ತಲಾಕ್ ವಿರುದ್ಧ ಮುಸ್ಲಿಂ ಸಮುದಾಯದ ವಕೀಲರ ಧ್ವನಿ… ಆದರೆ, ಷರತ್ತುಗಳು ಅನ್ವಯಿಸುತ್ತವೆ!

ಡಿಜಿಟಲ್ ಕನ್ನಡ ಟೀಮ್:

ಮೂರು ಬಾರಿ ತಲಾಕ್ ಹೇಳುವ ಮೂಲಕ ವಿವಾಹ ವಿಚ್ಛೇದನ ಪಡೆದುಕೊಳ್ಳುವ ಪದ್ಧತಿ ನಿಷೇಧಿಸುವಂತೆ ಕೆಲ ಮುಸ್ಲಿಂ ಮಹಿಳೆಯರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವುದು, ಅದಕ್ಕೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ ಬಿ) ವಿರೋಧಿಸಿರುವುದು, ಸರ್ಕಾರ ಈ ಪದ್ಧತಿ ನಿಷೇಧದ ಪರ ನಿಲುವು ಹೊಂದಿರುವುದು ಗೊತ್ತಿರುವ ಸಂಗತಿ. ಈ ಎಲ್ಲದರ ನಡುವೆ ಈಗ ಮುಸ್ಲಿಂ ಸಮುದಾಯದ ಕೆಲವು ವಕೀಲರು ಸಹ ತ್ವರಿತ ತಲಾಕ್ ಉಚ್ಚರಿಸುವ ಪದ್ಧತಿ ನಿಷೇಧಕ್ಕೆ ಬೆಂಬಲ ಸೂಚಿಸಿರುವುದು ಕುತೂಹಲ ಮೂಡಿಸಿದೆ.

ಸಮಾನ ನಾಗರೀಕ ಸಂಹಿತೆ ಜಾರಿ ಮತ್ತು ಮುಸ್ಲಿಂ ಆಚರಣೆಯ ಮೂರು ಬಾರಿ ತಲಾಕ್ ಮೂಲಕ ವಿವಾಹ ವಿಚ್ಛೇದನ ಪದ್ಧತಿ ನಿಷೇಧದ ವಿಷಯ ಸದ್ಯ ರಾಷ್ಟ್ರ ಮಟ್ಟದಲ್ಲಿ ರಾಜಕೀಯ ಬಣ್ಣ ಪಡೆದು ಬಹುದೊಡ್ಡ ಚರ್ಚೆಯಾಗ್ತಿದೆ. ಕೇಂದ್ರ ಸರ್ಕಾರ ಸಮಾನ ನಾಗರೀಕ ಸಂಹಿತೆ ಮೂಲಕ ಮೂರು ಬಾರಿ ತಲಾಕ್ ಪದ್ಧತಿ ನಿಷೇಧ ಸೇರಿದಂತೆ ಮುಸ್ಲಿಂ ಸಂಪ್ರದಾಯವನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ ಎಂದು ವಿರೋಧ ಪಕ್ಷಗಳು ಬೊಬ್ಬೆ ಹೊಡೆಯುತ್ತಿವೆ. ಆ ಮೂಲಕ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ವಾದಕ್ಕೆ ಬೆಂಬಲ ಸೂಚಿಸಿ ರಾಜಕೀಯ ಲಾಭದ ಲೆಕ್ಕಾಚಾರ ಪಡೆಯುವ ನಿರೀಕ್ಷೆಯಲ್ಲಿವೆ.

ಆದರೆ, ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಾಜಿ ಅಲಿ ದರ್ಗಾ ಟ್ರಸ್ಟಿನ ಪ್ರತಿನಿಧಿ ವಕೀಲರಾದ ಶೋಹೆಬ್ ಮೆನನ್ ಮತ್ತು ಮತ್ತೊಬ್ಬ ವಕೀಲರಾದ ಫಿರೋಜ್ ಮಿತಿಬೊರೆವಾಲ ಸೇರಿದಂತೆ ವಿವಿಧ ಇಸ್ಲಾಮಿಕ್ ಸಂಸ್ಥೆಗಳ ಪ್ರತಿನಿಧಿ ವಕೀಲರುಗಳಿದ್ದರು. ಈ ಮೂರು ಬಾರಿ ತಲಾಕ್ ಹೇಳುವ ಪದ್ಧತಿ ನಿಷೇಧ ಕುರಾನ್ ಉದ್ದೇಶಕ್ಕೆ ವಿರುದ್ಧವಾಗಲಿದೆ. ಆದರೂ ಈ ತ್ವರಿತ ತಲಾಕ್ ಪದ್ಧತಿ ನಿಷೇಧವಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಅವರ ಅಭಿಪ್ರಾಯ ಹೀಗಿದ್ದವು…

