ಎಟಿಎಂ ಕಾರ್ಡುಗಳ ಮಾಹಿತಿ ಕಳ್ಳತನ ನೀಡುತ್ತಿರುವ ಸಂದೇಶ: ಡಿಜಿಟಲ್ ಇಂಡಿಯಾವನ್ನು ಹಾಳುಗೆಡವಲು ಚೀನಾ- ಅಮೆರಿಕಗಳ ಸೈಬರ್ ಸಮರದ ರಂಗಪ್ರವೇಶ!

author-chaitanyaಸದ್ಯಕ್ಕೆ ಎದೆ ಢವಗುಟ್ಟಿಸುತ್ತಿರುವ ವಿದ್ಯಮಾನವೆಂದರೆ ಡೆಬಿಟ್ ಕಾರ್ಡ್ ಗಳದ್ದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ಡಿಎಫ್ಸಿ, ಐಸಿಐಸಿಐ, ಏಕ್ಸಿಸ್ ಹಾಗೂ ಯೆಸ್ ಬ್ಯಾಂಕ್ ಗಳು ಗ್ರಾಹಕರಿಗೆ ವಿತರಿಸಿದ್ದ ಡೆಬಿಟ್ ಕಾರ್ಡ್ ಗಳ ಪೈಕಿ, ಭದ್ರತೆ ರಾಜಿಯಾಗಿರುವ ಕಾರಣ ಅಪಾರ ಪ್ರಮಾಣದಲ್ಲಿ ಅವನ್ನು ಹಿಂದಕ್ಕೆ ಪಡೆಯಲಾಗಿದೆ. ಅದೂ ಒಂದೆರಡು ಕಾರ್ಡುಗಳಲ್ಲ, ಬರೋಬ್ಬರಿ 32 ಲಕ್ಷ ಕಾರ್ಡುಗಳಿಗೆ ವೈರಸ್ಸು ತಗುಲಿ, ಆ ಪೈಕಿ ಹಲವು ಕಾರ್ಡುಗಳ ಮುಖಾಂತರ ಗ್ರಾಹಕರ ಹೆಸರಲ್ಲಿ ಇನ್ಯಾರೋ ಹಣ ತೆಗೆದಿದ್ದಾರೆ!

ಜನಸಾಮಾನ್ಯರ ಹಣ ಹೆಚ್ಚಿನದಾಗಿ ಇರುವ ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ತಾನು ಭದ್ರತೆ ಹಾಳಾಗಿರುವ 6 ಲಕ್ಷ ಡೆಬಿಟ್ ಕಾರ್ಡುಗಳನ್ನು ಹಿಂದಕ್ಕೆ ಪಡೆದಿರುವುದಾಗಿ ಬುಧವಾರ ಹೇಳಿದೆ.

ಇವೆಲ್ಲ ಏಕಾಏಕಿ ಅಲ್ಲ, ಕಳೆದೆರಡು ತಿಂಗಳಲ್ಲಿ ಆಗಿರುವ ವಿದ್ಯಮಾನ. 30 ಲಕ್ಷ ಕಾರ್ಡುಗಳ ಪೈಕಿ ಕೆಲವನ್ನು ಹಿಂದಕ್ಕೆ ಪಡೆಯಲಾಗಿದ್ದರೆ, ಕೆಲವರಿಗೆ ಪಿನ್ ನಂಬರ್ ಬದಲಾಯಿಸುವಂತೆ ನಿರ್ದೇಶಿಸಲಾಗಿದೆ.

