ಶ್ರೀನಿವಾಸ ಪ್ರಸಾದ್ ರಾಜೀನಾಮೆ ಅಂಗೀಕಾರಕ್ಕೆ ಸಿಎಂ ಕೇಳಿ ಮಸಾಲೆ ಅರೆಯುತ್ತಿರುವ ಕೋಳಿವಾಡರು!

B.S. Koliwada adresssing Media on Lake Enroachment, at Legislative house in Bengaluru on Friday.

author-thyagaraj (1)ಸಂದರ್ಭಗಳು ಹೇಗೆಲ್ಲ ಕುಚೇಷ್ಟೆ ಮಾಡುತ್ತವೆ ನೋಡಿ!

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಿರಿಯ ರಾಜಕಾರಣಿ ಶ್ರೀನಿವಾಸ ಪ್ರಸಾದ್ ಅವರನ್ನು ಸಚಿವ ಸಂಪುಟದಿಂದ ಕೈಬಿಡುವಾಗ ಇದ್ದ ಧೈರ್ಯ ಇದೀಗ ಅವರು ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಒಪ್ಪುವುದರಲ್ಲಿ ಇಲ್ಲ. ಹೀಗಾಗಿ ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳರಿಯದ ಪ್ರಶ್ನಾವಳಿ ಪರಿಪಾಠ ಸೃಷ್ಟಿಸಿ, ಶ್ರೀನಿವಾಸ ಪ್ರಸಾದ್ ರಾಜೀನಾಮೆಯನ್ನು ತ್ರಿಶಂಕು ಸ್ಥಿತಿಯಲ್ಲಿಡಲಾಗಿದೆ. ಆದರೆ ಬಹುಕಾಲ ಬಾಳದ ಈ ಹುಚ್ಚುಜಾಣ್ಮೆ ಪ್ರದರ್ಶನಕ್ಕೆ ವಿಧಾನಸಭೆ ಸ್ಪೀಕರ್ ಸ್ಥಾನ ದುರ್ಬಳಕೆ ಆಗಿರುವುದಂತು ನಿಜ. ಈ ಪ್ರಹಸನದಲ್ಲಿ ಸ್ಪೀಕರ್ ಕೆ.ಬಿ. ಕೋಳಿವಾಡ ಅವರನ್ನು ಮೊದ್ದುಮಣಿ ಮಾಡಿಟ್ಟಿರುವುದಂತೂ ರಾಜಕೀಯ ಕುಹಕವೇ ಸರಿ.

ಈ ದ್ವೇಷಾಸೂಯೆ ಎಂಬುದು ಚಿಂತನಾಶಕ್ತಿಯನ್ನು ನುಂಗಿ ನೀರು ಕುಡಿದಾಗ ಸಂಬಂಧಪಟ್ಟವರ ಕಣ್ಣಿಗೆ ಪ್ರಪಂಚ ಕಾಣಿಸುವುದಿಲ್ಲ. ತಾನೆಚ್ಚೋ ಈ ಲೋಕ ಹೆಚ್ಚೋ ಎನ್ನುವ ಅಹಮಿಕೆ ಅವರ ವಿವೇಕಕ್ಕೆ ಕುರುಡುಪಟ್ಟಿ ಆಗಿಬಿಡುತ್ತದೆ. ಮಬ್ಬು ಕಳೆದು ವಾಸ್ತವ ಅರಿವಾಗುವ ಹೊತ್ತಿಗೆ ಪರಿಸ್ಥಿತಿ ಅಟಕಾಯಿಸಿಕೊಂಡು ಅವರನ್ನು ಕೆಕರುಮಕರು ಮಾಡಿಟ್ಟಿರುತ್ತದೆ. ಶ್ರೀನಿವಾಸ ಪ್ರಸಾದ್ ರಾಜೀನಾಮೆ ವಿಚಾರದಲ್ಲಿ ಈಗ ಸಿದ್ದರಾಮಯ್ಯನವರಿಗೆ ಆಗಿರುವುದು ಅದೆ. ರಂಗನ ಸಂಗ ಮಾಡಿ ಸಿಂಗ ಮಂಗ ಆದ ಎಂಬಂತೆ ಕೋಳಿವಾಡರು ಕೂಡ ಪೆಕರುಪೆಕರಾಗಿ ವರ್ತಿಸಿ, ತಮ್ಮ ಸ್ಥಾನದ ಘನತೆ-ಗೌರವವನ್ನು ಕುಗ್ಗಿಸಿದ್ದಾರೆ.

