ಈಜಿಪ್ಟಿನ ಗೀಝಾ ಪಿರಮಿಡ್ಡಿನ ಮೇಲೆ ವಿಜ್ಞಾನದ ಪ್ರಯೋಗಗಳು – ಪಿರಮಿಡ್ ಒಳಗೆ ಗುಪ್ತ ಕೋಣೆಗಳಿವೆಯೆ?

The Great Pyramid or Pyramid of Cheops, Giza, Egypt

author-ananthramuಒಂದಲ್ಲ ಒಂದು ಕಾರಣಕ್ಕೆ ಈಜಿಪ್ಟಿನ ಗೀಝಾ ಪಿರಮಿಡ್ ಸದಾ ಸುದ್ದಿಯಲ್ಲಿರುತ್ತದೆ. ಜಗತ್ತಿನ ಏಳು ಪ್ರಾಚೀನ ಅದ್ಭುತಗಳಲ್ಲಿ ಮೊದಲು ಕೇಳಿ ಬರುವುದೇ ಗೀಝಾ ಪಿರಮಿಡ್. 147 ಮೀಟರ್ ಎತ್ತರದ ಈ ರಚನೆ ಅಲ್ಲಿನ ಮೂರು ಪಿರಮಿಡ್‍ಗಳ ಪೈಕಿ ಅತ್ಯಂತ ಹಳೆಯದು, ಶಿಥಿಲಗೊಳ್ಳದೆ ಮೂಲದಲ್ಲಿ ಹೇಗಿತ್ತೋ ಈಗಲೂ ಹಾಗೆಯೇ ಇದೆ. ಕ್ರಿ.ಪೂ. 2550ರಲ್ಲಿ ರಾಜ (ಪರೋಹ್) ಕುಫು ಪಿರಮಿಡ್ ರಚಿಸುವ ಕೆಲಸಕ್ಕೆ ಮುಂದಾದ. ವಾಸ್ತವವಾಗಿ ಅದು ಸಮಾಧಿ. 23 ಲಕ್ಷ ಬಂಡೆಗಳನ್ನು ಬಳಸಿರುವುದು, ಒಂದೊಂದರ ತೂಕವೂ 2.5 ರಿಂದ 25 ಟನ್ನು ತೂಗುವುದು ಪಿರಮಿಡ್ಡಿನ ವಿಶೇಷವೆಂಬುದನ್ನು ಸಾಮಾನ್ಯರೂ ಬಲ್ಲರು (ನಮ್ಮ ಚಿತ್ರದುರ್ಗದ ಕೋಟೆ ನೋಡಿದವರಿಗೂ ಈ ಭಾರಿ ಸೈಜುಗಲ್ಲುಗಳನ್ನು ಹೇಗೆ ಸಾಗಿಸಿದರು ಎಂಬ ಕುತೂಹಲ ಉಂಟಾಗುತ್ತದೆ). ಮೃತರಾಜನಿಗೆ ಬೇಕಾದ ಎಲ್ಲವನ್ನೂ ಇಟ್ಟು ಮುಂದೆ ಆತ ಮರುಹುಟ್ಟು ಪಡೆಯುತ್ತಾನೆನ್ನುವುದು ಅಲ್ಲಿನ ನಂಬಿಕೆ. ಈಜಿಪ್ಟಿನ ಗೀಝಾ ಪಿರಮಿಡ್ ಬಗ್ಗೆ ಸಾವಿರಾರು ಜನ ಬರೆದಿದ್ದಾರೆ. ಕ್ರಿ.ಶ. 5ನೇ ಶತಮಾನದ ರೋಮನ್ ಚರಿತ್ರಕಾರ ಹೀರೋಡಾಟಸ್ ಕೂಡ ಇದರ ವರ್ಣನೆ ಮಾಡಿದ್ದಾನೆ.

