ಕೊನೆಗೂ ಶ್ರೀನಿವಾಸ ಪ್ರಸಾದರ ರಾಜೀನಾಮೆ ಅಂಗೀಕರಿಸಿದ ಕೋಳಿವಾಡರು, ಗುಪ್ತದಳ ವೈಫಲ್ಯಕ್ಕೆ ಸಿಎಂ ಬೇಸರ, ಉ.ಪ್ರ ಚುನಾವಣಾ ಕಣ: ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ರೀತಾ, ಕರಣ್ ಜೋಹರ್ ಚಿತ್ರಕ್ಕೆ ರಾಜನಾಥ್ ಸಿಂಗ್ ಅಭಯ

MLC, Tara with others during inauguration of Clay pottery exhibition at Namoora angadi in Bengaluru on Thursday.

ದೀಪಾವಳಿ ಹಬ್ಬದ ಪ್ರಯುಕ್ತ ಗಿರಿನಗರದ ಎನ್.ಡಿ.ಆರ್.ಆರ್ ಕಾಂಪ್ಲೆಕ್ಸ್ ನಲ್ಲಿ ಗುರುವಾರ ನಮ್ಮೂರ ಅಂಗಡಿ ಆಯೋಜಿಸಿದ್ದ ಮಣ್ಣಿನ ದೀಪಗಳ ಪ್ರದರ್ಶನ ಹಾಗೂ ಮಾರಾಟದಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯೆ ತಾರಾ…

ಡಿಜಿಟಲ್ ಕನ್ನಡ ಟೀಮ್:

ಶ್ರೀನಿವಾಸ್ ಪ್ರಸಾದ್ ರಾಜಿನಾಮೆ ಅಂಗೀಕಾರ

ವ್ಯಾಪಕ ಟೀಕೆ ಎದುರಿಸಿದ ನಂತರ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ನೀಡಿದ್ದ ರಾಜೀನಾಮೆಯನ್ನು ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡರು ಅಂಗೀಕರಿಸಿದ್ದಾರೆ. ಗುರುವಾರ ಕಾನೂನು ಮತ್ತು ಸಂವಿಧಾನ ತಜ್ಞರ ಜೊತೆ ಸುದೀರ್ಘ ಚರ್ಚೆ ನಡೆಸಿದ ನಂತರ ಪ್ರಸಾದ್ ಅವರಿಗೆ ಮತ್ತೊಂದು ಅವಕಾಶ ನೀಡಿ, ರಾಜೀನಾಮೆ ಅಂಗೀಕರಿಸುವ ನಿರ್ಣಯಕ್ಕೆ ಬಂದರು.

ಇದರೊಂದಿಗೆ ಪ್ರಸಾದ್ ಅವರು ಪ್ರತನಿಧಿಸುತ್ತಿದ್ದ ನಂಜನಗೂಡು ಕ್ಷೇತ್ರ ತೆರವಾಗಿದ್ದು ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಬಲ 1 ಸ್ಥಾನ ಕುಸಿದಿದ್ದು 124 ರಿಂದ 123ಕ್ಕೆ ಬಂದಿದೆ. ಪ್ರಸಾದ್ ರಾಜೀನಾಮೆ ಅಂಗೀಕರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಸಭಾಧ್ಯಕ್ಷರು ಹೇಳಿದಿಷ್ಟು…

‘ಸಂವಿಧಾನದ 190 ನೇ ಪರಿಚ್ಛೇದದ 37 ತಿದ್ದುಪಡಿ ಪ್ರಕಾರ ಜನಪ್ರತಿನಿಧಿಯ ರಾಜೀನಾಮೆಯನ್ನು ಅಂಗೀಕರಿಸುವ ಮುನ್ನ ಅದು ಸ್ವನಿರ್ಧಾರವೋ, ಬೇರೆಯವರ ಒತ್ತಡವೋ ಎಂಬುದನ್ನು ಪರಿಶೀಲಿಸಬೇಕು. ಇದೇ ಕಾರಣಕ್ಕಾಗಿ ಅಕ್ಟೋಬರ್ 17ರಂದು ಅವರು ರಾಜೀನಾಮೆ ನೀಡಿದರೂ ಅದನ್ನು ಇದುವರೆಗೆ ಅಂಗೀಕರಿಸಿರಲಿಲ್ಲ.

