ಭಾರತದ ಐಎನ್ಎಸ್ ಅರಿಹಂತಕ್ಕೆ ಬೆಂಬಲವಾಗಿ ಸೇರಿಕೊಳ್ಳುತ್ತಿರುವ ಅಣ್ವಸ್ತ್ರ ನೌಕಾಬಲ ರಷ್ಯಾದ ಅಕುಲ

ಡಿಜಿಟಲ್ ಕನ್ನಡ ಟೀಮ್:

ಭಾರತವು ಕ್ಷಿಪಣಿ ಸನ್ನದ್ಧ ಸ್ವದೇಶಿ ಅಣ್ವಸ್ತ್ರ ಜಲಾಂತರ್ಗಾಮಿ ಐಎನ್ಎಸ್ ಅರಿಹಂತವನ್ನು ಕಾರ್ಯಸನ್ನದ್ಧಗೊಳಿಸಿರುವುದಾಗಿ ನಿನ್ನೆಯಷ್ಟೇ ವರದಿಯಾಗಿತ್ತು.

ಇದೀಗ ನೌಕಾಪಡೆಯ ಅಣ್ವಸ್ತ್ರ ಬಲ ಇನ್ನಷ್ಟು ಬಲಗೊಳ್ಳುತ್ತಿರುವ ಸುದ್ದಿ ಬಂದಿದೆ. ಅದೆಂದರೆ, ರಷ್ಯಾದಿಂದ ಅಕುಲಾ ಎರಡನೇ ಹಂತದ ಅಣ್ವಸ್ತ್ರ ದಾಳಿಬಲದ ಜಲಾಂತರ್ಗಾಮಿಗಳನ್ನು ಭಾರತ ಲೀಸಿಗೆ ಪಡೆದಿದೆ. ಈ ಬಗ್ಗೆ ಸಹ ಭಾರತದಲ್ಲಿ ಅಧಿಕೃತ ಘೋಷಣೆಗಳಾಗಿಲ್ಲವಾದರೂ, ಬ್ರಿಕ್ಸ್ ಸಮಾವೇಶದ ಸಂದರ್ಭದಲ್ಲೇ ಈ ಒಪ್ಪಂದ ಅಖೈರಾಗಿರುವ ಬಗ್ಗೆ ರಷ್ಯಾದ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ.

ಅಕುಲಾ ಎರಡನೇ ಶ್ರೇಣಿಯ ಕೆಲವು ಜಲಾಂತರ್ಗಾಮಿಗಳನ್ನು ಭಾರತ ಈಗಾಗಲೇ ಹೊಂದಿದೆ. ರಷ್ಯಾದಲ್ಲಿ ಕೆ-152 ನೆರ್ಪಾ ಎಂದು ಕರೆಯಲಾಗುತ್ತಿದ್ದ ಐಎನ್ಎಸ್ ಚಕ್ರ ಏಪ್ರಿಲ್ 2012ರಿಂದಲೇ ಸೇವೆಯಲ್ಲಿದೆ. ಹತ್ತು ವರ್ಷಗಳ ಕಾಲದ ಲೀಸ್ ವ್ಯವಸ್ಥೆಯಲ್ಲಿ ಪಡೆದುಕೊಂಡಿರುವ ಅಣ್ವಸ್ತ್ರ ಜಲಾಂತರ್ಗಾಮಿ ಇದಾಗಿದ್ದು, ಇದಕ್ಕೂ ಮುಂದಿನ ಹಂತದ ಜಲಾಂತರ್ಗಾಮಿ ಪಡೆದುಕೊಳ್ಳುವುದಕ್ಕೆ ಭಾರತ ಕಾತುರವಾಗಿತ್ತು. ರಷ್ಯಾ ನೌಕಾಸೇನೆ ಜತೆ ಸೇರಿಕೊಂಡು ಯಾಸೀನ್ ವರ್ಗದ ಜಲಾಂತರ್ಗಾಮಿ ನೌಕೆ ಅಭಿವೃದ್ಧಿಯಲ್ಲಿ ಭಾರತ ತೊಡಗಿಸಿಕೊಂಡಿದೆಯಾದರೂ ಅದು ವಿಳಂಬವಾಗುತ್ತಿರುವುದರಿಂದ ಅಕುಲಾ-2 ಪಡೆಯುವುದಕ್ಕೆ ಭಾರತ ಆಸಕ್ತಿ ತೋರಿತ್ತು.

ನೀರಿನಡಿಯಲ್ಲಿ ಗಂಟೆಗೆ ಸುಮಾರು 65 ಕಿ.ಮೀ ವೇಗದಲ್ಲಿ (35 ನಾಟ್ಸ್) ಚಲಿಸುವ ಅಕುಲಾದ ವೈಶಿಷ್ಟ್ಯವೆಂದರೆ ಇದು ಸದ್ದು ಮಾಡುವುದಿಲ್ಲ. ಹೀಗಾಗಿ ವೈರಿಪಡೆಗೆ ಇದನ್ನು ಪತ್ತೆ ಹಚ್ಚುವುದು ಕಷ್ಟದ ಕೆಲಸ. ವೈರಿ ನೌಕೆಗಳನ್ನು ಕೆಡವುವ ಸಾಮರ್ಥ್ಯದೊಂದಿಗೆ ನೀರಲ್ಲಿದ್ದುಕೊಂಡೇ ಭೂಮಿಯ ಮೇಲೆ ಕ್ಷಿಪಣಿ ತೂರುವ ತಾಕತ್ತೂ ಇದಕ್ಕಿದೆ. ಖಂಡಾಂತರ ಅಣ್ವಸ್ತ್ರ ಕ್ಷಿಪಣಿ ಹೊಂದಿರುವ ಐಎನ್ಎಸ್ ಅರಿಹಂತ ಜಲಾಂತರ್ಗಾಮಿಗೆ ರಕ್ಷಣೆ ಒದಗಿಸುವುದು ಹಾಗೂ ಕಡಲ್ಗಳ್ಳರ ನಿಯಂತ್ರಣದ ನೆಪ ಇಟ್ಟುಕೊಂಡು ಬರುವ ಚೀನಾ ಅಣ್ವಸ್ತ್ರ ಜಲಾಂತರ್ಗಾಮಿಗಳ ಮೇಲೆ ನಿಗಾ ಇಡುವುದು ಅಕುಲಾ-2ರ ಮುಖ್ಯ ಕಾರ್ಯ.

Leave a Reply