ಈ ಬಾರಿ ಮಳೆ-ಬೆಳೆ ಕಡಿಮೆಯಾ? ಹಂಗೇನಿಲ್ಲ, ಆದರೆ ಕರ್ನಾಟಕ ಗುಜರಾತ್ ಪರಿಸ್ಥಿತಿ ಶೋಚನಿಯ ಎಂದಿದೆ ಕೇಂದ್ರ ಜಲ ಆಯೋಗ

ಡಿಜಿಟಲ್ ಕನ್ನಡ ಟೀಮ್:

ಈ ವಾರ ಪ್ರಸಕ್ತ ಸಾಲಿನ ಮುಂಗಾರು ಅಧಿಕೃತವಾಗಿ ಅಂತ್ಯವಾಗಲಿದೆ. ಈ ಸಲದ ಮುಂಗಾರು ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲ ಎಂಬುದು ಎಲ್ಲರ ಭಾವನೆ ಆಗಿದೆ. ಆದರೆ, ಕೇಂದ್ರ ಜಲ ಆಯೋಗ ನೀಡಿರುವ ಮಾಹಿತಿ ಪ್ರಕಾರ ಈ ಬಾರಿಯ ಮುಂಗಾರು ಪ್ರಮಾಣ ಸರಾಸರಿಯಲ್ಲಿದೆ. ಅಲ್ಲದೆ ದೇಶದಾದ್ಯಂತ 91 ಜಲಾಶಯಗಳಲ್ಲಿ ನೀರಿನ ಶೇಖರಣೆ ಪ್ರಮಾಣ ಕಳೆದ ವರ್ಷಕ್ಕಿಂತ ಶೇ.25 ರಷ್ಟು ಹೆಚ್ಚಾಗಿದೆ ಹಾಗೂ ಈ ವರ್ಷ ದೇಶದಲ್ಲಿ ದಾಖಲೆಯ ಪ್ರಮಾಣದ ಆಹಾರ ಉತ್ಪಾದಿಸಲಾಗಿದೆ ಎಂದು ತಿಳಿಸಿದೆ.

ಆದರೆ ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳು ಮಾತ್ರ ಮಳೆಯ ಅಭಾವ ಅತಿಯಾಗಿದೆ ಎಂದು ಉಲ್ಲೇಖಿಸಲಾಗಿದೆ.

ನೈರುತ್ಯ ಭಾಗದ ಮುಂಗಾರು ಅವಧಿ ಮುಕ್ತಾಯದ ಹಂತದಲ್ಲಿದ್ದು, ಈ ಸಂದರ್ಭದಲ್ಲಿ ಕೇಂದ್ರ ಜಲ ಆಯೋಗವು ಕ್ರಿಸಿಲ್ ಎಂಬ ಸಂಶೋಧನಾ ಸಂಸ್ಥೆ ಜತೆಗೂಡಿ ನಡೆಸಿದ ಅಧ್ಯಯನ ವರದಿಯಲ್ಲಿ ಈ ಪ್ರಮುಖ ಅಂಶಗಳು ಕಂಡುಬಂದಿವೆ…

