ಹಿಂದು ಕಾರ್ಯಕರ್ತರ ಹತ್ಯೆ ಹಿಂದೆ ಜಿಹಾದಿಗಳ ಕೈವಾಡ ಅಂದ್ರು ಯಡಿಯೂರಪ್ಪ, ಮಹದಾಯಿ ಸಮಸ್ಯೆ ಸಭೆಗೆ ದಿನಾಂಕ ನಿಗದಿ, ವಿಧಾನಸೌಧದಲ್ಲಿ ಜಪ್ತಿಯಾಯ್ತು ₹ 2.5 ಕೋಟಿ

ಶುಕ್ರವಾರ ಬೆಂಗಳೂರಿನಲ್ಲಿ ಪೊಲೀಸ್ ಸ್ಮಾರಕ ದಿನದ ಗೌರವ ಸಲ್ಲಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು.

ಡಿಜಿಟಲ್ ಕನ್ನಡ ಟೀಮ್:

ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣ ಎನ್ಐಎಗೆ ನೀಡಲು ಮನವಿ

ರಾಜ್ಯದಲ್ಲಿ ಈವರೆಗೂ ನಡೆದಿರುವ ಹಿಂದು ಕಾರ್ಯಕರ್ತರ ಹತ್ಯೆ ಹಾಗೂ ಹಲ್ಲೆ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ)ಕ್ಕೆ ವಹಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ನೇತೃತ್ವದ ನಿಯೋಗ ರಾಜ್ಯಪಾಲ ವಜುಭಾಯ್ ವಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಶುಕ್ರವಾರ ರಾಜ್ಯಪಾಲರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಬಿ ಎಸ್ ವೈ, ‘ರಾಜ್ಯದಲ್ಲಿ ಬಿಜೆಪಿ, ಆರೆಸ್ಸೆಸ್ ಮತ್ತು ಹಿಂದೂ ಪರ ಕಾರ್ಯಕರ್ತರ ಹತ್ಯೆಯ ಹಿಂದೆ ಜಿಹಾದಿಗಳು ಮತ್ತು ಮಾರ್ಕ್ಸ್ ವಾದಿಗಳ ಕೈವಾಡವಿದೆ. ಆದರೆ ಸರ್ಕಾರ ಮಾತ್ರ ಈ ಹತ್ಯೆಗಳು ವೈಯಕ್ತಿಕ ಕಾರಣದಿಂದ ನಡೆದಿರುವುದಾಗಿ ಬಿಂಬಿಸುತ್ತಿದೆ. ಅಲ್ಲದೆ ಪ್ರಕರಣಗಳನ್ನು ಮುಚ್ಚಿಹಾಕುವ ಪ್ರಯತ್ನಗಳೂ ನಡೆದಿವೆ. ಹೀಗಾಗಿ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಬೇಕು’ ಎಂದರು. ಯಡಿಯೂರಪ್ಪನವರು ಈ ಮನವಿಯ ಜತೆಗೆ ಕಳೆದ ಎರಡು ವರ್ಷಗಳಲ್ಲಿ ಹಿಂದೂ ಪರ ಕಾರ್ಯಕರ್ತರ ಮೇಲಿನ ಹಲ್ಲೆ ಮತ್ತು ಹತ್ಯೆ ಪ್ರಕರಣಗಳ ಪಟ್ಟಿಯನ್ನು ರಾಜ್ಯಪಾಲರಿಗೆ ನೀಡಿದ್ದಾರೆ.

ಮಹದಾಯಿ ಕುರಿತಂತೆ 3 ರಾಜ್ಯಗಳ ಸಿಎಂ ಸಭೆಗೆ ಮುಹೂರ್ತ ಫಿಕ್ಸ್

ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಭೆ ನವೆಂಬರ್ 3ರಂದು ನಡೆಸಲು ನಿರ್ಧರಿಸಿದ್ದಾರೆ. ಈ ಹಿಂದೆ ನಿಗದಿಯಾದ ಪ್ರಕಾರ ಈ ಸಭೆ ಇಂದು ನಡೆಯಬೇಕಿತ್ತು. ಆದರೆ, ಗೋವಾ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೇಕರ್ ಅನಾರೋಗ್ಯದ ಕಾರಣ ಕೊಟ್ಟು ಇಂದಿನ ಸಭೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಗಿತ್ತು. ಅದರೊಂದಿಗೆ ರಾಜ್ಯದ ಉತ್ತರ ಭಾಗದ ಜನರಿಗೆ ತೀವ್ರ ಬೇಸರವಾಗಿತ್ತು. ಈಗ ಗೋವಾ ಮುಖ್ಯಮಂತ್ರಿಗಳು ಸಭೆಗೆ ಹಾಜರಾಗಲು ಒಪ್ಪಿಗೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಸಭೆಯನ್ನು ನವೆಂಬರ್ 3ರಂದು ನಡೆಸಲು ನಿರ್ಧರಿಸಲಾಗಿದೆ.

