
ಬೆಂಗಳೂರಿನ ರೇಸ್ಕೋರ್ಸ್ ರಸ್ತೆಯ ಚಾಲುಕ್ಯ ಹೊಟೇಲ್ ನಲ್ಲಿ ಅ. 18ರಿಂದ- ಅ. 23ರವರೆಗೆ ರುದ್ರಾಕ್ಷಿಗಳ ಪ್ರದರ್ಶನ ಮತ್ತು ವ್ಯಾಪಾರ ಮೇಳ ನಡೆಯುತ್ತಿದೆ. ಇಂಡೊ ನೇಪಾಳ ರುದ್ರಾಕ್ಷ ಸಂಸ್ಥೆ ನಡೆಸುತ್ತಿರುವ ಮೇಳವು ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ ತೆರೆದಿರುತ್ತದೆ.
ಡಿಜಿಟಲ್ ಕನ್ನಡ ಟೀಮ್:
ಕೆಪಿಎಸ್ಸಿ ನೇಮಕಾತಿ ರದ್ದು ಮಾಡಿದ್ದ ಸರ್ಕಾರದ ನಿರ್ಧಾರ ವಜಾ ಮಾಡಿದ ಕೆಎಟಿ
2011ರಲ್ಲಿ ಕೆಪಿಎಸ್ಸಿ ನೇಮಕಾತಿ ಹಗರಣದ ಹಿನ್ನೆಲೆಯಲ್ಲಿ ನೇಮಕಾತಿ ಆದೇಶವನ್ನೇ ರದ್ದು ಮಾಡಿದ್ದ ಸರ್ಕಾರದ ಆದೇಶವನ್ನು ಕರ್ನಾಟಕ ಕಾನೂನಾತ್ಮಕ ನ್ಯಾಯಮಂಡಳಿ (ಕೆಎಟಿ) ವಜಾಗೊಳಿಸಿದೆ. ಅದರೊಂದಿಗೆ ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಿದ್ದ ಉದ್ಯೋಗಾಂಕ್ಷಿಗಳಲ್ಲಿ ಮಂದಹಾಸ ಮೂಡಿದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ತನಿಖೆ ನಡೆಸಿತ್ತು. ತನಿಖಾ ವರದಿ ಬಂದ ನಂತರ ಭ್ರಷ್ಟಾಚಾರ ನಡೆದಿರುವುದು ಸಾಬೀತಾದ ನಂತರ ಸರ್ಕಾರ ಈ ನೇಮಕಾತಿ ಆದೇಶವನ್ನೇ ರದ್ದು ಮಾಡಿತ್ತು. ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿದ ಉದ್ಯೋಗಾಂಕ್ಷಿಗಳು ತೀವ್ರ ಪ್ರತಿಭಟನೆ ನಡೆಸಿ, ಈ ನೇಮಕಾತಿ ಆದೇಶ ರದ್ದತಿಯನ್ನು ಕೆಎಟಿಯಲ್ಲಿ ಪ್ರಶ್ನಿಸಿದರು. ಈ ಉದ್ಯೋಗಾಂಕ್ಷಿಗಳ ಪರ ಖ್ಯಾತ ವಕೀಲರಾದ ಬಿವಿ ಆಚಾರ್ಯ ಅವರು ವಕಾಲತ್ತು ವಹಿಸಿಕೊಂಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಕೆಎಟಿ, ನೇಮಕಾತಿ ಪ್ರಕ್ರಿಯೆಯಲ್ಲಿ ಅಂತಿಮ ಪಟ್ಟಿಗೆ ಆಯ್ಕೆಯಾಗಿದ್ದ 362 ಅಭ್ಯರ್ಥಿಗಳಿಗೆ ಮುಂದಿನ ಎರಡು ತಿಂಗಳ ಒಳಗಾಗಿ ನೇಮಕ ಮಾಡಿಕೊಳ್ಳುವಂತೆ ಸರ್ಕಾರಕ್ಕೆ ಸೂಚನೆ ನೀಡಿತು.
