ಹೋರಾಟ ರೂಪಿಸುವಲ್ಲಿ ಯಶ್ ಹಾಕಿರುವ ಸವಾಲು, ಚಿತ್ರರಂಗಕ್ಕೆ ನೈತಿಕತೆ ಏಕಿರಬೇಕೆಂಬ ಪ್ರಶ್ನೆಗೆ ಮಾಸ್ತಿಯವರ ಸಾಲು…

author-ssreedhra-murthyಕಲಾವಿದ ಯಶ್,  ಜನಪರ ಚಳುವಳಿಗಳಲ್ಲಿ ಚಿತ್ರ ಕಲಾವಿದರು ಭಾಗವಹಿಸುವಿಕೆ ಕುರಿತು ಫೇಸ್‍ಬುಕ್‍ನಲ್ಲಿ ಹಾಕಿರುವ ವಿಡಿಯೋ ಲಿಂಕ್ ಈಗ ಚರ್ಚೆಗೆ ವಸ್ತುವಾಗಿದೆ. ಅದರಲ್ಲಿ ಅವರು ಮಾಧ್ಯಮದ ಬದ್ದತೆ ಕುರಿತು ಎತ್ತಿರುವ ಪ್ರಶ್ನೆಗಳಿಗಿಂತಲೂ ‘ಸಿನಿಮಾ ಕಲಾವಿದರು ಕೇವಲ ಚಳುವಳಿಗಳಲ್ಲಿ ಭಾಗವಹಿಸಿದರೆ ಸಾಕೆ,  ಸಮಸ್ಯೆ ಪರಿಹಾರವಾಗುವ ತನಕ ಹೋರಾಡ ಬೇಕಲ್ಲವೆ?’ ಎನ್ನುವ ಅವರ ಪ್ರಸ್ತಾಪ ನನ್ನ ಗಮನ ಸೆಳೆಯಿತು. ಯಾವುದೇ ಸಮಸ್ಯೆ ತಾರ್ಕಿಕ ಅಂತ್ಯಕ್ಕೆ ಹೋಗುವವರೆಗೂ ಹೋರಾಡಬೇಕು ಎನ್ನುವ ತಾತ್ವಿಕತೆಯನ್ನು ಒಪ್ಪೋಣ, ಆದರೆ ವಾಸ್ತವವನ್ನೂ  ಗಮನಿಸ ಬೇಕಲ್ಲವೆ? ಕಾವೇರಿ ನೀರಿನ ವಿವಾದದಂತಹ ಸಮಸ್ಯೆಗಳು ಎಷ್ಟು ಸಂಕೀರ್ಣವಾಗಿರುತ್ತವೆ ಎಂದರೆ ಆಡಳಿತದ ಚುಕ್ಕಾಣಿ ಹಿಡಿದ ಸರ್ಕಾರವೇ ನ್ಯಾಯಾಲಯದ ತೀರ್ಮಾನವನ್ನು ಎದುರು  ನೋಡಬೇಕಾದ ಸ್ಥಿತಿಯಲ್ಲಿದೆ. ಅಂತಹದರಲ್ಲಿ ಸಿನಿಮಾ ಕಲಾವಿದರು, ಜನರ ಆಕ್ರೋಶವನ್ನು ಸರ್ಕಾರಕ್ಕೆ ತಲುಪಿಸುವದಕ್ಕಿಂತ ಹೆಚ್ಚಿನ ಹೊಣೆಗಾರಿಕೆ ನಿರ್ವಹಿಸುವುದು ಸಾಧ್ಯವೆ? ಹಾಗಿದ್ದರೆ ಸಿನಿಮಾ ಕಲಾವಿದರಿಂದ ಜನ ಬಯಸುವುದು ಕೇವಲ ಭಾವನಾತ್ಮಕ ಬೆಂಬಲ ಮಾತ್ರವೇ?

