ಗುರಿ ನಿರ್ದಿಷ್ಟ ದಾಳಿ ಈ ಹಿಂದೆಯೂ ಆಗಿತ್ತೇ?- ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಹೇಳಿದ್ದಾದರೂ ಏನು?

 

ಡಿಜಿಟಲ್ ಕನ್ನಡ ಟೀಮ್:

ವಿದೇಶ ವ್ಯವಹಾರಗಳ ಸಂಸದೀಯ ಸಮಿತಿಗೆ ನೀಡಿರುವ ಮಾಹಿತಿಯಲ್ಲಿ ವಿದೇಶ ವ್ಯವಹಾರ ಕಾರ್ಯದರ್ಶಿ ಎಸ್. ಜಯಶಂಕರ್ ಅವರು ಈ ಹಿಂದೆಯೂ ಗುರಿ ನಿರ್ದಿಷ್ಟ ದಾಳಿಗಳಾಗಿರುವುದಾಗಿ ಹೇಳಿದ್ದಾರೆ ಎಂಬುದು ಕಾಂಗ್ರೆಸ್ ಉವಾಚ.

ಇದನ್ನು ತನ್ನ ಹಿತಕ್ಕೆ ಬಳಸಿಕೊಂಡ ಕಾಂಗ್ರೆಸ್, ‘ಸದ್ಯ ಈ ಹೇಳಿಕೆಗೆ ಈಗಿನ ಸರ್ಕಾರವು ಜೈಶಂಕರ್ ಅವರನ್ನು ಎತ್ತಂಗಡಿ ಮಾಡದಿದ್ದರೆ ಸಾಕು’ ಎಂದು ಕಟಕಿಯಾಡಿದೆ.

ಸಂಸದೀಯ ಸಮಿತಿಯಲ್ಲಿದ್ದ ಸಂಸದರು ಈ ಹಿಂದೆ ಗುರಿ ನಿರ್ದಿಷ್ಟ ದಾಳಿಗಳಾಗಿದ್ದವೇ ಎಂಬ ಮಾಹಿತಿ ಕೇಳಿದ್ದರು. ವಾಸ್ತವದಲ್ಲಿ ಅದಕ್ಕೆ ಜೈಶಂಕರ್ ಒದಗಿಸಿರುವ ಉತ್ತರವು ಈ ಹಿಂದಿನ ಪ್ರತಿಪಾದನೆಗಳಿಗೆ ಭಿನ್ನವಾಗಿಯೇನೂ ಇಲ್ಲ ಎಂಬುದು ನಿಚ್ಚಳವಾಗುತ್ತದೆ. ಅವರು ಹೇಳಿರುವುದಿಷ್ಟು- ‘ಈ ಹಿಂದೆ ಗಡಿ ದಾಟಿ ಗುರಿ ನಿರ್ದಿಷ್ಟ ದಾಳಿ ಆಗಿದೆಯೋ ಎಂಬ ಅಂಶ ಮಿಲಿಟರಿಗೆ ಮಾತ್ರ ಗೊತ್ತಿರುವುದಕ್ಕೆ ಸಾಧ್ಯ. ಏಕೆಂದರೆ ಅಂಥ ಸಂದೇಶಗಳ್ಯಾವವೂ ದಾಖಲಾಗಿಲ್ಲ. ಹೀಗಾಗಿ ಈ ಪ್ರಶ್ನೆ ಅಪ್ರಸ್ತುತ. ಒಂದು ರಾಜಕೀಯ- ಮಿಲಿಟರಿ ಬಲದ ಸಂಕೇತ ನೀಡಲೆಂದು ನಾವು ಗುರಿ ನಿರ್ದಿಷ್ಟ ದಾಳಿ ಬಹಿರಂಗಗೊಳಿಸಿದೆವು.’

ಜೈಶಂಕರ್ ಅವರ ಮಾತುಗಳನ್ನು ಈ ಹಿಂದಿನ ಸೇನಾ ಮುಖ್ಯಸ್ಥ ಜನರಲ್ ವಿಕ್ರಂ ಸಿಂಗ್ ಅವರ ಮಾತುಗಳೊಂದಿಗೆ ತಳುಕು ಹಾಕಿದಾಗಲೂ ಅದೇ ಸಾಮ್ಯತೆ ಸಿಗುತ್ತದೆ. ವಿಕ್ರಂ ಸಿಂಗ್ ಹೇಳಿದ್ದರು- ‘ಸೇನೆ ಈ ಹಿಂದೆಯೂ ಅವರವರ ಕಮಾಂಡ್ ಗಳಲ್ಲಿ ಉತ್ತರ ಕೊಟ್ಟಿತ್ತು. ಆದರೆ ರಾಜಕೀಯ ನಾಯಕತ್ವವು ಅಲ್ಲಿ ನಿರಾಕರಣೆ ಅವಕಾಶವನ್ನು ಕಾಯ್ದುಕೊಂಡಿತ್ತು. ಆದರೆ ಮೊನ್ನೆಯ ಗುರಿ ನಿರ್ದಿಷ್ಟ ದಾಳಿಯಲ್ಲಿ ರಾಜಕೀಯ ನಾಯಕತ್ವವೇ ಸೇನೆಯ ಬೆನ್ನಿಗೆ ನಿಂತು ಯೋಜನೆಯಲ್ಲಿ ಪಾಲ್ಗೊಂಡಿತು’ ಎಂಬುದು.