ಈ ಹಿಂದೆ ಕೆಲ ಶಾಸಕರು ರಾಜಭವನಕ್ಕೆ ಹೋಗಿ ನಮಗೆ ಈ ಸರ್ಕಾರದ ಮೇಲೆ ವಿಶ್ವಾಸವಿಲ್ಲ ಎಂದರೆ ಬಂದಿರುವ ಶಾಸಕರ ತಲೆಗಳನ್ನು ಎಣಿಸಿ ಸರ್ಕಾರವನ್ನು ವಜಾ ಮಾಡುವ ಕೆಲಸವಾಗುತ್ತಿತ್ತು. ಎಸ್.ಆರ್.ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಇಂತಹ ಘಟನೆ ನಡೆದಿತ್ತು. ನಂತರ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದಾಗ ಏನಾಯಿತು ಸರ್ಕಾರಕ್ಕೆ ಬಹುಮತ ಇದೆಯೋ ಇಲ್ಲವೋ ಎಂಬುದು ತೀರ್ಮಾನವಾಗಬೇಕಿರುವುದು ರಾಜಭವನದ ಅಂಗಳದಲ್ಲಲ್ಲ. ಬದಲಿಗೆ ವಿಧಾನಸಭೆಯಲ್ಲಿ ಎಂಬ ತೀರ್ಪು ಬಂತು. ಹಾಗಾಗಿ ನಾನು ಕೂಡಾ ರಾಜೀನಾಮೆ ಕೊಟ್ಟ ದಿನದಂದು ಶ್ರೀನಿವಾಸ ಪ್ರಸಾದ್ ಅವರಿಗೆ ಇದು ನಿಮ್ಮದೇ ನಿರ್ಧಾರವೇ ಅಥವಾ ಬೇರೆಯವರ ಒತ್ತಾಯವೇ ಎಂಬುದೂ ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಿದ್ದೆ.

ಇಂದು ಕೂಡಾ ಅವರ ಜತೆ ಚರ್ಚೆ ನಡೆಸಿ ಇವೇ ಪ್ರಶ್ನೆಗಳನ್ನು ಕೇಳಿದೆ. ಅವರು ಏನು ಹೇಳಬೇಕೋ ಹೇಳಿದ್ದಾರೆ. ಅದರ ಆಧಾರದ ಮೇಲೆ ಈ ನಿರ್ಧಾರ ಕೈಗೊಂಡಿದ್ದೇನೆ. ವಿಧಾನಸಭಾಧ್ಯಕ್ಷನಾಗಿ ಯಾವ ರೀತಿಯ ತನಿಖೆ ಮಾಡಬೇಕೋ ನಾನು ಮಾಡಿದ್ದೇನೆ. ಇನ್ನು ತನಿಖೆ ಮಾಡುವುದು ಬಾಕಿ ಉಳಿದಿಲ್ಲ ಎಂಬುದು ನನಗೆ ಸ್ಪಷ್ಟವಾಗಿದೆ.’

ಗುಪ್ತದಳದ ವೈಫಲ್ಯದ ಬಗ್ಗೆ ಸಿಎಂ ಅಸಮಾಧಾನ

ಪೊಲೀಸ್ ಗುಪ್ತಚರ ಇಲಾಖೆ ವೈಫಲ್ಯದಿಂದಾಗಿ ಸಂಭಾವ್ಯ ಅಪರಾಧಗಳನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ.. ಹಿಗೊಂದು ಅಸಮಾಧಾನ ಮಾತುಗಳನ್ನು ಆಡಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ಪೊಲೀಸ್ ಇಲಾಖೆಯಲ್ಲಿ ಅಸಾಧಾರಣ ಸೇವೆ ಸಲ್ಲಿಸಿ ರಾಷ್ಟ್ರಪತಿ ಪದಕ ವಿಜೇತರಾದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಸಿಎಂ, ‘ಗುಪ್ತದಳ ಇಲಾಖೆ ಬಲಯುತವಾಗಿದ್ದರೆ ಮುಂದಾಗುವ ಹಲವಾರು ಅಪರಾಧಗಳನ್ನು ತಡೆಗಟ್ಟಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರ ಸಿಐಡಿ ಮತ್ತು ಗುಪ್ತಚರ ಇಲಾಖೆಗೆ ಪ್ರತ್ಯೇಕ ನೇಮಕಾತಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದೆ. ಗುಪ್ತದಳ ವಿಭಾಗ ಬಲಗೊಂಡಷ್ಟು ಸಂಭಾವ್ಯ ಅಪರಾಧಗಳನ್ನು ತಡೆಯಬಹುದು. ಇತ್ತೀಚಿನ ಘಟನೆಗಳಿಗೆ ಈ ಇಲಾಖೆಯ ವೈಫಲ್ಯದಿಂದಾಗಿ ಪ್ರಮುಖ ಅಪರಾಧಗಳಾಗಿವೆ. ಹಿರಿಯ ಅಧಿಕಾರಿಗಳು ಇದನ್ನು ಗಮನಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಬೇಕು.’