ಈಗ ಇಲ್ಲಿ ಹೇಳಹೊರಟಿರುವುದು ಪಿರಮಿಡ್ ರಚನೆಯ ಕೌಶಲವನ್ನಲ್ಲ, ಅದು ಚರಿತ್ರೆಯಲ್ಲಿ ಸ್ಥಾನ ಪಡೆದಿರುವ ಬಗ್ಗೆಯೂ ಅಲ್ಲ. ಕಳೆದ ಒಂದು ವರ್ಷದಿಂದ ಅಲ್ಲಿ ಅನೇಕ ವೈಜ್ಞಾನಿಕ ಪ್ರಯೋಗಗಳು ನಡೆಯುತ್ತಿವೆ, ಆ ಕುರಿತು. ಸದ್ಯ ಗೀಝಾ ಪಿರಮಿಡ್ಡಿನಲ್ಲಿ ಎಷ್ಟು ಕೋಣೆಗಳಿವೆ ಎಂದರೆ ಥಟ್ಟನೆ ಹೇಳಿಬಿಡಬಹುದು ಮೂರು ಎಂದು. ಮೊದಲನೆಯ ಕೋಣೆಯ ಆಧಾರದ ಮೇಲೆಯೇ ಪಿರಮಿಡ್ ನಿಂತಿರುವುದು. ಇದಕ್ಕಿಂತ ಎತ್ತರದಲ್ಲಿ ರಾಜನ ಕೋಣೆ-ರಾಣಿಯ ಕೋಣೆ ಉಂಟು.

ಒಳಗೆ ಇನ್ನೂ ಏನೇನೋ ಇರಬಹುದು ಎಂಬುದು ಸಾರ್ವಜನಿಕರ ಕುತೂಹಲವಷ್ಟೇ ಅಲ್ಲ, ವಿಜ್ಞಾನಿಗಳಿಗೂ ಅದು ಆಸಕ್ತಿದಾಯಕ. ಪಿರಮಿಡ್ಡಿನಲ್ಲಿ ಅನೇಕ ಕಡೆ ಮನುಷ್ಯ ತೂರಲಾರದಷ್ಟು ಹಾಗೆಯೇ ತೂಬಹುದಾದಷ್ಟು ಸಣ್ಣ ಸಣ್ಣ ಪ್ಯಾಸೇಜ್‍ಗಳಿವೆ. ಅವು ಎಲ್ಲಿಗೆ ಒಯ್ಯುತ್ತವೆ ಎಂಬುದು ಇನ್ನೂ ನಿಗೂಢವೇ. ಒಂದರಿಂದ ಮತ್ತೊಂದಕ್ಕೆ ಸಂಪರ್ಕವಿದೆ ಎನ್ನುವುದು ಜನಜನಿತ ಮಾತು. ಜರ್ಮನಿಯ ತಂತ್ರಜ್ಞನೊಬ್ಬ 1983ರಲ್ಲಿ ಕಿಂಗ್ಸ್ ಛೇಂಬರ್ ಎಂದು ಕರೆಯುವ ಕೋಣೆಗೆ ಗಾಳಿ ಎಲ್ಲಿಂದ ಬರುತ್ತದೆಂದು ಪತ್ತೆಮಾಡಲು ರೋಬಟ್ ಕಳಿಸಿದ್ದ. ಅವನ ಅನ್ವೇಷಣೆಯೆಂದರೆ ಪಿರಮಿಡ್ ಆಚೆಗೆ ಗಾಳಿ ಸುರಂಗವಿತ್ತು. ರಾಣಿಯ ಛೇಂಬರ್‍ಗೆ ಗಾಳಿ ಸುರಂಗ ಎಲ್ಲಿದೆ ಎಂದು ಪತ್ತೆದಾರಿ ಮಾಡುವಾಗ ಕೊನೆಗೆ ಎರಡು ತೂತುಗಳಿರುವ ತಾಮ್ರದ ಫಲಕಕ್ಕೆ ಒಯ್ದಿತ್ತು. ಆಗ್ಗೆ ರೋಬಟ್ ಕಾರ್ಯಾಚರಣೆಗೆ ಎರಡೂವರೆ ಸಾವಿರ ಡಾಲರ್ ವೆಚ್ಚವಾಗಿತ್ತು. 1989ರಲ್ಲಿ ಸೂಯೆಜ್ ಯೂನಿವರ್ಸಿಟಿಯ ಮೈನಿಂಗ್ ತಂತ್ರಜ್ಞರು ಬಂದರು. ಪಿರಮಿಡ್‍ನ ಒಂದು ಮೂಲೆಯಲ್ಲಿ ಕಬ್ಬಿಣದ ಫಲಕವನ್ನು ಪತ್ತೆಹಚ್ಚಿದರು. ವಿಶೇಷವೆಂದರೆ ಆ ಫಲಕವನ್ನು ನಿರ್ಮಿಸಿದ್ದು ಉಲ್ಕಾಶಿಲೆಯಿಂದ. ಇದು ಭಾರಿ ಸುದ್ದಿಯಾಯಿತು. ಹೋರಾಡದಿದ್ದರೂ ಪರವಾಗಿಲ್ಲ ಸತ್ತ ರಾಜನಿಗೆ ಕತ್ತಿ ಬೇಕಲ್ಲ; ಅದೂ ಉಲ್ಕಾಶಿಲೆಯಿಂದಲೇ ಆದದ್ದು. ಏಕೆಂದರೆ ಈ ಪಿರಮಿಡ್ ರಚಿಸುವ ಹೊತ್ತಿಗೆ ಕಬ್ಬಿಣದ ತಂತ್ರಜ್ಞಾನ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಇದಕ್ಕೂ ಹಿಂದೆ ಅಂದರೆ 1974ರಲ್ಲಿ ಸ್ಟಾನ್‍ಫರ್ಡ್ ವಿಶ್ವವಿದ್ಯಾಲಯ ಮತ್ತು ಈಜಿಪ್ಟಿನ ಏಯ್ನ್ಸ್ ವಿಶ್ವವಿದ್ಯಾಲಯ ಆಧುನಿಕ ವಿಧಾನ ಬಳಸಿ ಗುಪ್ತವಾಗಿರಬಹುದಾದ ಕೋಣೆಗಳನ್ನು ಪತ್ತೆಹಚ್ಚಲು ಪ್ರಯತ್ನಮಾಡಿದವು. ಎಲೆಕ್ಟ್ರೋ ಮ್ಯಾಗ್ನೆಟಿಕ್ ಸೌಂಡರ್ ಬಳಸಿದರು. ಆದರೆ ಏಕೋ ಆ ತಂತ್ರಜ್ಞಾನ ನಿರೀಕ್ಷಿತ ಫಲ ಕೊಡಲಿಲ್ಲ.

