ಬಿಸಿಸಿಐಗೆ ಪ್ರತ್ಯೇಕ ಲೆಕ್ಕ ಪರಿಶೋಧಕರ ನೇಮಿಸಿ ಮಂಡಳಿ ಹಣಕಾಸು ವ್ಯವಹಾರಕ್ಕೆ ಸುಪ್ರೀಂ ಬ್ರೇಕ್, ಸಾವಿರಾರು ಕೋಟಿ ಲಾಭ ತರುವ ಐಪಿಎಲ್ ಹಕ್ಕು ವಿತರಣೆ ಒಪ್ಪಂದದ ಮೇಲೂ ಪರಿಣಾಮ

ಡಿಜಿಟಲ್ ಕನ್ನಡ ಟೀಮ್:

ಸುಪ್ರಿಂ ಕೋರ್ಟ್ ಅಂಗಳದಲ್ಲಿ ಬಿಸಿಸಿಐ ಹಾಗೂ ಲೋಧಾ ಸಮಿತಿ ನಡುವಣ ಹಗ್ಗ ಜಗ್ಗಾಟ ಸದ್ಯಕ್ಕೆ ನಿಲ್ಲುವ ಯಾವುದೇ ಸೂಚನೆಗಳು ಸಿಗುತ್ತಿಲ್ಲ. ತನ್ನ ಪ್ರತಿಷ್ಠೆಯನ್ನು ಮುಂದುವರಿಸುತ್ತಿರುವ ಬಿಸಿಸಿಐ ಸುಪ್ರೀಂ ಕೋರ್ಟ್ ನೇಮಿತ ಲೋಧಾ ಸಮಿತಿ ಶಿಫಾರಸ್ಸುಗಳನ್ನು ಒಪ್ಪಲು ಮೀನಾಮೇಷ ಎಣಿಸುತ್ತಿದೆ. ಮಂಡಳಿಯ ಈ ವರ್ತನೆಯಿಂದ ಬೇಸತ್ತ ಸುಪ್ರೀಂ ಕೋರ್ಟ್, ಶುಕ್ರವಾರ ಬಿಸಿಸಿಐ ಹಣಕಾಸು ವ್ಯವಹಾರ ಪರಿಶೀಲನೆ ನಡೆಸಲು ಲೆಕ್ಕ ಪರಿಶೋಧಕರನ್ನು ನೇಮಕ ಮಾಡಿ ಈ ವಿಷಯದಲ್ಲಿ ಬಿಸಿಸಿಐ ಅಧಿಕಾರವನ್ನೇ ಕಸಿದುಕೊಂಡಿದೆ.

ಬಿಸಿಸಿಐ ವಿರುದ್ಧ ಈ ರೀತಿಯಾಗಿ ಕಠಿಣ ನಿಲುವು ತಾಳಿರುವ ಸುಪ್ರೀಂ ಕೋರ್ಟ್, ‘ನೀವು ಹೀಗೆ ಮೊಂಡುತನ ಮಾಡಿದರೆ ನಿಮ್ಮ ಸ್ವಾಯತ್ತೆಗೆ ಅಪಾಯವಾಗಲಿದೆ’ ಎಂಬ ಎಚ್ಚರಿಕೆಯನ್ನು ನೀಡಿದೆ. ವಿಚಾರಣೆ ವೇಳೆ ಬಿಸಿಸಿಐನ ಯಾವುದೇ ವಿತಂಡವಾದಕ್ಕೂ ಸೊಪ್ಪುಹಾಕದ ಸುಪ್ರೀಂ ಕೋರ್ಟ್, ‘ಮಂಡಳಿಯ ಸದಸ್ಯತ್ವ ಹೊಂದಿರುವ ಯಾವುದೇ ರಾಜ್ಯ ಸಂಸ್ಥೆಗಳಾಗಲಿ ಲೋಧಾ ಸಮಿತಿ ಶಿಫಾರಸ್ಸನ್ನು ಜಾರಿಗೊಳಿಸುವ ಹೊರತಾಗಿ ನ್ಯಾಯಾಲಯ ಈ ಸಂಸ್ಥೆಗಳಿಗೆ ಒಂದೇ ಒಂದು ರುಪಾಯಿಯನ್ನು ನೀಡುವುದಿಲ್ಲ’ ಎಂದು ಸೂಚಿಸಿದೆ. ಅದರೊಂದಿಗೆ ಈ ವಿಚಾರವಾಗಿ ಅ.7ರಂದು ತನ್ನ ನಿರ್ಧಾರವನ್ನು ಪುನರುಚ್ಚರಿಸಿದೆ.