‘ಇಲಾಖೆಯಲ್ಲಿ ಆತ್ಮಹತ್ಯೆ ಪ್ರಕರಣಗಳು ಸಂಭವಿಸುತ್ತಿರುವುದು ದುರದೃಷ್ಟಕರ. ಪೊಲೀಸರಿಗೆ ಶೌರ್ಯ ಮತ್ತು ಫಿಟ್ನೇಸ್ ಅಗತ್ಯವಿದೆ. ಅದೇ ರೀತಿ ಮಾನಸಿಕವಾಗಿ ಸದೃಢಗೊಂಡು ಸಮಸ್ಯೆಗಳನ್ನು ಎದುರಿಸಬೇಕೆ ಹೊರತು ಆತ್ಮಹತ್ಯೆಗೆ ಶರಣಾಗುವುದು ಸರಿಯಲ್ಲ. ಪ್ರಾಣದ ಹಂಗು ತೊರೆದು ಕೆಲಸ ಮಾಡುವ ಪೊಲೀಸರನ್ನು ಸಮಾಜ ಗುರುತಿಸಲಿ, ಬಿಡಲಿ ಅವರು ಮಾತ್ರ ತಮ್ಮ ಕರ್ತವ್ಯದಿಂದ ವಿಮುಖರಾಗಬಾರದು. ಸಮಾಜ ನಿಮ್ಮಿಂದ ಉತ್ತಮ ಸೇವೆ ನಿರೀಕ್ಷೆ ಮಾಡುತ್ತದೆ’ ಎಂದರು.

ಉಕ್ಕಿನ ಸೇತುವೆಗೆ ಜನರ ವಿರೋಧವಿಲ್ಲ ಅಂದ್ರು ಸಚಿವ ಜಾರ್ಜ್

ಬೆಂಗಳೂರಿನ ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೂ ಉಕ್ಕಿನ ಸೇತುವೆ ನಿರ್ಮಾಣದ ರಾಜ್ಯ ಸರ್ಕಾರದ ಯೋಜನೆಗೆ ಜನರ ವಿರೋಧ ಇಲ್ಲವೇ ಇಲ್ಲ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮಾತ್ರ ಈ ಯೋಜನೆ ವಿರೋಧಿಸುತ್ತಿವೆ ಎಂಬುದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಸಮರ್ಥನೆ. ಗುರುವಾರ ಈ ಬಗ್ಗೆ ಮಾತನಾಡಿದ ಅವರು, ‘ಸರ್ಕಾರದ ಈ ಯೋಜನೆಗೆ ಜನರ ವಿರೋಧವಿಲ್ಲ. ಕೆಲವು ಸಂಘಟನೆಗಳ ಅಭಿಪ್ರಾಯವನ್ನು ಜನರ ಅಭಿಪ್ರಾಯವೆಂದು ಬಿಂಬಿಸಲಾಗುತ್ತಿದೆ. ಮೂರು ಜನ ಮಾತ್ರ ಬಿಡ್ಜ್ ವಿರೋಧಿಸುತ್ತಿದ್ದು, ಅವರೇ ಸಂಘಟನೆಗಳನ್ನು ಮತ್ತು ಮಾಧ್ಯಮಗಳನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಪೂರ್ವಾಗ್ರಹಗಳಿವೆ. ಇಡೀ ಸರ್ಕಾರ ನಾವು ಹೇಳಿದಂತೆ ನಡೆಯಬೇಕೆಂದು ಕೆಲವು ಸಂಘಟನೆಗಳು ಅಂದುಕೊಂಡಿವೆ. ಆ ಸಂಘಟನೆಗಳ ಸೂಚನೆಯಂತೆ ಸರ್ಕಾರ ನಡೆಯಲ್ಲ’ ಎಂದರು.