ವರದಿಯಲ್ಲಿ ಈ ವರ್ಷ ದೇಶದಲ್ಲಿ ದಾಖಲೆಯ ಪ್ರಮಾಣದ ಬೆಳೆ ಪಡೆಯಲಾಗಿದೆ ಎಂಬುದು ಸಂತೋಷದ ವಿಚಾರ. ಈ ವರದಿಯ ಮಾಹಿತಿ ಪ್ರಕಾರ 2016ರ ಖಾರಿಫ್ (ಬೇಸಿಗೆ) ಮತ್ತು ರಾಬಿ (ಮಳೆಗಾಲ) ಬೆಳೆಗಳ ಪ್ರಮಾಣ ಒಟ್ಟು 270 ಮಿಲಿಯನ್ ಟನ್ ಆಗಲಿದೆ. ಸರ್ಕಾರ ಈ ಬಾರಿ ಖಾರಿಫ್ ಬೆಳೆಯಲ್ಲಿ 132 ಮಿಲಿಯನ್ ಟನ್ ಬೆಳೆ ಉತ್ಪಾದನೆ ಮಾಡುವ ನಿರೀಕ್ಷೆ ಹೊಂದಿತ್ತು. ಸರ್ಕಾರದ ನಿರೀಕ್ಷೆಯನ್ನು ಮೀರಿ 135 ಮಿಲಿಯನ್ ಟನ್ ಬೆಳೆ ಬಂದಿದೆ. ಸರ್ಕಾರದ ಬಳಿ ಇರುವ ಮಾಹಿತಿ ಪ್ರಕಾರ ಇದೇ ಅತಿ ದೊಡ್ಡ ಪ್ರಮಾಣದ ಬೆಳೆಯಾಗಿದೆ. ಈ ಹಿಂದಿನ ಗರಿಷ್ಠ ಮಟ್ಟದ ಬೆಳೆ 2011-12ನೇ ಸಾಲಿನಲ್ಲಿ ಬಂದಿದ್ದು, ಒಟ್ಟು 131 ಮಿಲಿಯನ್ ಟನ್ ನಷ್ಟು ಬೆಳೆ ಉತ್ಪಾದನೆಯಾಗಿತ್ತು. ಇನ್ನು ರಾಬಿ ಬೆಳೆಯಲ್ಲೂ ದಾಖಲೆಯ ಪ್ರಮಾಣದ ನಿರೀಕ್ಷೆ ಇದ್ದು, 137 ಮಿಲಿಯನ್ ಟನ್ ನಷ್ಟು ಉತ್ಪಾದನೆಯ ನಿರೀಕ್ಷೆ ಇದೆ. ರಾಬಿ ಬೆಳೆ ಈವರೆಗಿನ ಗರಿಷ್ಠ ಪ್ರಮಾಣ ಎಂದರೆ 136 ಮಿಲಿಯನ್ ಟನ್ ಆಗಿದ್ದು, 2013-14ನೇ ಸಾಲಿನಲ್ಲಿ ಉತ್ಪಾದನೆ ಆಗಿತ್ತು.

ಇನ್ನು ದೇಶದಾದ್ಯಂತ ಸರಾಸರಿ ಮಳೆ ಆಗಿದ್ದರೂ ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಜೂನ್ ನಿಂದ ಆಗಸ್ಟ್ ತಿಂಗಳವರೆಗೂ ಬಿದ್ದ ಮಳೆ ಪ್ರಮಾಣದಲ್ಲಿ ಈ ಎರಡು ರಾಜ್ಯಗಳಲ್ಲಿ ಶೇ.20ಕ್ಕೂ ಹೆಚ್ಚು ಕೊರತೆ ಇದೆ. ಕಳೆದ ಎರಡು ವರ್ಷಗಳಲ್ಲಿ ನಿರಂತರವಾಗಿ ಮಳೆ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಈ ಎರಡು ರಾಜ್ಯಗಳ 13 ಜಿಲ್ಲೆಗಳ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಇನ್ನು ಉತ್ತರ ಪ್ರದೇಶ, ಪಂಜಾಬ್, ಹರ್ಯಾಣ ಮತ್ತು ಕೇರಳದಲ್ಲಿ ನಿರೀಕ್ಷೆಗಿಂತ ಕಡಿಮೆ ಮಳೆಯಾಗಿದೆಯಾದರೂ ಈ ಎರಡು ರಾಜ್ಯಗಳಷ್ಟು ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿಲ್ಲ.

ಇನ್ನು ದೇಶದಾದ್ಯಂತ ಒಟ್ಟಾರೆ ಮಳೆ ಪ್ರಮಾಣವನ್ನು ಗಮನಿಸೋದಾದ್ರೆ, 91 ಜಲಾಶಯಗಳಲ್ಲಿ ಶೇ.75 ರಷ್ಟು ನೀರು ಭರ್ತಿಯಾಗಿವೆ. ಇನ್ನು ಕಳೆದ ನೂರು ವರ್ಷಗಳ ಸರಾಸರಿ ಮಳೆ ಪ್ರಮಾಣವನ್ನು ಹೋಲಿಕೆ ಮಾಡಿದಾಗ ಜೂನ್ ನಿಂದ ಸೆಪ್ಟೆಂಬರ್ ತಿಂಗಳವರೆಗೂ ದೇಶದಾದ್ಯಂತ ಶೇ. 97 ರಷ್ಟು ಮಳೆ ಆಗಿದ್ದು, ಶೇ.3ರಷ್ಟು ಮಾತ್ರ ಕೊರತೆ ಆಗಿದೆ. ಈ ಬಾರಿ ಶೇ.6 ರಷ್ಟು ಹೆಚ್ಚುವರಿ ಮಳೆಯಾಗಲಿದೆ ಎಂಬ ಹವಾಮಾನ ಇಲಾಖೆ ವರದಿಯ ನಿರೀಕ್ಷೆ ಹುಸಿಯಾಗಿದೆ.

Leave a Reply