ಇದೀಗ, ಈ ವಿದ್ಯಮಾನದ ಬೆನ್ನಲ್ಲೇ ಗ್ರಾಹಕರು ಎಟಿಎಂ ಕಾರ್ಡುಗಳನ್ನು ಹೇಗೆ ನಿರ್ವಹಿಸಬೇಕು, ಏನೆಲ್ಲ ಎಚ್ಚರ ವಹಿಸಬೇಕು ಎಂಬ ಬಗ್ಗೆ ಸಲಹೆಗಳು ತೇಲಿ ಬರುತ್ತಿವೆ. ಆದರೆ ಈ ಡೆಬಿಟ್ ಕಾರ್ಡುಗಳ ಮಾಹಿತಿ ಕಳ್ಳತನದ ನಮೂನೆಯನ್ನು ಗಮನಿಸಿದರೆ ಇದನ್ನೆದುರಿಸುವುದು ಖಂಡಿತವಾಗಿಯೂ ಗ್ರಾಹಕನ ಕೈಯಲ್ಲಿಲ್ಲ ಎಂಬುದು ನಿಚ್ಚಳವಾಗುತ್ತದೆ.

ಏಕೆಂದರೆ ಮಾಹಿತಿ ಕಳ್ಳತನವಾದ ನಂತರ ಈ ಡೆಬಿಟ್ ಕಾರ್ಡುಗಳ ಉಪಯೋಗವಾಗಿರುವುದು ಚೀನಾ ಮತ್ತು ಅಮೆರಿಕಗಳಲ್ಲಿ. ಆ ಸಂದರ್ಭದಲ್ಲಿ ಈ ಕಾರ್ಡ್ ಮಾಲೀಕರು ಭಾರತದಲ್ಲೇ ಇದ್ದರು ಎಂಬುದನ್ನೂ ಖಾತ್ರಿಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ‘ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ’ ತನಿಖೆ ನಡೆಸಿದಾಗ ಕಂಪ್ಯೂಟರ್ ಮಾಲಾವೇರ್ ಮೂಲಕ ಭದ್ರತಾ ಲೋಪ ಆಗಿರುವುದು ನಿಚ್ಚಳವಾಗಿದೆ. ಭಾರತದಲ್ಲಿ ಎಟಿಎಂ ಸೇವೆಗಳನ್ನು ಒದಗಿಸುವ ಹಿಟಾಚಿ ಹಾರ್ಡ್ವೇರ್ ವ್ಯವಸ್ಥೆಯಲ್ಲೇ ಈ ಭದ್ರತಾ ಕನ್ನವಾಗಿದೆ.

ಅರ್ಥಾತ್, ಜನಸಾಮಾನ್ಯ ಏನೇ ಎಚ್ಚರಿಕೆ ವಹಿಸಿದರೂ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಆಟವಿದು. ಡ್ಯಾಮೇಜ್ ಕಂಟ್ರೋಲ್ ಮಾಡುತ್ತಿದ್ದೇವೆ, ಒಟ್ಟೂ ಕಾರ್ಡುಗಳ 0.5 ಪ್ರತಿಶತವಷ್ಟೇ ಹೀಗಾಗಿದೆ ಎಂದು ಸರ್ಕಾರ ಏನೇ ಸಬೂತು ಹೇಳಿದರೂ ಒಂದು ವಾಸ್ತವವನ್ನಂತೂ ಒಪ್ಪಿಕೊಳ್ಳಲೇಬೇಕು. ಅದೆಂದರೆ, ನಗದು ರಹಿತ ಬ್ಯಾಂಕಿಂಗ್ ವ್ಯವಸ್ಥೆ, ಡಿಜಿಟಲ್ ಇಂಡಿಯಾ ಇವೆಲ್ಲ ಎಷ್ಟೇ ಆಕರ್ಷಕವಾಗಿ ಕಂಡರೂ ಭಾರತವಿನ್ನೂ ಈ ವ್ಯವಸ್ಥೆಯನ್ನು ಅಪ್ಪಿಕೊಳ್ಳಬೇಕಾದ ಮೂಲಸೌಕರ್ಯವನ್ನು, ಮುಖ್ಯವಾಗಿ ಸೈಬರ್ ಭದ್ರತೆಯನ್ನು ಹೊಂದಿಲ್ಲ.