ಶ್ರೀನಿವಾಸ ಪ್ರಸಾದ್ ಅವರು ಸಲ್ಲಿಸಿರುವ ರಾಜೀನಾಮೆ ಸ್ವಇಚ್ಛೆ, ನೈಜತೆಯಿಂದ ಕೂಡಿಲ್ಲ. ಸಚಿವ ಸ್ಥಾನ ಕಳೆದುಕೊಂಡ ಹಿನ್ನೆಲೆಯಲ್ಲಿ ರಾಜೀನಾಮೆ ಕೊಟ್ಟಿದ್ದಾರೆ. ಹೀಗಾಗಿ ಅಂಗೀಕರಿಸುವುದಿಲ್ಲ ಎಂದು ಸ್ಪೀಕರ್ ಕೋಳಿವಾಡ ಅವರು ತಮ್ಮ ಘನಕಾರ್ಯಕ್ಕೆ ತಾವೇ ಕೊಟ್ಟುಕೊಂಡಿರುವ ಸಮರ್ಥನೆ ಅವರನ್ನೇ ಅಣಕಿಸುವಂತಿದೆ. ಖುದ್ದು ಪ್ರಸಾದ್ ಅವರೇ ಸ್ಪೀಕರ್ ಕೊಠಡಿಗೆ ಬಂದಿದ್ದಾರೆ. ಅವರ ಸಮ್ಮುಖದಲ್ಲೇ ಸ್ವಹಸ್ತಾಕ್ಷರದಲ್ಲಿ ರಾಜೀನಾಮೆ ಬರೆದು ಕೊಟ್ಟಿದ್ದಾರೆ. ತಾವೇಕೆ ರಾಜೀನಾಮೆ ಕೊಡುತ್ತಿದ್ದೇವೇ ಎಂಬುದನ್ನು ರಾಜೀನಾಮೆ ಕೊಡುವ ಮೊದಲು ಮತ್ತು ನಂತರ ಇಡೀ ರಾಜ್ಯದ ಜನರಿಗೆ ತಿಳಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಮಂತ್ರಿ ಸ್ಥಾನ ಹೋದದ್ದೇ ಅದಕ್ಕೆ ಕಾರಣ ಎಂಬುದು ಸ್ಪೀಕರ್ ಬಾಯಲ್ಲೇ ಬಂದಿದೆ. ಇಷ್ಟೆಲ್ಲ ಆಗಿಯೂ ಪ್ರಸಾದ್ ಅವರು ಸ್ವಇಚ್ಛೆಯಿಂದ ರಾಜೀನಾಮೆ ಕೊಟ್ಟಿಲ್ಲ ಎಂದು ಹೇಳುತ್ತಿರುವ ಕೋಳಿವಾಡರ ಮಾತು ಹಾಸ್ಯಾಸ್ಪದ ಅಲ್ಲದೇ ಮತ್ತೇನು?

