‘ನಮ್ಮ ಸೈನಿಕರನ್ನು ಮುಟ್ಟಿದ್ರೆ ದುಬಾರಿ ಬೆಲೆ ತೆರಬೇಕಾಗುತ್ತೆ ಹುಷಾರ್!’ ಎಂದಿದೆ ಬಿಎಸ್ಎಫ್, ಮಗ ಹುತಾತ್ಮನಾಗಿದ್ದಕ್ಕೆ ಹೆಮ್ಮೆಯಿದೆ ಅಳುವುದಿಲ್ಲ ಎಂದರು ಯೋಧ ಗುರ್ನಾಮ್ ಸಿಂಗ್ ತಾಯಿ!

ಹುತಾತ್ಮ ಯೋಧ ಗುರ್ನಾಮ್ ಸಿಂಗ್ ಅವರಿಗೆ ಅಂತಿಮ ನಮನ ಸಲ್ಲಿಸಿದ ಗಡಿ ಭದ್ರತಾ ಸಿಬ್ಬಂದಿ…

ಡಿಜಿಟಲ್ ಕನ್ನಡ ಟೀಮ್:

ಎರಡು ದಿನಗಳ ಹಿಂದೆ ಜಮ್ಮು ಕಾಶ್ಮೀರದ ಹಿರಾನಗರ್ ಗಡಿ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ 7 ಪಾಕಿಸ್ತಾನಿ ಕಮಾಂಡೊಗಳನ್ನು ಹೊಡೆದುರುಳಿಸಿದ ಗಡಿ ಭದ್ರತಾ ಪಡೆ, ಭಾನುವಾರ ಪಾಕಿಸ್ತಾನಕ್ಕೆ ಸಂದೇಶವನ್ನು ರವಾನಿಸಿದೆ. ಅದೇನಂದ್ರೆ, ‘ನಮ್ಮ ಸೈನಿಕರನ್ನು ಮುಟ್ಟಲು ಬಂದರೆ ಸಾಕು ನೀವು ದೊಡ್ಡ ಬೆಲೆ ತೆರಬೇಕಾಗುತ್ತದೆ ಎಚ್ಚರಿಕೆ’ ಎಂದು.

ಇನ್ನೊಂದೆಡೆ ಹುತಾತ್ಮ ಯೋಧ ಗುರ್ನಾಮ್ ಸಿಂಗ್ ಊರಾದ ಜಮ್ಮುವಿನ ಭಲೆಸಾರ್ ಮಗೊವಲಿಯಲ್ಲಿ ಸೂತಕದ ವಾತಾವರಣ. ಆದರೆ ಅಂಥ ಸಂತಾಪಲ್ಲೂ ಗುರ್ನಾಮ್ ಸಿಂಗ್ ತಾಯಿ ಜಸ್ವಂತ್ ಕೌರ್ ನೀಡಿದ ಪ್ರತಿಕ್ರಿಯೆ ಹೀಗಿತ್ತು- ‘ನಾನೀಗ ಅಳಲಾರೆ. ಅಮ್ಮಾ, ನಾನು ಕರ್ತವ್ಯ ನಿರ್ವಹಿಸುತ್ತ ಮೃತನಾದಲ್ಲಿ ಅಳಬೇಡಿ ಎಂದು ಮಗ ಹೇಳಿದ್ದ. ಆತನಿಗೆ ಹಾಗೇ ಆಗಲಿ ಎಂದು ಮಾತು ಕೊಟ್ಟಿದ್ದೆ. ಕುಟುಂಬಕ್ಕೆ ಗುರ್ನಾಮ್ ಬಗ್ಗೆ ಹೆಮ್ಮೆ ಇದೆ.’ ಎಂದರವರು.

ಅಲ್ಲದೇ ಆ ಕುಟುಂಬ ಸರ್ಕಾರವನ್ನು ಕೇಳಿರುವುದೇನು ಗೊತ್ತೇ? ಅಂತಾರಾಷ್ಟ್ರೀಯ ಗಡಿ ಹಾಗೂ ಗಡಿ ನಿಯಂತ್ರಣ ರೇಖೆಗಳಲ್ಲಿ ಗಾಯಾಳುಗಳಾಗುವ ಯೋಧರಿಗೆ ಚಿಕಿತ್ಸೆ ನೀಡುವುದಕ್ಕೆ ನಮ್ಮ ಮಗನ ಹೆಸರಲ್ಲೊಂದು ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಲಿ ಎಂದು!

ಈ ಕಾಳಗದಲ್ಲಿ ತಲೆಗೆ ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಕಳೆದ ಎರಡು ದಿನಗಳಿಂದ ಜೀವನ್ಮರಣ ಹೋರಾಟ ನಡೆಸಿದ್ದ ನಮ್ಮ ಯೋಧ ಗುರ್ನಾಮ್ ಸಿಂಗ್ ಮೃತಪಟ್ಟಿದ್ದು, ಪಲೌರಾದಲ್ಲಿರುವ ಬಿಎಸ್ಎಫ್ ಕೇಂದ್ರ ಕಚೇರಿಯಲ್ಲಿ ಭಾನುವಾರ ಅವರಿಗೆ ಅಂತಿಮ ನಮನ ಸಲ್ಲಿಸಲಾಯ್ತು. ಈ ವೇಳೆ ಗಡಿ ಭದ್ರತಾ ಪಡೆಯ ಬಿಎಸ್ಎಫ್ ಹೆಚ್ಚುವರಿ ನಿರ್ದೇಶಕ ಅರುಣ್ ಕುಮಾರ್, ನಮ್ಮ ತಂಟೆಗೆ ಬರಬೇಡಿ ಎಂದು ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಪಾಕಿಸ್ತಾನಕ್ಕೆ ಅರುಣ್ ಕುಮಾರ್ ಅವರು ಕೊಟ್ಟ ಎಚ್ಚರಿಕೆ ಮಾತುಗಳು ಹೀಗಿವೆ…