ಹೀಗೆ ಡೆಬಿಟ್ ಕಾರ್ಡ್ ಕನ್ನವಿಕ್ಕಿಸಿಕೊಂಡರ ಖಾತೆಗಳಿಂದ ಸುಮಾರು ಮೂರು ಕೋಟಿ ರುಪಾಯಿಗಳು ಇಲ್ಲವಾಗಿವೆ ಎಂಬ ಮಾಹಿತಿ ಇದೆ. ಆರ್ಬಿಐ ಕಾಯ್ದೆ ಪ್ರಕಾರ, ಮೂರನೇ ವ್ಯಕ್ತಿಯಿಂದ ಭದ್ರತಾ ಮಾಹಿತಿ ಕಳ್ಳತನವಾದರೆ ಅದಕ್ಕೆ ಗ್ರಾಹಕ ಹೊಣೆಗಾರನಾಗಿರುವುದಿಲ್ಲ. ಹೀಗಾಗಿ, ಬ್ಯಾಂಕುಗಳು ಈ ವ್ಯಕ್ತಿಗಳ ನಷ್ಟ ಭರಿಸುತ್ತಾವೇನೋ.

ಆದರೆ ಇಲ್ಲಿರುವ ಪ್ರಶ್ನೆ ಇದಕ್ಕೂ ಮಿಗಿಲಾದ ರಾಷ್ಟ್ರೀಯ ಭದ್ರತೆಯದ್ದು. ಪಾಕಿಸ್ತಾನದ ಜತೆ ಪ್ರಕ್ಷುಬ್ಧತೆ ನಿರ್ಮಾಣವಾಗಿರುವಾಗಲೇ ಡೆಬಿಟ್ ಕಾರ್ಡುಗಳ ಮಾಹಿತಿ ಕಳ್ಳತನ ನಡೆದಿದೆ ಹಾಗೂ ಇದರ ಮೂಲವು ಚೀನಾ ಮತ್ತು ಅಮೆರಿಕಗಳಿಗೆ ಹೋಗಿ ನಿಲ್ಲುತ್ತದೆ ಎಂಬುದು ಕೇವಲ ಕಾಕತಾಳೀಯ ಮಾತ್ರ ಆಗಿದ್ದೀತೇ? ಹಾಗಂತ ಸಮಾಧಾನಿಸಿಕೊಂಡರೂ ಇನ್ನೊಂದು ಪ್ರಶ್ನೆ ಹಾಕಿಕೊಳ್ಳೋಣ. ಗಡಿಯಲ್ಲಿ ಯುದ್ಧಸದೃಶ ಸ್ಥಿತಿ ನಿರ್ಮಾಣವಾಗಿದ್ದ ಸಂದರ್ಭದಲ್ಲಿ ಇತ್ತ ಭಾರತೀಯರ ಬ್ಯಾಂಕಿಂಗ್ ಮಾಹಿತಿಗಳನ್ನು ಕನ್ನ ಹೊಡೆದು ಅಲ್ಯಾರೋ ಹಣ ಮಾಯವಾಗಿಸಿದರೆ ಆ ಕ್ಷಣದಲ್ಲಿ ಸರ್ಕಾರದ ಸ್ಥಿತಿ ಹೇಗಿರುತ್ತದೆ ಸ್ವಲ್ಪ ಯೋಚಿಸಿ! ದಿಗಿಲೆದ್ದು ವ್ಯವಸ್ಥೆ ವಿರುದ್ಧ ತಿರುಗಿಬೀಳುವ ಸಂತ್ರಸ್ತರನ್ನು ಸಮಾಧಾನಿಸುವುದೋ ಅಥವಾ ಗಡಿಯಲ್ಲಿ ವೈರಿಯನ್ನು ತಡೆಯುವುದೋ ಎಂಬ ಗೊಂದಲದಲ್ಲಿ ಇಡೀ ವ್ಯವಸ್ಥೆ ಮಂಡಿಯೂರಿಬಿಟ್ಟೀತು ಹುಷಾರು!

ಹೀಗಾಗಿ ಸೈಬರ್ ಸುರಕ್ಷತೆ ವಿಷಯದಲ್ಲಿ ಸರ್ಕಾರ ದೊಡ್ಡ ಹೆಜ್ಜೆಯನ್ನೇ ಇಡಬೇಕಿದೆ. ಸರ್ಕಾರಿ ಅಧಿಕಾರಿಗಳು ಜಿಮೇಲ್ ನಂಥ ಖಾಸಗಿ ಸೇವೆಗಳ ಮೂಲಕ ಮಾಹಿತಿ ಕಳುಹಿಸುವುದನ್ನು ಮೋದಿ ಸರ್ಕಾರ ಪ್ರತಿಬಂಧಿಸಿ, ಅದಕ್ಕೆ ಸರ್ಕಾರಿ ಪರ್ಯಾಯವನ್ನು ನೀಡಿದೆ. ಆದರೆ ಚೀನಾದಂಥ ರಾಷ್ಟ್ರಗಳು ಅದಾಗಲೇ ಸೈಬರ್ ಯುದ್ಧವನ್ನು ಜಾರಿಯಲ್ಲಿಟ್ಟುಬಿಟ್ಟಿರುವಾಗ, ಭಾರತ ತೆಗೆದುಕೊಳ್ಳಬೇಕಾದ ಕ್ರಮಗಳು ಬಹಳ ಇವೆ ಹಾಗೂ ಅಷ್ಟೇ ತ್ವರಿತವಿದೆ ಎಂಬುದು ಡೆಬಿಟ್ ಕಾರ್ಡುಗಳ ಮಾಹಿತಿ ಕನ್ನವೆಂಬ ವಿದ್ಯಮಾನದಿಂದ ತುಂಬ ಸ್ಪಷ್ಟವಾಗಿದೆ.

ಭವಿಷ್ಯತ್ತಿನಲ್ಲಿ ಭಾರತಕ್ಕೆ ತುಂಬ ಆತಂಕವಾಗಿ ಕಾಡುತ್ತಿರುವುದು ಚೀನಾದ ಎಲೆಕ್ಟ್ರಾನಿಕ್ ಉಪಕರಣಗಳು. ಜನಸಾಮಾನ್ಯರು ಮತ್ತು ಸರ್ಕಾರದ ಹಂತದಲ್ಲಿ ತುಂಬ ಹಾಸುಹೊಕ್ಕಾಗಿಬಿಟ್ಟಿರುವ ಈ ಎಲ್ಲ ಹಾರ್ಡ್ವೇರ್ ಗಳ ಒಳಗೆ ತಂತ್ರಾಂಶವೊಂದನ್ನು ತೂರಿಸಿ ಮಾಹಿತಿ ಕನ್ನ ಹಾಕುವ ನೈಪುಣ್ಯ ಮೈಗೂಡಿಸಿಕೊಂಡಿದ್ದಾರವರು. ಈ ಹಿಂದೆ ಅಮೆರಿಕ ಮತ್ತು ಇಸ್ರೇಲ್ ಗಳು ಒಂದುಗೂಡಿ, ಇರಾನಿನ ಮೈಕ್ರೊಸಾಫ್ಟ್ ವಿಂಡೋಸ್ ವ್ಯವಸ್ಥೆಯೊಳಗೆ ದತ್ತಾಂಶಗಳನ್ನು ತೂರಿಬಿಟ್ಟು ಉದ್ದೇಶಿತ ಅಣ್ವಸ್ತ್ರ ಯೋಜನೆಯನ್ನೇ ಬುಡಮೇಲು ಮಾಡಿಬಿಟ್ಟಿದ್ದವು.

ಈ ಜಾಗತಿಕ ಆಟಗಳನ್ನು ಸರ್ಕಾರವೇ ನಿಯಂತ್ರಿಸಿ ಪ್ರತಿತಂತ್ರ ಹೂಡಬೇಕಷ್ಟೆ. ಆದರೆ ಜನಸಾಮಾನ್ಯರಾದ ನಾವು, ಇಂಥದೂ ಒಂದು ಆಟ ನಡೆಯುತ್ತಿದೆ ಹಾಗೂ ದೇಶವು ಸೈಬರ್ ಯುದ್ಧಭೂಮಿಕೆಯಲ್ಲಿದೆ ಎಂಬ ಅರಿವನ್ನು ಮೂಡಿಸಿಕೊಳ್ಳಬೇಕು. ಆಗಷ್ಟೇ ಈ ಬಗೆಗೊಂದು ಜನಾಭಿಪ್ರಾಯ ರೂಪುಗೊಳ್ಳುತ್ತದೆ. ಅದು ಬಿಜೆಪಿ ಇರಲಿ, ಕಾಂಗ್ರೆಸ್ ಇರಲಿ… ತಾನು ಇಂಥ ಸೈಬರ್ ಸುರಕ್ಷತೆ ಬಗ್ಗೆ ಶ್ರಮವಹಿಸುವುದು ದೇಶಕ್ಕೆ ಮೆಚ್ಚುಗೆ ಆಗುತ್ತದೆ ಎಂಬ ಸಂದೇಶ ಪಡೆಯಬೇಕು. ಈ ಬಗ್ಗೆ ಜನಕ್ಕೇನೂ ಗೊತ್ತೇ ಇಲ್ಲ ಎಂದಾದಾಗ, ಆಡಳಿತದಲ್ಲಿ ಕುಳಿತಿರುವವರೂ ಈ ಬಗ್ಗೆ ಬಡಿದಾಡಿ ಜನಪ್ರೀತಿ ಗಳಿಸಲಿಕ್ಕಾಗುತ್ತದೆಯೇ ಅಂತ ಕ್ರಮೇಣ ಆಲಸಿಯಾಗಿಬಿಡುವ ಅಪಾಯವಿದೆ. ಹಾಗಾಗಬಾರದು ಎಂದಾದರೆ ಈ ದೇಶದ ಜನರ ಚರ್ಚೆಗಳು ಬಿಗ್ಬಾಸ್ ನಂಥ ಚಿಲ್ಲರೆ ರೋಮಾಂಚನಗಳಿಗೆ ಮಾತ್ರವೇ ಸೀಮಿತವಾಗಿರದೇ, ರಾಷ್ಟ್ರೀಯ ಭದ್ರತೆಯೂ ವಾಗ್ವಾದದ ಮಾತುಗಳಾಗಬೇಕು. ಅದರಲ್ಲೂ ಭಾರತದ ದೊಡ್ಡ ಜನಸಂಖ್ಯೆ ಅಂತರ್ಜಾಲಕ್ಕೆ ತೆರೆದುಕೊಳ್ಳುತ್ತಿರುವುದೇ ಮೊಬೈಲ್ ಫೋನ್ ಗಳ ಮೂಲಕ. ಇಲ್ಲಿ ವೈರಸ್ ವಿರೋಧಿ, ಡಾಟಾ ಕಳ್ಳತನ ನಿಗ್ರಹದ ಯಾವ ಕ್ರಮ ಅಳವಡಿಸಿಕೊಂಡಿದ್ದೇವೆಂಬ ಎಚ್ಚರದ ಪ್ರಶ್ನೆ ನಮ್ಮಲ್ಲಿ ಹುಟ್ಟಬೇಕು.

ಇವತ್ತು ಎಟಿಎಂ ಮಟ್ಟದಲ್ಲಾಗಿರುವ ಮಾಹಿತಿ ಕಳ್ಳತನದ ವಿದ್ಯಮಾನ ಡಿಜಿಟಲ್ ಇಂಡಿಯಾದ ಪ್ರಜೆಗಳಲ್ಲಿ ಪ್ರಶ್ನೆಗಳನ್ನು ಎಬ್ಬಿಸದಿದ್ದರೆ, ಜಗತ್ತಿಗೆ ಅತಿಹೆಚ್ಚು ಸಾಫ್ಟ್ವೇರ್ ಪರಿಣತರನ್ನು ಕೊಡುತ್ತಿರುವುದೇ ನಮ್ಮ ನೆಲ ಎಂದಷ್ಟೇ ಹೆಮ್ಮೆಪಡುವುದರಲ್ಲಿ ದೀರ್ಘಾವಧಿ ಫಾಯಿದೆಗಳಿಲ್ಲ.

Leave a Reply