ಇನ್ನು ಪ್ರತ್ಯೇಕ ಲೆಕ್ಕ ಪರಿಶೋಧಕರನ್ನು ನೇಮಕ ಮಾಡಿರುವ ಸುಪ್ರೀಂ ಕೋರ್ಟ್ ಮಂಡಳಿಯ ಎಲ್ಲ ಪ್ರಮುಖ ಒಪ್ಪಂದಗಳನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್ ಠಾಕೂರ್ ಆದೇಶಿಸಿದ್ದಾರೆ. ಇದರೊಂದಿಗೆ ಮುಂದಿನ ದಿನಗಳಲ್ಲಿನ ಯಾವುದೇ ಒಪ್ಪಂದ ಮಾಡಿಕೊಳ್ಳಬೇಕಾದರೂ ಬಿಸಿಸಿಐ ಈ ಲೆಕ್ಕ ಪರಿಶೋಧಕರ ಅನುಮತಿ ಪಡೆಯಬೇಕಿದೆ. ಈ ಆದೇಶದಿಂದಾಗಿ ಬಿಸಿಸಿಐ ತನ್ನ ವಾಣಿಜ್ಯ ವ್ಯವಹಾರಗಳಲ್ಲಿ ಸಂಪೂರ್ಣ ನಿಯಂತ್ರಣವನ್ನು ಕಳೆದುಕೊಂಡಂತಾಗಿದೆ.

ಸುಪ್ರೀಂ ಕೋರ್ಟ್ ಈ ನಿರ್ಧಾರ ಮಹತ್ವ ಪಡೆದುಕೊಂಡಿದೆ. ಕಾರಣ 2018 ರಿಂದ 10 ವರ್ಷಗಳ ಕಾಲಾವಧಿಗೆ ಐಪಿಎಲ್ ಮಾಧ್ಯಮ ಹಕ್ಕು ವಿತರಣೆಗೆ ಸಂಬಂಧಿಸಿದಂತೆ ಬಿಸಿಸಿಐ ಮಹತ್ವದ ಒಪ್ಪಂದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಹಕ್ಕು ವಿತರಣೆಯಲ್ಲಿ ಟಿವಿ, ಇಂಟರ್ ನೆಟ್ ಹಾಗೂ ಮೊಬೈಲ್ ಎಂಬ ಮೂರು ವಿಧಗಳಿದ್ದು, ಬಿಸಿಸಿಐ ಸಾವಿರಾರು ಕೋಟಿ ಆದಾಯ ಈ ಒಪ್ಪಂದಗಳ ಮೇಲೆ ನಿಂತಿದೆ. 2008ರಿಂದ 2017ರವರೆಗಿನ ಐಪಿಎಲ್ ಪ್ರಸಾರದ ಹಕ್ಕನ್ನು ಸೋನಿ ಪಿಚ್ಚರ್ಸ್ ನೆಟ್ವರ್ಕ್ ಪ್ರೈವೆಟ್ ಲಿಮಿಟೆಡ್ 1.6 ಬಿಲಿಯನ್ ಅಮೆರಿಕನ್ ಡಾಲರ್ (₹ 10,700 ಕೋಟಿ) ಕೊಟ್ಟು ಖರೀದಿಸಿತ್ತು. ಹತ್ತು ವರ್ಷಗಳ ಯಶಸ್ವಿ ನಂತರ ಈ ಟೂರ್ನಿಯ ಪ್ರಸಾರ ಹಕ್ಕಿಗೆ ಮತ್ತಷ್ಟು ಬೇಡಿಕೆ ಹೆಚ್ಚಿದ್ದು, ಬಿಸಿಸಿಐ ಪಾಲಿಗೆ ಇದೊಂದು ದೊಡ್ಡ ಲಾಭ ತಂದುಕೊಡುವ ನಿರೀಕ್ಷೆ ಇದೆ. ಈ ಹಂತದಲ್ಲಿ ಪ್ರತ್ಯೇಕ ಲೇಕ್ಕ ಪರಿಶೋಧಕರ ನೇಮಕ ಹಾಗೂ ಒಪ್ಪಂದಕ್ಕೆ ಸಂಬಂಧಿಸಿದಂತೆ ಅವರ ಅನುಮತಿ ಪಡೆಯುವುದು ಅಗತ್ಯವಾಗಿದ್ದು ಬಿಸಿಸಿಐಗೆ ತೀವ್ರ ಹಿನ್ನಡೆ ಎಂದೇ ಪರಿಗಣಿಸಬಹುದು.