ಈ ಪ್ರಶ್ನೆಗೆ ಉತ್ತರ ಸರಳವಾದುದ್ದಲ್ಲ. ತಮಿಳುನಾಡಿನಲ್ಲಿ ಮೊದಲಿಂದಲೂ ಸಾಮಾಜಿಕ ಹೋರಾಟಕ್ಕೂ, ಚಿತ್ರರಂಗಕ್ಕೂ ಮತ್ತು ರಾಜಕಾರಣಕ್ಕೂ ನಿಕಟ ಸಂಬಂಧವಿದೆ. ಕರುಣಾನಿಧಿ, ಎಂ.ಜಿ.ಆರ್., ಜಯಲಲಿತಾ ಎಲ್ಲರೂ ಚಿತ್ರರಂಗದ ಹಿನ್ನೆಲೆಯಿಂದಲೇ ಬಂದವರು. ಆಂಧ್ರಪ್ರದೇಶದಲ್ಲಿ ಕೂಡ ಚಿತ್ರರಂಗದ ಜನಪ್ರಿಯತೆ ಎನ್.ಟಿ.ರಾಮರಾಯರನ್ನು ಮುಖ್ಯಮಂತ್ರಿ ಪಟ್ಟದ ಕಡೆಗೆ ಕರೆದುಕೊಂಡು ಬಂದಿತು. ಕೇರಳದಲ್ಲಿ  ಕೂಡ ಚಿತ್ರರಂಗಕ್ಕೂ ಸಾಮಾಜಿಕ ಹೋರಾಟಕ್ಕೂ ನಿಕಟ ಸಂಬಂಧವಿದೆ. ಆದರೆ ಕನ್ನಡ ಚಿತ್ರರಂಗ ಆರಂಭಿಕ ದಿನಗಳಲ್ಲಿ ಮದ್ರಾಸಿನಲ್ಲಿಯೇ ನೆಲೆಗೊಂಡಿದ್ದರಿಂದ ಕಲಾವಿದರಿಗೂ ಮತ್ತು ಜನ ಸಾಮಾನ್ಯರಿಗೂ ಒಂದು ಅಂತರ ರೂಪುಗೊಂಡಿತ್ತು. ಡಬ್ಬಿಂಗ್ ವಿರೋಧಿ ಚಳುವಳಿಯಿಂದ ಕನ್ನಡ ಚಿತ್ರರಂಗಕ್ಕೆ ಚೇತರಿಕೆ ದೊರೆತರೂ ಅದರ ಮುಂದಾಳುಗಳಾಗಿದ್ದವರು ಅನಕೃ, ತರಾಸು, ಮ.ರಾಮ ಮೂರ್ತಿ, ನಾಡಿಗೇರ ಕೃಷ್ಣರಾವ್ ಮೊದಲಾದ ಕನ್ನಡ ಹೋರಾಟಗಾರರು. ಕನ್ನಡ ಚಿತ್ರರಂಗ ಜನಸಾಮಾನ್ಯರ ಬಳಿಗೆ ಬಂದಿದ್ದು 1960ರ ದಶಕದಲ್ಲಿ ನಡೆದ ‘ಪ್ರವಾಹ ಪರಿಹಾರ ನಿಧಿ’ಗಾಗಿ ನಡೆದ ಅಭಿಯಾನದ ಮೂಲಕ. ಇದು ಕಲಾವಿದರನ್ನು ಜನ ಸಾಮಾನ್ಯರ ಬಳಿಗೆ ತಂದಿದ್ದು ಮಾತ್ರವಲ್ಲದೆ ಚಿತ್ರರಂಗಕ್ಕೂ ಪತ್ರಿಕೊದ್ಯಮಕ್ಕೂ ನಿಕಟ ಬಾಂಧವ್ಯ ಮೂಡಿಸಿತ್ತು. ಕಲಾವಿದರು ಜನಪರ ತುಡಿತಗಳಿಗೂ ಸ್ಪಂದಿಸುತ್ತಾರೆ ಎನ್ನುವುದು ಸಾಬೀತಾಗಿದ್ದು ಗೋಕಾಕ್ ಚಳುವಳಿಯ ಸಂದರ್ಭದಲ್ಲಿ. 1982ರ ಫೆಬ್ರವರಿಯಲ್ಲಿ ಗೋಕಾಕ್ ಚಳುವಳಿ ಆರಂಭವಾಗಿತ್ತು. ಮೊದಲ ಎರಡು ತಿಂಗಳು ಯಾರಿಗೂ ಇದರ ಸ್ಪಷ್ಟ ಕಲ್ಪನೆ ಇರಲಿಲ್ಲ. ಕೊನೆಗೆ ಖಾದ್ರಿ ಶಾಮಣ್ಣನವರು ತಾವು ಸಂಪಾದಕರಾಗಿದ್ದ ‘ಕನ್ನಡಪ್ರಭ’ ಪತ್ರಿಕೆಯ ಸಂಪಾದಕೀಯದಲ್ಲಿ ‘ರಾಜ್ ಕುಮಾರ್ ಅವರು ಚಳುವಳಿಗೆ ಬರಬೇಕು’ ಎಂದು ಕರೆಕೊಟ್ಟರು. ಅದಕ್ಕೆ ರಾಜ್ ಕುಮಾರ್ ಅವರೂ ಕೂಡಲೇ ಸ್ಪಂದಿಸಿದರು. ಕನ್ನಡ ಕಲಾವಿದರೆಲ್ಲರೂ ರಾಜ್ ಕುಮಾರ್ ಅವರ ನೇತೃತ್ವದಲ್ಲಿ ಹೋರಾಡಿದ್ದು ಈಗ ಇತಿಹಾಸ. ಕರ್ನಾಟಕದಲ್ಲಿ ಮೊಟ್ಟ ಮೊದಲ ಸಲ ಕಲಾವಿದರು ಮತ್ತು ಜನಪರ ಹೋರಾಟದ ನಡುವೆ ಸಂಬಂಧ ಏರ್ಪಟ್ಟಿತ್ತು.  ಇಲ್ಲಿ ಕೂಡ ರಾಜ್ ಕುಮಾರ್ ‘ಕನ್ನಡದ ವಿಷಯ ಎಂದು ಬಂದಿದ್ದೇನೆ, ಇದರ ಕುರಿತು ಸಾಹಿತಿಗಳಿಂದಲೇ ಮಾಹಿತಿ ಪಡೆಯಿರಿ’ ಎಂದು ವಿನಯವನ್ನು ತೋರಿದರೇ ಹೊರತು ತಾವೇ ನಾಯಕರೆಂದು ಬೀಗಲಿಲ್ಲ. ಸಮಸ್ಯೆಯನ್ನು ತಾರ್ಕಿಕ ಅಂತ್ಯಕ್ಕೆ ಕರೆದೊಯ್ಯುವ ಮಾತನ್ನೂ ಆಡಲಿಲ್ಲ. ಇದನ್ನು ರಾಜಕಾರಣಕ್ಕೆ ಏಣಿಯಾಗಿಯೂ ಬಳಸಿಕೊಳ್ಳಲಿಲ್ಲ. ಇಲ್ಲಿಂದ ಮುಂದಕ್ಕೆ ಕನ್ನಡ ನಾಡು ಜನಪರ ಹೋರಾಟಗಳ ವಿಷಯ ಬಂದಾಗಲೆಲ್ಲಾ ರಾಜ್ ಕುಮಾರ್ ಅವರ ಕಡೆ ನೋಡುವುದು ಸಹಜವಾಯಿತು.

1992ರ ಕಾವೇರಿ ಚಳುವಳಿಯಲ್ಲಿ ಒಂದು ವಿಶಿಷ್ಟ ಪ್ರಸಂಗ ನಡೆಯಿತು. 12 ವರ್ಷಗಳ ನಂತರ 23ನೇ ಭಾರತದ ಅಂತರರಾಷ್ಟ್ರೀಯ ಚಿತ್ರೋತ್ಸವ ಬೆಂಗಳೂರಿನಲ್ಲಿ ನಡೆಯಿತು. ಆಗ ಚಿತ್ರೋತ್ಸವ ಗೋವಾಕ್ಕೆ ಸೀಮಿತವಾಗದೆ ಭಾರತದ ವಿವಿಧ ಪ್ರಮುಖ ನಗರಗಳಲ್ಲಿ ನಡೆಯುತ್ತಿತ್ತು. ಪ್ರತಿಷ್ಠಿತ ಈ ಉತ್ಸವವನ್ನು ರಾಜ್ ಕುಮಾರ್ ಅವರು ಉದ್ಘಾಟಿಸಬೇಕಿತ್ತು. ಆದರೆ ಆ ವೇಳೆಯಲ್ಲಿ ಕಾವೇರಿ ನೀರಿಗಾಗಿ ಕರ್ನಾಟಕ ಹೊತ್ತಿ ಉರಿಯುತ್ತಿತ್ತು. ಗಾಜನೂರಿನಲ್ಲಿ ಇದ್ದ ರಾಜ್ ಕುಮಾರ್ ಗಲಭೆಯ ದೃಶ್ಯಗಳನ್ನೂ ನೋಡಿಕೊಂಡೇ ಬೆಂಗಳೂರಿಗೆ ಬಂದರು. ‘ಕನ್ನಡಿಗರ ಮನ ನೊಂದಿರುವ ಹೊತ್ತಿನಲ್ಲಿ ತಾವು ಉತ್ಸವದಲ್ಲಿ ಭಾಗವಹಿಸುವುದಿಲ್ಲ’ ವೆಂದು ಸ್ಪಷ್ಟವಾಗಿ ಹೇಳಿ ಬಿಟ್ಟರು. ಆಗ ಅವರ ಬೀಗರಾಗಿದ್ದ ಬಂಗಾರಪ್ಪನವರೇ ಮುಖ್ಯಮಂತ್ರಿಗಳಾಗಿದ್ದರು. ಆದರೆ ಯಾವ ಒತ್ತಡಕ್ಕೂ ಮಣಿಯದೆ ಸ್ಪಷ್ಟ ನಿಲುವನ್ನು ತೆಗೆದುಕೊಂಡ ರಾಜ್ ಕುಮಾರ್ ಕನ್ನಡಿಗರ ಮನದಲ್ಲಿ ಇನ್ನಷ್ಟು ಎತ್ತರಕ್ಕೆ ಏರಿದರು. ರಾಜ್ ಕುಮಾರ್ ಅವರಲ್ಲಿ ಕನ್ನಡಿಗರು ಸಾಂಸ್ಕೃತಿಕ ನಾಯಕನನ್ನು ಕಾಣಲು ಅವರು ಅಭಿನಯಿಸಿದ್ದ ಮೌಲ್ಯಗಳನ್ನು ಪ್ರತಿನಿಧಿಸುವ ಪಾತ್ರಗಳೂ ಕಾರಣವಾಗಿದ್ದವು. ಈಗಿನ ಚಿತ್ರರಂಗದಲ್ಲಿ ಹಿಂಸೆ, ವಿಕೃತಿಗಳು ತಾಂಡವವಾಡುತ್ತಿವೆ. ಇಲ್ಲಿಂದ ಸಾಂಸ್ಕೃತಿಕ ನಾಯಕನೊಬ್ಬ ಹುಟ್ಟಿ ಚಳುವಳಿಗೆ ಚಾಲನೆ ನೀಡುವುದು ಕಷ್ಟವೆನ್ನಿಸುವ ಸ್ಥಿತಿ ಇದೆ.

‘ಸಿನಿಮಾ ಎನ್ನುವುದು ಜೀವನದ ಪ್ರತಿಬಿಂಬ, ಇಂದಿನ ಬದುಕಿನಲ್ಲೇ ಇಲ್ಲದ ನೈತಿಕತೆ ಚಿತ್ರರಂಗದಲ್ಲಿ ಹೇಗಿರಲು ಸಾಧ್ಯ’ ಎಂದು ಕೇಳುವವರಿದ್ದಾರೆ. ಸಿನಿಮಾದಲ್ಲಿ ನೀತಿಪಾಠಗಳೇ ಇರಬೇಕಾಗಿಲ್ಲ ನಿಜ, ನೈತಿಕ ಚೌಕಟ್ಟು ಬೇಕು ಏಕೆಂದರೆ ಪ್ರಬಲ ಮಾಧ್ಯಮವಾದ ಸಿನಿಮಾದ ಪ್ರಭಾವ ತಪ್ಪು ದಾರಿಗೆ  ಜನರನ್ನು ಕರೆದುಕೊಂಡು ಹೋಗಬಲ್ಲದು. ‘ದೃಶ್ಯಂ’ಚಿತ್ರದ ಪ್ರಭಾವದಿಂದ ಪ್ರಿಯತಮೆಯನ್ನು ಕೊಲೆ ಮಾಡಿದ ಸುದ್ದಿ ಇತ್ತೀಚೆಗಷ್ಟೇ ವರದಿಯಾಗಿದೆ. ಇಂತಹ ಉದಾಹರಣೆಗಳು ಸಿಕ್ಕುತ್ತಲೇ ಇರುತ್ತವೆ. ಸಿನಿಮಾ ಕಲಾವಿದರಿಂದ ನಿಜಕ್ಕೂ ಬೇಕಾಗಿರುವುದು  ಧನಾತ್ಮಕ ಪ್ರೇರಣೆಗಳು. 1975ರಲ್ಲಿ ಪ್ರಕಟವಾದ ‘ಸಾಹಿತ್ಯ ಪ್ರೇರಣೆ’ ಎನ್ನುವ ಕೃತಿಯಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಹೇಳುತ್ತಾರೆ ‘ಸಿನಿಮಾದಲ್ಲಿ ನೈತಿಕತೆ ಏಕಿರಬೇಕು ಎಂದು ಹಲವರು ಕೇಳುತ್ತಾರೆ. ನೀತಿ ಅನ್ನೋದು ಘೋಷಣೆ ಆದರೆ ಈ ಪ್ರಶ್ನೆ ಬರುತ್ತೆ. ಅದು ಬದುಕುವ ರೀತಿಯಾದರೆ ಸಹಜ ಎನ್ನಿಸುತ್ತೆ, ಸಿನಿಮಾದಂತಹ ಪ್ರಬಲ ಮಾಧ್ಯಮ ಬದುಕುವ ರೀತಿಯನ್ನು ಕಲಿಸಬೇಕೆ ಹೊರತು ಕೊಲ್ಲುವ ರೀತಿಯನ್ನಲ್ಲ’

ಕನ್ನಡ ಚಿತ್ರರಂಗ ಗಮನಿಸಬೇಕಾದ ಸತ್ಯ ಇದು.

Leave a Reply