ಇರಲಿ, ಪಾಪ ಕೋಳಿವಾಡರು ಅಮಾಯಕರು. ಜನರು ಕೂಡ ತಮ್ಮಂತೆಯೇ ಎಂದು ಭಾವಿಸಿದ್ದಾರೆ. ಹೀಗಾಗಿ ತಾವು ಹೇಳಿದ್ದೇ ವೇದವಾಕ್ಯ, ಮಾಡಿದ್ದೇ ನಿಯಮ ಎಂದು ತಿಳಿದಿದ್ದಾರೆ. ಆದರೆ ರಾಜ್ಯದ ಜನ ಅವರು ಅಂದುಕೊಂಡಂತೆ ಅಲ್ಲವಲ್ಲ. ಅವರಿಗೆ ಚೆನ್ನಾಗಿ ಗೊತ್ತಿದೆ. ಸ್ವತಃ ಸಿದ್ದರಾಮಯ್ಯನವರೇ ಕೋಳಿವಾಡರ ಮೈಮೇಲೆ ಆವಾಹನೆಯಾಗಿ ಈ ಮಾತುಗಳನ್ನು ಉಲಿಸುತ್ತಿದ್ದಾರೆ, ಪ್ರಸಾದ್ ರಾಜೀನಾಮೆ ಅಂಗೀಕರಿಸದಂತೆ ಅವರ ಕೈಗಳನ್ನು ಕಟ್ಟಿಹಾಕಿದ್ದಾರೆ ಎಂದು. ಆದರೆ ಕೋಳಿವಾಡರು ಇದು ಅರ್ಥ ಆಗದವರಂತೆ ನಟಿಸಿದರೆ ಅದು ಈ ರಾಜ್ಯದ ಜನರ ತಪ್ಪಲ್ಲವಲ್ಲ.

ನಿಜ, ಶ್ರೀನಿವಾಸ ಪ್ರಸಾದ್ ಅವರು ತೆರವು ಮಾಡುತ್ತಿರುವ ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಮರುಚುನಾವಣೆ ನಡೆದರೆ ಸುಲಭವಾಗಿ ಗೆಲ್ಲುತ್ತೇವೆ ಎಂಬ ನಂಬಿಕೆ ಸಿದ್ದರಾಮಯ್ಯ ಅವರಿಗೆ ಇಲ್ಲ. ಪ್ರಸಾದ್ ಅವರು ಪ್ರತಿನಿಧಿಸುವ ಪರಿಶಿಷ್ಟ ಸಮುದಾಯದ ಮತಗಳು ಗಣನೀಯ ಪ್ರಮಾಣದಲ್ಲಿರುವ ಈ ಕ್ಷೇತ್ರದಲ್ಲಿ ಪ್ರಸಾದ್ ಪರ ಇರುವ ಅನುಕಂಪದ ಅಲೆ ವಿರುದ್ಧ ಈಜಿ ದಡ ಸೇರುವ ವಿಶ್ವಾಸದ ಕೊರತೆ ಅವರನ್ನು ಕಲ್ಲವಿಲ್ಲಗೊಳಿಸಿದೆ. ಸಿದ್ದರಾಮಯ್ಯನವರ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ರಾಜ್ಯದಲ್ಲಿ ಹಿಂದೆ ನಡೆದಿರುವ ಮರುಚುನಾವಣೆಗಳಿಗೂ ಈಗ ಪ್ರಸಾದ್ ತೆರವು ಮಾಡಿರುವ ಕ್ಷೇತ್ರದ ಚುನಾವಣೆಗೂ  ಬಹಳ ವ್ಯತ್ಯಾಸವಿದೆ. ಹಿಂದಿನ ಚುನಾವಣೆಗಳನ್ನು ಕಾಲಮಾನದ ನೆಪದಲ್ಲಿ ಜನಾದೇಶದ ಚೌಕಟ್ಟಿನಿಂದ ಹೊರಗಿಡಬಹುದಾಗಿತ್ತು. ಆದರೆ ಇದೀಗ ವಿಧಾನಸಭೆ ಚುನಾವಣೆಗೆ ಒಂದೂವರೆ ವರ್ಷ ಬಾಕಿ ಇರುವಾಗ ಇದು ಜನಾದೇಶ ಅಲ್ಲ ಎಂದು ತಪ್ಪಿಸಿಕೊಳ್ಳುವಂತಿಲ್ಲ. ಈಗಾಗಲೇ ಹರಳುಗಟ್ಟಿರುವ ಆಡಳಿತವಿರೋಧಿ ಅಲೆ ನಡುವೆ ನಡೆಯುವ ಈ ಮರುಚುನಾವಣೆಯಲ್ಲಿ ಒಂದೊಮ್ಮೆ ಯಡವಟ್ಟಾದರೆ ಅದು ಕಾಂಗ್ರೆಸ್ ಸರಕಾರದ ಬಗ್ಗೆ ಕೊಟ್ಟ ಜನಾದೇಶ ಎಂದೆನಿಸಿಕೊಳ್ಳುತ್ತದೆ. ಅಷ್ಟೇ ಅಲ್ಲದೆ ಇದು ಮುಂದಿನ ಚುನಾವಣೆಯ ದಿಕ್ಸೂಚಿಯಾಗಿಯೂ ಪರಿಣಮಿಸುತ್ತದೆ. ಈ ಫಲಿತಾಂಶವನ್ನೇ ಮುಂದಿಟ್ಟುಕೊಂಡು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಆಡಳಿತಪಕ್ಷ ಕಾಂಗ್ರೆಸ್ ಹೆಡೆಮುರಿಗೆ ಕಟ್ಟಲು ಹವಣಿಸುತ್ತವೆ. ಸಿದ್ದರಾಮಯ್ಯನವರ ಅಳುಕಿಗೆ ಇದೇ ಕಾರಣ. ಹೀಗಾಗಿ ಕೋಳಿವಾಡರ ಮೂಲಕ ಪ್ರಸಾದ್ ರಾಜೀನಾಮೆಯನ್ನು ನಡುಗಾಳಿಯಲ್ಲಿಟ್ಟು ಮರುಚುನಾವಣೆ ಬಿರುಗಾಳಿಯಿಂದ ಪಾರಾಗಲು ಹವಣಿಸುತ್ತಿದ್ದಾರೆ.