‘ಕಳೆದ 24 ಗಂಟೆಗಳಲ್ಲಿ ಗಡಿಯಲ್ಲಿ ಶಾಂತಿ ನೆಲೆಸಿದ್ದರೂ, ಅದು ಯಾವುದೇ ಕ್ಷಣದಲ್ಲಿ ಬೇಕಾದರೂ ಬದಲಾಗುವ ಸಾಧ್ಯತೆ ಇದೆ ಎಂಬ ಅರಿವು ನಮಗಿದೆ. ಪರಿಸ್ಥಿತಿ ಎಂತಹುದೇ ಬರಲಿ ಅದನ್ನು ಎದುರಿಸಲು ನಾವು ಸನ್ನದ್ಧರಾಗಿದ್ದೇವೆ. ಪಾಕಿಸ್ತಾನದ ಕಡೆಯಿಂದ ಯಾವುದೇ ಕಿಡಿಗೇಡಿತನಗಳಾದಲ್ಲಿ ಈ ಹಿಂದೆ ತೆತ್ತ ಬೆಲೆಯನ್ನೇ ಅವರು ತೆರುವಂತೆ ಮಾಡುತ್ತೇವೆ.’

ಗಡಿಯಲ್ಲಿನ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಯಾವ ರೀತಿ ಇರಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಅರುಣ್ ಕುಮಾರ್, ‘ಸದ್ಯಕ್ಕೆ ನಿರ್ದಿಷ್ಟವಾಗಿ ಏನನ್ನು ಹೇಳಲು ಸಾಧ್ಯವಿಲ್ಲ. ಆದರೆ ಎಲ್ಲ ಸವಾಲಿಗೂ ನಾವು ಸಿದ್ಧವಾಗಿದ್ದೇವೆ. ನಮ್ಮ ಒಬ್ಬ ಸೈನಿಕನನ್ನು ಮುಟ್ಟಿದ್ದಕ್ಕೆ ಈಗಾಗಲೇ ನಾವು ತಕ್ಕ ಉತ್ತರ ನೀಡಿದ್ದೇವೆ. ಮುಂದಿನ ಬಾರಿಯೂ ನಮ್ಮ ಉತ್ತರ ಅದೇ ರೀತಿಯಲ್ಲಿದ್ದು, ಪಾಕಿಸ್ತಾನ ದುಬಾರಿ ಬೆಲೆ ತೆರುವುದರಲ್ಲಿ ಅನುಮಾನವೇ ಇಲ್ಲ.’

‘ಗುರ್ನಾಮ್ ಸಿಂಗ್ 2ನೇ ತುಕಡಿಯಲ್ಲಿ ನಿಯೋಜಿಸಲಾಗಿತ್ತು. ಅಕ್ಟೋಬರ್ 19-20 ರಂದು ನಡೆದ ನುಸುಳುಕೋರರ ಪ್ರಯತ್ನವನ್ನು ತಡೆಯುವಲ್ಲಿ ಗುರ್ನಾಮ್ ಪ್ರಮುಖ ಪಾತ್ರ ವಹಿಸಿದ್ದು, ಒಬ್ಬನನ್ನು ಬಲಿ ಪಡೆದಿದ್ದ. ಆದರೆ ದುರಾದೃಷ್ಟವಶಾತ್ ಮಾರನೇ ದಿನ ಪಾಕ್ ಸ್ನೈಪರ್ಸ್ ಗುಂಡಿಗೆ ಗುರಿಯಾದ. ಪರಿಸ್ಥಿತಿ ಗಂಭೀರವಾಗಿದ್ದರಿಂದ ಗುರ್ನಾಮ್ ರನ್ನು ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಗೆ ರವಾನಿಸಲು ನಿರ್ಧರಿಸಿದ್ದೆವು.’

‘ಪಾಕಿಸ್ತಾನ ಉಗ್ರ ನುಸುಳುಕೋರರನ್ನು ಪಾಕಿಸ್ತಾನ ರಕ್ಷಾಕವಚದ ಮೂಲಕ ನಮ್ಮ ಗಡಿಯೊಳಗೆ ಕಳುಹಿಸುವ ಪ್ರಯತ್ನಗಳು ನಡೆಯುತ್ತಲೇ ಇರುವುದು ತಾಂತ್ರಿಕ ಕಣ್ಗಾವಲಿನ ಮೂಲಕ ನಮ್ಮ ಗಮನಕ್ಕೆ ಬಂದಿದೆ. ಪಾಕಿಸ್ತಾನವು ಗಡಿ ಪ್ರದೇಶಗಳಲ್ಲಿ ತಮ್ಮ ಸೈನ್ಯವನ್ನು ನಿಯೋಜಿಸಿಕೊಂಡಿರುವ ಬಗ್ಗೆ ವರದಿಗಳು ಬಂದಿರುವುದು ನಮಗೆ ತಿಳಿದಿದೆ. ಈ ಸಂದರ್ಭದಲ್ಲಿ ನಾವು ಎಲ್ಲಾ ಪರಿಸ್ಥಿತಿಯನ್ನು ಎದುರಿಸಲು ಸಿದ್ಧ.’

Leave a Reply