ರಿಯಾಯ್ತಿ ದರದಲ್ಲಿ ಎಲ್ಇಡಿ ಬಲ್ಬ್, ಟ್ಯೂಬ್ಲೈಟ್, ಫ್ಯಾನ್: ಸರ್ಕಾರದಿಂದ ಹೊಸ ಬೆಳಕು ಯೋಜನೆ, ಉಕ್ಕಿನ ಸೇತುವೆ ನಿರ್ಮಾಣಕ್ಕೆ ಸರ್ಕಾರ ಅಸ್ತು: ನ.1ರಂದು ಗುದ್ದಲಿ ಪೂಜೆ

ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಭಾನುವಾರ ನಡೆದ ವ್ಯಂಗ್ಯಚಿತ್ರ ಪ್ರದರ್ಶನ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ದಿ ಸಚಿವ ಎಚ್. ಕೆ. ಪಾಟೀಲರೇ ಕಾರ್ಟೂನಿಗೆ ವಸ್ತುವಾದ ಕ್ಷಣ…

ಡಿಜಿಟಲ್ ಕನ್ನಡ ಟೀಮ್:

ಕಡಿಮೆ ದರದಲ್ಲಿ ಎಲ್ಇಡಿ ಬಲ್ಬ್, ಟ್ಯೂಬ್ಲೈಟ್, ಫ್ಯಾನ್

ಹೊಸ ಬೆಳಕು ಯೋಜನೆಯಡಿಯಲ್ಲಿ ರಿಯಾಯಿತಿ ದರದಲ್ಲಿ ಜನರಿಗೆ ₹ 50ಗೆ ಎಲ್ಇಡಿ ಬಲ್ಬ್, ₹ 250ಕ್ಕೆ ಟ್ಯೂಬ್ಲೈಟ್ ಹಾಗೂ ಕಡಿಮೆ ವಿದ್ಯುತ್ ಬಳಕೆಯಾಗುವ ಫ್ಯಾನ್ ಗಳನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬೆಂಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ್ದ ಪತ್ರಿಕಾ ಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಯೋಜನೆ ಬಗ್ಗೆ ಮಾಹಿತಿ ನೀಡುವುದರ ಜತೆಗೆ ಮುಂದಿನ ಬೇಸಿಗೆಯಲ್ಲಿ ವಿದ್ಯುತ್ ಕೊರತೆ ನಿಭಾಯಿಸುವ ಬಗ್ಗೆ ಮಾಹಿತಿ ನೀಡಿದ್ದು ಹೀಗೆ… ‘ಈ ಬಾರಿ ಮಳೆ ವೈಫಲ್ಯದಿಂದ ವಿದ್ಯುತ್ ಉತ್ಪಾದಿಸುವ ಜಲಾಶಯಗಳಲ್ಲಿ ಶೇ.50 ರಷ್ಟು ನೀರಿನ ಕೊರತೆ ಇದೆ. ಮಳೆ ಇಲ್ಲದಿರುವುದರಿಂದ ವಿದ್ಯುತ್ ಬೇಡಿಕೆ ಹೆಚ್ಚುತ್ತಿದೆ. ಮುಂದಿನ ಬೇಸಿಗೆ ವೇಳೆಗೆ ಇದರ ಪ್ರಮಾಣ ತೀವ್ರವಾಗಲಿದೆ. ಈ ಎಲ್ಲ ಅಂಶ ಗಮನದಲ್ಲಿಟ್ಟುಕೊಂಡು ಈ ಸಮಸ್ಯೆ ಬಗೆಹರಿಸಲು ಮುಂದಿನ ಕಾರ್ಯಯೋಜನೆ ರೂಪಿಸಿದ್ದೇವೆ. ವಿದ್ಯುತ್ ವಿನಿಮಯ ಕೇಂದ್ರದಲ್ಲಿ ಬಿಡ್ ಮೂಲಕ ವಿದ್ಯುತ್ ಖರೀದಿಗೆ ಸರ್ಕಾರ ಸಿದ್ಧವಾಗಿದ್ದು, ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಬೇಸಿಗೆ ಕಾಲದಲ್ಲಿ 1ರಿಂದ 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಕೊರತೆಯಾಗುವ ಸಾಧ್ಯತೆ ಇದೆ. ಇನ್ನು ಇಲಾಖೆ ಮತ್ತು ಸರ್ಕಾರಕ್ಕೆ ಕೇಂದ್ರಬಿಂದುವಾಗಿರುವ ಬೆಂಗಳೂರು ನಗರದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಕಡಿಮೆ ಮಾಡುವುದಿಲ್ಲ. ಇನ್ನು ಹಳ್ಳಿಗಳಲ್ಲಿ ರೈತರ ಪಂಪ್ ಸೆಟ್ಟಿಗೆ ಪ್ರಮುಖ ಅವಧಿ ಅಂದರೆ ಬೆಳಗ್ಗೆ ಮತ್ತು ಸಂಜೆ 6-10ರವರೆಗೆ ವಿದ್ಯುತ್ ನೀಡುವುದಿಲ್ಲ. ಉಳಿದಂತೆ ಎರಡು ಹಂತಗಳಲ್ಲಿ ತ್ರಿಫೇಸ್ ವಿದ್ಯುತ್ ಪೂರೈಸುತ್ತೇವೆ.’