GIZA 5-min

ಈಗ ಪಿರಮಿಡ್ ಮೇಲೆ ಮಹಾ ಪ್ರಯೋಗಗಳಾಗಿವೆ. ಸ್ಕ್ಯಾನ್ ಪಿರಮಿಡ್ ಎಂಬ ಯೋಜನೆಯಲ್ಲಿ ಕೆನಡ, ಈಜಿಪ್ಟ್, ಫ್ರಾನ್ಸ್, ಜಪಾನ್ ದೇಶದ ವಿಶ್ವವಿದ್ಯಾಲಯದ ಪರಿಣತರು ಭೌತವಿಜ್ಞಾನದಲ್ಲಿ ಬಳಸುವ ಹಲವು ತಂತ್ರ, ಸಾಧನಗಳನ್ನು ಬಳಸಿ ಪಿರಮಿಡ್ಡನ್ನು ಮುಟ್ಟದೆಯೇ, ವಿಕೃತಿಗೊಳಿಸದೆಯೇ ಮಾಹಿತಿ ಪಡೆದು ವಿಶ್ಲೇಷಿಸಿದ್ದಾರೆ-ಎರಡು ಕಡೆ ಖಾಲಿ ಜಾಗಗಳಿರುವುದನ್ನು ಪತ್ತೆಮಾಡಿದ್ದಾರೆ. ಮುದ್ರಿತ ಪ್ರತಿಯನ್ನು ಸುಲಭವಾಗಿ ಸ್ಕ್ಯಾನ್ ಮಾಡುವಂತೆ ಇಡೀ ಗೀಝಾ ಪಿರಮಿಡ್ಡನ್ನು ಸ್ಕ್ಯಾನಿಂಗ್‍ಗೆ ಒಳಪಡಿಸಿದ್ದಾರೆ. ಏಕಕಾಲಕ್ಕೆ ಇಷ್ಟೊಂದು ಪ್ರಯೋಗಕ್ಕೆ ಇದು ಒಳಗಾಗಿದ್ದು ಇದೇ ಮೊದಲು. ಡ್ರೋನ್‍ನಲ್ಲಿ ಕ್ಯಾಮೆರಾ ಇಟ್ಟು ಇಡೀ ಪಿರಮಿಡ್‍ನ ಪೂರ್ಣ ಸ್ವರೂಪದ ಚಿತ್ರ ತೆಗೆದಿದ್ದಾರೆ, ಲೇಸರ್ ಕಿರಣ ಹಾಯಿಸಿ ತಪಾಸಣೆ ಮಾಡಿದ್ದಾರೆ. ಯಾವುದೇ ವಸ್ತು ಬೆಳಕಿನಲ್ಲಿ ಅವಕೆಂಪು ಕಿರಣಗಳನ್ನು (ಇನ್‍ಫ್ರಾ ರೆಡ್) ಉತ್ಸರ್ಜಿಸುತ್ತದೆ. ಅಷ್ಟೇ ಏಕೆ, ನಾವೂ ನೀವೂ ಕೂಡ ಈ ಕಿರಣವನ್ನು ಹೊರಹಾಕುತ್ತೇವೆ. ಇವುಗಳ ವ್ಯಾಪ್ತಿ ಆಯಾ ವಸ್ತುವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಬೆಳೆನಾಶ, ಕಾಡುನಾಶವಾದಾಗ ಎಷ್ಟು ಪ್ರಮಾಣ ನಾಶವಾಗಿದೆ ಎಂದು ಅರಿಯಲು ಕೃತಕ ಉಪಗ್ರಹಗಳಲ್ಲಿ ಈ ವಿಧಾನ ಅನುಸರಿಸಿ ಸಮೀಕ್ಷೆ ಮಾಡುವುದುಂಟು.