ರಕ್ಷಣಾ ಮಂತ್ರಿ ಪಾರಿಕರ್ ಈ ಹಿಂದೆ ಹೇಳಿರುವುದೂ ಅದನ್ನೇ. ಈ ಹಿಂದಿನ ದಾಳಿಗಳು ರಾಜಕೀಯ ನಾಯಕತ್ವಕ್ಕೆ ಗೊತ್ತಿಲ್ಲದೇ, ಆಯಾ ಪರಿಸ್ಥಿತಿಗನುಗುಣವಾಗಿ ಸೇನೆ ಉತ್ತರಿಸಿದ್ದಾಗಿತ್ತು. ಆದರೆ ಗುರಿ ನಿರ್ದಿಷ್ಟ ದಾಳಿ ಎಂಬುದಾಗಿ ಯೋಜನಾಬದ್ಧವಾಗಿ ನಡೆದಿರುವುದು ಇದೇ ಮೊದಲು ಎಂಬುದು.

ಬಹಳಷ್ಟು ಮಾಧ್ಯಮಗಳು ಜೈಶಂಕರ್ ಹೇಳಿಕೆಯನ್ನು ಪಾರಿಕರ್ ಹೇಳಿಕೆಗೆ ವಿರುದ್ಧವಾದದ್ದು ಎಂದು ಅರ್ಥೈಸಿವೆ. ವಾಸ್ತವದಲ್ಲಿ ಬಿಜೆಪಿ ಸರ್ಕಾರದ ನಿಲುವಿಗೂ, ಜೈಶಂಕರ್ ಹೇಳಿಕೆಗಳಲ್ಲೂ ವಿರೋಧಾಭಾಸವೇನಿಲ್ಲ. ಏಕೆಂದರೆ ಕೇಂದ್ರ ಸರ್ಕಾರದ ಪ್ರತಿಪಾದನೆ ಇಷ್ಟು- ಗುರಿ ನಿರ್ದಿಷ್ಟ ದಾಳಿಯ ಯಶಸ್ಸು ಸೇನೆಯದ್ದೇ. ಆದರೆ ರಾಜಕೀಯ ನಾಯಕತ್ವವೂ ಯೋಜನೆಯಲ್ಲಿ ಪಾಲ್ಗೊಂಡು, ಸೇನೆಗೆ ಹಸಿರು ನಿಶಾನೆ ಕೊಟ್ಟಿತ್ತು ಎಂಬುದು. ಜೈಶಂಕರ್ ಹೇಳಿರುವುದೂ ‘ಹಿಂದೆ ದಾಳಿಗಳಾಗಿದ್ದಿರಬಹುದಾದರೂ ಅದು ಕೇವಲ ಸೇನಾ ವ್ಯಾಪ್ತಿಯದ್ದಾದ್ದರಿಂದ ಉತ್ತರಿಸಬೇಕಾದವರು ಅವರೇ…’ ಅರ್ಥಾತ್ ಇಲ್ಲಿ ರಾಜಕೀಯ ನಾಯಕತ್ವದ ಪಾತ್ರವಿರಲಿಲ್ಲ ಎನ್ನುವುದೇ ಆಗಿದೆ.

ಅಲ್ಲಿಗೆ ವಿದೇಶ ಕಾರ್ಯದರ್ಶಿಯ ಮಾತುಗಳನ್ನು ತಮ್ಮ ವ್ಯಾಖ್ಯಾನಕ್ಕೆ ತಕ್ಕಂತೆ ದುಡಿಸಿಕೊಳ್ಳುವ ಕಾಂಗ್ರೆಸ್ ಪ್ರಯತ್ನ ಸಹಜವೇ ಆದರೂ, ಹಿಂದಿನ ದಾಳಿಗಳಿಗೆ ರಾಜಕೀಯ ನಾಯಕತ್ವವಿತ್ತು ಎಂಬುದನ್ನೂ ನಿರೂಪಿಸಬೇಕಾಗುತ್ತದೆ ಹಾಗೂ ಆ ಹಂತದಲ್ಲಿ ವಿದೇಶ ಕಾರ್ಯದರ್ಶಿ ಹೇಳಿಕೆಯಲ್ಲಿ ಇವರಿಗೆ ಸಬೂತುಗಳು ಸಿಗುವುದಿಲ್ಲ. ಅಲ್ಲದೇ, ಯುಪಿಎ ಕಾಲದ ಸೇನಾ ಮುಖ್ಯಸ್ಥ ಹಾಗೂ ಮಿಲಿಟರಿ ಕಾರ್ಯಾಚರಣೆಗಳ ಮುಖ್ಯಸ್ಥರಿಬ್ಬರೂ ‘ಹಿಂದಿನ ಪ್ರತಿಕ್ರಿಯಾತ್ಮಕ ದಾಳಿಗೂ, ಮೊನ್ನೆಯ ಗುರಿ ನಿರ್ದಿಷ್ಟ ದಾಳಿಗೂ ಭಾರಿ ವ್ಯತ್ಯಾಸವಿದೆ’ ಎದು ಟಿವಿ ಸಂದರ್ಶನಗಳಲ್ಲಿ ಹೇಳುತ್ತ ಈಗಿನ ರಾಜಕೀಯ ನಾಯಕತ್ವವನ್ನು ಕೊಂಡಾಡಿದ್ದಾಗಿದೆ.

Leave a Reply