ಡೆಬಿಟ್ ಕಾರ್ಡ್ ದತ್ತಾಂಶ ಸೋರಿಕೆ: ರಿಸರ್ವ್ ಬ್ಯಾಂಕಿನಿಂದ ವರದಿ ಕೇಳಿದ ಅರುಣ್ ಜೇಟ್ಲಿ, ಗ್ರಾಹಕರು ಆತಂಕಗೊಳ್ಳಬೇಕಿಲ್ಲ ಎಂದರು ವಿತ್ತ ವ್ಯವಹಾರಗಳ ಕಾರ್ಯದರ್ಶಿ

ಡಿಜಿಟಲ್ ಕನ್ನಡ ಟೀಮ್:

ದತ್ತಾಂಶ ಸೋರಿಕೆಯಿಂದಾಗಿ ದೇಶದ ವಿವಿಧ ಬ್ಯಾಂಕುಗಳ ಸುಮಾರು 30 ಲಕ್ಷಕ್ಕೂ ಹೆಚ್ಚು ಡೆಬಿಟ್ ಕಾರ್ಡ್ ದುರ್ಬಳಕೆ ವಿಚಾರವಾಗಿ ಸಂಪೂರ್ಣ ವರದಿ ನೀಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಇತರೆ ಬ್ಯಾಂಕುಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ಬಗ್ಗೆ ವರದಿ ಕೇಳಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ  ಈ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಪ್ರತಿಕ್ರಿಯೆ ನೀಡಿರುವ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್, ಈ ಪ್ರಕರಣದಿಂದ ಗ್ರಾಹಕರು ಆತಂಕಗೊಳ್ಳುವ ಅಗತ್ಯವಿಲ್ಲ ಎಂಬ ಭರವಸೆ ಕೊಟ್ಟಿದ್ದಾರೆ. ಈ ಬಗ್ಗೆ ಅವರು ಹೇಳಿದಿಷ್ಟು… ‘ಗ್ರಾಹಕರು ಈ ಬೆಳವಣಿಗೆಯಿಂದ ಆತಂಕಗೊಳ್ಳಬಾರದು. ಕೇವಲ ಶೇ.0.5 ರಷ್ಟು ಡೆಬಿಟ್ ಕಾರ್ಡ್ ಮಾಹಿತಿ ಹ್ಯಾಕ್ ಮಾಡಲಾಗಿದ್ದು, ಉಳಿದ ಶೇ.99.5 ರಷ್ಟು ಡೆಬಿಟ್ ಕಾರ್ಡ್ ಸುರಕ್ಷಿತವಾಗಿವೆ. ಈ ಡೆಬಿಟ್ ಕಾರ್ಡ್ ಮಾಹಿತಿಗಳನ್ನು ಕಂಪ್ಯೂಟರ್ ಗಳ ಮೂಲಕ ಹ್ಯಾಕ್ ಮಾಡಲಾಗಿದ್ದು, ಶೀಘ್ರದಲ್ಲೇ ಸಮಸ್ಯೆಯನ್ನು ಬಗೆಹರಿಸಬಹುದು. ಈ ಬಗ್ಗೆ ತೆಗೆದುಕೊಳ್ಳಬೇಕಾದ ಎಲ್ಲ ಕ್ರಮಗಳನ್ನು ಶೀಘ್ರವಾಗಿಯೇ ತೆಗೆದುಕೊಳ್ಳುತ್ತೇವೆ.’

ಸೈಬರ್ ಅಪರಾಧದ ಮೂಲಕ ದತ್ತಾಂಶ ಸೋರಿಕೆ ಆಗಿರುವುದರಿಂದ ದೇಶದ ವಿವಿಧ ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕುಗಳು ಆತಂಕಗೊಂಡಿರುವುದಾಗಿ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ ಪಿ ಸಿ ಐ) ತಿಳಿಸಿದೆ. ಚೀನಾ ಮತ್ತು ಅಮೆರಿಕಗಳಲ್ಲಿ ಈ ಸೋರಿಕೆಯಾದ ದತ್ತಾಂಶ ಬಳಸಿಕೊಳ್ಳಲಾಗಿದ್ದು, 19 ಬ್ಯಾಂಕುಗಳ 641 ಗ್ರಾಹಕರು ತಮ್ಮ ಖಾತೆಯಿಂದ ಹಣ ಹೋಗಿರುವುದಾಗಿ ದೂರು ನೀಡಿದ್ದಾರೆ. ಇದರ ಒಟ್ಟಾರೆ ಮೊತ್ತ ₹1.3 ಕೋಟಿಯಾಗಿದ್ದು, ಈ ಪ್ರಕರಣ ಕುರಿತಂತೆ ತಾಂತ್ರಿಕ ಲೆಕ್ಕಪರಿಶೋಧನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಎನ್ ಪಿ ಸಿ ಐ ತಿಳಿಸಿದೆ.

ಈ ಲೆಕ್ಕ ಪರಿಶೋಧನೆಯನ್ನು ಪೇಮೆಂಟ್ ಕಾರ್ಡ್ ಇಂಡಸ್ಟ್ರಿ ಡಾಟಾ ಸೆಕ್ಯುರಿಟಿ ಸ್ಟಾಂಡರ್ಡ್ ಎಂಬ ಅಂತಾರಾಷ್ಟ್ರೀಯ ಸಂಸ್ಥೆ ನಡೆಸಲಿದ್ದು, ಅಕ್ಟೋಬರ್ ತಿಂಗಳಾಂತ್ಯದಲ್ಲಿ ತನಿಖಾ ವರದಿ ನೀಡಲಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ಮಾಹಿತಿ ನೀಡಿವೆ. ಇನ್ನು ಈ ಬಗ್ಗೆ ಪೊಲೀಸ್ ತನಿಖೆ ನಡೆಸಲು ಅಧಿಕೃತ ದೂರು ದಾಖಲಾಗಿಲ್ಲವಾದರೂ ಮುಂಬೈ ಸೈಬರ್ ಭದ್ರತಾ ದಳ ಬ್ಯಾಂಕುಗಳನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಕೇಳಿದೆ. ಇದೇ ವೇಳೆ ಗ್ರಾಹಕರು ತಮ್ಮ ಡೆಬಿಟ್ ಕಾರ್ಡಿನ ಪಿನ್ ಸಂಖ್ಯೆಯನ್ನು ಬದಲಿಸುವಂತೆಯೂ ಬ್ಯಾಂಕುಗಳು ಕರೆ ನೀಡಿವೆ. ಭಾರತದ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ 6.25 ಲಕ್ಷ ಡಬಿಟ್ ಕಾರ್ಡ್ ಗಳನ್ನು ನಿಷ್ಕ್ರಿಯೆಗೊಳಿಸಿದ್ದು ಗ್ರಾಹಕರಿಗೆ ಬದಲಿ ಡೆಬಿಟ್ ಕಾರ್ಡ್ ನೀಡಲು ಮುಂದಾಗಿದೆ. ಅಲ್ಲದೆ ಇದರಿಂದ ಗ್ರಾಹಕರಿಗೆ ಆಗುವ ನಷ್ಟವನ್ನು ತುಂಬುವ ಭರವಸೆ ನೀಡಿದೆ.

Leave a Reply