ಇವೆಲ್ಲದಕ್ಕಿಂತ ವಿಶೇಷ ಎಂದರೆ ಭೌತವಿಜ್ಞಾನದಲ್ಲಿ ಉಪಪರಮಾಣು ಎಂದು ಗುರುತಿಸಿರುವ ಮ್ಯುಯಾನ್‍ಗಳನ್ನು ಆಧರಿಸಿ ಅಪೇಕ್ಷಿತ ಮಾಹಿತಿ ಪಡೆದಿದ್ದಾರೆ. ನಿಮಗೆಲ್ಲ ಎಕ್ಸ್-ಕಿರಣ ಪರಿಚಿತವಾದ್ದೇ. ಅವು ಶರೀರದಲ್ಲಿ ತೂರಿ ಮೂಳೆಗಳ ಚಿತ್ರಣವನ್ನು ಒದಗಿಸುತ್ತವಲ್ಲ ಹಾಗೆ. ಮ್ಯುಯಾನ್ ಕೂಡ ತೂರಿಹೋಗಬಲ್ಲದು. ಅಡ್ಡವಾಗಿ ಏನು ಬಂದರೂ ಸರಿಯೇ. ಕಾಸ್ಮಿಕ್ ಕಿರಣಗಳು ವಾಯುಗೋಳದ ಮೇಲೆ ವರ್ತಿಸಿದಾಗ ಮ್ಯುಯಾನ್‍ಗಳು ಉತ್ಪತ್ತಿಯಾಗುತ್ತವೆ. ಎಲೆಕ್ಟ್ರಾನ್‍ಗಿಂತ 200 ಪಟ್ಟು ತೂಕ, ಬೆಳಕಿನ ವೇಗದಲ್ಲೇ ತೂರಿಬರಬಲ್ಲವು, ಪರ್ವತದಲ್ಲೂ ಕೂಡ ಪ್ರತಿನಿಮಿಷದಲ್ಲಿ ಒಂದು ಚದರ ಕಿಲೋಮೀಟರ್ ವಿಸ್ತೀರ್ಣದ ಮೇಲೆ 10,000 ಮ್ಯುಯಾನ್ ಕಣಗಳು ಬೀಳುತ್ತವೆ. ಆದರೆ ಒಂದು ಹಂತದಲ್ಲಿ ಹೀರಿಕೆಯಾಗುತ್ತವೆ. ಅವುಗಳ ಸಾಂದ್ರತೆ ಅಳೆದು ಒಳಗೇನಿದೆ ಎಂಬುದನ್ನು ಪತ್ತೆಮಾಡಬಹುದು. ಇದಕ್ಕಾಗಿ ಭೌತವಿಜ್ಞಾನಿಗಳು ಪಿರಮಿಡ್ ಒಳಗೆ ಸಾಧನಗಳನ್ನೇ ಇಟ್ಟಿದ್ದರು. ಈಗಂತೂ ಮೂರು ಆಯಾಮದ ಚಿತ್ರ ತೆಗೆಯುವುದು ಕಷ್ಟವೇ ಅಲ್ಲ. ಒಂದು ವರ್ಷ ಇವೆಲ್ಲ ಪ್ರಯೋಗಗಳನ್ನು ಮಾಡಿ ಈಗಷ್ಟೇ ಅದರ ಫಲಿತಾಂಶಗಳನ್ನು ವಿಜ್ಞಾನಿಗಳು ಹೊರಗೆಡವಿದ್ದಾರೆ.