ಸರ್ಕಾರಿ ಆಸ್ಪತ್ರೆಯಲ್ಲೇ ಸರ್ಕಾರಿ ನೌಕರರು, ನಾಯಕರಿಗೆ ಚಿಕಿತ್ಸೆ

ಸರ್ಕಾರಿ ನೌಕರರು ಹಾಗೂ ಚುನಾಯಿತ ಪ್ರತಿನಿಧಿಗಳು ಅನಾರೋಗ್ಯಕ್ಕೆ ಒಳಗಾದರೆ ಸರ್ಕಾರಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆಯುವುದನ್ನು ಕಡ್ಡಾಯಗೊಳಿಸುವ ಕಾಯ್ದೆ ಜಾರಿಗೆ ತರುವ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

‘ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಮೂಲ ಸೌಕರ್ಯಗಳು ಮತ್ತು ತಜ್ಞ ವೈದ್ಯರಿದ್ದಾರೆ. ಆದರೂ ನೌಕರರು ಮತ್ತು ಚುನಾಯಿತ ಪ್ರತಿನಿಧಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ವಾರ್ಷಿಕ ₹ 120 ರಿಂದ 150 ಕೋಟಿ ವೆಚ್ಚ ಮಾಡುತ್ತಿದ್ದಾರೆ. ಇದೇ ಹಣವನ್ನು ಸರ್ಕಾರಿ ಆಸ್ಪತ್ರೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಬಳಕೆ ಮಾಡಿಕೊಳ್ಳುವುದರಿಂದ ಜನ ಸಾಮಾನ್ಯರಿಗೂ ಹೆಚ್ಚಿನ ಸವಲತ್ತು ಕಲ್ಪಿಸಬಹುದು’ ಎಂದಿದ್ದಾರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್. ರಮೇಶ್ ಕುಮಾರ್.

ರಾಹುಲ್ ಗಾಂಧಿ ನಾಯಕತ್ವ ಒಪ್ಪಿಕೊಳ್ಳು ಸಾಧ್ಯವಿಲ್ಲ ಎಂದ ರೀತಾ

ಉತ್ತರ ಪ್ರದೇಶದಲ್ಲಿ ದಿನೇ ದಿನೇ ವಿಧಾನಸಭೆ ಚುನಾವಣೆ ಕಾವು ರಂಗೇರುತ್ತಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯಾದ್ಯಾಂತ ಸುದೀರ್ಘ ಪ್ರವಾಸ ಮಾಡಿ ಸಮಾವೇಶಗಳನ್ನು ನಡೆಸಿ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನ ಮಾಡಿದ್ದರು. ಆದರೆ, ಅವರ ಈ ಪ್ರಯತ್ನದ ಬೆನ್ನಲ್ಲೆ ರಾಜ್ಯದ ಮಾಜಿ ಕಾಂಗ್ರೆಸ್ ಮುಖ್ಯಸ್ಥೆ ರೀತಾ ಬಹುಗುಣ ಜೋಶಿ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಗುರುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸಮ್ಮುಖದಲ್ಲಿ ಕಮಲದ ಪಾಳಯಕ್ಕೆ ಪ್ರವೇಶ ಪಡೆದ ರೀತಾ ತಮ್ಮ ನಿರ್ಧಾರದ ಬಗ್ಗೆ ಹೇಳಿದಿಷ್ಟು…

‘ಕಳೆದ 24 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇನೆ. ಈ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಾಗಿತ್ತು. ಮುಂದಿನ ದಿನಗಳಲ್ಲಿ ದೇಶದ ಉತ್ತಮ ಭವಿಷ್ಯಕ್ಕಾಗಿ ಈ ತೀರ್ಮಾನಕ್ಕೆ ಬಂದಿದ್ದೇನೆ. ಇಡೀ ದೇಶವೇ ಭಾರತೀಯ ಸೇನೆ ನಡೆಸಿದ ಗುರಿ ನಿರ್ದಿಷ್ಟ ದಾಳಿಯನ್ನು ಒಪ್ಪಿದೆ. ಆದರೆ, ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಅದನ್ನು ಪ್ರಶ್ನಿಸುತ್ತಿವೆ. ಇದು ಉತ್ತಮ ಬೆಳವಣಿಗೆಯಲ್ಲ. ಅಲ್ಲದೆ ರಾಹುಲ್ ಗಾಂಧಿ ಅವರ ‘ರಕ್ತದ ದಲ್ಲಾಳಿ’ ಎಂಬ ಹೇಳಿಕೆ ಸಹ ಸರಿಯಾದುದಲ್ಲ.’