ಆದರೆ ರಾಜಕೀಯ ಗುಣಾಕಾರ-ಭಾಗಾಕಾರಗಳ ಪ್ರಕಾರ ಸ್ಪೀಕರ್ ಈ ರೀತಿ ರಾಜೀನಾಮೆಯನ್ನು ತಮ್ಮ ಮನೋಧರ್ಮಕ್ಕೆ ಅನುಗುಣವಾಗಿ ಗಾಳಿಪಟ ಮಾಡಲು ಬರುವುದಿಲ್ಲ. ಅದಕ್ಕೆ ಸಂವಿಧಾನದಲ್ಲಿ ಅವಕಾಶವೂ ಇಲ್ಲ. ಕೋಳಿವಾಡರು ಪ್ರಸಾದ್ ಬೇಕಿದ್ದರೆ ಕೋರ್ಟಿಗೆ ಹೋಗಲಿ ಎಂದು ಹೇಳಿದ್ದಾರೆ. ಕೋರ್ಟಿಗೆ ಹೋದರೆ ಪ್ರಸಾದ್ ಅವರಿಗೇ ಜಯ ಸಿಗಲಿದೆ. ಆದರೆ ಒಂದು ತಪ್ಪು ಮುಚ್ಚಿಕೊಳ್ಳಲು ಹೋಗಿ ಮತ್ತೊಂದು ತಪ್ಪು ಮಾಡುತ್ತಿರುವ ಕಾಂಗ್ರೆಸ್ಸಿಗೆ ಮಾತ್ರ ಇದರಿಂದ ಹೆಚ್ಚಿನ ಲುಕ್ಸಾನು ಆಗಲಿದೆ.