ವಿಶ್ಲೇಷಣೆ ಮಾಡಿದಾಗ ಗೀಝಾ ಪಿರಮಿಡ್ ಒಳಗೆ ಇದುವರೆಗೆ ಕಂಡುಬಂದಿರದ ಜಾಗದಲ್ಲಿ ಎರಡು ಖಾಲಿ ಪ್ರದೇಶಗಳಿವೆ. ಇವು ಬಹುಶಃ ಕೋಣೆಗಳಿರಬಹುದು ಎಂದು ಊಹೆಮಾಡಲಾಗಿದೆ. ಆದರೆ ಈಜಿಪ್ಟಿನ ಪಿರಮಿಡ್ಡುಗಳ ಅಧ್ಯಯನ ಮಾಡುವ ಮತ್ತು ಸಂರಕ್ಷಿಸುವ ಪುರಾತತ್ತ್ವ ಇಲಾಖೆಯ ಪ್ರಕಾರ ಪಿರಮಿಡ್ ರಚನೆಯ ಕಾಲದಲ್ಲೇ ಈ ಜಾಗವಿತ್ತು ಎಂದು ಭಾವಿಸಲಾಗಿದೆ. ಒಳಗೆ ಏನಿದೆಯೋ ಇಲ್ಲವೋ ಅದಕ್ಕಿಂತ ಮುಖ್ಯವಾದ್ದು ವಿಜ್ಞಾನ ತಂತ್ರಜ್ಞಾನ, ಚರಿತ್ರೆ, ಭೂಗೋಳ, ಕಲೆ, ವಾಸ್ತುಶಿಲ್ಪದ ಅಧ್ಯಯನದ ಕಡೆಗೂ ವಾಲಿರುವುದು. ಬಹುಶಃ ಸಮಾಜಕ್ಕೆ ಬೇಕಾಗಿರುವುದು ಇಂಥ ಆನ್ವಯಿಕ ಸಂಗತಿಗಳೇ. ಗಾಂಧಿ ಕೂಡ ಒತ್ತಿ ಹೇಳುತ್ತಿದ್ದುದು ಸಮಾಜಮುಖಿ ವಿಜ್ಞಾನದ ಬಗ್ಗೆಯೇ.

ಪಿರಮಿಡ್ ಮೇಲಿನ ಪ್ರಯೋಗದ ವಿವರಗಳನ್ನು ಈ ಜಾಲತಾಣದಲ್ಲಿ ನೋಡಬಹುದು.

Leave a Reply