ಕೃಷ್ಣಾ ನದಿ ವಿಚಾರದಲ್ಲಿ ರಾಜ್ಯಕ್ಕೆ ಸಿಕ್ತು ನಿರಾಳ, ಕಾವೇರಿಯಲ್ಲಿ ಮುಂದುವರಿದ ಅನಿಶ್ಚಿತತೆ

ಡಿಜಿಟಲ್ ಕನ್ನಡ ಟೀಮ್:

ಸದ್ಯ ನದಿ ನೀರು ಹಂಚಿಕೆ ವಿಚಾರವಾಗಿ ರಾಜ್ಯ ಸಾಕಷ್ಟು ಹೋರಾಟ ನಡೆಸುತ್ತಿದೆ. ಆ ಪೈಕಿ ಬುಧವಾರ ಕೃಷ್ಣಾ ನದಿ ನೀರು ಹಂಚಿಕೆ ವಿಷ್ಯದಲ್ಲಿ ಕೊಂಚ ನೆಮ್ಮದಿ ಸಿಕ್ಕರೆ, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ವಿಚಾರಣೆ ಮತ್ತೆ ಮುಂದಕ್ಕೆ ಹೋಗಿದ್ದು ಅನಿಶ್ಚಿತತೆ ಮುಂದುವರಿದಿದೆ. ಈ ಎರಡು ನದಿ ನೀರಿಗೆ ಸಂಬಂಧಿಸಿದಂತೆ ಬುಧವಾರ ನಡೆದ ವಿದ್ಯಮಾನಗಳು ಹೀಗಿವೆ…

ಕೃಷ್ಣಾ ನದಿಯಲ್ಲಿ ಆಂಧ್ರ ತನ್ನ ಪಾಲನ್ನೇ ತೆಲಂಗಾಣ ಜತೆ ಹಂಚಿಕೊಳ್ಳಬೇಕು…

ಆಂಧ್ರ ಪ್ರದೇಶದಿಂದ ಪ್ರತ್ಯೆಕವಾಗಿ ವಿಭಜನೆಯಾದ ನಂತರ ತೆಲಂಗಾಣ ಕೃಷ್ಣಾ ನದಿ ನೀರನ್ನು ಮರು ಹಂಚಿಕೆ ಮಾಡಬೇಕು ಎಂದು ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಕೃಷ್ಣಾ ನ್ಯಾಯಾಧಿಕರಣ ಬುಧವಾರ ಮಹತ್ವದ ಆದೇಶ ಹೊರಡಿಸಿತು. ಅದೇನಂದ್ರೆ, ಕೃಷ್ಣಾ ನದಿ ನೀರು ಮರು ಹಂಚಿಕೆ ಸಾಧ್ಯವಿಲ್ಲ. ಈಗಾಗಲೇ ಹಂಚಿಕೆಯಾಗಿರುವ ಪ್ರಕಾರ ಆಂಧ್ರ ಪ್ರದೇಶಕ್ಕೆ ಸಿಕ್ಕಿರುವ ಪಾಲಿನಲ್ಲಿ ತೆಲಂಗಾಣ ತನ್ನ ಪಾಲನ್ನು ಪಡೆಯಬೇಕು ಎಂದು ನ್ಯಾಯಾಧಿಕರಣ ಅಧ್ಯಕ್ಷ ನ್ಯಾ.ಬ್ರಿಜೇಶ್ ಕುಮಾರ್ ತಿಳಿಸಿದ್ದಾರೆ.

ಈ ನ್ಯಾಯಾಧಿಕರಣ 2010ರಲ್ಲಿ ಈ ನದಿ ನೀರು ಹಂಚಿಕೆಯ ತೀರ್ಪ ಪ್ರಕಟಿಸಿತ್ತು.  ಆಗ ಕರ್ನಾಟಕ್ಕೆ 911, ಮಹಾರಾಷ್ಟ್ರಕ್ಕೆ 666 ಹಾಗೂ ಆಂಧ್ರಪ್ರದೇಶಕ್ಕೆ 1001 ಟಿಎಂಸಿ ಹಂಚಿಕೆ ಮಾಡಿತ್ತು. ಆದರೆ, ನ್ಯಾಯಾಧಿಕರಣ 2013ರ ನವೆಂಬರ್ 29ಕ್ಕೆ ಪ್ರಕಟಿಸಿದ ಅಂತಿಮ ತೀರ್ಪಿನಲ್ಲಿ ಕರ್ನಾಟಕಕ್ಕೆ ಹಂಚಿದ್ದ 911 ಟಿಎಂಸಿಯಲ್ಲಿ 4 ಟಿಎಂಸಿ ಕಡಿತ ಮಾಡಿ ಆಂಧ್ರಪ್ರದೇಶಕ್ಕೆ ನೀಡಿತು. ಇದರಿಂದ ಆಂಧ್ರಪ್ರದೇಶ 1005 ಟಿಎಂಸಿ ಪಡೆದರೆ, ಮಹಾರಾಷ್ಟ್ರದ 666 ಟಿಎಂಸಿ ಯಥಾರೀತಿ ಉಳಿಯಿತು. ತೆಲಂಗಾಣ ಪ್ರತ್ಯೇಕವಾದ ನಂತರ ಈ ಹಿಂದೆ ಮಾಡಲಾಗಿದ್ದ 3 ರಾಜ್ಯಗಳ ಹಂಚಿಕೆಯನ್ನು ಬದಲಾಯಿಸಿ ನಾಲ್ಕು ರಾಜ್ಯಗಳಿಗೆ ಪಾಲು ಮಾಡಬೇಕೆಂದು ತಿಳಿಸಿತ್ತು. ಇದಕ್ಕೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರ ವಿರೋಧ ವ್ಯಕ್ತಪಡಿಸಿದ್ದವು.

