಿಂದ ಪ್ರಭಾವಿತರಾಗಿ ನಮ್ಮ ನಿಜ ತಾಪತ್ರಯಗಳಿಗೆಲ್ಲಾ ಅವರುಗಳು ಬಂದು ಹೋರಾಡಬೇಕು ಎಂದು ಬಯಸುವುದು ಬಾಲಿಷ. ಹೆಚ್ಚೆಂದರೆ ಜನ ಸೇರಿಸಬಲ್ಲರು ನಮ್ಮ ಬೇಡಿಕೆಗೆ ದನಿಯಾಗಬಲ್ಲರು. (ಆಗಲೇ ಬೇಕೆಂದಿಲ್ಲ) ಆದರೆ ಸಮಸ್ಯೆ ಪರಿಹರಿಸಲು ಅಧಿಕಾರ ಇರಬೇಕು. ಅದು ಇರುವುದು ಸರ್ಕಾರಕ್ಕೆ.

ಚಲನಚಿತ್ರ ಒಂದು ಸುಂದರ ಮನೋರಂಜನ ಮಾಧ್ಯಮ. ಅದನ್ನು ಹಾಗೆಯೇ ನೋಡೋಣ. ಸಮಸ್ಯೆಗಳಿಗೆ ಪರಿಹಾರವಾಗಿಯಲ್ಲ.

ಅಂದಹಾಗೆ, ಈ ಶುಕ್ರವಾರ ಯಾವ ಚಿತ್ರ ರಿಲೀಸ್ ಆಗ್ತಾ ಇದೆ?

2 COMMENTS

  1. ಡಿಜಿಟಲ್ ಕನ್ನಡಕ್ಕೆ ಏನಾಗಿದೆ ಅಂತ ಗೊತ್ತಾಗ್ತಾಯಿಲ್ಲ 🙁 ಟೈಮ್ಲಿ ಲೇಖನ ಅಂತ ನಿಮಗೆ ಅನಿಸುತ್ತಾ ಪಿಂಕ್ ಬಂದು ಯಾವತ್ತೋ ಹೋಯ್ತು , ಮೂರರಲ್ಲಿ ಮತ್ತೊಂದು ಆಗುವತ್ತ ಹೋಗುತ್ತಿದ್ದೀರಿ ಎಚ್ಚರ

Leave a Reply