ವಿಧಾನಸೌಧದಲ್ಲಿ ಸಿಕ್ತು ₹ 2.5 ಕೋಟಿ ದಾಖಲೆ ಇಲ್ಲದ ಹಣ

ವಿಧಾನಸೌಧದಲ್ಲೇ ದೊಡ್ಡ ಡೀಲ್ ಗಳು ನಡೆಯುತ್ತಾ?… ಹೀಗೊಂದು ಅನುಮಾನಕ್ಕೆ ಕಾರಣವಾಗಿದೆ ವಿಧಾನಸೌಧದ ಆವರಣಕ್ಕೆ ವಕೀಲರಾದ ಸಿದ್ಧಾರ್ಥ್ ಎಂಬುವರು ತಮ್ಮ ಕಾರಿನಲ್ಲಿ ₹ 2.5 ಕೋಟಿ ಹಣವನ್ನು ತಂದ ಪ್ರಕರಣ. ಶುಕ್ರವಾರ ಮಧ್ಯಾಹ್ನ ಸಿದ್ಧಾರ್ಥ್ ಇಷ್ಟು ದೊಡ್ಡ ಮೊತ್ತವನ್ನು ತಂದಿದ್ದು, ವಿಧಾನಸೌಧ ಪೊಲೀಸರು ಅದನ್ನು ಜಪ್ತಿ ಮಾಡಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ, ಆರಂಭದಲ್ಲಿ ವಕೀಲರಾದ ಸಿದ್ಧಾರ್ಥ್ ಈ ಹಣ ಪ್ರಭಾವಿ ವ್ಯಕ್ತಿಯೊಬ್ಬರಿಗೆ ಸೇರಿದ್ದು ಎಂದು ಹೇಳಿದ್ದು, ನಂತರ ನ್ಯಾಯಾಂಗ ಅಧಿಕಾರಿಯೊಬ್ಬರಿಗೆ ಸಂಬಂಧಿಸಿದೆ ಎಂದು ಭಿನ್ನ ಹೇಳಿಕೆ ಕೊಟ್ಟಿದ್ದಾರೆ.

ವಿಧಾನಸೌಧ ಪೊಲೀಸರು ಈ ಬಗ್ಗೆ ರಹಸ್ಯ ತನಿಖೆ ನಡೆಸಿ ನಂತರ ಪ್ರಕರಣವನ್ನು ಕಬ್ಬನ್ ಪಾರ್ಕ್ ಪೊಲೀಸರಿಗೆ ವರ್ಗಾಹಿಸಿದ್ದಾರೆ. ಜಪ್ತಿಯಾದ ₹ 2.5 ಕೋಟಿ ಹಣಕ್ಕೆ ಸೂಕ್ತ ದಾಖಲೆಯನ್ನು ಸಿದ್ಧಾರ್ಥ್ ಒದಗಿಸಲು ವಿಫಲವಾಗಿದ್ದಾರೆ ಎಂದೂ ಮಾಧ್ಯಮಗಳ ವರದಿಗಳು ತಿಳಿಸಿವೆ.

ಖಂಡ್ರೆ ಅಸಮಾಧಾನ

ಸಾರ್ವಜನಿಕ ಉದ್ದಿಮೆಗಳಲ್ಲಿ ಕೋಟ್ಯಾಂತರ ರುಪಾಯಿಗಳ ವ್ಯವಹಾರ ನಡೆಯುತ್ತಿದೆ. ಈ ಉದ್ದಿಮೆಗಳಲ್ಲಿ ಲೆಕ್ಕಪರಿಶೋಧಕರಿಲ್ಲದ ಪರಿಣಾಮ ಇಲ್ಲಿನ ಖರ್ಚು ವೆಚ್ಚ ಲೆಕ್ಕಕ್ಕೆ ಸಿಗುತ್ತಿಲ್ಲ ಎಂದು ಬೇಸರಗೊಂಡಿದ್ದಾರೆ ಪೌರಾಡಳಿತ ಸಚಿವ ಈಶ್ವರಖಂಡ್ರೆ. ಸಾರ್ವಜನಿಕ ಉದ್ದಿಮೆಗಳ ಉನ್ನತಾಧಿಕಾರಿಗಳ ಸಮಾವೇಶದಲ್ಲಿ ಭಾಗವಹಿಸಿದ ಸಚಿವರು, ವ್ಯವಸ್ಥಾಪಕ ನಿರ್ದೇಶಕರು, ಹಿರಿಯ ಅಧಿಕಾರಿಗಳ ಜತೆ ಚರ್ತೆ ನಡೆಸಿದರು. ಅಲ್ಲದೆ ಶೀಘ್ರವೇ ಈ ಉದ್ದಿಮೆಗಳಲ್ಲಿ ಲೆಕ್ಕ ಪರಿಶೋಧಕರ ನೇಮಕ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

Leave a Reply