ರೀತಾ ಬಹುಗುಣಾ ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಗಾಂಧಿ ಅವರ ನಾಯಕತ್ವದ ಬಗ್ಗೆಯೂ ಅತೃಪ್ತಿ ವ್ಯಕ್ತಪಡಿಸಿದ್ದು, ಈ ಬೆಳವಣಿಗೆಯನ್ನು ರಾಹುಲ್ ಗಾಂಧಿ ನಾಯಕತ್ವಕ್ಕೆ ಹಾಗೂ ಉತ್ತರ ಪ್ರದೇಶ ಕಾಂಗ್ರೆಸ್ ಪಾಲಿಗೆ ತೀವ್ರ ಹಿನ್ನಡೆ ಎಂದು ಬಣ್ಣಿಸಲಾಗಿದೆ.

ವಿದ್ಯಾರ್ಥಿ ನಾಪತ್ತೆ: ಉಪಕುಲಪತಿಗಳ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

ಜವಹಾರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ನಜೀಬ್ ಅಹ್ಮದ್ ಎಂಬಾತ ಕೆಲ ದಿನಗಳಿಂದ ಕಾಣೆಯಾಗಿದ್ದಾನೆ. ಎಬಿವಿಪಿ ಸಂಘಟನೆಯ ವಿದ್ಯಾರ್ಥಿಗಳ ಜತೆ ಜಗಳವಾದ ನಂತರ ಆತ ಕಾಣೆಯಾಗಿದ್ದಾನೆ ಎಂದು ಕೆಲ ವಿದ್ಯಾರ್ಥಿಗಳ ಗುಂಪು ಆರೋಪಿಸಿವೆ. ಅಲ್ಲದೆ, ನಜೀಬ್ ನಾಪತ್ತೆ ಪ್ರಕರಣದಲ್ಲಿ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದೆ ಎಂದು ವಿದ್ಯಾರ್ಥಿಗಳ ಗುಂಪು ಪ್ರತಿಭಟನೆಗೆ ಮುಂದಾಗಿದೆ. ಜತೆಗೆ ವಿಶ್ವವಿದ್ಯಾಲಯದ ಉಪಕುಲಪತಿ ಎಂ.ಜಗದೀಶ್ ಕುಮಾರ್ ಸೇರಿದಂತೆ 12 ಅಧಿಕಾರಿಗಳನ್ನು ವಿಶ್ವವಿದ್ಯಾಲಯದ ಕಟ್ಟಡದಿಂದ ಹೊರಹೋಗದಂತೆ 12 ಗಂಟೆಗಳಿಗೂ ಹೆಚ್ಚು ಕಾಲ ತಡೆದ ಘಟನೆ ಗುರುವಾರ ನಡೆದಿದೆ. ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಉಪಕುಲಪತಿಗಳು, ‘ನಾವು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಅವರಿಗೆ ಸೂಕ್ತ ಸಹಕಾರ ನೀಡುತ್ತಿದ್ದೇವೆ’ ಎಂದು ತಿಳಿಸಿದರು. ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದ ಈ ರೀತಿಯ ಪ್ರತಿಭಟನೆ ವ್ಯಕ್ತವಾಗುತ್ತಿದ್ದಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾಣೆಯಾದ ವಿದ್ಯಾರ್ಥಿ ಪತ್ತೆಹಚ್ಚಲು ದೆಹಲಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಇನ್ನು ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಇಲಾಖೆ ರಾಜ್ಯ ಸಚಿವ ಕಿರಣ್ ರಿಜಿಜು ‘ಜೆಎನ್ ಯುನಲ್ಲಿ ಕೆಲ ವಿದ್ಯಾರ್ಥಿಗಳು ರಾಜಕೀಯ ಮಾಡಲೇಂದು ಸೇರಿದ್ದಾರೆ ಹೊರತು ವಿದ್ಯಾಭ್ಯಾಸ ಮಾಡಲು ಅಲ್ಲ. ಉಪಕುಲಪತಿಗಳ ಜತೆ ಹೀಗೆ ನಡೆದುಕೊಳ್ಳುವುದು ಉತ್ತಮ ಬೆಳವಣಿಗೆಯಲ್ಲ’ ಎಂದು ತಿಳಿಸಿದ್ದಾರೆ.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿ ಸಾಲುಗಳು…