‘ತಲಾಕ್ ಅಥವಾ ತಲಾಕ್ ಬಿದಿಯಾ ಎಂದು ಕರೆಯಲ್ಪಡುವ ಈ ಪದ್ಧತಿ ಮಹಿಳೆಯರ ವಿರುದ್ಧ ಅಸಮಾನತೆಯಿಂದ ಕೂಡಿದೆ. ಈ ಪದ್ಧತಿಯನ್ನು ಪ್ರವಾದಿ ಸಹ ಪ್ರಶ್ನಿಸಿದ್ದರು. ಆದರೆ ಕುರಾನಿನಲ್ಲಿ ತಕ್ಷಣವೇ ಮೂರು ತಲಾಕ್ ಪದ್ಧತಿಗೆ ಅವಕಾಶ ನೀಡಿದೆ. ನೈಜ್ಯ ಅಂಶವನ್ನು ನೋಡುವುದಾದರೆ ಈ ಮೂರು ಬಾರಿ ತಲಾಕ್ ಅನ್ನು ಮೂರು ಋತುಚಕ್ರದ ಸಂದರ್ಭದಲ್ಲಿ ಹೇಳಬೇಕು. ಈ ಅವಧಿಯಲ್ಲಿ ವ್ಯಕ್ತಿಯು ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸಿದ್ದೇ ಆದರೆ ಆತನ ತಲಾಕ್ ಉಚ್ಚಾರ ಅಸಿಂಧುವಾಗುತ್ತದೆ. ಈ ಪದ್ಧತಿಯನ್ನು ನಿಷೇಧಿಸದಿದ್ದರೂ ಕನಿಷ್ಠ ಪಕ್ಷ ತ್ವರಿತ ತಲಾಕ್ ಉಚ್ಚರಿಸಿ ವಿಚ್ಛೇದನ ನೀಡುವವರಿಗೆ ಶಿಕ್ಷೆಯನ್ನು ನೀಡಬೇಕು. ಶಿಕ್ಷೆ ನಿಗದಿಯಾಗದ ಹೊರತು ಮಹಿಳೆಯರ ಮೇಲೆ ಈ ಪದ್ಧತಿಯ ಮೂಲಕ ನಡೆಯುತ್ತಿರುವ ದೌರ್ಜನ್ಯ ನಿಲ್ಲುವುದಿಲ್ಲ. ಸತಿ ಹಾಗೂ ಅಸ್ಪೃಶ್ಯತೆ ಪದ್ಧತಿಗಳು ನಿಷೇಧವಾಗಿ ಅವುಗಳನ್ನು ಅಪರಾಧ ಎಂದು ಪರಿಗಣಿಸಲಾಗಿದೆ’ ಎಂದು ಅಭಿಪ್ರಾಯ ಪಟ್ಟರು ಹಾಜಿ ಅಲಿ ದರ್ಗಾ ಪ್ರತಿನಿಧಿಯಾಗಿದ್ದ ಶೋಹೆಬ್ ಮೆನನ್.

‘ಎಐಎಂಪಿಎಲ್ ಬಿ ತನ್ನ ಸಮುದಾಯದ ಹೆಣ್ಣು ಮಕ್ಕಳ ಮೇಲಿನ ಈ ದೌರ್ಜನ್ಯವನ್ನು ನೋಡುತ್ತಿದ್ದರು ಅವರು ಕುರುಡಾಗಿರುವುದೇಕೆ? ಈ ನಿಷೇಧವಾದ್ರೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯರು ತಮ್ಮ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ ಎಂಬ ಭಯವೇ’ ಎಂದು ವಕೀಲರಾದ ಫಿರೋಜ್ ಮಿತಿಬೊರೆವಾಲ ಪ್ರಶ್ನಿಸಿದರು.

ಮೂರು ಋತುಚಕ್ರದಲ್ಲಿ ಹೇಳಬೇಕಾದ ಮೂರು ತಲಾಕ್ ನಿಷೇಧ ಕುರಾನಿಗೆ ವಿರುದ್ಧವಾಗಿದೆ. ಆದರೂ ಈ ಪದ್ಧತಿಯನ್ನು ಒಂದು ವ್ಯವಸ್ಥಿತ ಕಾನೂನಿನ ರೇಖೆ ಒಳಗೆ ತರುವಲ್ಲಿ ಎಐಎಂಪಿಎಲ್ ಬಿ ವಿಫಲವಾಗಿದೆ. ಇತರೆ ಧರ್ಮಗಳು ತಮ್ಮ ವೈಯಕ್ತಿಕ ಕಾನೂನುಗಳನ್ನು ವ್ಯವಸ್ಥಿತವಾಗಿ ರೂಪಿಸಿಕೊಂಡಂತೆ ಮುಸ್ಲಿಂ ವೈಯಕ್ತಿಕ ಕಾನೂನುಗಳನ್ನು ಕಾನೂನಿನ ಚೌಕಟ್ಟಿನಲ್ಲಿ ರೂಪಿಸಿಕೊಳ್ಳಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಮೆನನ್ ಪ್ರಶ್ನಿಸಿದ್ರು.

Leave a Reply