ಕೇವಲ ಲೆಕ್ಕ ಪರಿಶೋಧಕರ ನೇಮಕವಷ್ಟೇ ಅಲ್ಲದೆ, ಲೋಧಾ ಸಮಿತಿ ಶಿಫಾರಸ್ಸನ್ನು ಜಾರಿಗೊಳಿಸದಿದ್ದರೆ ದೇಶಿ ಕ್ರಿಕೆಟ್ ಪಂದ್ಯಗಳು ಸೇರಿದಂತೆ ಇತರೆ ಪಂದ್ಯಗಳಿಗೂ ಹಣ ಬಿಡುಗಡೆಗೆ ತಡೆ ನೀಡುವುದಾಗಿಯೂ ಎಚ್ಚರಿಸಿದೆ.

ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಮತ್ತು ಕಾರ್ಯದರ್ಶಿ ಅಜಯ್ ಶಿರ್ಕೆ ಅವರಿಗೆ ಲೋಧಾ ಸಮಿತಿ ಮುಂದೆ ಶಿಫಾರಸ್ಸಿನ ಕುರಿತು ತಮ್ಮ ದೂರನ್ನು ಹೇಳಿಕೊಳ್ಳಬಹುದು. ನಂತರ ಮಂಡಳಿ ಲೋಧಾ ಸಮಿತಿಯ ಯಾವ ಶಿಫಾರಸ್ಸುಗಳನ್ನು ಜಾರಿಗೊಳಿಸಿದೆ ಹಾಗೂ ಯಾವ ಶಿಫಾರಸ್ಸುಗಳನ್ನು ಜಾರಿಗೊಳಿಸಿಲ್ಲ ಎಂಬ ವಿವರವಾದ ಅಫಿಡೆವಿಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಕೋರ್ಟ್ ಸೂಚಿಸಿದೆ.

ಇದರೊಂದಿಗೆ ಸುಪ್ರೀಂ ಕೋರ್ಟ್ ಹಂತಹಂತವಾಗಿ ಬಿಸಿಸಿಐಗೆ ಪೆಟ್ಟು ನೀಡಿ ಬಗ್ಗಿಸುವ ಪ್ರಯತ್ನ ಮಾಡುತ್ತಿದೆ. ಈ ಹಂತದಲ್ಲಿ ಬಿಸಿಸಿಐ ತನ್ನ ಮೊಂಡುತನವನ್ನು ಹೀಗೆ ಮುಂದುವರಿಸಿದರೆ, ಕ್ರೀಡೆ ಸಂಕಷ್ಟಕ್ಕೆ ಸಿಲುಕುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಬಿಸಿಸಿಐ ನಡೆ ಹಾಗೂ ಅದಕ್ಕೆ ಸುಪ್ರೀಂ ಕೋರ್ಟ್ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.

Leave a Reply