  • ಸಾಕಷ್ಟು ವಿವಾದದಿಂದಲೇ ಸುದ್ದಿಯಾಗಿ ದೇಶದಾದ್ಯಂತ ತೆರೆಕಾಣಲು ವಿರೋಧ ಎದುರಿಸುತ್ತಿದ್ದ ‘ಯೆ ದಿಲ್ ಹೇ ಮುಶ್ಕಿಲ್’ ಚಿತ್ರ ಬಿಡುಗಡೆಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಕೇಂದ್ರ ಗೃಹಮಂತ್ರಿ ರಾಜನಾಥ್ ಸಿಂಗ್ ಭರವಸೆ ನೀಡಿದ್ದಾರೆ. ಪಾಕ್ ನಟರನ್ನು ಒಳಗೊಂಡಿರುವ ಹಿನ್ನೆಲೆಯಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಬಾರದು ಎಂದು ಮಹಾರಾಷ್ಟ್ರದ ಎಂಎನ್ಎಸ್ ಸೇರಿದಂತೆ ಹಲವು ಸಂಘಟನೆಗಳು ಆಗ್ರಹಿಸಿದ್ದವು. ಈ ಕುರಿತಂತೆ ಚಿತ್ರದ ನಿರ್ದೇಶಕರಾದ ಮಹೇಶ್ ಭಟ್ ಗುರುವಾರ ಗೃಹ ಸಚಿವರನ್ನು ಭೇಟಿ ಮಾಡಿದ್ದರು. ಈ ವೇಳೆ ಚಿತ್ರದ ಬಿಡುಗಡೆಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ ರಾಜನಾಥ್ ಸಿಂಗ್, ‘ಯೆ ದಿಲ್ ಹೇ ಮುಶ್ಕಿಲ್ ಚಿತ್ರಕ್ಕೆ ಈ ಬಾರಿಯ ದೀಪಾವಳಿ ಹಬ್ಬ ಉತ್ತಮವಾಗಿರಲಿದೆ’ ಎಂದಿದ್ದಾರೆ.
  • ವಿಕೃತಕಾಮಿ ಉಮೇಶ್ ರೆಡ್ಡಿ ಗಲ್ಲುಶಿಕ್ಷೆಗೆ ರಾಜ್ಯ ಹೈಕೋರ್ಟ್ ಗುರುವಾರ ಮಧ್ಯಂತರ ತಡೆ ನೀಡಿದೆ. ಗಲ್ಲು ಶಿಕ್ಷೆಯ ಪಡೆಯುವ ಹಂತದಲ್ಲಿರುವ ಉಮೇಶ್ ರೆಡ್ಡಿ ಇದಕ್ಕೆ ತಡೆಯಾಜ್ಞೆ ನೀಡುವಂತೆ ಹೈ ಕೋರ್ಟಿಗೆ ಮನವಿ ಸಲ್ಲಿಸಿದ್ದರು. ಉಮೇಶ್ ರೆಡ್ಡಿಯ ರಿಟ್ ಅರ್ಜಿಗೆ 10 ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
  • ಮಹದಾಯಿ ನೀರು ಹಂಚಿಕೆ ಕುರಿತಂತೆ ನಾಳೆ ಮುಂಬೈನಲ್ಲಿ ನಡೆಯಬೇಕಿದ್ದ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಮುಂದೂಡಲಾಗಿದೆ. ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರಗಳ ಮುಖ್ಯಮಂತ್ರಿಗಳ ಸಭೆ ಸದ್ಯಕ್ಕೆ ಮುಂದೂಡಲಾಗಿದ್ದು, ಈ ಸಭೆ ಯಾವಾಗ ನಡೆಯಲಿದೆ ಎಂಬುದು ನಿಗದಿಯಾಗಿಲ್ಲ.

Leave a Reply