ಒಬ್ಬ ಯೋಧನನ್ನು ಗಾಯಗೊಳಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನದ ಏಳು ಯೋಧರನ್ನು ಸಂಹರಿಸಿತು ಭಾರತದ ಗಡಿ ಭದ್ರತಾ ಪಡೆ!

 

ಡಿಜಿಟಲ್ ಕನ್ನಡ ಟೀಮ್:

ಗಡಿ ನಿಯಂತ್ರಣ ರೇಖೆಯಲ್ಲಿ ನಿರಂತರವಾಗಿ ಕದನ ವಿರಾಮವನ್ನು ಉಲ್ಲಂಘಿಸುತ್ತಲೇ ಬಂದಿದ್ದ ಪಾಕಿಸ್ತಾನಕ್ಕೆ ಭಾರತದ ಯೋಧರು ತಕ್ಕ ಉತ್ತರ ಕೊಟ್ಟಿದ್ದಾರೆ.

ಜಮ್ಮು-ಕಾಶ್ಮೀರದ ಕಠುವಾ ಗಡಿಯಲ್ಲಿನ ಚಕಮಕಿಯಲ್ಲಿ ಏಳು ಪಾಕಿಸ್ತಾನಿ ಯೋಧರನ್ನು ಹಾಗೂ ಒಬ್ಬ ಉಗ್ರನನ್ನು ಗಡಿ ಭದ್ರತಾ ಪಡೆ ಯೋಧರು ಹೊಡೆದುಹಾಕಿದ್ದಾರೆ.

ಇದು ನಾವು ಪಾಕಿಸ್ತಾನದ ಅಪ್ರಚೋದಿತ ದಾಳಿಗೆ ಕೊಟ್ಟ ತಕ್ಕ ಉತ್ತರ ಎಂದು ತನ್ನ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟವಾಗಿ ಸಾರಿದೆ ಗಡಿ ಭದ್ರತಾ ಪಡೆ. ಅಷ್ಟೇ ಅಲ್ಲ ಇದೊಂದು ನಮ್ಮ ಕಡೆಯಿಂದ ಆಕ್ರಮಣಕಾರಿ ಮರು ಉತ್ತರ ಎಂಬ ಶಬ್ದವನ್ನೂ ಬಿಎಸ್ಎಫ್ ಬಳಸಿದೆ. ಬುಧವಾರದಿಂದಲೇ ಪಾಕಿಸ್ತಾನದ ಕಡೆಯಿಂದ ಚಕಮಕಿ ತೀವ್ರವಾಗಿತ್ತು. ಕಠುವಾದಲ್ಲಿ ಗಡಿ ಭದ್ರತಾ ಪಡೆಯ ಕಾನ್ಸ್ಟೇಬಲ್ ಒಬ್ಬರು ಈ ಚಕಮಕಿಯಲ್ಲಿ ಗಾಯಗೊಂಡಿದ್ದರು. ಇದಕ್ಕೆ ಭಾರತೀಯ ಯೋಧರು ಕೊಟ್ಟಿರುವ ಉತ್ತರವಿದು.

ಈ ವಿದ್ಯಮಾನದಲ್ಲಿ ಎರಡು ಅಂಶಗಳು ಸ್ಪಷ್ಟವಾಗಿವೆ.

  • ಭಾರತೀಯರ ಗುಂಡಿಗೆ ಬಲಿಯಾದ ಪಾಕಿಸ್ತಾನಿ ರೇಂಜರ್ ಗಳ ಜತೆಯಲ್ಲಿ ಈ ಬಾರಿಯೂ ಉಗ್ರರಿದ್ದರು. ಸತ್ತವನು ಒಬ್ಬನಾದರೂ ಜತೆಗೆ ಇನ್ನಷ್ಟು ಮಂದಿ ಇದ್ದಿರುವ ಸಾಧ್ಯತೆ ಇದ್ದೇ ಇದೆ. ಅಂದರೆ ಗಡಿಯಲ್ಲಿ ಗುಂಡಿನ ಚಕಮಕಿ ಮೂಲಕ ಭಾರತೀಯ ಯೋಧರ ಗಮನವನ್ನು ಒಂದೆಡೆ ಸೆಳೆದು, ಅತ್ತ ಉಗ್ರರನ್ನು ಒಳನುಸುಳಿಸುವ ಎಂದಿನ ಕ್ರಮವನ್ನು ಪಾಕಿಸ್ತಾನ ಜಾರಿಯಲ್ಲಿಟ್ಟಿದೆ. ಗುರಿ ನಿರ್ದಿಷ್ಟ ದಾಳಿಯ ನಂತರ ಪಾಕಿಸ್ತಾನದ ಹತಾಶೆ ಹೆಚ್ಚಾಗುತ್ತಿದೆ.
  • ಯೋಧರ ಮೇಲೆ ಪಾಕಿಸ್ತಾನ ಪ್ರಚೋದನೆ ಹಾಗೂ ದಾಳಿಗೆ ಇಳಿದರೆ ಅದಕ್ಕೆ ಸೇನೆ ಉತ್ತರ ಕೊಡುತ್ತದೆ ಎಂಬ ಅಭಿಪ್ರಾಯವನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ ಸಿಂಗ್ ಹೇಳುತ್ತ ಬಂದಿದ್ದರು. ಸೇನೆಗೆ ಮುಕ್ತ ಪ್ರತಿದಾಳಿಯ ಅವಕಾಶವನ್ನು ರಾಜಕೀಯ ನಾಯಕತ್ವ ನೀಡಿದೆ ಎಂಬುದನ್ನೂ ಈ ವಿದ್ಯಮಾನದ ಮೂಲಕ ಅರ್ಥ ಮಾಡಿಕೊಳ್ಳಬಹುದು.

Leave a Reply