ಕಾವೇರಿ ವಿಚಾರ: ಅ.24ಕ್ಕೆ ವಿಚಾರಣೆ ಮುಂದೂಡಿಕೆ, ಅಲ್ಲಿಯವರೆಗೂ 2 ಸಾವಿರ ಕ್ಯುಸೆಕ್ಸ್ ಹರಿಕೆ

ಕಾವೇರಿ ನ್ಯಾಯಾಧಿಕರಣ ಮಂಡಳಿ ಐ ತೀರ್ಪಿನ ವಿರುದ್ಧ ನಾಲ್ಕು ರಾಜ್ಯಗಳ ಮೇಲ್ಮನವಿ ಅರ್ಜಿಯ ಸಿಂಧುತ್ವದ ಬಗೆಗಿನ ತೀರ್ಪನ್ನು ಸುಪ್ರೀಂ ಕೋರ್ಟ್ ಅ.24ಕ್ಕೆ ಕಾಯ್ದಿರಿಸಿದೆ. ಅದರೊಂದಿಗೆ ಸೋಮವಾರದವರೆಗೂ ರಾಜ್ಯದಿಂದ ನಿತ್ಯ 2 ಸಾವಿರ ಕ್ಯುಸೆಕ್ಸ್ ನೀರು ಹರಿದು ತಮಿಳುನಾಡಿಗೆ ಹೋಗಬೇಕಿದೆ. ಮಂಗಳವಾರ ಮತ್ತು ಬುಧವಾರ ಎರಡು ದಿನಗಳ ಕಾಲ ನಾಲ್ಕು ರಾಜ್ಯಗಳ ಮೇಲ್ಮನವಿ ಅರ್ಜಿಗಳ ಸಿಂಧುತ್ವದ ಬಗ್ಗೆ ನ್ಯಾ.ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯತ್ವ ಪೀಠ ವಿಚಾರಣೆ ನಡೆಸಿತು. ಈ ವಿಚಾರಣೆಯಲ್ಲಿ ಈ ಮೇಲ್ಮನವಿ ಅರ್ಜಿಗಳು ವಿಚಾರಣೆಗೆ ಅರ್ಹವಲ್ಲ ಎಂದು ಕೇಂದ್ರ ಸರ್ಕಾರ ವಾದಿಸಿತ್ತು. ಇದಕ್ಕೆ ಪುದುಚೆರಿ ಬೆಂಬಲ ಸೂಚಿಸಿತ್ತು. ಆದರೆ ಈ ಮೇಲ್ಮನವಿ ಅರ್ಜಿಗಳು ವಿಚಾರಣೆಗೆ ಯೋಗ್ಯ ಎಂದು ಕರ್ನಾಟಕ, ಕೇರಳ ಮತ್ತು ತಮಿಳುನಾಡು ನ್ಯಾಯಾಲಯದ ಮುಂದೆ ವಾದಿಸಿದವು.

ನಾಲ್ಕು ರಾಜ್ಯಗಳ ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಈ ಕುರಿತ ತೀರ್ಪನ್ನು ಸೋಮವಾರ ಪ್ರಕಟಿಸುವುದಾಗಿ ತಿಳಿಸಿತು. ಇನ್ನು ನಿನ್ನೆ ನ್ಯಾಯಾಲಯದ ಮುಂದಿನ ಆದೇಶ ಬರುವವರೆಗೂ ಕರ್ನಾಟಕ ತಮಿಳುನಾಡಿಗೆ ನಿತ್ಯ 2 ಸಾವರ ಕ್ಯುಸೆಕ್ಸ್ ನೀರು ಹರಿಸಬೇಕು ಎಂಬ ಸೂಚನೆ ಪ್ರಕಾರ ಸೋಮವಾರ ಮುಂದಿನ ತೀರ್ಪು ಬರುವವರೆಗೂ ಕೆ.ಆರ್.ಎಸ್ ನಿಂದ ಬಿಳಿಗೊಂಡನಹಳ್ಳಿ ಜಲಮಾಪನ ಕೇಂದ್ರಕ್ಕೆ ನೀರು ಹರಿಸಬೇಕಿದೆ.

ಹೀಗೆ ಬುಧವಾರ ಕೃಷ್ಣಾ ನದಿಗೆ ಸಂಬಂಧಿಸಿದಂತೆ ರಾಜ್ಯ ನಿಟ್ಟುಸಿರು ಬಿಟ್ಟರೆ, ಕಾವೇರಿ ವಿಚಾರದಲ್ಲಿ ಆತಂಕ ಮುಂದುವರಿದಿದೆ.

Leave a Reply