ಉಕ್ಕಿನ ಸೇತುವೆಗೆ ಸರ್ಕಾರದ ವರ್ಕ್ ಆರ್ಡರ್

ರಾಜ್ಯ ರಾಜಧಾನಿಯಲ್ಲಿ ಜನರ ತೀವ್ರ ವಿರೋಧದ ನಡುವೆಯೂ ಚಾಲುಕ್ಯ ವೃತ್ತದಿಂದ ಹೆಬ್ಬಾಳವರೆಗಿನ ವಿವಾದಿತ ಉಕ್ಕಿನ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ವರ್ಕ್ ಆರ್ಡರ್ ನೀಡಿದೆ. ಈ ಸೇತುವೆ ನಿರ್ಮಾಣದ ಗುತ್ತಿಗೆ ಪಡೆದಿರುವ ಎಲ್ ಅಂಟ್ ಟಿ ಕಂಪನಿಗೆ ಸರ್ಕಾರದಿಂದ ವರ್ಕ್ ಆರ್ಡರ್ ಸಿಕ್ಕಿದ್ದು, ಸರ್ಕಾರದ ಸೂಚನೆಯಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ₹98 ಕೋಟಿ ಹಣ ಬಿಡುಗಡೆ ಮಾಡಿದೆ. ಇದರೊಂದಿಗೆ ನಗರದ ಜನತೆಯ ವಿರೋಧವನ್ನು ಲೆಕ್ಕಿಸದ ರಾಜ್ಯ ಸರ್ಕಾರ ನವೆಂಬರ್ 1ರಂದು ಕಾಮಗಾರಿಯ ಗುದ್ದಲಿ ಪೂಜೆ ನಡೆಸಲು ತೀರ್ಮಾನಿಸಿದೆ.

ವಿಧಾನಸೌಧದಲ್ಲಿ ಸಿಕ್ಕ ಕೋಟ್ಯಂತರ ಮೊತ್ತ ರಾಜಕಾರಿಣಿಗೆ ಸೇರಿದ್ದು

ಶುಕ್ರವಾರ ವಿಧಾನಸೌಧ ಆವರಣದಲ್ಲಿ ಪೊಲೀಸರು ಜಪ್ತಿ ಮಾಡಿದ ಕೋಟ್ಯಾಂತರ ಹಣ ರಾಜ್ಯದ ಪ್ರಮುಖ ರಾಜಕಾರಣಿಯೊಬ್ಬರಿಗೆ ಸೇರಿದ್ದು ಎನ್ನಲಾಗಿದೆ. ರಾಜಕೀಯ ಪಕ್ಷದ ಪ್ರಮುಖ ನಾಯಕರಾಗಿರುವ ಅವರು ನ್ಯಾಯಾಲಯದಲ್ಲಿ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಕಾನೂನು ಹೋರಾಟಕ್ಕಾಗಿ ಈ ಹಣ ಬಳಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ತನಿಖೆ ವೇಳೆ ಪೊಲೀಸರಿಗೆ ಪೂರ್ಣ ಮಾಹಿತಿ ಲಭಿಸಿದ್ದು, ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸರ್ಕಾರದಿಂದ ಹಲವು ಕಾಮಗಾರಿ

ಮುಂದಿನ ವರ್ಷ ಬೇಸಿಗೆಯಲ್ಲಿ ಎದುರಾಗಲಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ₹ 2905 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಕೈಗೆತ್ತಿಕೊಳ್ಳು ನಿರ್ಧರಿಸಿದೆ. ಸುದ್ದಿಗಾರರೊಂದಿಗೆ ಮಾತನಾಡಿ ಈ ಬಗ್ಗೆ ಮಾಹಿತಿ ನೀಡಿದ ಪೌರಾಡಳಿತ ಸಚಿವ ಈಶ್ವರ್ ಖಂಡ್ರೆ, ‘ರಾಜ್ಯದ 164 ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿಗೆ ಹೆಚ್ಚು ಒತ್ತುಕೊಟ್ಟು ಯೋಜನೆ ಅನುಷ್ಠಾನಗೊಳಿಸಲಾಗುವುದು. ಕುಡಿಯುವ ನೀರು ಒದಗಿಸುವ ಪೈಪ್ಲೈನ್ ಜಾಲಗಳ ಅಭಿವೃದ್ಧಿ, ಕಸ ವಿಲೇವಾರಿಯಂತಹ ಕೆಲಸವನ್ನು ತ್ವರಿತವಾಗಿ ಮಾಡಲಾಗುವುದು. ರಾಜ್ಯದ 110 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ ಎಂದು ಸರ್ಕಾರ ಘೋಷಿಸಿದೆ. ಈ ಪ್ರದೇಶಗಳಿಗೆ ಕುಡಿಯುವ ನೀರಿನ ಪೂರೈಕೆಗಾಗಿ ಜಾರಿಗೆಯಲ್ಲಿರುವ ಕೆಲವು ನಿಯಮಗಳನ್ನು ಸಡಿಲ ಮಾಡಿ ತಾತ್ಕಾಲಿಕ ಯೋಜನೆ ರೂಪಿಸಲಾಗುವುದು’ ಎಂದರು.

Leave a Reply