ಈಗೇನೂ ರಾಜೀನಾಮೆ ಅಂಗೀಕರಿಸಿಲ್ಲ ಎಂದು ಪ್ರಸಾದ್ ಸುಮ್ಮನೆ ಕೂರುತ್ತಾರೆಯೇ? ಈಗಾಗಲೇ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಬಾಯಿಗೆ ಬಂದಂತೆ ನಿಂದಿಸಿಕೊಂಡು ತಿರುಗುತ್ತಿರುವ ಪ್ರಸಾದ್ ತಮ್ಮ ವಾಗ್ಪ್ರಸಾದವನ್ನು ಮತ್ತಷ್ಟು ತೀಕ್ಷ್ಣಗೊಳಿಸಲಿದ್ದಾರೆ. ಚುನಾವಣೆ ರಾಜಕೀಯದಿಂದ ದೂರ ಇರುವುದಾಗಿ ಈಗಾಗಲೇ ಹೇಳಿರುವ ಪ್ರಸಾದ್ ಅವರಿಗೆ ಕಳೆದುಕೊಳ್ಳಲು ಏನೂ ಉಳಿದಿಲ್ಲ. ಆದರೆ ಅವರು ಹಾಕುವ ಹರಾಜಿನಿಂದ ಕಾಂಗ್ರೆಸ್ ಬಹಳಷ್ಟು ಕಳೆದುಕೊಳ್ಳುವ ಸಾಧ್ಯತೆ ಇದೆ. ರಾಜೀನಾಮೆ ವಿಚಾರದಲ್ಲಿ ಸಲ್ಲದ ಆಟ ಆಡುವ ಮೂಲಕ ಸಿದ್ದರಾಮಯ್ಯನವರು ಸೇರಿದಂತೆ ಕಾಂಗ್ರೆಸ್ ಮುಖಂಡರು ಯುದ್ಧಕ್ಕೆ ಮೊದಲೇ ಸೋಲನ್ನು ಒಪ್ಪಿಕೊಂಡಂತೆ ಆಗಿದೆ. ಅವರಿಗೆ ಸೋಲಿನ ಭೀತಿ ಇಲ್ಲದಿದ್ದರೆ ಈ ರೀತಿ ಅತಾರ್ಕಿಕ ಕಾರಣ ಮುಂದಿಟ್ಟು ರಾಜೀನಾಮೆ ಅಂಗೀಕಾರ ನಿರಾಕರಿಸುತ್ತಿರಲಿಲ್ಲ. ಈ ನಿರಾಕರಣೆಯಲ್ಲೇ ಅವರ ಅಂತಃಸತ್ವ ಎಷ್ಟರ ಮಟ್ಟಿನದು ಎಂಬುದು ಅನಾವರಣಗೊಂಡಿದೆ.

ಅಂದಹಾಗೆ ಹಿಂದೆ ನಾಯಕರ ವರ್ತನೆಗೆ ಬೇಸತ್ತು ಶಾಸಕರು ರಾಜೀನಾಮೆ ಕೊಟ್ಟ ಅನೇಕ ಪ್ರಸಂಗಗಳಿವೆ. ಆಗೆಲ್ಲ ಸ್ಪೀಕರ್ ಗಳು ಮುಖ್ಯಮಂತ್ರಿಗಳ ಮಾತು ಕೇಳಿಕೊಂಡು ಕೋಳಿವಾಡರಂತೆ ನಿರಾಕರಣೆ ತಂತ್ರ ಅನುಸರಿಸಬಹುದಿತ್ತಲ್ಲವೇ? ಆದರೆ ಅವರು ಹಾಗೆ ಮಾಡಲು ಹೋಗಲಿಲ್ಲ. ಕಾರಣ ಅದು ಊರ್ಜಿತ ಆಗುವುದಿಲ್ಲ ಎಂದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಬೇರೆ ಪ್ರಕರಣಗಳ ವಿಚಾರ ಪಕ್ಕಕ್ಕಿರಲಿ. ಇದೇ ಸಿದ್ದರಾಮಯ್ಯನವರು ದೇವೇಗೌಡರಿಗೆ ಸೆಡ್ಡು ಹೊಡೆದು 2006 ಜುಲೈನಲ್ಲಿ ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದಾಗ ಅಂದಿನ ಸ್ಪೀಕರ್ ಕೃಷ್ಣ ಅವರು ಮರುಮಾತಿಲ್ಲದೆ ಅಂಗೀಕರಿಸಿದ್ದರು. ಹೇಗೂ ಸಿದ್ದರಾಮಯ್ಯ ಅವರನ್ನು ಜೆಡಿಎಸ್ಸಿನಿಂದ ಉಚ್ಛಾಟನೆ ಮಾಡಲಾಗಿದೆ, ಅವರು ಚಾಮುಂಡೇಶ್ವರಿ ಮರುಚುನಾವಣೆಗೆ ಹೋಗದಂತೆ ರಾಜೀನಾಮೆ ಅಂಗೀಕರಿಸದೆ ಅತಂತ್ರ ಸ್ಥಿತಿಯಲ್ಲಿಟ್ಟರಾಯಿತು ಎಂದು ಕೋಳಿವಾಡರಂತೆ ಅವರೇನೂ ನವರಂಗಿ ಆಟ ಆಡಲು ಹೋಗಲಿಲ್ಲ. ಏಕೆಂದರೆ ಅವರಿಗೆ ಗೊತ್ತಿತ್ತು. ಇಂಥ ಆಟಗಳಿಗೆ ನಮ್ಮ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಅವಕಾಶ ಇಲ್ಲ ಎಂದು.