ಶನಿವಾರ ದರ್ಶನ್ ಮನೆ ತೆರವು
ಸಾಕಷ್ಟು ವಿವಾದಕ್ಕೆ ಸಿಲುಕಿದ್ದ ಚಿತ್ರನಟ ದರ್ಶನ್ ಅವರ ನಿವಾಸ ರಾಜಕಾಲುವೆ ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸುವ ವಿಚಾರ ಈಗ ಒಂದು ಹಂತಕ್ಕೆ ಬಂದು ನಿಂತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಬೆಂಗಳೂರು ಜಿಲ್ಲಾಧಿಕಾರಿ ವಿ.ಶಂಕರ್ ಅಕ್ಟೋಬರ್ 22ರಂದು ಶನಿವಾರ ದರ್ಶನ್ ಅವರ ಮನೆಯನ್ನು ತೆರವುಗೊಳಿಸುವುದಾಗಿ ಮಾಹಿತಿ ನೀಡಿದ್ದಾರೆ. ದರ್ಶನ್ ಅವರ ನಿವಾಸದ ಜತೆಗೆ ಎಸ್.ಎಸ್ ಆಸ್ಪತ್ರೆಯೂ ವಿವಾದಿತ ಜಾಗದಲ್ಲಿ ನಿರ್ಮಾಣವಾಗಿದ್ದು ಈ ಕಟ್ಟಡಗಳನ್ನು ನಾವು ಧ್ವಂಸಗೊಳಿಸುವುದಿಲ್ಲ. ದರ್ಶನ್ ಮನೆ ಹಾಗೂ ಎಸ್.ಎಸ್ ಆಸ್ಪತ್ರೆ ಮಾತ್ರವಲ್ಲದೆ ಒಟ್ಟು 69 ಆಸ್ತಿಗಳನ್ನು ವಶಕ್ಕೆ ಪಡೆಯಲಾಗುವುದು ಎಂದರು. ದರ್ಶನ್ ಮನೆ ಹಾಗೂ ಎಸ್.ಎಸ್ ಆಸ್ಪತ್ರೆ ಖರಾಬು ಭೂಮಿಯಲ್ಲಿ ಇದೆ. ಹೀಗಾಗಿ ಒತ್ತುವರಿ ಮತ್ತು ತೆರವು ಕಾರ್ಯಾಚರಣೆಯ ಖರ್ಚು ಉಳಿಸುವ ನಿಟ್ಟಿನಲ್ಲಿ ಇವುಗಳನ್ನು ಕೆಡವುತ್ತಿಲ್ಲ ಎಂದು ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಈ ಕಟ್ಟಡಗಳನ್ನು ಸರ್ಕಾರಿ ಕಚೇರಿಗಳನ್ನಾಗಿ ಮಾರ್ಪಡಿಸುತ್ತೇವೆ ಎಂದರು.
ನವೆಂಬರ್ 21ರಿಂದ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನಕ್ಕೆ ಸಂಪುಟ ಅಸ್ತು
ವಿಧಾನಮಂಡಲದ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನವೆಂಬರ್ 21ರಿಂದ ಆರಂಭಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಬುಧವಾರ ನಡೆದ ಸಚಿವ ಸಂಪುಟದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಡಿಸೆಂಬರ್ 2ರವರೆಗೂ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ಅಗತ್ಯ ಬಿದ್ದರೆ ಸದನವನ್ನು ವಿಸ್ತರಿಸುವ ಕುರಿತಂತೆ ಸದನ ಕಲಾಪ ಸಮಿತಿ ತೀರ್ಮಾನ ಕೈಗೊಳ್ಳಲಿದೆ. ಈ ಸಚಿವ ಸಂಪುಟದಲ್ಲಿ ಇತರೆ ವಿಚಾರಗಳ ಬಗ್ಗೆಯೂ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ರಾಷ್ಟ್ರೀಯ ಪ್ರಾಥಮಿಕ ಹಾಗೂ ಮಾಧ್ಯಮಿಕ ಅಭಿಯಾನ ಯೋಜನೆಯಡಿಯಲ್ಲಿ ನಡೆದಿರುವ ಕೋಟ್ಯಾಂತರ ಹಗರಣದ ತನಿಖೆ ನಡೆಸಲು ಸಂಪುಟ ಒಪ್ಪಿಗೆ ನೀಡಿದೆ. ಪಶು ಆರೋಗ್ಯ ಮತ್ತು ಜೀವಿಕ ಸಂಸ್ಥೆಯ ವಿಜ್ಞಾನಿಗಳಿಗೆ ಯುಜಿಸಿ ಮಾದರಿಯ ವೇತನ ಶ್ರೇಣಿ ನೀಡಲು ಸಮ್ಮತಿಸಿದೆ.
ಕೃಷ್ಣಾ ಮತ್ತು ಕಾವೇರಿ ನದಿ ನೀರು ಹಂಚಿಕೆ ಸಂಬಂಧ ನಡೆದ ಎರಡು ಪ್ರಮುಖ ಬೆಳವಣಿಗೆಗಳು…
ಸದ್ಯ ನದಿ ನೀರು ಹಂಚಿಕೆ ವಿಚಾರವಾಗಿ ರಾಜ್ಯ ಸಾಕಷ್ಟು ಹೋರಾಟ ನಡೆಸುತ್ತಿದೆ. ಆ ಪೈಕಿ ಬುಧವಾರ ಕೃಷ್ಣಾ ನದಿ ನೀರು ಹಂಚಿಕೆ ವಿಷ್ಯದಲ್ಲಿ ಕೊಂಚ ನೆಮ್ಮದಿ ಸಿಕ್ಕರೆ, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ವಿಚಾರಣೆ ಮತ್ತೆ ಮುಂದಕ್ಕೆ ಹೋಗಿದ್ದು ಅನಿಶ್ಚಿತತೆ ಮುಂದುವರಿದಿದೆ. ಈ ಎರಡು ನದಿ ನೀರಿಗೆ ಸಂಬಂಧಿಸಿದಂತೆ ಬುಧವಾರ ನಡೆದ ವಿದ್ಯಮಾನಗಳ ಪೂರ್ಣ ವಿವರ ಇಲ್ಲಿ ಓದಿ.