ಅಂದಹಾಗೆ ಈ ವಿಚಾರ ಸಿದ್ದರಾಮಯ್ಯ ಹಾಗೂ ಕೋಳಿವಾಡರಿಗೆ ಗೊತ್ತಿಲ್ಲ ಎಂದೇನೂ ಅಲ್ಲ. ಆದರೆ ಪ್ರಸಾದ್ ರಾಜೀನಾಮೆ ಅಂಗೀಕಾರ ನಿರಾಕರಣೆ ತಂತ್ರದ ಮೂಲಕ ಸಾಧ್ಯವಾದಷ್ಟು ಸಮಯ ತಳ್ಳುವುದು, ಅಷ್ಟರಲ್ಲಿ ಸಮರ್ಥ ಅಭ್ಯರ್ಥಿಯನ್ನು ಸಜ್ಜುಗೊಳಿಸುವುದು ಅವರ ಯೋಜನೆ. ಈಗಾಗಲೇ ಸಚಿವ ಎಚ್.ಸಿ. ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ ಅವರನ್ನು ನಂಜನಗೂಡು ಕ್ಷೇತ್ರದ ಅಭ್ಯರ್ಥಿ ಮಾಡಲು ಚಿಂತನೆ ನಡೆದಿದೆ. ಶ್ರೀನಿವಾಸ ಪ್ರಸಾದ್ ಅವರು ಚುನಾವಣೆ ರಾಜಕೀಯದಿಂದ ಹಿಂದೆ ಸರಿಯುವುದಾಗಿ ಹೇಳಿದ್ದರೂ ಅಂತಿಮ ಕ್ಷಣದಲ್ಲಿ ನಿಲುವು ಬದಲಾಗುವ ಸಾಧ್ಯತೆ ಇದೆ. ಅವರು ಬಿಜೆಪಿಗಾದರೂ ಹೋಗಲಿ, ಜೆಡಿಎಸ್ ಗಾದರೂ ಹೋಗಲಿ, ಪಕ್ಷೇತರರಾಗಿಯಾದರೂ ಉಳಿಯಲಿ ಕಾಂಗ್ರೆಸ್ ವಿರುದ್ಧ ಅವರನ್ನು ಒಮ್ಮತದಿಂದ ಬೆಂಬಲಿಸಲು ಪ್ರತಿಪಕ್ಷಗಳು ನಿರ್ಧಾರ ಮಾಡಿವೆ. ಒಂದೊಮ್ಮೆ ಅವರು ಯಾವುದೇ ಪಕ್ಷ ಸೇರದೆ ಹೋದರೆ ಪ್ರಸಾದ್ ಬೆಂಬಲಿಸುವ ಅಭ್ಯರ್ಥಿ ಕೈಹಿಡಿಯುವ ತಂತ್ರ ಅವುಗಳದಾಗಿದೆ. ಇದೆಲ್ಲ ಗೊತ್ತಿದ್ದೇ ಆಡಳಿತ ಪಕ್ಷ ಮರುಚುನಾವಣೆಗೆ ಕಾರಣ ಆಗುವ ಪ್ರಸಾದ್ ರಾಜೀನಾಮೆ ಪತ್ರದ ಜತೆ ಆಟ ಆಡುತ್ತಿದ್ದು, ಇದು ಕೂಡ ಕಾಂಗ್ರೆಸ್ಸಿಗೆ ತಿರುಗು ಮಂತ್ರ ಆಗುವ ಸಾಧ್ಯತೆ ಹೆಚ್ಚಿದೆ.

ಲಗೋರಿ : ಋಣ ಸಂದಾಯಕ್ಕೆ ಕೋಳಿವಾಡರು ಬೇರೆ

Leave a Reply